Advertisement

ಜಿಪಂ ಅಧ್ಯಕ್ಷರ ಬದಲಾವಣೆಗೆ ತೆರೆಮರೆ ಕಸರತ್ತು

03:55 PM Dec 15, 2018 | Team Udayavani |

ಬಳ್ಳಾರಿ: ಬಳ್ಳಾರಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷರ ಬದಲಾವಣೆಗೆ ಬಿಜೆಪಿ ಪಕ್ಷದಲ್ಲೇ ತೆರೆಮರೆಯ ಕಸರತ್ತು ಆರಂಭವಾಗಿದೆ. ಬಳ್ಳಾರಿ ಲೋಕಸಭೆ ಉಪಚುನಾವಣೆಗೂ ಪೂರ್ವದಲ್ಲೇ ಕೇಳಿ ಬರುತ್ತಿದ್ದ ಈ ವಿಷಯ ಇದೀಗ ಮತ್ತಷ್ಟು ಪುಷ್ಟಿ ಪಡೆದುಕೊಂಡಿದೆ ಎನ್ನಲಾಗಿದ್ದು, ಉಪಚುನಾವಣೆಯಲ್ಲಿ ಅಭ್ಯರ್ಥಿಯ ಭಾರೀ ಸೋಲು ಕಂಡಿದ್ದ ಬಿಜೆಪಿ ಜಿಲ್ಲಾ ಘಟಕಕ್ಕೆ ಇದೀಗ ಮತ್ತೂಂದು ತಲೆನೋವು ಆರಂಭವಾಗಿದೆ.

Advertisement

ಬಳ್ಳಾರಿ ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಬಿಜೆಪಿ ಬಹುಮತಗಳಿಸಿದ್ದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗ ಬಿ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ತಾಲೂಕಿನ ಬಾದನಹಟ್ಟಿ ಜಿಪಂ ಕ್ಷೇತ್ರ ಪ್ರತಿನಿಧಿಸಿದ್ದ ಭಾರತಿ ತಿಮ್ಮಾರೆಡ್ಡಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು.

ಆದರೆ, ಕೇವಲ 30 ತಿಂಗಳಿಗಷ್ಟೇ ಅಧ್ಯಕ್ಷರಾಗಿ ಮುಂದುವರೆಯಲು ಪಕ್ಷದ ಹೈಕಮಾಂಡ್‌ ಆಗಲೇ ಸೂಚಿಸಿತ್ತು. ಅದರಂತೆ ಇದೀಗ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕೆಂದು ಬಿಜೆಪಿ ಪಕ್ಷದ ಅಧ್ಯಕ್ಷ ಗಾದಿ ಆಕಾಂಕ್ಷಿಗಳು ಪಟ್ಟು ಹಿಡಿದಿದ್ದಾರೆ. ಅದಕ್ಕಾಗಿ ಪಕ್ಷದಲ್ಲೇ ತೆರೆಮರೆಯ ಕಸರತ್ತುಗಳು ಬಿರುಸು ಪಡೆದುಕೊಂಡಿವೆ ಎಂಬ ಮಾತುಗಳು
ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. 

ಬಳ್ಳಾರಿ ಜಿಲ್ಲಾ ಪಂಚಾಯತ್‌ 40 ಸದಸ್ಯರ ಸಂಖ್ಯೆ ಬಲ ಹೊಂದಿದೆ. 2016ರ ಏಪ್ರಿಲ್‌ 28 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ 20, ಕಾಂಗ್ರೆಸ್‌ 18 ಸದಸ್ಯರ ಸಂಖ್ಯೆ ಬಲ ಹೊಂದಿದೆ. ಪಕ್ಷೇತರರು ಇಬ್ಬರು ತಲಾ ಒಂದೊಂದು ಪಕ್ಷದತ್ತ ವಾಲಿದ್ದಾರೆ. ಇದರಿಂದ ಬಿಜೆಪಿ 21 ಸದಸ್ಯ ಬಲ ಹೊಂದಿದ್ದರೆ, ಕಾಂಗ್ರೆಸ್‌ 19 ಸದಸ್ಯ ಬಲ ಹೊಂದಿತ್ತು.

