ಮಾರುಕಟ್ಟೆಯ ಕಡೇಯಲ್ಲಿ ತರಕಾರಿಗಳನ್ನು ರಾಶಿ ಹಾಕಿಕೊಂಡು ಕುಳಿತಿರುವವನಿಗೆ ಹೆಸರಿಲ್ಲ ಎಂದುಕೊಳ್ಳಿ. ಇದುವರೆಗೆ ಅವನಲ್ಲಿಗೆ ಬಂದವರೆಲ್ಲ “ನಿನ್ನ ಹೆಸರೇನಪ್ಪಾ, ಎಂದು ಕೇಳಿದ್ದಾರೆ’. ಅದಕ್ಕೆಲ್ಲ ಅವನು ಏನೂ ಹೇಳಿಲ್ಲ. ಏನೆಂದೂ ಹೇಳಿಲ್ಲ. ಅದಕ್ಕೇ ಊರಿನ ಜನರೆಲ್ಲ ಇವನಿಗೆ ಹೆಸರಿಲ್ಲ ಎಂದೇ ತೀರ್ಮಾನಕ್ಕೆ ಬಂದಿದ್ದಾರೆ. ಈಗ ಯಾರು ಬಂದರೂ ಗುಡ್ಡೆ ಹಾಕಿದ ತರಕಾರಿಗಳನ್ನು ತೂಗಿ ಆಳೆದು ತಮಗೆ ಬೇಕಾದಷ್ಟು ಗುಡ್ಡೆಗಳನ್ನು ಕೈಚೀಲಕ್ಕೆ ಹಾಕಿಕೊಂಡು ತಮ್ಮದೇ ಲೆಕ್ಕಾಚಾರದಂತೆ ಹಣವನ್ನು ಆವನ ಕೈಗಿಟ್ಟು ನಡೆಯುತ್ತಾರೆ. ಇದರ ಮಧ್ಯೆ ಕೆಲವರಿಗೆ ಇವನ ಮುಗುಳ್ನಗೆ ಸಿಗುವುದುಂಟು. ಹಾಗೆ ಸಿಕ್ಕರೆ ಆದು ಇಬ್ಬರದೂ ಅದೃಷ್ಟ.
ಹೀಗೇ ಮೂರ್‍ನಾಲ್ಕು ವರ್ಷಗಳ ಹಿಂದಿರಬಹುದು. ಆಗಸ ಕಪ್ಪಾಗಿ, ಜೋರಾಗಿ ಮಳೆ ಸುರಿಯುತ್ತಿತ್ತು. ಮಳೆಯ ಶಬ್ದದ ನಡುವೆ ಯಾರು ಕೂಗಿದರೂ, ಕರೆದರೂ ಕೇಳುತ್ತಿರಲಿಲ್ಲ. ಹಾಗಿತ್ತು. ಹಾಗೆಂದು ರಸ್ತೆ ಮುಚ್ಚಿರಲಿಲ್ಲ, ಅಂಗಡಿಗಳೂ ಸಹ. ಮಾರುಕಟ್ಟೆಯೂ ತೆರೆದೇ ಇತ್ತು. ಗಿರಾಕಿಗಳು ಇರಲಿಲ್ಲ ಎನ್ನಿ. ಇದೇ ಮಾರುಕಟ್ಟೆ ಅದೇ ಕಡೇ ಅಂಗಡಿಯ ಎದುರು ಈತ ನಿಂತಿದ್ದ. ಸ್ವಲ್ಪ ಮಂಡಿ ಕೆಳಗೆ ಹರಿದ ಚಡ್ಡಿ, ಮಾಸಿದ ಶರ್ಟ್. ಅತ್ತು ಅತ್ತು ಸಾಕೆನಿಸಿದ್ದ ಕಣ್ಣುಗಳು. ಮಳೆ ನಿಲ್ಲಲೆಂದೇ ಕಾಯುತ್ತಿದ್ದಂತೆ ತೋರುತ್ತಿತ್ತು ಆತ.
