Advertisement

Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ

02:26 PM Dec 18, 2024 | Team Udayavani |

ಉಡುಪಿ: ಉಡುಪಿ ಜಿಲ್ಲಾ ಕೇಂದ್ರವಾದರೂ ಇನ್ನೂ ಉಪವಿಭಾಗ ತೆರೆಯದೆ ಇರುವುದರಿಂದ ಇಡೀ ಜಿಲ್ಲೆಯ ಜನರು ತಮ್ಮ ಅಗತ್ಯ ಕೆಲಸಗಳಿಗೆ ಕುಂದಾಪುರಕ್ಕೇ ಹೋಗಬೇಕಾದ ಅನಿವಾರ್ಯವಾಗಿದೆ. ಆಡಳಿತಾತ್ಮಕ ಮತ್ತು ಸುಗಮ ಕಾರ್ಯ ಚಟುವಟಿಕೆಗಳ ನೆಲೆಯಲ್ಲಿ ಉಡುಪಿಯಲ್ಲೂ ಉಪವಿಭಾಗ ಕಚೇರಿ ಆರಂಭಿಸಬೇಕು ಎಂಬ ಹಳೆ ಬೇಡಿಕೆ ಇನ್ನೂ ಈಡೇರಿಲ್ಲ.

Advertisement

ಈಗ ಉಡುಪಿಯಲ್ಲಿರುವುದು ಏಕೈಕ ಉಪವಿಭಾಗ. ಕುಂದಾಪುರದಲ್ಲಿರುವ ಸಹಾಯಕ ಉಪವಿಭಾಗ ಕಚೇರಿ ವ್ಯಾಪ್ತಿಗೆ ಜಿಲ್ಲೆಯ ಏಳು ತಾಲೂಕುಗಳೂ ಬರುತ್ತವೆ. ಅಂದರೆ ಕಾಪು ತಾಲೂಕಿನವರು ಸಹಾಯಕ ಕಮಿಷನರ್‌ ಮಟ್ಟದಲ್ಲಿ ಏನಾದರೂ ಕೆಲಸ ಆಗಬೇಕು ಎಂದರೆ 51 ಕಿ.ಮೀ. ದೂರ ಪ್ರಯಾಣಿಸಬೇಕು. ಹೆಬ್ರಿಯವರಿಗಂತೂ ಇದು 55 ಕಿ.ಮೀ ದೂರ. ಅಂದರೆ, ಉಪವಿಭಾಗದ ಕೆಲಸವಿದ್ದರೆ ಒಂದಿಡೀ ದಿನವನ್ನು ಮೀಸಲು ಇಡಬೇಕು. ಜತೆಗೆ ಸಮಯ ಮತ್ತು ಖರ್ಚುವೆಚ್ಚ ಎರಡನ್ನೂ ಭರಿಸಬೇಕು.

ಹೀಗಾಗಿ ಉಡುಪಿ ಮತ್ತು ಕುಂದಾಪುರ ಎರಡು ಉಪವಿಭಾಗಗಳನ್ನು ರೂಪಿಸಿ, ಕಾಪು, ಉಡುಪಿ, ಬ್ರಹ್ಮಾವರ, ಹೆಬ್ರಿ, ಕಾರ್ಕಳ ತಾಲೂಕುಗಳನ್ನು ಉಡುಪಿ ಉಪವಿಭಾಗಕ್ಕೆ ಸೇರಿಸಬೇಕು ಎಂಬ ಬೇಡಿಕೆ ಬಹುಕಾಲದಿಂದ ಇದೆ. ಆದರೆ, ಇನ್ನೂ ಅದು ಧೂಳು ತಿನ್ನುತ್ತಿದೆ.

