Advertisement

ನಗರದಲ್ಲಿವೆ 7,851 ರಸ್ತೆ ಗುಂಡಿಗಳು

12:23 PM Oct 20, 2022 | Team Udayavani |

ಬೆಂಗಳೂರು: ಸತತ ಮಳೆ, ಕಳಪೆ ಕಾಮಗಾರಿ, ಬಿಬಿಎಂಪಿ ಅಧಿಕಾರಿಗಳ ವೈಫ‌ಲ್ಯದಿಂದಾಗಿ ನಗರದ 14 ಸಾವಿರ ಕಿ.ಮೀ. ಉದ್ದದ ರಸ್ತೆಗಳಲ್ಲಿ 7,851 ಗುಂಡಿಗಳಿವೆ. ಸಿಲಿಕಾನ್‌ ಸಿಟಿಯಲ್ಲಿ ವಾಹನ ಸಂಚರಿಸಬೇಕಾದರೆ ಡರ್ಟ್‌ ರೇಸ್‌ನಲ್ಲಿ ವಾಹನ ಚಾಲನೆ ಮಾಡುವ ಪರಿಣತಿ ಪಡೆಯಬೇಕಾದ ಪರಿಸ್ಥಿತಿಯಿದೆ.

Advertisement

ನಗರದ ರಸ್ತೆಗಳ ಪರಿಸ್ಥಿತಿಯನ್ನು ಗಮನಿಸಿದರೆ ಭಗವಾನ್‌ ಬುದ್ಧ ಹೇಳಿದ “ಸಾವಿಲ್ಲದ ಮನೆಯಲ್ಲಿ ಸಾಸಿವೆ ಸಿಕ್ಕುವುದಿಲ್ಲ’ ಎಂಬ ಮಾತನ್ನು ಗುಂಡಿಯಿಲ್ಲದ ರಸ್ತೆ ಸಿಗುವುದಿಲ್ಲ ಎಂಬುದಾಗಿ ವ್ಯಾಖ್ಯಾನಿಸಬಹುದಾಗಿದೆ. ಮುಖ್ಯ ರಸ್ತೆಯಿಂದ ವಾರ್ಡ್‌ ರಸ್ತೆಗಳವರೆಗೆ ಗುಂಡಿಗಳು ಕಾಣಿಸುತ್ತವೆ. ವಾಹನ ಸವಾರರು ರಸ್ತೆಯುದ್ದಕ್ಕೂ ಡ್ಯಾನ್ಸ್‌ ಮಾಡುತ್ತಲೇ ಸಂಚರಿಸುವ ಪರಿಸ್ಥಿತಿಯಿದೆ.

ಅಲ್ಲದೆ, ನಗರದಲ್ಲಿ ಸಂಭವಿಸುತ್ತಿರುವ ಪ್ರತಿ 5 ಅಪಘಾತದಲ್ಲಿ ಎರಡು ರಸ್ತೆ ಗುಂಡಿಗಳು ಕಾರಣವಾಗುತ್ತಿವೆ. ಪ್ರತಿ ವರ್ಷ ಬಿಬಿಎಂಪಿ ಸರಾಸರಿ 22 ಸಾವಿರ ರಸ್ತೆಗಳನ್ನು ಮುಚ್ಚಲು 30 ಕೋಟಿ ರೂ. ವ್ಯಯಿಸುತ್ತಿದೆ. ಆದರೆ, ಈ ಬಾರಿ ಬಿಬಿಎಂಪಿಯ ಕಳಪೆ ಆಡಳಿತದಿಂದಾಗಿ ರಸ್ತೆ ಗುಂಡಿಗಳ ಸಂಖ್ಯೆ 27 ಸಾವಿರಕ್ಕೆ ಹೆಚ್ಚಳವಾಗಿದೆ. ಅವುಗಳಲ್ಲಿ ಇನ್ನೂ ಶೇ. 24 ಗುಂಡಿಗಳನ್ನು ಮುಚ್ಚುವುದು ಬಾಕಿಯಿದೆ.

