ಮಂಗಳೂರು: ಖ್ಯಾತ ದಂತ ವೈದ್ಯರು, ಎ.ಬಿ.ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಹಾಗೂ ಡೀನ್ ಆಗಿದ್ದ ಡಾ.ಯು.ಎಸ್.ಕೃಷ್ಣ ನಾಯಕ್ (64) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ (ಡಿ.3)ದಂದು ನಿಧನ ಹೊಂದಿದರು.
ಅವರು ಪತ್ನಿ, ಪುತ್ರ ಡಾ.ಅರ್ಜುನ್ ನಾಯಕ್ ಯುಎಸ್, ಪುತ್ರಿ ಡಾ.ಏಕತಾ ನಾಯಕ್ ಯು.ಎಸ್ (ಇಬ್ಬರೂ ದಂತ ವೈದ್ಯರು) ಸಹಿತ ಅಪಾರ ಬಂಧುಗಳು, ಮಿತ್ರರು, ಅಭಿಮಾನಿಗಳನ್ನು ಅಗಲಿದ್ದಾರೆ.
ನಗರದ ಖ್ಯಾತ ದಂತ ಶಸ್ತ್ರಚಿಕಿತ್ಸಕ ಡಾ.ಯು.ಎಸ್.ಮೋಹನ್‌ದಾಸ್ ನಾಯಕ್ ಅವರ ಪುತ್ರನಾಗಿ 1961ರಲ್ಲಿ ಜನಿಸಿದ ಅವರು ಸಂತ ಅಲೋಶಿಯಸ್ ಶಾಲೆ ಹಾಗೂ ಕಾಲೇಜಿನಲ್ಲಿ ತಮ್ಮ ಪ್ರೌಢಶಿಕ್ಷಣ, ಪದವಿ ಪೂರ್ವ ಶಿಕ್ಷಣ ಪೂರೈಸಿ ಮಣಿಪಾಲ ಕೆಎಂಸಿಯಲ್ಲಿ ದಂತ ವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಗಳಿಸಿದರು. ಮಂಗಳೂರಿನ ನಾಯಕ್ಸ್ ಡೆಂಟಲ್ ಕ್ಲಿನಿಕ್‌ನಲ್ಲೂ ಅವರು ಸೇವೆ ಸಲ್ಲಿಸುತ್ತಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2003), ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಆಂಡ್ ಸರ್ಜನ್ಸ್ ಗ್ಲಾಸ್‌ಗೋ ಅವರ ಎಂಎಫ್‌ಡಿಎಸ್-ಆರ್‌ಸಿಪಿಎಸ್, ಮಾಸ್ಟರ್ ಆಫ್ ಇಂಟರ್‌ನ್ಯಾಷನಲ್ ಕಾಲೇಜ್ ಆಫ್ ಡೆಂಟಿಸ್ಟ್ಸ್ ಯುಎಸ್‌ಎ, ಡಾ.ಕೇಕಿ ಮಿಸ್ತ್ರಿ ಸ್ಕ್ರೋಲ್ ಆಫ್ ಆನರ್, ಎಕ್ಸಲೆನ್ಸ್ ಇನ್ ಡೆಂಟಲ್ ಲೀಡರ್‌ಶಿಪ್ , ಇಂಡಿಯನ್ ಅರ್ಥೋಡಾಂಟಿಕ್ ಸೊಸೈಟಿಯ ಜೀವಮಾನದ ಸಾಧನೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಗೌರವಗಳನ್ನೂ ಗಳಿಸಿದ್ದಾರೆ.
ಭಾರತೀಯ ದಂತ ವೈದ್ಯಕೀಯ ಸಂಘದ ಅಧ್ಯಕ್ಷರಾಗಿ, ಇಂಡಿಯನ್ ಅರ್ಥೋಡಾಂಟಿಕ್ಸ್ ಸೊಸೈಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಲ್ಲದೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಡೆಂಟಲ್ ಸರ್ಜರಿ ಬೋರ್ಡ್ ಆಫ್ ಸ್ಟಡೀಸ್ ಸದಸ್ಯರಾಗಿದ್ದರು. ದೇಶ ವಿದೇಶಗಳಲ್ಲಿ ಹಲವು ಪ್ರವಾಸ ಕೈಗೊಂಡು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ಅಮೆರಿಕನ್ ಬಯೋಗ್ರಾಫಿಕಲ್ ಸೊಸೈಟಿಯಿಂದ ಮ್ಯಾನ್ ಆಫ್ ದಿ ಇಯರ್ ಗೌರವ ಪ್ರಶಸ್ತಿಯೂ ಲಭಿಸಿದೆ.