ಸ್ವಾತಂತ್ರ್ಯ ಪೂರ್ವದ ಉಪವಿಭಾಗ
ಕುಂದಾಪುರ ಸ್ವಾತಂತ್ರ್ಯ ಪೂರ್ವ ದಿಂದಲೂ ಅಸ್ತಿತ್ವದಲ್ಲಿದ್ದ ಆಡಳಿತಾತ್ಮಕ ಉಪವಿಭಾಗ ವಾಗಿದೆ. ಬ್ರಿಟಿಷರ ಕಾಲದಲ್ಲಿ ಉ.ಕ. ಮತ್ತು ದ.ಕ. ಒಂದೇ ಜಿಲ್ಲೆಯಾಗಿ ಮದ್ರಾಸ್‌ ಪ್ರಾಂತ್ಯಕ್ಕೆ ಒಳಪಟ್ಟಿತ್ತು. 1862ರಲ್ಲಿ ದ.ಕ. ಪ್ರತ್ಯೇಕ ಜಿಲ್ಲೆಯಾದಾಗ ಕುಂದಾಪುರ ತಾಲೂಕು ದ.ಕ. ಜಿಲ್ಲೆಗೆ ಸೇರ್ಪಡೆಯಾಗಿತ್ತು. 1927ರಲ್ಲಿ ಕಂದಾಯ ಆಡಳಿತ ಅನುಕೂಲಕ್ಕಾಗಿ ಪುತ್ತೂರು, ಮಂಗಳೂರು, ಕುಂದಾಪುರ ಉಪವಿಭಾಗಳಾಗಿ ವಿಂಗಡಿಸಲಾಯಿತು. ಕುಂದಾಪುರ ಉಪವಿಭಾಗಕ್ಕೆ ಕುಂದಾಪುರ, ಉಡುಪಿ, ಕಾರ್ಕಳ ಜತೆ ಸೇರಿಸಿ ಸಹಾಯಕ ಕಲೆಕ್ಟರ್‌ ನೇಮಕ ಮಾಡಲಾಗಿತ್ತು.

2019ರಲ್ಲಿ ಉಪ ವಿಭಾಗಕ್ಕೆ ಪ್ರಸ್ತಾವನೆ
1997ರ ಅ.25ರಂದು ಉಡುಪಿ ಬೇರ್ಪಟ್ಟು ಹೊಸ ಜಿಲ್ಲೆಯಾದಾಗ ಇಲ್ಲಿನ ಮೂರು ತಾಲೂಕು ಕುಂದಾಪುರ ಉಪವಿಭಾಗ ವ್ಯಾಪ್ತಿಯಲ್ಲಿತ್ತು. ಇದೀಗ ಜಿಲ್ಲೆಯಲ್ಲಿ 7 ತಾಲೂಕು ಇರುವುದರಿಂದ, ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡುವ ಉದ್ದೇಶ ದೊಂದಿಗೆ ಆಡಳಿತಾತ್ಮಕ ವಾಗಿ ಎರಡು ಉಪವಿಭಾಗ ಅಗತ್ಯವಿದೆ. ಜಿಲ್ಲಾಡಳಿತ ಹೊಸ ಉಪವಿಭಾಗ ರಚನೆ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ 2019ರಲ್ಲಿ ಸಲ್ಲಿಕೆಯಾಗಿದೆ.

Advertisement

ಉಡುಪಿ ಉಪವಿಭಾಗ ಯಾಕೆ?
ಕಂದಾಯ ವಿಚಾರದಲ್ಲಿ ಉಂಟಾಗುವ ವ್ಯಾಜ್ಯಗಳು ತಹಶೀಲ್ದಾರ್‌ ಕೋರ್ಟ್‌ನಿಂದ ಎಸಿ ಕೋರ್ಟ್‌ಗೆ ಹೋಗುತ್ತವೆ. ತಾಲೂಕುಗಳ ತಹಶೀಲ್ದಾರ್‌ ಸ್ವೀಕೃತ 94ಸಿ/94ಸಿಸಿ, ಕುಮ್ಕಿ, ಭೂಮಿ ಒಡೆತಕ್ಕೆ ಸಂಬಂಧಿಸಿದ ಕೆಲವು ವ್ಯಾಜ್ಯಗಳು ಸಹಿತ ತನಿಖಾ ವರದಿ ಆಧಾರದ ಮೇಲೆ ನೈಜ ಪ್ರಕರಣಗಳನ್ನು ತಿರಸ್ಕೃತಗೊಂಡಾಗ ಮರು ತನಿಖೆಗೆ ಆದೇಶಿಸಲು ಅರ್ಜಿದಾರರು ಉಪವಿಭಾಗ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ತಹಶೀಲ್ದಾರ್‌ ಕಚೇರಿಯಿಂದ ವಿಲೇವಾರಿಯಾಗುವ 7 ತಾಲೂಕುಗಳ ಪಹಣಿಗಳ ಸಣ್ಣ ತಿದ್ದುಪಡಿಗೂ ಕುಂದಾಪುರ ಉಪವಿಭಾಗದ ಅಧಿಕಾರಿ ಅನುಮೋದನೆ ನೀಡಬೇಕು. ಅರ್ಜಿಗಳು ನಿಗದಿತ ಸಮಯದಲ್ಲಿ ವಿಲೇವಾರಿಯಾಗುತ್ತಿಲ್ಲ. ಆಗಿಂದಾಗ್ಗೆ ಮುಂದೂಡಲಾಗುತ್ತದೆ. ಹೀಗಾಗಿ ಆಗಾಗ ದೂರದ ಕುಂದಾಪುರಕ್ಕೆ ಹೋಗುವುದು ಕಷ್ಟ ಎಂಬ ನೆಲೆಯಲ್ಲಿ ಉಡುಪಿಗೆ ಪ್ರತ್ಯೇಕ ಉಪವಿಭಾಗದ ಬೇಡಿಕೆ ಇದೆ.

