Advertisement

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

03:16 PM Dec 19, 2024 | Team Udayavani |

ಶಿರ್ವ: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿಯ ಶಿರ್ವ ಗ್ರಾ.ಪಂ. ವ್ಯಾಪ್ತಿಯ ಕೋಡು-ಪಂಜಿಮಾರು ತಿರುವಿನ ಇಳಿಜಾರಿನ ರಸ್ತೆಯ ತಗ್ಗು ಪ್ರದೇಶದಲ್ಲಿ ರಸ್ತೆ ಎತ್ತರಿಸಿ ಮೋರಿ ನಿರ್ಮಿಸಲು ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಕಾಮಗಾರಿ ಪ್ರಾರಂಭಗೊಂಡು 11 ತಿಂಗಳು ಕಳೆದರೂ ಪೂರ್ಣಗೊಳ್ಳದೆ ನಿತ್ಯ ಪ್ರಯಾಣಿಕರು, ವಾಹನ ಸವಾರರು ಇಲಾಖೆ, ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

Advertisement

ಮಳೆಗಾಲದಲ್ಲಿ ಭಾರೀ ಗಾತ್ರದ ಹೊಂಡ ಬಿದ್ದು ಆಗಾಗ್ಗೆ ಅಪಘಾತ ಸಂಭವಿಸುತ್ತಿತ್ತು. ಆಗ ಲೋಕೋ ಪಯೋಗಿ ಇಲಾಖೆ ವೆಟ್‌ಮಿಕ್ಸ್‌ ಹಾಕಿ ತಾತ್ಕಾಲಿಕ ಶಮನ ಮಾಡುತ್ತಿತ್ತು. ಈಗ ಧೂಳಿನಿಂದಾಗಿ ನಾಗರಿಕರಿಗೆ/ವಾಹನ ಸವಾರರಿಗೆ ನರಕ ಸದೃಶವಾಗಿ ಪರಿಣಮಿಸಿದೆ.

ಪ್ರಯೋಜನವಾಗದ ಮನವಿ
ಕಳೆದ 6 ತಿಂಗಳ ಹಿಂದೆ ಕಾಪು ತಾ| ಆಡಳಿತ ಸೌಧದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಬಂಟಕಲ್ಲು ನಾಗರಿಕ ಸಮಿತಿಯ ಅಧ್ಯಕ್ಷ ಕೆ.ಆರ್‌. ಪಾಟ್ಕರ್‌ ಅವರು ಶಿರ್ವ-ಕಟಪಾಡಿ ರಾಜ್ಯ ಹೆದ್ದಾರಿಯ ಅವ್ಯವಸ್ಥೆಯ ಬಗ್ಗೆ ಮನವಿ ಸಲ್ಲಿಸಿದ್ದ‌ರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಪರಿಸರದ ನಾಗರಿಕರು ಮತ್ತು ವಾಹನ ಸವಾರರು ಸೇರಿ ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ ಹೋರಾಟ ಸಮಿತಿ ರಚಿಸಿದ್ದರು. ಪ್ರತಿಭಟನೆಯ ಸಿದ್ಧತೆ ನಡೆಸಿ ಅಕ್ಟೋಬರ್‌ ತಿಂಗಳಲ್ಲಿ ಇಲಾಖೆಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಇಲಾಖೆ ರಸ್ತೆಯನ್ನು ಒಂದು ತಿಂಗಳೊಳಗಾಗಿ ಸರಿಪಡಿಸುವುದಾಗಿ ಲಿಖೀತ ಭರವಸೆ ನೀಡಿತ್ತು. ಆದರೆ ತಿಂಗಳು 2 ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ಸಂಪೂರ್ಣ ಹದಗೆಟ್ಟ ರಸ್ತೆ
– ಶಿರ್ವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಿಂದ ಬಂಟಕಲ್ಲು ತಾಂತ್ರಿಕ ಕಾಲೇಜಿನವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದೆ.
– ಜೋಡು ಪೆಜತ್ತಕಟ್ಟೆಯ ಬಳಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಕಾಂಕ್ರೀಟ್‌ ರಸ್ತೆಯ ಬಳಿ ಚರಂಡಿ ಸಮರ್ಪಕವಿಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿದು ಹೊಂಡಗುಂಡಿಗಳಾಗಿವೆ. ಹಲವಾರು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ.
– ಕಟಪಾಡಿಯಿಂದ ಬಂಟಕಲ್ಲು ತಾಂತ್ರಿಕ ಕಾಲೇಜಿನವರೆಗೆ ನಡೆಯುತ್ತಿದ್ದ ತೇಪೆ ಕಾರ್ಯ 15 ದಿನಗಳಿಂದ ಸ್ಥಗಿತಗೊಂಡಿದೆ. ಬಂಟಕಲ್ಲು ಕಾಲೇಜಿನ ಬಳಿ ತೇಪೆ ಕಾರ್ಯ ನಡೆಸುವ ಬುಲ್ಡೋಜರ್‌ ಬದಿಗೆ ಸರಿದು ನಿಂತಿದೆ.
– ಸುದಿನದಲ್ಲಿ ಮಾ.6, ಎ.20, ಜು.16ರಂದು ವರದಿ ಪ್ರಕಟವಾದ ಬೆನ್ನಿಗೇ ವೆಟ್‌ ಮಿಕ್ಸ್‌ ಹಾಕ ಲಾಗಿತ್ತು. ಬಳಿಕ ಮಳೆಬಂದು ಜಲ್ಲಿಕಲ್ಲು ಎದ್ದು ಮೊದಲಿಗಿಂತಲೂ ಹೆಚ್ಚು ಸಂಕಷ್ಟ ಎದುರಾಗಿದೆ.

15 ದಿನದಲ್ಲಿ ಸುಗಮ ಸಂಚಾರ
ಗುತ್ತಿಗೆದಾರರು ಹಂತ ಹಂತವಾಗಿ ರಸ್ತೆ ಕಾಮಗಾರಿ ನಡೆಸುತ್ತಿದ್ದು, ಇನ್ನು ಹತ್ತು ಹದಿನೈದು ದಿನಗಳಲ್ಲಿ ಕಾಮಗಾರಿ ಪೂರ್ತಿಗೊಳಿಸಿ ಸುಗಮ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಮಂಜುನಾಥ್‌, ಕಾರ್ಯನಿರ್ವಾಹಕ ಅಭಿಯಂತರು, ಲೋಕೋಪಯೋಗಿ ಇಲಾಖೆ, ಉಡುಪಿ

Advertisement

ಪ್ರತಿಭಟನೆಯ ಅನಿವಾರ್ಯತೆ
ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ನೇತೃತ್ವದಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ಬೃಹತ್‌ ಪ್ರತಿಭಟನೆ ಅನಿವಾರ್ಯವಾಗಲಿದೆ.
-ಕೆ.ಆರ್‌.ಪಾಟ್ಕರ್‌, ಅಧ್ಯಕ್ಷರು, ಬಂಟಕಲ್ಲು ನಾಗರಿಕ ಸೇವಾ ಸಮಿತಿ

-ಸತೀಶ್ಚಂದ್ರ ಶೆಟ್ಟಿ, ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next