Advertisement
ಈ ಮಾನವ ಜನ್ಮ ಎಂಬುದು ಎಷ್ಟೋ ವರದಾನ, ಪುಣ್ಯದ ಫಲದಿಂದ ಪಡೆದುಕೊಂಡ ಅವಕಾಶದ ಕಾಣಿಕೆಯಾಗಿದೆ. ಇದರ ಸಾರ್ಥಕತೆಯಾಗುವುದು ಸಮಾಜಕ್ಕೆ ನಾವು ನಮ್ಮನ್ನು ತೊಡಗಿಸಿಕೊಂಡಾಗ. ಹಾಗಾದರೆ ಅವಕಾಶವೆಂದರೆ ಅಂದುಕೊಂಡಿದ್ದನ್ನು ಸಾಧಿಸಲು ಒದಗಿ ಬರುವ ಸನ್ನಿವೇಶ. ಎರಗಿ ಬಂದ ಕಷ್ಟಗಳಿಗೆ ಕೊರಗಿ, ನಡುಗಿ ಕುಗ್ಗಬಾರದು, ಕುಗ್ಗಿ ಅಗ್ಗವಾಗಬಾರದು, ಅಗ್ಗವಾಗಿ ಬದುಕನ್ನು ಕುಗ್ಗಿಸಬಾರದು. ಅವಕಾಶವೆಂಬುದು ಭರವಸೆಯ ದ್ಯೋತಕವಾದುದು. ನಮ್ಮ ಸಾಧನೆಗಳು ಅವಕಾಶವಾಗಿ ಬೆಳಕಾಗಿ ಬಂದಾಗ ವ್ಯಕ್ತಿಯ ಶಕ್ತ-ವ್ಯಕ್ತಿತ್ವ ಅನಾವರಣವಾಗಲು ಸಾಧ್ಯ. ಕೆಲವೊಮ್ಮೆ ಅವಕಾಶ ಬಂದಾಗ ನಾವು ತಯಾರು ಆಗಿರುವುದಿಲ್ಲ ನಾವು ತಯಾರಾಗಿದ್ದಾಗ ಅವಕಾಶಗಳು ಒದಗಿ ಬರದಿರಬಹುದು.
Related Articles
Advertisement
ಒಂದು ಇದ್ದರೆ ಇನ್ನೊಂದು ಇರುವುದಿಲ್ಲ ಎನ್ನುವುದಕ್ಕೆ ಕಡಲೆಯ ಭಾಗ್ಯ ಹಾಗೂ ಹಲ್ಲಿನ ಭಾಗ್ಯವನ್ನು ಈ ಗಾದೆಯಲ್ಲಿ ಎತ್ತಿಕೊಳ್ಳಲಾಗಿದೆ. ಅದೇ ರೀತಿಯಲ್ಲಿ ಅವಕಾಶದ ವಿಚಾರವನ್ನು ತೆಗೆದುಕೊಂಡರೆ ಕೆಲವರಿಗೆ ಪ್ರತಿಭೆ ಇರುತ್ತದೆ ಅದರ ಪ್ರದರ್ಶನಕ್ಕೆ ಬೇಕಾದ ಅವಕಾಶವಿರದೆ ಆ ಪ್ರತಿಭೆ ಕರಗಿ ಹೋಗುತ್ತದೆ, ಇನ್ನೂ ಕೆಲವು ಏನೂ ಪ್ರತಿಭೆ ಇರದ ಯಕಶ್ಚಿತ ಜೀವವೊಂದು ಅವಕಾಶಗಳನ್ನು ದರೋಡೆ ಮಾಡುತ್ತ ಎತ್ತರ ಏರು ಶಿಖರದಲ್ಲಿ ಅಹಂಕಾರದ ಪ್ರಾಣಸ್ನೇಹಿತನಂತೆ ವರ್ತಿಸುತ್ತಾರೆ, ಇನ್ನೂ ಕೆಲವು ವೇಳೆ ಪ್ರತಿಭೆ ಮತ್ತು ಅವಕಾಶಗಳ ಸಮಭಾವದಿಂದ ಐಕ್ಯಗೊಂಡು ಚರಿತ್ರಾರ್ಹವಾದ ಸಾಧನೆಗಳ ರೇಖೆಗಳು ಜೀವ ತಳೆದು ಬದುಕಿನ ಪುಸ್ತಕದಲ್ಲಿ ದಾಖಲೆಯನ್ನು ಮೂಡಿಸುತ್ತಿರುತ್ತವೆ. ಜೀವನದಲ್ಲಿ ಎದುರಾಗುವ ಘಟನೆಗಳಿಗೆ ಅಂಜದೆ ಅಳುಕದೆ ಸಾಗಬೇಕು. ಅಂಜಿ ಕುಳಿತರೆ ಬದುಕು ಬಣ್ಣಮಯವಾಗದೆ ಕಮರುವುದು, ನೀರಸ ಭಾವದಲ್ಲಿ ಬಿದ್ದು ಒದ್ದಾಡುವುದು. ಕಣ್ಣು ಮುಚ್ಚಿ ಕುಳಿತು ಜಗತ್ತು ಕತ್ತಲು ಎಂದು ಜರಿದರೆ ಬೆಳಕಿನ ಲೋಕ ನಮ್ಮಿಂದ ದೂರವೇ ಉಳಿಯುತ್ತದೆ. ಅದನ್ನು ಗ್ರಹಿಸುವ ಅವಕಾಶವಿದ್ದರೂ, ಸಾಮರ್ಥಯವಿದ್ದರೂ ನಮ್ಮ ಕೈಗೆ ದಕ್ಕಲಾರದು. ಅವಕಾಶವಿದ್ದಲ್ಲಿ ಪ್ರತಿಭೆಯ ಅನಾವರಣಕ್ಕೆ ಮುಂದಾಗಿ. ಅವಕಾಶಗಳು, ಅವಕಾಶದ ಆಯ್ಕೆಗಳು ನಮ್ಮ ಕೈಯಲ್ಲಿಯೇ ಇರುತ್ತವೆ. ಗಾಳಿ ಬಂದಾಗ ತೂರಿಕೋ, ಅವಕಾಶವಿದ್ದಾಗ ಬಳಸಿಕೋ ಎಂಬುದು ಕೂಡ ಅವಕಾಶದ ಸದ್ಬಳಕೆಯನ್ನೇ ಒತ್ತಿ ಹೇಳುತ್ತದೆ.
ಕಣ್ಣು ಮುಚ್ಚಿ ಕುಳಿತರೆ ಕತ್ತಲು ಮಾತ್ರ ಕಾಣಿಸಿಕೊಳ್ಳುತ್ತದೆ ಆದರೆ ಕಣ್ಣು ತೆರೆದರೆ ಬೆಳಕಿನೊಂದಿಗೆ ಬದುಕು ಕೂಡ ಕಾಣಿಸಿಕೊಳ್ಳುತ್ತದೆ. ಬದುಕು ಸದಾ ಅದೃಷ್ಟಗಳನ್ನು ನಮ್ಮತ್ತ ಎಸೆಯದಿದ್ದರೂ, ನೂರು, ಸಾವಿರ ಅವಕಾಶಗಳನ್ನು ನಮ್ಮೆದುರು ತೆರೆದಿಡುತ್ತದೆ. ಎಂಥ ಕೆಟ್ಟ ಸಂದರ್ಭದಲ್ಲೂ ನಮ್ಮೆದುರು ಆಯ್ಕೆಗಳಿರುತ್ತವೆ ಎಂಬ ನೇಮಿಚಂದ್ರರ ಸ್ಪೂರ್ತಿದಾಯಕವಾದ ಮಾತುಗಳು ಸದಾವಕಾಶದ ಆಶಯವನ್ನು ಬದುಕ ಬದಲಿಸಬಹುದು ಎಂಬ ಹೊತ್ತಿಗೆಯಲ್ಲಿನ ಆಯ್ಕೆಯಿದೆ ನಮ್ಮ ಕೈಯಲ್ಲಿ ಎಂಬ ಲೇಖನವು ಸಾರುತ್ತದೆ. ಅವಕಾಶ ಒಮ್ಮೆ ಬಂದು ಕದ ತಟ್ಟಿ ಕರೆಯುತ್ತದೆ ಅದರ ಕಡೆ ಗಮನ ಕೊಡದೆ ಹೋದರೆ ನಮ್ಮ ಚೈತನ್ಯ ಶಕ್ತಿಯೇ ಕರಗುತ್ತದೆ. ಆಂತರ್ಯದಲ್ಲಿ ಹುದುಗಿರುವ ಅದೆಷ್ಟೋ ವಿಭಿನ್ನತೆಗಳನ್ನು ಕಾಣಲು ಸಾಧ್ಯವಿಲ್ಲ.