ಇದರಿಂದ ಬಳ್ಳಾರಿ ಜಿಪಂ ಅಧಿಕಾರ ಚುಕ್ಕಾಣಿ ಹಿಡಿದ ಬಿಜೆಪಿ ಭಾರತಿ ತಿಮ್ಮಾರೆಡ್ಡಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿತ್ತು. ಭಾರತಿ ತಿಮ್ಮಾರೆಡ್ಡಿಯವರು ಅಧ್ಯಕ್ಷರಾಗುತ್ತಲೇ ಅವರ ಸಂಬಂಧಿಯೊಬ್ಬರು, ಭಾರತಿಯವರು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

Advertisement

ಸಾಕಷ್ಟು ಹೋರಾಟ ನಡೆಸಿದ ಬಳಿಕ ಕೊನೆಗೂ ನ್ಯಾಯಾಲಯ ಭಾರತಿ ತಿಮ್ಮಾರೆಡ್ಡಿ ಪರ ಇತ್ತೀಚೆಗಷ್ಟೇ ತೀರ್ಪು ಪ್ರಕಟಿಸಿದ್ದು, ತೀರ್ಪು ಬಂದ ನಂತರ 30 ತಿಂಗಳ ಕಾಲ ಅವರ ವಿರುದ್ಧ ಅವಿಶ್ವಾಸ ಮಂಡನೆ ಮಾಡುವಂತಿಲ್ಲ
ಎಂದು ನ್ಯಾಯಾಲಯ ಷರತ್ತು ವಿಧಿಸಿತ್ತು. ಇಷ್ಟೆಲ್ಲಾ ಆಗಿ ಅಧಿಕಾರದ ಗದ್ದುಗೆ ಏರಿರುವ ಭಾರತಿಯವರಿಗೆ ರಾಜೀನಾಮೆ
ನೀಡುವಂತೆ ಇದೀಗ ಪಕ್ಷದಲ್ಲೇ ಆಂತರಿಕವಾಗಿ ಒತ್ತಡ ಹೆಚ್ಚುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

ಭಾರತಿಯವರೇ ಹೇಳುವಂತೆ ಪಕ್ಷದ ಹೈಕಮಾಂಡ್‌ ಈ ಕುರಿತು ಏನೂ ಮಾತನಾಡಿಲ್ಲ. ಆದರೆ, ಅಧ್ಯಕ್ಷರಾಗ
ಬಯಸುವ ಅರ್ಹ ಸದಸ್ಯರು ಈ ಕುರಿತು ಪಕ್ಷದ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಕುರಿತು ಈಗಾಗಲೇ
ಒಂದು ಸುತ್ತಿನ ಸಭೆ ನಡೆದಿದೆ. ಆದರೆ, ಸಭೆಗೆ ಎಲ್ಲಾ ಸದಸ್ಯರು ಬರಲಿಲ್ಲ ಎಂಬ ಕಾರಣಕ್ಕೆ ಸಭೆ ಅಪೂರ್ಣಗೊಂಡಿದೆ. 

ಇದೀಗ ಡಿ.16ರಂದು ಶ್ರೀರಾಮುಲು ನಿವಾಸದಲ್ಲಿ ಪಕ್ಷದ ಎಲ್ಲಾ ಶಾಸಕರ, ಜಿಪಂ ಸದಸ್ಯರ, ಮುಖಂಡರ ಸಭೆ
ಕರೆಯಲಾಗಿದೆ. ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ. ಬಹುತೇಕ ಹಾಲಿ ಇರುವ ಅಧ್ಯಕ್ಷರನ್ನೇ ಮುಂದುವರಿಸುವ ನಿರೀಕ್ಷೆ ಇದ್ದು, ಸದ್ಯದ ಸ್ಥಿತಿಯಲ್ಲಿ ಬದಲಾವಣೆ ಮಾಡುವುದು ಸಹ ಕಷ್ಟದ ಕೆಲಸ ಎಂಬ ಮಾತುಗಳನ್ನು ಸ್ವತಃ ಪಕ್ಷದ ಮುಖಂಡರೇ ಹೇಳುತ್ತಿದ್ದಾರೆ. 