ಕೆಲವು ನಿಮಿಷಗಳ ಬಳಿಕ ಮಳೆ ನಿಲ್ಲುವ ಸೂಚನೆ ಕೊಡತೊಡಗಿತು. ಆಗಸ ಬೆಳ್ಳಗಾಯಿತು. ಮಳೆ ಹನಿಗಳೂ ಸಣ್ಣದಾದವು. ಮೆಲ್ಲಗೆ ರಸ್ತೆಗೂ ಜೀವ ಬರತೊಡಗಿತು. ಅದುವರೆಗೆ ಅಲ್ಲಲ್ಲಿ ಅಂಗಡಿಯ ಒಳಗೆ ಇದ್ದವರು, ಅಂಗಡಿಯ ಕೆಳಗೆ ನಿಂತವರೆಲ್ಲ ರಸ್ತೆಗೆ ಇಳಿದರು. ಇವನು ಮಾತ್ರ ಅಲ್ಲೇ ನಿಂತಿದ್ದ. ಅವನಿದ್ದಲ್ಲಿಗೆ ಯಾರಾದರೂ ಬಂದಾರೆಯೇ ಎಂದು ಕಾಯುತ್ತಿದ್ದ. ಕಣ್ಣಿನಲ್ಲಿ ನಿರೀಕ್ಷೆಯ ಬಟ್ಟಲಿತ್ತು.
ಪುಟ್ಟ ಮಗುವನ್ನು ಎತ್ತಿಕೊಂಡ ಮಹಿಳೆಯೊಬ್ಬಳು ಅವನಿದ್ದಲ್ಲಿಗೆ ಬಂದಳು. ಇವನ ನಿರೀಕ್ಷೆಯ ಬಲೂನು ಹಾರತೊಡಗಿತು. ಅಲ್ಲಿಗೆ ಬಂದವಳೇ ಇವನ ಕೈಗೆ ಒಂದು ರೂಪಾಯಿ ಇಟ್ಟು ಬೇಕರಿ ಒಳಗೆ ಹೋದಳು. ತನಗೆ ಬೇಕಾದದ್ದನ್ನು ಪಡೆದು ಹೊರಗೆ ಬರುವಾಗ ಈತ ಆ ರೂಪಾಯಿಯನ್ನು ಅವಳ ಕೈಗೆ ವಾಪಸಿಟ್ಟು, ಕೈ ಬೆರಳು ತೋರಿಸಿದ. ಒಂದು ಪಪ್ಸ್ ಸಿಕ್ಕರೆ ಸಾಕು, ಹಣವಲ್ಲ ಎಂಬಂತಿತ್ತು ಅವನ ಸನ್ನೆ.
ಅರ್ಥವಾಯಿತು ಎಂದುಕೊಂಡ ಆಕೆ ಮತ್ತೆ ಅಂಗಡಿಯ ಒಳಗೆ ಹೊಕ್ಕು ಅಂಗಡಿಯವನಿಗೆ ಏನೋ ಹೇಳಿ ಹೊರ ನಡೆದಳು. ಈತ ಅವಳು ಹೋದ ದಾರಿಯನ್ನೇ ನೋಡುವಷ್ಟರಲ್ಲಿ ಅಂಗಡಿಯವ ಸಣ್ಣ ಕಾಗದದಲ್ಲಿ ಒಂದು ಪಪ್ಸ್ ತಂದು ಕೊಟ್ಟ. ಖುಷಿಯಾಯಿತು ತಾನು ಬಯಸಿದ್ದು ಸಿಕ್ಕಿದ್ದಕ್ಕೆ. ಕೂಡಲೇ ಆಂಗಡಿಯ ಬದಿಗೆ ಹೋಗಿ ಕುಳಿತ. ನೆಲದ ಮೇಲೆ ಕಾಗದ ಇಟ್ಟುಕೊಂಡು ಪಪ್ಸ್ ತಿಂದ. ಹೊಟ್ಟೆ ತುಂಬಲಿಲ್ಲ, ಆದರೆ ಖಾಲಿ ಹೊಟ್ಟೆಗಿಂತ ಪರವಾಗಿಲ್ಲ ಎನ್ನಿಸಿತು. ಮತ್ತೆ ಅಂಗಡಿಯ ಎದುರು ಬಂದು ನಿಂತ.
ಈಗ ಇವನ ಕಣ್ಣಿನಲ್ಲಿದ್ದ ಆಲೋಚನೆಗಳು ಬದಲಾಗಿದ್ದವು. ಬೇಕರಿಯ ಷೋಕೇಸ್‌ನಲ್ಲಿದ್ದ ಎಲ್ಲ ತಿಂಡಿಗಳನ್ನೂ ನೋಡ ತೊಡಗಿದ. ಆದರ ಆಕಾರ, ಬಣ್ಣಗಳೆಲ್ಲ ಕಣ್ಣಿನ ಒಳಗೆ ಇಳಿದು ಮನಸ್ಸಿಗೆ ತಲುಪಿದವು. ಅಷ್ಟರಲ್ಲಿ ಅಜ್ಜನೊಬ್ಬ ಬರುತ್ತಿದ್ದುದು ಕಂಡ. ತತ್‌ಕ್ಷಣವೇ ಅಜ್ಜನಲ್ಲಿ ಏನು ಕೇಳಬೇಕೆಂಬುದಕ್ಕೆ ಸಿದ್ಧತೆ ಮಾಡಿಕೊಂಡ. ಮತ್ತೊಮ್ಮೆ ಷೋಕೇಸ್ ನೋಡಿದ, ತೋರು ಬೆರಳನ್ನು ಸರಿಯಾಗಿ ಅದರತ್ತಲೇ ಒಮ್ಮೆ ತೋರಿ ತಾಲೀಮೂ ನಡೆಸಿ ಸಿದ್ಧನಾದ. ಇವನ ಲೆಕ್ಕಾಚಾರದಂತೆಯೇ ಅಜ್ಜ ಅಂಗಡಿಯ ಬಾಗಿಲಿಗೆ ಬಂದ. ಈಗಲೇ ಕೇಳಬೇಕೇ ಅಥವಾ ವಾಪಸು ಹೋಗುವಾಗ ಕೇಳಬೇಕೇ ಎಂಬ ಗೊಂದಲದಲ್ಲಿ ಸಿಲುಕಿದ. ಏನೆಂದು ತೋಚಲಿಲ್ಲ. ನಿರ್ಧಾರ ಮಾಡುವಷ್ಟರಲ್ಲಿ ಅಜ್ಜ ಬಾಗಿಲು ಬಿಟ್ಟು ಅಂಗಡಿಯೊಳಗೆ ಹೊಕ್ಕಿದ್ದ. ಅಜ್ಜ ಹೊರಗೆ ಬರುವವರೆಗೂ ಇವನ ಕಣ್ಣುಗಳು ಅದನ್ನೇ ಅಭ್ಯಾಸ ಮಾಡುತ್ತಿದ್ದವು. ಬಣ್ಣ ಮತ್ತು ಆಕಾರ.
ಕೆಲವು ನಿಮಿಷಗಳಲ್ಲಿ ಅಜ್ಜ ಹೊರಗೆ ಬಂದವನೇ ರಸ್ತೆಗೆ ಕಾಲಿಟ್ಟ. ನಾನು ನಿಂತಲ್ಲಿ ಒಂದು ಕ್ಷಣ ಅಜ್ಜ ನಿಲ್ಲಬಹುದು, ನಿಂತಾಗ ನನ್ನ ಬೇಡಿಕೆಯನ್ನು ಸಲ್ಲಿಸಬೇಕು ಎಂದೆಲ್ಲ ಯೋಚಿಸುತ್ತಿದ್ದ ಈತನಿಗೆ ಇದು ಅಚ್ಚರಿಯ ಬೆಳವಣಿಗೆ. ಕೈಗೆ ಬಂದ ತುತ್ತು ಬಾಯಿಗೆ ದಕ್ಕಿಸಿಕೊಳ್ಳಲೇಬೇಕೆಂದು ಕೂಡಲೇ ಅಜ್ಜನ ಹಿಂದೆ ಬಿದ್ದವನೇ, ಅಡ್ಡ ಹಾಕುವಂತೆ ಎದುರು ನಿಂತ. ಅಜ್ಜನಿಗೆ ಏನು ಮಾಡಬೇಕೆಂದು ತೋಚಲಿಲ್ಲ. ತನ್ನ ಕೈಯಲ್ಲಿದ್ದನ್ನು ಮತ್ತಷ್ಟು ಗಟ್ಟಿಯಾಗಿ ಹಿಡಿದುಕೊಂಡ. ಏನನ್ನಾದರೂ ಕೊಡಿಸಿ, ಹೊಟ್ಟೆ ಹಸಿದಿದೆ ಎನ್ನುವಂತೆ ಮುಖ ಮಾಡಿದ. ಅಜ್ಜನಿಗೆ ಅರ್ಧ ಅರ್ಥವಾಯಿತು. ತನ್ನ ಕೈಯಲ್ಲಿದ್ದ ಕೊಟ್ಟೆಯನ್ನೇ ತೆಗೆದು ಒಂದು ದಿಲ್ ಪಸಂದ್ ತುಂಡು ಕೊಟ್ಟ.