7,851 ರಸ್ತೆ ಗುಂಡಿಗಳು: ರಸ್ತೆ ಗುಂಡಿಗಳ ಪತ್ತೆ ಹಾಗೂ ಅದನ್ನು ಮುಚ್ಚುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ಬಿಬಿಎಂಪಿ ಫಿಕ್ಸ್‌ ಮೈ ಸ್ಟ್ರೀಟ್‌ ಆ್ಯಪ್‌ ವ್ಯವಸ್ಥೆ ಮಾಡಿದೆ. ಈ ಆ್ಯಪ್‌ನಲ್ಲಿ ಬಿಬಿಎಂಪಿ ಅಧಿಕಾರಿಗಳು ರಸ್ತೆ ಗುಂಡಿಗಳ ಭಾವಚಿತ್ರ ತೆಗೆದು ಅಪ್‌ಲೋಡ್‌ ಮಾಡಿ, ನಂತರ ಅದನ್ನು ಮುಚ್ಚಿರುವ ಕುರಿತ ಭಾವಚಿತ್ರ ತೆಗೆದು ಮತ್ತೆ ಹಾಕಬೇಕಿದೆ.

ಈ ಆ್ಯಪ್‌ನಲ್ಲಿರುವಂತೆ 2022ರ ಮೇ 1ರಿಂದ ಅಕ್ಟೋಬರ್‌ 17ರವರೆಗೆ ಒಟ್ಟು 27,173 ರಸ್ತೆ ಗುಂಡಿಗಳನ್ನು ಪತ್ತೆ ಮಾಡಲಾಗಿದೆ. ಅದರಲ್ಲಿ 5,063 ಗುಂಡಿಗಳ ಭಾವಚಿತ್ರ ಸರಿಯಿಲ್ಲ, ಈಗಾಗಲೇ ಮುಚ್ಚಲಾಗಿದೆ ಎಂಬುದು ಇನ್ನಿತರ ಕಾರಣಗಳನ್ನು ನೀಡಿ ಗುಂಡಿಗಳ ಲೆಕ್ಕದಿಂದ ಹೊರಗಿಡಲಾಗಿದೆ.ಉಳಿದಂತೆ 14,259 ರಸ್ತೆ ಗುಂಡಿಗಳನ್ನು ಮುಚ್ಚಿರುವ ಕುರಿತು ಬಿಬಿಎಂಪಿ ಅಧಿಕಾರಿಗಳು ಲೆಕ್ಕ ತೋರಿಸುತ್ತಿದ್ದಾರೆ. ಇದೆಲ್ಲವನ್ನು ಹೊರತುಪಡಿಸಿ ನಗರದಲ್ಲಿ ಇನ್ನೂ 7,851 ರಸ್ತೆ ಗುಂಡಿಗಳನ್ನು ಮುಚ್ಚುವುದು ಬಾಕಿ ಉಳಿದಿದೆ.

Advertisement

ಆಗಸ್ಟ್‌ನಿಂದ ಗುಂಡಿಗಳ ಹೆಚ್ಚಳ: ಪ್ರಸಕ್ತ ಸಾಲಿನಲ್ಲಿ ಮೇ ತಿಂಗಳಿನಿಂದಲೂ ನಗರದಲ್ಲಿ ಭಾರೀ ಮಳೆಯಾಗುತ್ತಿದೆ. ಪ್ರತಿ ಮಳೆ ಬಂದಾಗಲೂ ರಸ್ತೆ ಗುಂಡಿಗಳ ಸಮಸ್ಯೆ ಹೆಚ್ಚುತ್ತಿದೆ. ಮಳೆ ನಿಂತ ಕೂಡಲೇ ರಸ್ತೆ ಗುಂಡಿಗಳನ್ನು ಬಿಬಿಎಂಪಿ ಮುಚ್ಚುವ ಕಾರ್ಯ ಮಾಡುತ್ತಿದೆ. ಆದರೆ, ಮತ್ತೆ ಮಳೆ ಬಂದಾಗ ಈಗಾಗಲೇ ಮುಚ್ಚಿರುವ ಗುಂಡಿಗಳು ಮತ್ತೆ ಬಾಯ್ತೆರೆಯುತ್ತಿವೆ.