ಇದರ ನಡುವೆ ಭಾರತಿ ತಿಮ್ಮಾರೆಡ್ಡಿಯವರೇ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹರಡಿದೆ. ಇದು ಶುದ್ಧ ಸುಳ್ಳು ಎಂದು ಸ್ವತಃ ಭಾರತಿ ತಿಮ್ಮಾರೆಡ್ಡಿಯವರು ಅಲ್ಲಗಳೆದಿದ್ದಾರೆ.

ಶಾರದಮ್ಮ ಪ್ರಬಲ ಆಕಾಂಕ್ಷಿ: ಹಗರಿಬೊಮ್ಮನಹಳ್ಳಿ ತಾಲೂಕು ತಂಬ್ರಹಳ್ಳಿ ಕ್ಷೇತ್ರದ ಶಾರದ ಶೇಖರಪ್ಪ ಪ್ರಬಲ
ಆಕಾಂಕ್ಷಿಗಳಾಗಿದ್ದಾರೆ. ಇವರ ಪರ ವೀರಶೈವ ಲಿಂಗಾಯತ ಸದಸ್ಯರೂ ಸಹ ಧ್ವನಿ ಎತ್ತಿದ್ದಾರೆ ಎನ್ನಲಾಗಿದೆ. ಲೋಕಸಭಾ ಸಾರ್ವತ್ರಕ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಅತ್ಯಂತ ನಿಕಟ ಸಂಬಂಧ ಹೊಂದಿರುವ ಜಿಪಂ ಸದಸ್ಯರ ವಿರೋಧ ಕಟ್ಟಿಕೊಳ್ಳಬೇಕಾಗಬಹುದು ಎಂಬ ಆತಂಕ ಸಹ ಪಕ್ಷದ ವರಿಷ್ಠರನ್ನು ಕಾಡುತ್ತಿದೆ ಎಂದು ತಿಳಿದು ಬಂದಿದ್ದು, ಜಿಪಂ ಅಧ್ಯಕ್ಷರ ಬದಲಾವಣೆಯಾಗಲಿದೆಯೇ? ಅಥವಾ ಜಿಲ್ಲೆಯ ಪ್ರಮುಖ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಲಿದೆಯೇ ಎಂಬುದನ್ನು ಡಿ.16ರ ವರೆಗೆ ಕಾದು ನೋಡಬೇಕಾಗಿದೆ. 

ವೀರಶೈವ ವರ್ಸಸ್‌ ರೆಡ್ಡಿ ಲಿಂಗಾಯತ ಈ ಮಧ್ಯೆ ಬಿಜೆಪಿಯ ಸದಸ್ಯರಲ್ಲಿಯೇ ಬಣ ರಾಜಕೀಯ ಆರಂಭವಾಗಿದೆ. ವೀರಶೈವ ಲಿಂಗಾಯತರನ್ನು ಪಕ್ಷದಲ್ಲಿ ಕಡೆಗಣಿಸಿದ್ದು, ರೆಡ್ಡಿ ಲಿಂಗಾಯತರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂಬ ಆರೋಪವನ್ನು ಕೆಲ ಸದಸ್ಯರು ಮಾಡಿದ್ದಾರೆ. ಇದೇ ಕಾರಣಕ್ಕೆ ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಪಕ್ಷದ ವರಿಷ್ಠರ ವರ್ತನೆಗೆ ಆಕ್ರೋಶಗೊಂಡಿದ್ದರಿಂದಲೇ ಬಹುತೇಕರು ಕಾಂಗ್ರೆಸ್‌ ಕಡೆ ವಾಲಿದರು ಎಂದು ಹೆಸರು ಹೇಳಲಿಚ್ಚಿಸದ ಕೆಲ ಬಿಜೆಪಿ ಜಿಪಂ ಸದಸ್ಯರು ಪಕ್ಷದೊಂದಿಗೆ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

„ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next