ಈತ ಈಗ ಗೊಂದಲಕ್ಕೆ ಸಿಕ್ಕ. ಇವನ ಕಣ್ಣು ಕಂಡಿದ್ದ ಆಕಾರ ಮತ್ತು ಬಣ್ಣ ಬೇರೆ. ಈಗ ಸಿಗುತ್ತಿರುವುದೇ ಬೇರೆ. ರುಚಿ ಮುಖ್ಯವೋ, ಹಸಿವು ನೀಗಿಸಿಕೊಳ್ಳುವುದು ಮುಖ್ಯವೋ ಎಂದೆನಿಸಿ ಕೈಯೊಡ್ಡಿದ. ಅಜ್ಜ ಕೈಯಲ್ಲಿದ್ದ ತುಂಡು ದಿಲ್ ಪಸಂದ್ ಅನ್ನು ಕೈಗಿತ್ತು ಮುನ್ನಡೆದ. ಈತ ಹಗೂರಕ್ಕೆ ಹೆಜ್ಜೆ ಇಟ್ಟುಕೊಂಡು ಕೈಯಲ್ಲಿದ್ದನ್ನು ತಿನ್ನುತ್ತಾ ಯಥಾಸ್ಥಿತಿಗೆ ಬಂದ. ಇನ್ನು ಮೂರನೆಯವರು ಸಿಕ್ಕರೆ ಏನಾದರೂ ಸಿಗಬಹುದು !
ಇವೆಲ್ಲವನ್ನೂ ದೂರದಲ್ಲಿ ನೋಡುತ್ತಿದ್ದ ವ್ಯಕ್ತಿಯೊಬ್ಬ ಇವನಲ್ಲಿಗೆ ಬಂದ. ಕೈಯಲ್ಲಿ ಸೇಬು ಹಣ್ಣಿತ್ತು. ಇವನಿಗೆ ತೋರಿಸಿದ. ಹೊಸ ಆಕಾರ, ಹೊಸ ಬಣ್ಣ ವಿಶೇಷವೆನಿಸಿತು. ಹಣ್ಣು ಪಡೆದವ ಅವನನ್ನು ಹಿಂಬಾಲಿಸತೊಡಗಿದ. ಇಬ್ಬರೂ ನಡೆದು ಮುಟ್ಟಿದ್ದು ಒಂದು ಪುಟ್ಟ ಮನೆಗೆ. ಒಳಗೆ ಸಣ್ಣ ಮಕ್ಕಳಿಬ್ಬರು ಇದ್ದರು, ಜತೆಗೊಬ್ಬಳು ಅಮ್ಮ. ಇವನನ್ನು ಕಂಡ ಕೂಡಲೇ ಖುಷಿಯಿಂದ ಸ್ವಾಗತಿಸಿದಳು. ಇವನಿಗೂ ವಿಶೇಷವೆನಿಸಿತು. ಹಾಗೆ ನೋಡುವುದಾದರೆ ಇವನು ಕಾಣುತ್ತಿರುವುದೇ ಮೊದಲ ನಗು. ತನಗೆ ಏನು ಮಾಡಬೇಕೆಂದು ತೋಚದೇ ಆವಾಕ್ಕಾದವನಂತೆ ನಿಂತ.