ಬಿಬಿಎಂಪಿ ಲೆಕ್ಕದ ಪ್ರಕಾರ ಆಗಸ್ಟ್‌ ತಿಂಗಳ ಆರಂಭದವರೆಗೆ ನಗರದಲ್ಲಿ 10 ಸಾವಿರಕ್ಕಿಂತ ಕಡಿಮೆ ರಸ್ತೆ ಗುಂಡಿಗಳಿದ್ದವು. ಆದರೆ, ಆಗಸ್ಟ್‌ ನಂತರ ದಿಂದ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ಆಗಸ್ಟ್‌, ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ 17ನೇ ತಾರೀಖೀನವರೆಗೆ 17 ಸಾವಿರಕ್ಕೂ ಹೆಚ್ಚಿನ ರಸ್ತೆ ಗುಂಡಿಗಳು ಪತ್ತೆಯಾಗಿವೆ.

ಸಾವಿರ ಕೋಟಿ ರೂ. ವೆಚ್ಚ: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆಗಳನ್ನು ರೂಪಿ ಸಲು ಕಳೆದ ನಾಲ್ಕೈದು ವರ್ಷಗಳಿಂದ ಕೊಟ್ಯಾಂತರ ರೂ. ವ್ಯಯಿಸಲಾಗುತ್ತಿದೆ. ಅದರಂತೆ 31 ರಸ್ತೆಗಳಲ್ಲಿ ವೈಟ್‌ ಟಾಪಿಂಗ್‌ ಮಾಡಲು 738.47 ಕೋಟಿ ರೂ. ವ್ಯಯಿಸಲಾಗಿದೆ. ಅದರ ಜತೆಗೆ 15ಕ್ಕೂ ಹೆಚ್ಚಿನ ರಸ್ತೆಗಳನ್ನು ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು ಅದಕ್ಕಾಗಿ 200 ಕೋಟಿ ರೂ. ಗೂ ಹೆಚ್ಚಿನ ಹಣವನ್ನು ವ್ಯಯಿಸಲಾಗಿದೆ.

ತೇಪೆ ಕೆಲಸದಿಂದ ಗುಂಡಿಗಳು ಹೆಚ್ಛಳ

ಪ್ರತಿ ಬಾರಿ ಮಳೆ ಬಂದ ನಂತರ ಗುಂಡಿಗಳನ್ನು ಮುಚ್ಚುವ ಕುರಿತು ಬಿಬಿಎಂಪಿ ಹೇಳುತ್ತಿದೆ. ಅಲ್ಲದೆ ರಸ್ತೆ ನಿರ್ವಹಣಾ ಅವಧಿಯಿರುವ ರಸ್ತೆಗಳಲ್ಲಿ ಗುತ್ತಿಗೆದಾರರಿಂದ ಗುಂಡಿ ಮುಚ್ಚಿಸುವುದಾಗಿಯೂ ತಿಳಿಸಲಾಗುತ್ತಿದೆ. ಆದರೆ, ಈವರೆಗೆ ಸಮರ್ಪಕವಾಗಿ ರಸ್ತೆ ಗುಂಡಿ ಮುಚ್ಚುವ ಕೆಲಸಗಳಾಗುತ್ತಿದೆ. ಗುಂಡಿ ಮುಚ್ಚುವಾಗಿ ಇಂಡಿಯನ್‌ ರೋಡ್‌ ಕಾಂಗ್ರೆಸ್‌ನ ನಿಯಮದಂತೆ ಚೌಕ ಅಥವಾ ಆಯಥಾಕಾರವಾಗಿ ಗುಂಡಿಯನ್ನು ಕತ್ತರಿಸಿ ಅದಕ್ಕೆ ಬಿಟುಮಿನ್‌ ಮಿಕ್ಸ್‌ ಹಾಕಿ ದುರಸ್ತಿ ಮಾಡಬೇಕು. ಅದಕ್ಕೂ ಮುನ್ನ ಗುಂಡಿಯಲ್ಲಿನ ತೇವಾಂಶ, ಮಣ್ಣು, ಕಲ್ಲುಗಳನ್ನು ತೆಗೆಯಬೇಕು. ಆದರೆ, ಈ ನಿಯಮವನ್ನು ಅನುಸರಿಸದೆ ತೇಪೆ ಹಚ್ಚುವ ರೀತಿಯಲ್ಲಿ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಇದಕ್ಕಾಗಿಯೇ ಗುಂಡಿ ಮುಚ್ಚಿದ ಕೆಲವೇ ದಿನಗಳಲ್ಲಿ ಅದೇ ಜಾಗದಲ್ಲಿ ಮತ್ತೆ ಗುಂಡಿ ಸೃಷ್ಟಿಯಾಗುತ್ತಿದೆ.