ಒಬ್ಬ ವ್ಯಕ್ತಿ ಬದುಕಿನ ಬವಣೆಯನ್ನು ನೀಗಿಸಲು ಸಾಧ್ಯವಿಲ್ಲದೆ ತನ್ನನ್ನು ತಾನು ಕೊಂದುಕೊಳ್ಳಲು ನಿರ್ಧರಿಸಿ ಒಂದು ಹೊಳೆಯ ಹತ್ತಿರ ಬಂದು ನಿಂತು ಭಗವಂತನನ್ನು ಪ್ರಾರ್ಥಿಸುತ್ತಾನೆ. ದೈವದ ಕೃಪೆಯಿಂದ ಕಾಕತಾಳೀಯ ಎಂಬಂತೆ ದೇವರೇ ಪ್ರತ್ಯಕ್ಷನಾಗಿ “ನೋಡಪ್ಪ ನೀನು ಸಾಯಬಾರದು ಬದುಕಬೇಕು ಅದಕ್ಕೆ ನಿನಗೆ ಈ ಹೊಳೆಯಲ್ಲಿ ಸಾಕಷ್ಟು ರತ್ನಗಳಿವೆ. ಆದರೆ ಒಂದು ಮಾತ್ರ ಹೊಳೆಯುವ ಅಮೂಲ್ಯರತ್ನ, ಅದು ಅಪರಂಜಿಯಂಥಹ ಬಂಗಾರದ ರತ್ನ. ಒಂದೊಂದೇ ರತ್ನವನ್ನು ತೆಗೆದುಕೊಂಡು ಹಣೆ ಮೇಲೆ ಇಡಬೇಕು. ಯಾವುದು ಹೊಳೆಯುವುದೋ ಅದು ಮಾತ್ರವೇ ಸಾಕಷ್ಟು ಮೌಲ್ಯ ಉಳ್ಳದ್ದು, ಹೊಳೆಯದೆ ಇರುವುದನ್ನು ವಾಪಾಸು ಹೊಳೆಗೆ ಎಸೆದು ಬಿಡಬೇಕು ಎಂಬ ಷರತ್ತಿನೊಂದಿಗೆ ಭಗವಂತ ಅಂತರ್ಧಾನವಾದನು. ಆ ಕ್ಷಣದಿಂದಲೇ ವ್ಯಕ್ತಿಯು ರತ್ನದ ಪರೀಕ್ಷೆ ಪ್ರಾಂಭಿಸುತ್ತಾನೆ.
ಒಂದೊಂದು ರತ್ನವನ್ನು ತೆಗೆದುಕೊಂಡು ಹಣೆಯಲ್ಲಿ ಇಡಲು ಪ್ರಾರಂಭಿಸಿದನು. ಮೊದಲು ಇಟ್ಟ ರತ್ನ ಹೊಳೆಯಲಿಲ್ಲ, ಎರಡನೆಯದೂ ಹೊಳೆಯಲ್ಲಿಲ್ಲ… ಹೀಗೆ ಹತ್ತಾರು ರತ್ನಗಳ ಹೊಳಪಿನ ಕಾದಾಟ ನಡೆಯುತ್ತ ಇರಲಾಗಿ ಭರಾಟೆಯ ಪರೀಕ್ಷೆಯೇ ಶರವೇಗದಲ್ಲಿ ಸಾಗಿದಾಗ ಕೆರೆಯ ನೀರನ್ನು ಕೆರೆಗೆ ಚೆಲ್ಲಿದ್ದಾಯಿತು. ಈ ಆತುರದಲ್ಲಿ ರತ್ನವನ್ನು ಎತ್ತಿಕೊಂಡು ಹಣೆಗೆ ಹಣೆಗೆ ಇಟ್ಟ ಆ ರತ್ನ ಹೊಳೆಯಿತು.