ಆಕೆ ಇವನನ್ನು ಹತ್ತಿರ ಕರೆದು ಕುಳ್ಳಿರಿಸಿ ಊರು-ದೇಶ ಎಲ್ಲ ಕೇಳಿದಳು. ಯಾವುದಕ್ಕೂ ಉತ್ತರವಿಲ್ಲ. ಮತ್ತೊಂದು ಸೇಬು ಹಣ್ಣು ಮುಂದಿಟ್ಟಳು. ಗಫಕ್ಕನೆ ತೆಗೆದುಕೊಂಡ. ಕ್ಷಣ ಎನ್ನುವಷ್ಟರಲ್ಲೇ ತಿಂದು ಮುಗಿಸಿದ. ಹಸಿವು ಶಾಂತವಾಯಿತು. ಮಕ್ಕಳಿಬ್ಬರನ್ನು ಕಣ್ಣಗಲಿಸಿ ನೋಡತೊಡಗಿದು. ಎರಡೂ ಪುಟ್ಟ ಪುಟ್ಟ ಬಾಲೆಯರು. ಈಗ ಆಕೆ ಹತ್ತಿರಕ್ಕೆ ಬಂದು ಊರು ದೇಶ ಎಲ್ಲ ಕೇಳಿದಳು. ಹೆಸರು ಏನು ಎಂದು ಕೇಳಿದಳು. ಎಲ್ಲದಕ್ಕೂ ಅವನ ಉತ್ತರ ಒಂದೇ- ಮೌನ.
ಅಪ್ಪ ಇಟ್ಟ ಹೆಸರು ನೆನಪಿಗೆ ಇಲ್ಲ, ತಂಗಿ ಕರೆದಿಲ್ಲ, ಅಮ್ಮನೂ ಕರೆದ ನೆನಪಿಲ್ಲ. ಎಂದೋ ಒಮ್ಮೆ ಜಾತ್ರೆಯಲ್ಲಿ ಕಳೆದು ಹೋದಾಗ ನನ್ನ ಹೆಸರಿನ್ನಿಡಿದುಕೊಂಡು ಹುಡುಕುತ್ತಿದ್ದರಂತೆ. ಅದಷ್ಟೇ ನೆನಪಿನಲ್ಲಿರೋದು. ಹೆಸರು ಮುಖ್ಯವೂ ಎನಿಸಿರಲಿಲ್ಲ ಬದುಕಿಗೆ. ಹೀಗೇ ಇರುವಾಗ ಈ ಹೆಸರು ನೆನಪಿಸಿಕೊಳ್ಳುವ ಘಳಿಗೆ ಹತ್ತಿರವಾಗಿದೆ. ಆದರೂ ನೆನಪಿಗೆ ಬಾರದು. ಹೌದು, ಉಳಿದ ಮಕ್ಕಳಿಗೆ ಹೆಸರುಗಳಿವೆಯಲ್ಲ, ಇವನಿಗೂ ಒಂದು ಹೆಸರಿರಬೇಕಲ್ಲ. ಅದಕ್ಕೆಂದೇ ಈಗ ಇವನಿಗೂ ಚೆಂದವಾದ ಹೆಸರನ್ನು ಇಟ್ಟಿದ್ದಾರೆ ಇವರಿಬ್ಬರೂ ಸೇರಿ. ಹೌದು, ಈ ಹೆಸರು ಜಗತ್ತಿನ ಲೆಕ್ಕಕ್ಕಲ್ಲ, ಈ ನಾಲ್ಕು ಗೋಡೆಯೊಳಗೆ ಅಷ್ಟೇ.
ಬೆಳಗ್ಗೆಯಾದ ಕೂಡಲೇ ಅವನ ಹಿಂದೆ ಇವನೂ ಹೊರಡುತ್ತಾನೆ. ಮಾರುಕಟ್ಟೆಯ ಆಂಗಡಿಯ ಕೊನೆಯಲ್ಲಿ ತರಕಾರಿಗಳ ಗುಡ್ಡೆ ಹಾಕುತ್ತಾನೆ. ವ್ಯಾಪಾರ ಮಾಡುತ್ತಾನೆ. ಇವನಿಗೂ ಒಂದು ಅಂಗಡಿಯ ಎದುರು ಗುಡ್ಡೆ ಹಾಕಿ ಕೊಡಲಾಗುತ್ತದೆ. ಇವನೂ ವ್ಯಾಪಾರ ಮಾಡುತ್ತಾನೆ. ಸಂಜೆಯಾಗುವಾಗ ಇಬ್ಬರೂ ಮನೆಗೆ ಹೊರಡುತ್ತಾರೆ.