ಕಳಪೆ ರಸ್ತೆ, ಗುಂಡಿಗಳಿಂದ ಶೇ.17 ಅಪಘಾತಗಳು

ಬೆಂಗಳೂರಿನಲ್ಲಿ ಕಳೆದ 5 ವರ್ಷಗಳಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಶೇ. 17 ಅಪಘಾತಗಳು ಕಳಪೆ ರಸ್ತೆ ಮತ್ತು ಗುಂಡಿಗಳಿಂದಾಗಿವೆ. ಅಲ್ಲದೆ, ಕಳೆದ 1 ವರ್ಷದಲ್ಲಿ ಬೆಂಗಳೂರಿನಲ್ಲಿ 621 ಅಪಘಾತ ಸಂಭವಿಸಿ 656 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ ರಸ್ತೆ ಗುಂಡಿಯಿಂದ 10 ಮಂದಿ ಸಾವಿಗೀಡಾಗಿದ್ದಾರೆ. ಆಗಸ್ಟ್‌ನಲ್ಲಿ ಬೆಂಗಳೂರಿನ ಕೆಆರ್‌ ಪುರದಲ್ಲಿ ಹದಗೆಟ್ಟ ರಸ್ತೆಯಿಂದ ಅಪಘಾತ ಸಂಭವಿಸಿ ಮುಖ್ಯ ಪೇದೆಯೊಬ್ಬರ ಮಗ ಸಾವನ್ನಪ್ಪಿದ್ದರು. ಅದೇ ರೀತಿ ಮಾರ್ಚ್‌ನಲ್ಲಿ ಎಂಎಸ್‌ ಪಾಳ್ಯದ ಮುನೇಶ್ವರ ಲೇಔಟ್‌ನಲ್ಲಿ ಜಲಮಂಡಳಿ ರಸ್ತೆ ಅಗೆದು ಗುಂಡಿ ಸೃಷ್ಟಿಯಾಗಿದ್ದರಿಂದ ಅಪಘಾತ ಸಂಭಿವಿಸಿ ಯುವಕನೋರ್ವ ಮೃತಪಟ್ಟಿದ್ದ. ಜನವರಿಯಲ್ಲಿ ಬ್ಯಾಡರಹಳ್ಳಿ ಮುಖ್ಯರಸ್ತೆಯಲ್ಲೂ ಗುಂಡಿಯಿಂದಾಗಿ ಅಪಘಾತ ಸಂಭವಿಸಿ ಶಿಕ್ಷಕಿ ಶರ್ಮಿಳಾ ಸಾವಿಗೀಡಾಗಿದ್ದರು. ಇದೀಗ ಸುಜಾತಾ ಚಿತ್ರಮಂದಿರ ಬಳಿಯ ಅಪಘಾತದಲ್ಲಿ ಉಮಾದೇವಿ ಅಸುನೀಗಿದ್ದಾರೆ.

