Advertisement
ಎರಡು ದಿನಕ್ಕೊಮ್ಮೆ ಬರುತ್ತಿದ್ದ ನೀರು ಬೇಸಿಗೆಯಲ್ಲಿ ವಾರಕ್ಕೊಮ್ಮೆ ಬಂದರೆ ಪುಣ್ಯ. ಇದು ಪ್ರತಿ ವರ್ಷದ ಬವಣೆ. ಈಗ ಮತ್ತೂಂದು ಬೇಸಿಗೆ ಬಂದಿದೆ. ಯಥಾಪ್ರಕಾರ “ಈ ಬೇಸಿಗೆಯಲ್ಲಿ ನೀರಿಗೇನೂ ತೊಂದರೆಯಿಲ್ಲ’ ಎಂದು ಬೆಂಗಳೂರು ಜಲಮಂಡಳಿ ಹೇಳಿದೆ. ಆದರೆ, ವಾಸ್ತವ ಸ್ಥಿತಿ ಜಲಮಂಡಳಿ ಹೇಳಿಕೆಗೆ ವ್ಯತಿರಿಕ್ತವಾಗಿದೆ.
Related Articles
Advertisement
ಹೀಗೆ ನಾಗರಿಕರು ಹನಿ ನೀರಿಗೂ ಹಣಕೊಟ್ಟು ಖರೀದಿಸುತ್ತಿದ್ದರೆ, ಜಲಮಂಡಳಿ ಮಾತ್ರ “ನಗರದಲ್ಲಿ ಈ ಬಾರಿ ನೀರಿಗೇನೂ ಕೊರತೆಯಿಲ್ಲ’ ಎಂಬ ತನ್ನ ಹಳೇ ರಾಗ ಮುಂದುವರಿಸಿದೆ. ಪ್ರಮುಖವಾಗಿ ಬಡವರೇ ಇರುವ ಕೊಳೆಗೇರಿಗಳಲ್ಲಿ ಕುಡಿಯುವ ನೀರಿಗಾಗಿ ದಿನಗಟ್ಟಲೇ ಸರತಿಯಲ್ಲಿ ಕಾಯಬೇಕಾದ ಸ್ಥಿತಿಯಿದೆ. ನೀರಿಗಾಗಿ ಕಿತ್ತಾಡುವುದು ಸಾಮಾನ್ಯವಾಗಿದೆ.
ಟ್ಯಾಂಕರ್ ಮಾಲೀಕರಿಂದ ಸುಲಿಗೆ: ಕೊಳಾಯಿಗಳಲ್ಲಿ ನೀರು ಬಾರದ ಕಾರಣ ಜನತೆ ಟ್ಯಾಂಕರ್ ಮೊರೆ ಹೋಗಿದ್ದಾರೆ. ಆದರೆ ಜನರ ಈ ಅಸಹಾಯಕತೆಯ ಲಾಭ ಪಡೆಯುತ್ತಿರುವ ಟ್ಯಾಂಕರ್ ಮಾಲೀಕರು, ಮನಬಂದಂತೆ ದರ ನಿಗದಿ ಮಾಡುತ್ತಿದ್ದಾರೆ. ಇಲ್ಲಿ ಒಂದೊಂದು ಏರಿಯಾಗೆ ಒಂದೊಂದು ದರ ನಿಗದಿ ಮಾಡಲಾಗುತ್ತಿದೆ. ಹಿಂದೆಲ್ಲ ಒಂದು ಟ್ಯಾಂಕರ್‌ಗೆ 300, 400 ರೂ. ಪಡೆಯುತ್ತಿದ್ದವರು,
ಈಗ 600ರಿಂದ 700 ರೂ.ವರೆಗೆ ಸುಲಿಗೆ ಮಾಡುತ್ತಿದ್ದಾರೆ. 2008ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ 110 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಜಲಮಂಡಳಿಯಿಂದ ಹಲವು ಹಳ್ಳಿಗಳಿಗೆ ನೀರಿನ ಪೈಪ್‌ಲೈನ್ ಅಳವಡಿಸಿದ್ದರೂ ಈವರೆಗೆ ನೀರು ಹರಿದಿಲ್ಲ. ಕೆಲವೆಡೆ ಕರ್ಸಾರಿ ಬೋರ್‌ವೆಲ್‌ಗಳು ಕೆಟ್ಟಿದ್ದು, ಜನ ನೀರಿಗಾಗಿ ಅಲೆಯುತ್ತಿದ್ದಾರೆ. ವಿಪರ್ಯಾಸವೆಂದರೆ ನಗರದ ಕೆಲ ಬಡಾವಣೆಗಳ ಜನ ಕೆಲಸಕ್ಕೆ ರಜೆ ಹಾಕಿ ನೀರು ಹಿಡಿಯುತ್ತಿದ್ದಾರೆ.
ಈ ಬಾರಿ ನೀರಿಗೆ ಬರವಿಲ್ಲ!: ಬೆಂಗಳೂರು ಜಲಮಂಡಳಿಯಿಂದ ನೀರು ಸರಬರಾಜು ಮಾಡುತ್ತಿರುವ ಪ್ರದೇಶಗಳಿಗೆ ಬೇಸಿಗೆಯಲ್ಲಿ ಯಾವುದೇ ರೀತಿಯ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಬೆಂಗಳೂರಿಗೆ ಅಗತ್ಯವಾದ ನೀರು ಶೇಖರಿಸಲಾಗಿದ್ದು, ಜೂನ್ ತಿಂಗಳವರೆಗೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ ಎಂದು ಜಲಮಂಡಳಿಯ ಪ್ರಧಾನ ಎಂಜಿನಿಯರ್ ಕೆಂಪರಾಮಯ್ಯ ಭರವಸೆ ನೀಡಿದ್ದಾರೆ.