ಆದರೆ ಆತುರದ ಕಾರಣದಿಂದ ಆ ರತ್ನವನ್ನು ಹೊಳೆಗೆ ಎಸೆದ. ಒಂದು ಕ್ಷಣ ಸಂಯಮ ಕಳೆದುಕೊಂಡು ಆತುರ ಪಟ್ಟಿದಕ್ಕೆ ಅವನಿಗೆ ಸಿಕ್ಕಂಥಹ ಅನರ್ಘ್ಯ ಅವಕಾಶವನ್ನು ಕಳೆದುಕೊಳ್ಳುವಂತಾಯಿತು. ಆತನ ಬದುಕು ಮತ್ತಷ್ಟು ದುಸ್ತರವೇ ಆಯಿತು. ಆದ್ದರಿಂದ ನಮ್ಮ ಜೀವನದಲ್ಲಿ ಅವಕಾಶ ಬರುವುದು ಒಮ್ಮೆ ಮಾತ್ರ. ಒದಗಿ ಬಂದ ಅವಕಾಶವನ್ನು ಬದಿಗೆ ಸರಿಸಿದರೆ ನಾವು ಯಾರ ಗಮನಕ್ಕೂ ಬಾರದೆ ಬದಿಗೆ ಸರಿಯಲೇಬೇಕಾಗುತ್ತದೆ. ಒಮ್ಮೆಯ ಅವಕಾಶ ಮತ್ತೂಂದಷ್ಟು ಅವಕಾಶ ಗಳಿಗೆ ದಾರಿ ತೋರುವುದು ಖಂಡಿತ ಸತ್ಯ.
ಮೊದಲಿಗೆ ಮಹಾರಾಣಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಅವಕಾಶ ಒದಗಿ ಬಂದಾಗ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡದ್ದಕ್ಕೆ ಮುಂದೆ ಪದವಿ ಕಾಲೇಜಿನಲ್ಲಿ ಬೋಧನೆ ಮಾಡಲು ಅವಕಾಶ ಲಭಿಸಿ ಸಾಧ್ಯವಾದದ್ದು, ಅಂತೆಯೇ ಪತ್ರಿಕೆಗಳಲ್ಲಿ ಬರೆದ ಬರಹಗಳಿಗೆ ಹಲವು ಮಂದಿ ನೀವು ತುಂಬಾ ಚೆನ್ನಾಗಿ ಬರೆಯುವಿರಿ ಇನ್ನೂ ಈ ರೀತಿಯ ಬರವಣಿಗೆ ನಿಮ್ಮಿಂದ ಸಾಧ್ಯವಾಗುತ್ತದೆ ಬರೆಯಿರಿ ಎಂದ ಅವರ ಮಾತುಗಳೇ ನನ್ನ ಬರವಣಿಗೆಗೆ ಅವಕಾಶವಾಗುತ್ತಿದೆ. ಒಟ್ಟಿನಲ್ಲಿ ಅವಕಾಶವು ಒದಗಿ ಬಂದಾಗ ಒಪ್ಪಿಕೊಂಡು ಅಪ್ಪಿಕೊಳ್ಳುವ ಇಲ್ಲವೇ ಕೈ ಚೆಲ್ಲುವ ನಿರ್ಣಯದಿಂದ ನಮ್ಮ ಸೋಲು-ಗೆಲುವು ನಿರ್ಧಾರವಾಗುತ್ತದೆ.
ಸೋತೆನೆಂದು ಕುಗ್ಗಬೇಡ ಗುರಿಯ ಮೇಲಿರಲಿ ಕಣ್ಣು – ಗೆದ್ದೆನೆಂದು ಸಂಭ್ರಮವೂ ಬೇಡ ಸಾಧನೆ ಎಂಬುದು ಅನುಗಾಲವು ಮಾಗುವ ಹಣ್ಣು. ಸೋಲಿರಲಿ ಗೆಲುವಿರಲಿ ನಮ್ಮ ಪ್ರಯತ್ನಗಳು ಸಾಗುತ್ತಲೇ ಇರಲಿ. ಒಮ್ಮೆ ಪ್ರಯತ್ನಿಸಿ ಮತ್ತೂ ಪ್ರಯತ್ನಿಸಿ ಒಂದು ದಿನ ಅದು ನಮ್ಮ ದಿನವೇ ಆಗುತ್ತದೆ. ಇದರಲ್ಲಿ ಅನುಮಾನವಿಲ್ಲ.
ಪರಮೇಶ ಕೆ. ಉತ್ತನಹಳ್ಳಿ
ಮೈಸೂರು