Advertisement
ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಒಂದು ಕಾಲಕ್ಕೆ 60 ವಿದ್ಯಾರ್ಥಿಗಳಿಂದ ಆರಂಭಗೊಂಡ ಮಹಿಳಾ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ಪ್ರಸ್ತುತ 600ರ ಗಡಿ ದಾಟಿದೆ. ಆದರೂ ಕಾಲೇಜಿಗೆ ಬರುವ ವಿದ್ಯಾರ್ಥಿಗಳ ದುರದೃಷ್ಟವೋ ಏನು ವಿಜ್ಞಾನ ಕಲಿಯುವ ಹಂಬಲ ಇದ್ದರೂ ಕಲಿಕೆಗೆ ಮಾತ್ರ ಇನ್ನೂ ಕಾಲೇಜಿನಲ್ಲಿ ಅವಕಾಶ ಸಿಕ್ಕಿಲ್ಲ.
Related Articles
Advertisement
ವಿಜ್ಞಾನ ವಿಭಾಗ ತೆರೆಯಬೇಕಾದರೆ ಸಾಕಷ್ಟು ಕೊಠಡಿಗಳು ಬೇಕು. ಪ್ರತ್ಯೇಕವಾಗಿ ಪ್ರಯೋಗಾಲಯಕ್ಕೆ ಕೊಠಡಿಗಳು ಅವಶ್ಯಕವಾಗಿದೆ. ಆದರೆ ನಿತ್ಯ ಪಾಠ, ಪ್ರಯೋಗಾಲಯಕ್ಕೆ ಕೊಠಡಿಗಳ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಗೆ ವಿಜ್ಞಾನ ವಿಭಾಗದಲ್ಲಿ ಓದುವ ಹಂಬಲ ಇದ್ದರೂ ಕಾಲೇಜಿನಲ್ಲಿ ಅವಕಾಶ ಇಲ್ಲದಂತಾಗಿದೆ.
ಸಿಬ್ಬಂದಿ ಕೊರತೆ ಇಲ್ಲ: ಮಹಿಳಾ ಪದವಿ ಕಾಲೇಜಿನಲ್ಲಿ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರು ತಾಲೂಕುಗಳಿಂದ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಕಾಲೇಜಿಗೆ ಬರುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯುತ್ತಿರುವ ಮಹಿಳಾ ಕಾಲೇಜಿನಲ್ಲಿ ಬೋಧಕರ ಹಾಗೂ ಬೋಧಕೇತರ ಸಿಬ್ಬಂದಿಗೇನು ಕೊರತೆ ಇಲ್ಲ.
ಆದರೆ ಸಮಸ್ಯೆ ಕೊಠಡಿಗಳ ಕೊರತೆ ಇರುವುದರಿಂದ ಕಾಲೇಜಿಗೆ ಕಳೆದ 9 ವರ್ಷಗಳಿಂದ ವಿಜ್ಞಾನ ವಿಭಾಗ ಮಂಜೂರಾಗಿ ಸಿಗದೇ ವಿದ್ಯಾರ್ಥಿಗಳು ಅನಿವಾರ್ಯವಾಗಿ ಕಲಾ ಹಾಗೂ ವಾಣಿಜ್ಯ ವಿಭಾಗಗಳನ್ನು ಆರಿಸಿಕೊಂಡು ಹೋಗುವಂತಾಗಿದೆ.
ವಿಜ್ಞಾನ ವಿಭಾಗ ಮರೀಚಿಕೆ: ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆರಂಭಗೊಂಡಿದ್ದರೆ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ 1000 ದಾಟುತ್ತಿತ್ತು ಎಂದು ಕಾಲೇಜಿನ ಉಪನ್ಯಾಸಕರು ಹೇಳುತ್ತಾರೆ. ಆದರೆ ನಗರದ ಶಿಡ್ಲಘಟ್ಟ ರಸ್ತೆಯ ಹೆದ್ದಾರಿ ಪಕ್ಕ ನಿರ್ಮಿಸುತ್ತಿರುವ ಮಹಿಳಾ ಪದವಿ ಕಾಲೇಜು ನೂತನ ಕಟ್ಟಡ ಕಳೆದ ನಾಲ್ಕೈದು ವರ್ಷಗಳಿಂದ ಕುಂಟುತ್ತಾ ಸಾಗಿರುವ ಪರಿಣಾಮ ಕಾಲೇಜಿಗೆ ವಿಜ್ಞಾನ ವಿಭಾಗ ಇನ್ನೂ ಮರೀಚಿಕೆಯಾಗುವಂತಾಗಿದೆ.