ಬಿಬಿಎಂಪಿ ಕ್ರಿಯಾ ಯೋಜನೆ: ಕುಡಿಯುವ ನೀರು ಪೂರೈಕೆ ಹಾಗೂ ಕೊಳವೆ ಬಾವಿ ಕೊರೆಸುವ ಉದ್ದೇಶದಿಂದ ಪಾಲಿಕೆಯ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹಳೆಯ ವಾರ್ಡ್‌ಗಳಿಗೆ 15 ಲಕ್ಷ ರೂ. ಹಾಗೂ ಹೊಸ ವಾರ್ಡ್‌ಗಳಿಗೆ 40 ಲಕ್ಷ ರೂ. ಮೀಸಲಿರಿಸಲಾಗಿದೆ. ಆದರೆ, ಬಜೆಟ್‌ಗೆ ಸರ್ಕಾರದಿಂದ ಅನುಮೋದನೆ ದೊರೆತಿಲ್ಲ. ಆದರೆ, ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿರುವ ಕಡೆ ಟ್ಯಾಂಕರ್ ಮೂಲಕ ಇಲ್ಲವೇ ಕೊಳವೆ ಬಾವಿ ಕೊರೆಸುವಂತೆ ಬಿಬಿಎಂಪಿ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಲಮಂಡಳಿ ಕ್ರಿಯಾ ಯೋಜನೆ: ಕಾವೇರಿ ಎಲ್ಲ ಹಂತಗಳಿಂದ ನಗರಕ್ಕೆ ನಿತ್ಯ 1400 ದಶಲಕ್ಷ ಲೀಟರ್ ನೀರು ಪೂರೈಕೆಯಾಗುತ್ತಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ತಾಂತ್ರಿಕ ಕಾರಣಗಳಿಂದ ನೀರಿನ ಸಮಸ್ಯೆ ಎದುರಾಗುವ ಪ್ರದೇಶಗಳಿಗೆ ಮಂಡಳಿಯ 68 ಟ್ಯಾಂಕರ್ ಮೂಲಕ ನೀರು ಪೂರೈಸಲು ತೀರ್ಮಾನಿಸಿದೆ. ಇದರೊಂದಿಗೆ ನೀರು ಸರಬರಾಜು ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಜಲಮಂಡಳಿ ಬೋರ್‌ವೆಲ್‌ಗಳನ್ನು ಸುಸ್ಥಿತಿಯಲ್ಲಿರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಉದಯವಾಣಿ ಕಾಳಜಿ: ನಗರದ ವಿವಿಧ ಭಾಗಗಳಲ್ಲಿ ಕುಡಿಯುವ ನೀರು ಪೂರೈಕೆ ಸ್ಥಿತಿಗತಿ, ಸ್ಥಳೀಯರ ಸಮಸ್ಯೆ ಹಾಗೂ ಜಲಮಂಡಳಿ, ಬಿಬಿಎಂಪಿ ವತಿಯಿಂದ ಕೈಗೊಂಡಿರುವ ಕ್ರಮಗಳ ಕುರಿತು ಬೆಳಕು ಚೆಲ್ಲುವ ಉದ್ದೇಶದಿಂದ “ಉದಯವಾಣಿ’ ಇಂದಿನಿಂದ ಸರಣಿ ವರದಿ ಪ್ರಕಟಿಸಲಿದೆ. ಸಾರ್ವಜನಿಕರು ಸಹ ತಮ್ಮ ಭಾಗಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಛಾಯಾಚಿತ್ರ ಸಹಿತ ಮಾಹಿತಿ ಕಳುಹಿಸಬಹುದು.
ನೀರಿನ ಪ್ರಾಬ್ಲಿಂ ನಮಗೆ ತಿಳಿಸಿ: ನಿಮ್ಮ ಏರಿಯಾದಲ್ಲೂ ನೀರಿಗೆ ಬರವೇ? ಜಲಮಂಡಳಿ ಕೊಳಾಯಿಗಳಲ್ಲಿ ನೀರು ಬರುತ್ತಿಲ್ಲವೇ? ಕುಡಿಯುವ ನೀರಿಗಾಗಿ ಗಂಟೆಗಟ್ಟಲೇ ಕ್ಯೂ ನಿಲ್ಲುತ್ತಿದ್ದೀರಾ? ಟ್ಯಾಂಕರ್‌ನವರು ಸುಲಿಗೆ ಮಾಡುತ್ತಿದ್ದಾರಾ? ನಿಮ್ಮ ಉತ್ತರ ಹೌದು ಎಂದಾಗಿದ್ದರೆ ಕೂಡಲೇ ನಿಮ್ಮೇರಿಯಾದಲ್ಲಿನ ನೀರಿನ ಸಮಸ್ಯೆ ಕುರಿತು “ಉದಯವಾಣಿ’ ವಾಟ್ಸ್‌ಆ್ಯಪ್ ಸಂಖ್ಯೆಗೆ ಚಿತ್ರ ಸಹಿತ ಮಾಹಿತಿ ಕಳಿಸಿ.
ವಾಟ್ಸ್‌ಆ್ಯಪ್ ಸಂಖ್ಯೆ: 88611 96369
* ವೆಂ.ಸುನೀಲ್‌ಕುಮಾರ್