Advertisement

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

05:09 PM Dec 21, 2024 | Team Udayavani |

ಕತಾರ್‌:ಕತಾರ್‌ನಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರವು ಮಹಿಳೆಯರ ಒಕ್ಕೂಟದ ಸಹಯೋಗದೊಂದಿಗೆ ಶರೀನ್‌ ಶಹನ ಅವರೊಂದಿಗೆ ಸಂವಾದವನ್ನು ಏರ್ಪಡಿಸಿತ್ತು. ಒಂದು ಭೀಕರ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿ ಜೀವನ ಪರ್ಯಂತ ಎರಡೂ ಕಾಲುಗಳ ಸ್ವಾಧೀನವನ್ನು ಕಳೆದುಕೊಂಡಿರುವ ಇವರು, ತಮ್ಮ ಕನಸಾದ ಭಾರತೀಯ ಆಡಳಿತ ಸೇವೆಗೆ ಸೇರ್ಪಡೆಯಾದ ಸಾಹಸಮಯ ಕಥಾ ವೃತ್ತಾಂತವನ್ನು ಆಗಮಿಸಿದ ಎಲ್ಲರೊಂದಿಗೆ ಹಂಚಿಕೊಂಡರು.

Advertisement

ಉನ್ನತ ವ್ಯಾಸಂಗದ ಅನಂತರ, ಕೇಂದ್ರ ಸಾರ್ವಜನಿಕ ಸೇವಾ ಪರೀಕ್ಷೆಗಳನ್ನು ತಮ್ಮ ಶ್ರದ್ಧೆ ಹಾಗೂ ಪರಿಶ್ರಮದಿಂದ 913 ರ್‍ಯಾಂಕ್‌ ಪಡೆದು ಉತ್ತೀರ್ಣರಾದರು. ಐಸಿಸಿ ಸಾಂಸ್ಕೃತಿಕ ಚಟುವಟಿಕೆಗಳ ಮುಖ್ಯಸ್ಥರಾದ ನಂದಿನಿ ಅಬ್ಬಾ ಗೋಣಿ ಅವರು ಸ್ವಾಗತ ಭಾಷಣ ಮಾಡಿದರು. ಅನಂತರ ಐಸಿಸಿ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಕಾರ್ಯಕ್ರಮವನ್ನುದ್ದೇಶಿಸಿ ಸಂದೇಶವನ್ನು ರವಾನಿಸಿದರು.

ಶರೀನ್‌ ಅವರು ಮಾತನಾಡಿ ತಮ್ಮ ಅಮೋಘ ಜೀವನ ಪಯಣದಲ್ಲಿ ಶಾರೀರಿಕ ಪರಿಮಿತಿಗಳನ್ನು ದಾಟಿ ವ್ಯಾಸಂಗ ಹಾಗೂ ವೃತ್ತಿಪರ ಕನಸುಗಳನ್ನು ಪೂರೈಸುವ ಮಾರ್ಗವನ್ನು ಸೂಚಿಸಿದರು. ಇವರ ಮನಮೋಹಕ, ರೋಚಕ ಮಾತುಗಳು ಆಗಮಿಸಿದ ಸಭಿಕರಿಗೆಲ್ಲ ಮೈ ರೋಮಾಂಚನಗೊಳಿಸುವುದು ಮಾತ್ರವಲ್ಲದೆ, ಜೀವನದಲ್ಲಿ ಸಾಧನೆ ಮಾಡಲು ಸಕಲ ಮಾರ್ಗಗಳು ತೆರೆದಿವೆ ಎನ್ನುವ ಸಂದೇಶವನ್ನು ನೀಡಿತು. ಎಂತಹ ಕಷ್ಟ ಕಠಿನ ಕಾರ್ಪಣ್ಯಗಳು ಎದುರಾದರು ನಮ್ಮ ಗುರಿ ತಲುಪಲು ಇವು ಮೆಟ್ಟಿಲುಗಳು ಮಾತ್ರ ಎಂದು ಶರೀನ್‌ ಅವರು ಸ್ವತಃ ಉದಾಹರಣೆಯೊಂದಿಗೆ ನಿದರ್ಶನ ನೀಡಿದರು.

ಐಸಿಸಿ ಆಡಳಿತ ಸಮಿತಿಯ ಸದಸ್ಯರು, ಇತರ ಸಂಘ ಸಂಸ್ಥೆಗಳ ಅಧ್ಯಕ್ಷರು, ಐಸಿಸಿ ಮಹಿಳಾ ಒಕ್ಕೂಟದ ಸದಸ್ಯರು, ಸಮುದಾಯದ ಹಿರಿಯ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಐಸಿಸಿ ಬಾಹ್ಯ ಚಟುವಟಿಕೆಗಳ ಮುಖ್ಯಸ್ಥರಾದ ಗಾರ್ಗಿ ವೈದ್ಯ ಅವರು ಧನ್ಯವಾದ ಸಮರ್ಪಿಸಿದರು, ಮಂಜು ಅವರು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next