Advertisement

Supreme Court: ಜೀವನಾಂಶ ನಿಗದಿಗೆ ಸುಪ್ರೀಂ ಮಾರ್ಗಸೂಚಿ;  8 ಅಂಶಗಳ ಸೂತ್ರ

12:22 AM Dec 13, 2024 | Team Udayavani |

ಹೊಸದಿಲ್ಲಿ: ಪತಿ-ಪತ್ನಿ ಕಲಹ ಪ್ರಕರಣದಲ್ಲಿ ಶಾಶ್ವತ ಜೀವನಾಂಶವನ್ನು ನಿರ್ಧರಿಸುವ ವೇಳೆ ನ್ಯಾಯಾಲಯಗಳು ಅನುಸರಿಸಬೇಕಾದ 8 ಅಂಶಗಳ ಮಾರ್ಗಸೂಚಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ಪ್ರಕಟಿಸಿದೆ.

Advertisement

ವಿಚ್ಛೇದನ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾ| ವಿಕ್ರಮ್‌ ನಾಥ್‌ ಮತ್ತು ನ್ಯಾ| ಪ್ರಸನ್ನ ಬಿ. ವರಾಲೆ ಅವರನ್ನು ಒಳಗೊಂಡ ನ್ಯಾಯಪೀಠವು ದೇಶದ ಎಲ್ಲ ನ್ಯಾಯಾಲಯಗಳು ಜೀವನಾಂಶ ಮೊತ್ತವನ್ನು ನಿರ್ಧರಿಸುವಾಗ ಈ ಸೂತ್ರಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದೆ.

ಪತ್ನಿ ಮತ್ತು ಅತ್ತೆ ಮನೆಯವರ ಮೇಲೆ ಕಿರುಕುಳ ಆರೋಪ ಹೊರಿಸಿ ಬೆಂಗಳೂರಿನ ಟೆಕಿ ಅತುಲ್‌ ಸುಭಾಷ್‌ 80 ನಿಮಿಷಗಳ ವೀಡಿಯೋ ಮತ್ತು 24 ಪುಟಗಳ ಆತ್ಮಹತ್ಯಾ ಪತ್ರ ಬರೆದು ಆತ್ಮಹತ್ಯೆಗೆ ಶರಣಾದ ಘಟನೆಯು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವಂತೆಯೇ ಸುಪ್ರೀಂ ಕೋರ್ಟ್‌ನಿಂದ ಇಂಥದ್ದೊಂದು ಮಾರ್ಗಸೂಚಿ ಹೊರಬಿದ್ದಿದೆ.

ಪತ್ನಿಗೆ ಶಿಸ್ತಿನ ಜೀವನ ನಡೆಸಲು ಅನುವು ಮಾಡಿಕೊಡುವ ಉದ್ದೇಶದಿಂದ ಜೀವನಾಂಶವನ್ನು ನಿಗದಿಪಡಿಸಬೇಕೇ ವಿನಾ ಆ ಮೊತ್ತವು ಪತಿಗೆ ವಿಧಿಸುವ ಶಿಕ್ಷೆಯಂತಿರಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಎರಡೂ ಕಡೆಯವರ ಸಾಮಾಜಿಕ, ಆರ್ಥಿಕ ಸ್ಥಾನಮಾನ, ಪತ್ನಿಯ ವಿದ್ಯಾರ್ಹತೆ, ಉದ್ಯೋಗ ಸಹಿತ 8 ಅಂಶಗಳನ್ನು ಪರಿಗಣಿಸಿಯೇ ಜೀವನಾಂಶದ ಮೊತ್ತವನ್ನು ನಿರ್ಧರಿಸಬೇಕು ಎಂದಿದೆ.

ಇದಕ್ಕೆ ಮುನ್ನ, ಮತ್ತೂಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾ| ಬಿ.ವಿ. ನಾಗರತ್ನಾ ಮತ್ತು ನ್ಯಾ| ಎನ್‌. ಕೋಟೀಶ್ವರ್‌ ಸಿಂಗ್‌ ಅವರ ನ್ಯಾಯಪೀಠವು, ವೈವಾಹಿಕ ಕಲಹದ ಸಂದರ್ಭದಲ್ಲಿ ಕಾನೂನಿನ ದುರ್ಬಳಕೆ ವಿರುದ್ಧ ಎಚ್ಚರಿಕೆ ನೀಡಿದೆ. ಕ್ರೌರ್ಯ ನಿಗ್ರಹ ಕಾನೂನನ್ನು ಪತಿ ಹಾಗೂ ಆತನ ಮನೆಯವರ ವಿರುದ್ಧದ ನಿಮ್ಮ ವೈಯಕ್ತಿಕ ದ್ವೇಷದ ಸಾಧನವಾಗಿ ಬಳಸಿಕೊಳ್ಳದಿರಿ ಎಂದು ಹೇಳಿದೆ.

Advertisement

8 ಅಂಶಗಳ ಸೂತ್ರವೇನು?
1. ಎರಡೂ ಕಡೆಯವರ ಸಾಮಾಜಿಕ, ಆರ್ಥಿಕ ಸ್ಥಾನಮಾನ

2. ಪತ್ನಿ ಮತ್ತು ಅವಲಂಬಿತ ಮಕ್ಕಳ ಅಗತ್ಯಗಳು

3. ಪತಿ ಹಾಗೂ ಪತ್ನಿಯ ವಿದ್ಯಾರ್ಹತೆ ಮತ್ತು ಉದ್ಯೋಗ

4. ಅರ್ಜಿದಾರರ ಸ್ವತಂತ್ರ ಆದಾಯ ಹಾಗೂ ಆಸ್ತಿ

5. ಪತಿಯ ಮನೆಯಲ್ಲಿ ಪತ್ನಿಯ ಜೀವನ ಮಟ್ಟ

6. ಕೌಟುಂಬಿಕ ಜವಾಬ್ದಾರಿಗಳ ಹಿನ್ನೆಲೆಯಲ್ಲಿ ಉದ್ಯೋಗ ತೊರೆದಿದ್ದಾರೆಯೇ?

7. ಪತ್ನಿಯು ಉದ್ಯೋಗಸ್ಥೆ ಅಲ್ಲದಿದ್ದರೆ, ಕಾನೂನು ಹೋರಾಟಕ್ಕೆ ಆಗುವ ವೆಚ್ಚ

8. ಪತಿಯ ಆರ್ಥಿಕ ಸಾಮರ್ಥ್ಯ, ಆದಾಯ, ಹೊಣೆಗಾರಿಕೆಗಳು ಮತ್ತು ಬಾಧ್ಯತೆಗಳು

 

Advertisement

Udayavani is now on Telegram. Click here to join our channel and stay updated with the latest news.

Next