Advertisement

Kinnigoli: ದಾಮಸ್‌ಕಟ್ಟೆ – ಏಳಿಂಜೆ ರಸ್ತೆ ಹೊಂಡಮಯ

02:57 PM Dec 28, 2024 | Team Udayavani |

ಕಿನ್ನಿಗೋಳಿ: ಮೂರುಕಾವೇರಿಯಿಂದ ಬೆಳ್ಮಣ್ಣು ಸಂಪರ್ಕಿಸುವ ರಾಜ್ಯ ಹೆದ್ದಾರಿ ದಾಮಸ್‌ಕಟ್ಟೆ ಎಸ್‌ವಿಡಿಯಿಂದ ಏಳಿಂಜೆಯ ವರೆಗಿನ ರಸ್ತೆ ಸಂಪೂರ್ಣ ಹೊಂಡಮಯವಾಗಿದೆ. ಈ ಬಾರಿಯ ಮಳೆಗೆ ರಸ್ತೆಯ ಹಲವಾರು ಕಡೆ ಡಾಮರು ಕಿತ್ತು ಹೋಗಿ ಹೊಂಡ ಗುಂಡಿಗಳಾಗಿವೆ. ಆದರೆ, ಈಗ ಮಳೆ ನಿಂತಿದ್ದರೂ ಗುಂಡಿ ಮುಚ್ಚುವ, ಡಾಮರು ಹಾಕುವ ಅಥವಾ ಕನಿಷ್ಠ ತೇಪೆ ಹಾಕುವ ಕೆಲಸವೂ ನಡೆದಿಲ್ಲ.

Advertisement

ದ್ವಿಚಕ್ರ ವಾಹನಕ್ಕೆ ಅಪಾಯಕಾರಿ
ದಾಮಸ್‌ಕಟ್ಟೆಯಿಂದ ಏಳಿಂಜೆ ಇಳಿಜಾರಿನ ರಸ್ತೆಯ ತಿರುವಿನಲ್ಲಿ ರಸ್ತೆಯಲ್ಲಿ ಡಾಮರು ಕಿತ್ತು ಹೋಗಿ ಹೊಂಡಗಳಾಗಿದ್ದು, ದ್ವಿಚಕ್ರ ವಾಹನಗಳಿಗೆ ತುಂಬಾ ಅಪಾಯಕಾರಿಯಾಗಿ ಪರಿಣಮಿಸಿದೆ. ಇಲ್ಲಿ ರಸ್ತೆಯೂ ಅಗಲ ಕಿರಿದಾಗಿದ್ದು ಇದರಿಂದಲೂ ಸಮಸ್ಯೆ ಉಂಟಾಗುತ್ತದೆ.

ಎಸ್‌ವಿಡಿಯ ಮುಂದಿನ ರಸ್ತೆಯ ಡಾಮರು ಕಿತ್ತು ಹೋಗಿ ಉಂಟಾದ ಹೊಂಡಗಳ ಅರಿವು ಇಲ್ಲದೆ ಕಳೆದ ವಾರ ದ್ವಿಚಕ್ರ ವಾಹನ ಗುಂಡಿಗೆ ಬಿದ್ದು ಮೂಳೆ ಮುರಿತ ಉಂಟಾಗಿದೆ ಎಂದು ಸ್ಥಳೀಯರಾದ ಸುಧಾಕರ ಸಾಲ್ಯಾನ್‌ ತಿಳಿಸಿದ್ದಾರೆ.

ಬೆಳೆದು ನಿಂತ ಹುಲ್ಲು
ಈ ನಡುವೆ ರಸ್ತೆಯ ಬದಿಗಳಲ್ಲಿ ಹುಲ್ಲು ಎತ್ತರಕ್ಕೆ ಬೆಳೆದು ನಿಂತಿದ್ದು, ಇದನ್ನು ಕೂಡ ಕಟ್ಟಿಂಗ್‌ ಮಾಡಿ ವಿಲೇವಾರಿ ಮಾಡಿಲ್ಲ. ರಸ್ತೆ ಬದಿಯಲ್ಲೇ ಹುಲ್ಲು ಬೆಳೆದು ನಿಂತಿರುವುದರಿಂದ ಪಕ್ಕದಲ್ಲಿ ನಡೆದುಕೊಂಡು ಹೋಗುವವರಿಗೆ ಸಮಸ್ಯೆಯಾಗಿದೆ. ಕೆಲವೊಮ್ಮೆ ಹಾವು ಮತ್ತಿತರ ಪ್ರಾಣಿಗಳು ಕೂಡಾ ಇದರ ನಡುವೆ ಸೇರಿಕೊಂಡಿರುವ ಅಪಾಯ ಇರುತ್ತದೆ.