ರಸ್ತೆ ಗುಂಡಿಯಿಂದ ಸಂಭವಿಸುವ ಅಪಘಾತ ದಿಂದ ಮೃತಪಟ್ಟವರ ಕುಟುಂಬದವರಿಗೆ ಬಿಬಿಎಂಪಿ ಪರಿಹಾರ ನೀಡುತ್ತದೆ. ಅದರ ಪ್ರಕಾರ ಮೃತರ ಕುಟುಂಬಕ್ಕೆ 3 ಲಕ್ಷ ರೂ., ಗಂಭೀರ ಗಾಯಕ್ಕೆ 15 ಸಾವಿರ ರೂ, ಮೂರು ದಿನಕ್ಕಿಂತ ಹೆಚ್ಚಿನ ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ 10 ಸಾವಿರ ರೂ. ಹಾಗೂ ಸಣ್ಣಪುಟ್ಟ ಗಾಯಗಳಾದರೆ 5 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಹೀಗೆ ಪರಿಹಾರ ನೀಡುವ ಬಿಬಿಎಂಪಿ ರಸ್ತೆಗಳ ಸಮರ್ಪಕ ನಿರ್ವಹಣೆ ಮಾಡಲು ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ.

ಹೊಸದಾಗಿ 835.70 ಕೋಟಿ ರೂ. ನಿಗದಿ

ಪ್ರತಿವರ್ಷ ರಸ್ತೆ ದುರಸ್ತಿ, ಅಭಿವೃದ್ಧಿಗಾಗಿ ಬಿಬಿಎಂಪಿ ಕೋಟ್ಯಂತರ ರೂ. ವ್ಯಯಿಸುತ್ತಿದೆ. ಅದರೂ, ರಸ್ತೆಗಳ ಸ್ಥಿತಿ ಮಾತ್ರ ಸುಧಾರಿಸುತ್ತಿಲ್ಲ. ಇದೀಗ 2022-23ರ ವೇಳೆಗೆ 6 ರಸ್ತೆಗಳನ್ನು ಟೆಂಡರ್‌ ಶ್ಯೂರ್‌ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಅದರ ಜತೆಗೆ 227 ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಇದಕ್ಕಾಗಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಅನುದಾನದಲ್ಲಿ ಹಣ ನಿಗದಿ ಮಾಡಲಾಗಿದೆ. ಟೆಂಡರ್‌ಶ್ಯೂರ್‌ ರಸ್ತೆಗಳಿಗೆ 135.70 ಕೋಟಿ ರೂ. ಹಾಗೂ ರಸ್ತೆಗಳ ಅಭಿವೃದ್ಧಿಗಾಗಿ 700 ರೂ. ಒಟ್ಟು 835.70 ಕೋಟಿ ರೂ.ಗಳನ್ನು ಪ್ರಸಕ್ತ ಸಾಲಿನಲ್ಲಿ ರಸ್ತೆಗಳಿಗಾಗಿಯೇ ವ್ಯಯಿಸಲಾಗುತ್ತಿದೆ.

ಈ ಬಾರಿ ಮಳೆಗಾಲ ಹೆಚ್ಚಾಗಿದ್ದರಿಂದ ರಸ್ತೆ ಗುಂಡಿಗಳ ಸಂಖ್ಯೆಯೂ ಹೆಚ್ಚಾಗಿದೆ. ನಿರಂತರವಾಗಿ ರಸ್ತೆ ಗುಂಡಿ ಮುಚ್ಚಲಾಗು ತ್ತಿದೆ. ಸದ್ಯ ಮಳೆಯಿರುವ ಕಾರಣ ಗುಂಡಿ ಮುಚ್ಚಲು ಸಾಧ್ಯವಾಗಿಲ್ಲ. ಶೀಘ್ರದಲ್ಲಿ ಗುಂಡಿಗಳನ್ನೆಲ್ಲ ಮುಚ್ಚಲಾಗುವುದು.  –ತುಷಾರ್‌ ಗಿರಿನಾಥ್‌, ಬಿಬಿಎಂಪಿ ಮುಖ್ಯ ಆಯುಕ್ತ

-ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next