ಉಡುಪಿ ಉಪವಿಭಾಗಕ್ಕೆ ಜಾಗವೆಲ್ಲಿ?
ಉಡುಪಿ ತಾಲೂಕು ಮಿನಿ ವಿಧಾನಸೌಧದಲ್ಲಿ ಉಪವಿಭಾಗ ಕಚೇರಿ ತೆರೆಯುವ ಪ್ರಸ್ತಾವನೆಯಿತ್ತು. ಈ ಉಪವಿಭಾಗಕ್ಕೆ ಕಾಪು, ಕಾರ್ಕಳ, ಹೆಬ್ರಿ ಸೇರಲಿದೆ. ಉಪವಿಭಾಗದ ಕಚೇರಿಯನ್ನು ಉಡುಪಿ ಮಿನಿ ವಿಧಾನ ಸೌಧದಲ್ಲಿ ಆರಂಭಿಸುವ ಚರ್ಚೆ ನಡೆದಿತ್ತಾದರೂ ಅದಾಗಿಲ್ಲ. ಕಂದಾಯ ಇಲಾಖೆ ಪ್ರತ್ಯೇಕ ಎ.ಸಿ. ನೇಮಿಸಿ, ಉಪವಿಭಾಗ ತೆರೆದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ನಾಗರಿಕರಿಗೆ ಸಹಕಾರಿಯಾಗಲಿದೆ.

ಕಡತ ವಿಲೇವಾರಿಗೆ ವಿಳಂಬ
ಇಡೀ ರಾಜ್ಯದಲ್ಲಿ ಕುಂದಾಪುರ ಉಪವಿಭಾಗದ ಕೋರ್ಟ್‌ನಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳು ಇತ್ಯರ್ಥಕ್ಕೆ ದಾಖಲಾಗುತ್ತವೆ. ವರ್ಷಕ್ಕೆ ಸರಾಸರಿ ಆಸುಪಾಸು 5 ಲಕ್ಷ ಅರ್ಜಿಗಳು ಸ್ವೀಕೃತವಾಗುತ್ತಿದ್ದು, ಕಾರ್ಯದೊತ್ತಡದಿಂದ ವಿಲೇವಾರಿಯಾಗುತ್ತಿಲ್ಲ. ಇದರಿಂದಾಗಿ ವರ್ಷಗಟ್ಟಲೆ ಕಡತಗಳು ಇತ್ಯರ್ಥಕ್ಕೆ ಬಾಕಿ ಉಳಿದು ನಾಗರಿಕರು ಅಲೆದಾಟದಲ್ಲೆ ದಿನ ಕಳೆಯುವ ಸನ್ನಿವೇಶವಿದೆ.

ಹೊಸ ಪ್ರಸ್ತಾವನೆ ಸಲ್ಲಿಸಿದ್ದೇವೆ
ಉಪ ವಿಭಾಗ ಪ್ರಸ್ತಾವನೆ ಈ ಹಿಂದೆ ಸರಕಾರಕ್ಕೆ ಹೋಗಿತ್ತು. ಆಗ ನಾನೇ ಇಲ್ಲಿನ ಅಪರ ಜಿಲ್ಲಾಧಿಕಾರಿ ಆಗಿದ್ದೆ. ಇತ್ತೀಚೆಗೆ ಮತ್ತೆ ಹೊಸದಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಉಡುಪಿಗೆ ಸಹಾಯಕ ಟ್ರಿಬುನಲ್‌ ಅಧಿಕಾರಿ ಹುದ್ದೆ ಖಾಲಿಯಿದ್ದು ಅದು ಭರ್ತಿಯಾದರೆ ಕಂದಾಯಕ್ಕೆ ಸಂಬಂಧಿಸಿ ಇಲ್ಲೇ ನಾಗರಿಕರಿಗೆ ಸೇವೆ ನೀಡಲು ಸಾಧ್ಯವಾಗುತ್ತದೆ. ನಮ್ಮಲ್ಲಿ ಜಾಗವೂ ಇರುವುದರಿಂದ ಅನುಕೂಲವಾಗಲಿದೆ.
-ಡಾ| ವಿದ್ಯಾಕುಮಾರಿ, ಜಿಲ್ಲಾಧಿಕಾರಿ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next