ಮನೆಯೊಳಗೆ ಬಂದ ಕೂಡಲೇ ಇವನ ಹೆಸರಿಗೆ ಅಸ್ತಿತ್ವ ಬರುತ್ತದೆ, ವ್ಯಕ್ತಿತ್ವ ಬರುತ್ತದೆ. ಹೊಸ ಹುಮ್ಮಸ್ಸೂ ಬಂದಂತಾಗುತ್ತದೆ. ಉಲ್ಲಸಿತನಾಗಿರುತ್ತಾನೆ. ಕತ್ತಲು ಕವಿದು ರಾತ್ರಿಯಾಗಿ ಬೆಳಗ್ಗೆ ಆದ ಕೂಡಲೇ ಪಾದಗಳು ಬೆಳೆಯತೊಡಗುತ್ತವೆ ಮಾರುಕಟ್ಟೆಯವರೆಗೂ. ಆಗ ಈತ ಮತ್ತೆ ಅನಾಮಿಕ. ದಿನವೂ ಇವನಲ್ಲಿಗೆ ಬರುವ ಒಂದು ಅಮ್ಮನಿಗೆ ಎಂದಾದರೂ ಇವನ ಹೆಸರು ತಿಳಿಯಬಹುದೆನ್ನುವ ತವಕ.
ಬಂದಾಗಲೆಲ್ಲ ತರಕಾರಿ ತೆಗೆದುಕೊಂಡ ಮೇಲೆ “ನೀನು ಕೊನೆಗೂ ಹೆಸರು ಹೇಳಲೇ ಇಲ್ಲ’ ಎಂದು ಪೀಡಿಸುತ್ತಾಳೆ. ಈತ ಸಣ್ಣಗೆ ನಗುತ್ತಾನೆ. ಅವಳೂ ನಕ್ಕು ಹೊರಡುತ್ತಾಳೆ. ಪ್ರತಿದಿನವೂ ಈಕೆ ಬರುವುದು ತರಕಾರಿಗಿಂತ, ಅವನ ಹೆಸರು ತಿಳಿದುಕೊಳ್ಳುವುದಕ್ಕೆ. ಆ ದಿನ ಸಂಜೆ ಮುಗಿಯುತ್ತಾ ಬಂದಿತ್ತು. ಈ ಹೆಸರು ಕೇಳುವವಳು ಬಂದಿರಲಿಲ್ಲ. ಇವನಿಗೂ ಆ ಅಮ್ಮನೇಕೆ ಬಂದಿಲ್ಲ ಎಂದು ದಾರಿ ನೋಡತೊಡಗಿದ. ಇನ್ನು ಹದಿನೈದು ನಿಮಿಷದಲ್ಲಿ ಮನೆಗೆ ಹೊರಡಬೇಕೆನ್ನುವಷ್ಟರಲ್ಲಿ ಮಳೆ ಸುರಿಯತೊಡಗಿತು. ತರಕಾರಿಗಳೆಲ್ಲ ಈ ಅನಿರೀಕ್ಷಿತ ಮಳೆಗೆ ಚೆಲ್ಲಾಪಿಲ್ಲಿಯಾಯಿತು. ಕೈಗೆ ಸಿಕ್ಕಿದ್ದನ್ನು ಚೀಲಕ್ಕೆ ತುಂಬುವಷ್ಟರಲ್ಲಿ ಬಟ್ಟೆ ಎಲ್ಲ ತೊಯ್ದುಹೋಗಿತ್ತು. ಹಾಗೆಯೇ ಮನೆಗೆ ಅವನೊಂದಿಗೆ ಬಂದ. ಬಟ್ಟೆ ಬದಲಿಸಿದ. ಅಮ್ಮ ಊಟ ಬಡಿಸಿದಳು. ಊಟ ಮಾಡಿ ಮುಗಿಸಿದ. ದೀಪ ಆರಿತು, ಎಲ್ಲರ ಕಣ್ಣು ಮುಚ್ಚಿದವು. ಇವನ ಕಣ್ಣು ತೆರೆದೇ ಇತ್ತು. ಮನಸ್ಸಿನಲ್ಲಿ “ನಿನ್ನೆ ಹೆಸರು ಹೇಳಿಬಿಡಬೇಕೆತ್ತೇನೋ’ ಎನ್ನಿಸತೊಡಗಿತು. ಒಂದು ನಿರ್ಧಾರಕ್ಕೆ ಬಂದ. ಇಂದು ಆ ಅಮ್ಮ ಬಂದ ಕೂಡಲೇ ಹೆಸರು ಹೇಳಿಬಿಡಬೇಕು ಎಂದುಕೊಂಡ.