ಹೆದ್ದಾರಿ ನಿರ್ವಹಣೆ ಕೊರತೆ
ಈ ಮಾರ್ಗದಲ್ಲಿ ಮಳೆ ನೀರು ಹರಿಯಲು ಚರಂಡಿಗಳನ್ನೇ ನಿರ್ಮಿಸಿಲ್ಲ. ರಾಜ್ಯ ಹೆದ್ದಾರಿಯಲ್ಲಿ ಮಳೆಗಾಲಕ್ಕೆ ಮುನ್ನ ಸಣ್ಣ ಪುಟ್ಟ ಹೊಂಡ ತೇಪೆ ಕಾರ್ಯ ಹಾಗೂ ಹೆದ್ದಾರಿಯ ಬದಿಯ ಚರಂಡಿ ನಿರ್ವಹಣೆ ಮಾಡಿದರೆ ಇಂತಹ ಸಮಸ್ಯೆ ಆಗುತ್ತಿರಲಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ.

Advertisement

ಚರಂಡಿ ಇಲ್ಲದಿರುವುದೇ ಸಮಸ್ಯೆ
ಕೆಲವು ಕಡೆಗಳಲ್ಲಿ ಚರಂಡಿಯ ಸಮರ್ಪಕ ನಿರ್ವಹಣೆ ಇಲ್ಲದೆ ಚರಂಡಿಯಲ್ಲಿ ಹರಿಯ ಬೇಕಾದ ನೀರು ರಸ್ತೆಯಲ್ಲಿ ಹರಿದು ರಸ್ತೆ ಹದಗೆಟ್ಟು ಹೋಗಿದೆ. ಕೆಲವು ಕಡೆಗಳಲ್ಲಿ ರಸ್ತೆ ಹಾಕಿದ ಫೇವರ್‌ ಫಿನಿಶ್‌ ಕಿತ್ತು ಹೋಗಿದೆ. ರಸ್ತೆ ರಿಪೇರಿ ಬಗ್ಗೆ ಯಾವ ಅಧಿಕಾರಿಯೂ ಚಕಾರ ಎತ್ತುತ್ತಿಲ್ಲ. ಶೀಘ್ರ ಸಂಬಂಧಿತ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು.
-ರಾಮಚಂದ್ರ ಕಾಮತ್‌, ದ್ವಿಚಕ್ರ ವಾಹನ ಚಾಲಕ

ಕಾಂಕ್ರೀಟ್‌ ರಸ್ತೆ ನಿರ್ಮಿಸಿ
ಮೂರು ಕಾವೇರಿಯಿಂದ ದಾಮಸ್‌ಕಟ್ಟೆ ಕುಕ್ಕಟ್ಟೆ ಹೋಗುವ ತನಕ ರಸ್ತೆ ವಿಸ್ತರಣೆಗೊಂಡಿದೆ. ಪಟ್ಟೆ ಕ್ರಾಸ್‌ ತನಕ ಕಾಮಗಾರಿ ನಡೆಯಬೇಕಿತ್ತು. ಯಾವ ಕಾರಣದಿಂದ ನಡೆಯಲಿಲ್ಲ ಎಂಬ ಸ್ಪಷ್ಟ ಮಾಹಿತಿ ಇಲಾಖೆ ನೀಡುತ್ತಿಲ್ಲ. ಕಳೆದ ವರ್ಷ ಮಳೆಗಾಲದಲ್ಲಿಯೂ ಹೊಂಡ ಗುಂಡಿಗಳ ಸಮಸ್ಯೆ ತೀವ್ರವಾಗಿತ್ತು. ಬಳಿಕ ಸ್ವಲ್ಪ ತೇಪೆ ಕಾರ್ಯ ಮಾತ್ರ ಮಾಡಲಾಯಿತು. ಇದೀಗ ಮತ್ತೆ ತೇಪೆ ಹಾಕಿದ್ದು ಎದ್ದು ಹೋಗಿ ಸಮಸ್ಯೆ ಉಂಟಾಗಿದೆ. ಇಂತಹ ಸಮಸ್ಯೆ ಶಾಶ್ವತ ಪರಿಹಾರ ಆಗಬೇಕಾಗಿದೆ. ರಸ್ತೆಯನ್ನು ವಿಸ್ತರಿಸಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಿದರೆ ಸಮಸ್ಯೆ ಪರಿಹಾರವಾಗಬಹುದು ಎಂಬುದು ಜನರ ಅಭಿಪ್ರಾಯ.

-ರಘನಾಥ್‌ ಕಾಮತ್‌ ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next