ದೂರದ ಪ್ರದೇಶಗಳಿಗೆ ಕಳುಹಿಸಲು ಹಿಂದೇಟು: ಚಿಕ್ಕಬಳ್ಳಾಪುರ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿರುವ ವಿದ್ಯಾರ್ಥಿನಿಯರಿಗೆ ಸ್ಥಳೀಯವಾಗಿ ವಿಜ್ಞಾನ ವಿಭಾಗದಲ್ಲಿ ಪದವಿ ಮಾಡಲು ಸರ್ಕಾರಿ ಕಾಲೇಜಿನಲ್ಲಿ ಲಭ್ಯತೆ ಇಲ್ಲದ ಕಾರಣ ಪೋಷಕರು ದೂರದ ಬೆಂಗಳೂರು, ಚಿಂತಾಮಣಿ ಮತ್ತಿತರ ಕಡೆಗಳಿಗೆ ಕಳುಹಿಸಲು ಸಾಧ್ಯವಾಗದೇ ಪೋಷಕರು ಮದುವೆ ಕಾರ್ಯ ಮುಗಿಸಿ ಶಿಕ್ಷಣಕ್ಕೆ ಬ್ರೇಕ್ ಹಾಕುತ್ತಿದ್ದಾರೆ.
ಗ್ರಾಮೀಣ ಭಾಗದಲ್ಲಿ ಒಳ್ಳೆಯ ಪ್ರತಿಭಾವಂತರು ಇದ್ದಾರೆ. ಆದರೆ ನಮ್ಮ ಕಾಲೇಜಿನಲ್ಲಿ ಕೊಠಡಿಗಳ ಕೊರತೆಯಿಂದ ವಿಜ್ಞಾನ ವಿಭಾಗ ತೆರೆದಿಲ್ಲ. ಇದರಿಂದ ಬಹಳಷ್ಟು ವಿದ್ಯಾರ್ಥಿನಿಯರು ಖಾಸಗಿ ಕಾಲೇಜುಗಳಿಗೆ ಹೋಗುವಂತಾಗಿದೆ ಎಂದು ಸ್ಥಳೀಯ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಹಿರಿಯ ಉಪನ್ಯಾಸಕರೊಬ್ಬರು ಕಾಲೇಜಿನ ನೂತನ ಕಟ್ಟಡ ವಿಳಂಬದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಖಾಸಗಿ ಕಾಲೇಜುಗಳ ಕಡೆ ವಾಲುತ್ತಿರುವ ವಿದ್ಯಾರ್ಥಿಗಳು: ಇತ್ತೀಚಿನ ದಿನಗಳಲ್ಲಿ ಕಲಾ ವಿಭಾಗಕ್ಕಿಂತ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಪದವಿ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದೆ. ಅದರಲ್ಲೂ ಪಿಯುಸಿಯಲ್ಲೆ ಕನ್ನಡ ವಿಭಾಗಕ್ಕಿಂತ ಆಂಗ್ಲ ಮಾಧ್ಯಮದಲ್ಲಿ ವಿಜ್ಞಾನ ಶಿಕ್ಷಣ ಪಡೆಯುವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಿದೆ.
ಹೀಗಾಗಿ ಜಿಲ್ಲಾ ಕೇಂದ್ರದ ಮಹಿಳಾ ಪದವಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಇಲ್ಲದ ಕಾರಣ ವಿಜ್ಞಾನ ವಿಭಾಗದ ಮೇಲೆ ಆಸಕ್ತಿ ಇರುವ ವಿದ್ಯಾರ್ಥಿನಿಯರು ದುಬಾರಿ ಶುಲ್ಕವಾದರೂ ಸರಿ ಎಂದು ಖಾಸಗಿ ಕಾಲೇಜುಗಳ ಕಡೆ ವಾಲುತ್ತಿದ್ದರೆ ಮತ್ತೆ ಕೆಲವರು ಪಿಯುಸಿ ಹಂತಕ್ಕೆ ತಮ್ಮ ಶಿಕ್ಷಣವನ್ನು ಮುಗಿಸಿ ಪದವಿ ಶಿಕ್ಷಣ ಪಡೆಯದೇ ಮದುವೆಗಳಾಗಿ ಮನೆಗಳಲ್ಲಿ ಇರುವಂತಾಗಿದೆ.
ಚಿಕ್ಕಬಳ್ಳಾಪುರದಲ್ಲಿ 9 ವರ್ಷದ ಹಿಂದೆ ಮಹಿಳಾ ಪದವಿ ಕಾಲೇಜು ಕೇವಲ 60 ಮಕ್ಕಳಿಂದ ಆರಂಭಗೊಂಡು ಈಗ 600 ಕ್ಕೂ ಹೆಚ್ಚು ಮಕ್ಕಳು ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಇದ್ದಿದ್ದರೆ ವಿದ್ಯಾರ್ಥಿಗಳ ಸಂಖ್ಯೆ ಸಾವಿರ ದಾಟುತ್ತಿತ್ತು. ಈಗ ನೂತನ ಕಟ್ಟಡ ಕೂಡ ವಿಳಂಬವಾಗಿ ಕಾಮಗಾರಿ ನಡೆಯುತ್ತಿದೆ. ಶೀಘ್ರ ಬೇಗ ಕಾಮಗಾರಿ ನಡೆದು ಕಟ್ಟಡ ನಿರ್ಮಾಣವಾದರೂ ವಿಜ್ಞಾನ ವಿಭಾಗ ತೆರೆಯಲು ಅವಕಾಶ ಸಿಗುತ್ತದೆ.-ಗೀತಾ, ಮಹಿಳಾ ಪದವಿ ಕಾಲೇಜಿನ ಉಪನ್ಯಾಸಕಿ * ಕಾಗತಿ ನಾಗರಾಜಪ್ಪ