ಹಗಲು ಹರಿದು ಮಾರುಕಟ್ಟೆಗೆ ಜೀವಕಳೆ ಬಂದಿತು. ಇವನೂ ತನ್ನ ಅಂಗಡಿಯಲ್ಲಿ ನಿಂತಿದ್ದ. ಬಂದವರೆಲ್ಲ ತರಕಾರಿ ಖರೀದಿಸಿ ಹೊರಡುತ್ತಿದ್ದರು. ಅಷ್ಟರಲ್ಲಿ ಆ ಅಮ್ಮ ಬಂದಳು. ಈತ ಮುಗುಳ್ನಕ್ಕ, ಅವಳೂ ಮುಗುಳ್ನಕ್ಕಳು. ಇನ್ನೆರಡು ಗಿರಾಕಿ ಹೋಗಲಿ ಎಂದು ಕಾದ. ಅಮ್ಮನ ಖರೀದಿ ಮುಗಿಯಿತು. ದುಡ್ಡು ಕೊಟ್ಟು ಮುಗುಳ್ನಕ್ಕು ಹೊರಟಳು. ಇವನಿಗೆ ಏನು ಹೇಳಬೇಕೋ ತೋಚಲಿಲ್ಲ. ಆಕೆಯ ಹೆಜ್ಜೆ ದೂರವಾಗುವಷ್ಟರಲ್ಲಿ ಈತ “ನನ್ನ ಹೆಸರು’ ಎಂದು ಹೇಳಲು ಹೊರಟ. ಆ ಕಡೆಯಿಂದ ಆ ಅಮ್ಮ “ಗೊತ್ತಿದೆ, ನನ್ನ ಮಗನದ್ದೇ ಹೆಸರು’ ಎಂದು ಮುನ್ನಡೆದಳು. ಇವನು ಮೂರ್ತಿಯಂತೆ ನಿಶ್ಚಲನಾಗಿ ನಿಂತ.
ಮತ್ತೆ ಮಳೆಯ ಲಕ್ಷಣ ಗೋಚರಿಸತೊಡಗಿತು. ಆಗಸವೆಲ್ಲ ಕಪ್ಪು. ಮೋಡ ಅಳುವುದೊಂದೇ ಬಾಕಿ. ಎದುರಿನ ಆಂಗಡಿಯಲ್ಲಿದ್ದ ಆತ “ತರಕಾರೀನ ಚೀಲಕ್ಕೆ ತುಂಬು, ಮಳೆ ಬರುತ್ತೆ’ ಎಂದು ಬೊಬ್ಬೆ ಹಾಕಿದ. ಈತ ಆಯಿತೆಂದು ಚೀಲ ಹಿಡಿದುಕೊಳ್ಳುವಷ್ಟರಲ್ಲಿ..ಮಳೆ ಜಗವೆಲ್ಲ ತುಂಬಿಕೊಂಡಿತು. ಆ ನೆರೆಯಲ್ಲಿ ಈತನ ಹೆಸರು ಮತ್ತೆ ಕೊಚ್ಚಿ ಹೋಯಿತು. ಈಗ ಮತ್ತೆ ಜಗತ್ತಿನ ಲೆಕ್ಕಕ್ಕೆ ಹೊಸ ಹೆಸರು ಇಡಬೇಕು. ಅಲ್ಲಿಯವರೆಗೆ ಇವನಿಗೆ ಹೆಸರಿಲ್ಲ !
*ಜಾನಕಿ