Advertisement

Bajpe: 15 ಎಕ್ರೆ ಹಡಿಲು ಭೂಮಿಯಲ್ಲಿ ಮಾಡಿದ ಭತ್ತ, ತರಕಾರಿ ಕೃಷಿ ನಾಶ

12:47 PM Dec 09, 2024 | Team Udayavani |

ಬಜಪೆ: ಫೈಂಜಾಲ್‌ ಚಂಡಮಾರುತದ ಪರಿಣಾಮವಾಗಿ ಡಿಸೆಂಬರ್‌ 2ರಂದು ಸುರಿದ ಭಾರಿ ಮಳೆ ಒಂದೇ ದಿನದಲ್ಲಿ ತನ್ನ ಅಬ್ಬರವನ್ನು ನಿಲ್ಲಿಸಿದೆ. ಆದರೆ, ಅದರ ಪರಿಣಾಮವಾಗಿ ಕೃಷಿಕರು ಮಾತ್ರ ಕಂಗಾಲಾಗಿ ಹೋಗಿದ್ದಾರೆ. ನೂರಾರು ಎಕ್ರೆ ಕೃಷಿ ಭೂಮಿಗೆ ನೀರಿನಲ್ಲಿ ಮುಳುಗಿದ್ದರಿಂದ ಭತ್ತ ನಾಟಿ ಮಾಡಿದವರು, ತರಕಾರಿ ನೆಟ್ಟವರು ಭಾರಿ ನಷ್ಟಕ್ಕೆ ಗುರಿಯಾಗಿದ್ದಾರೆ.

Advertisement

ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದರೂ ಪ್ರವೃತ್ತಿಯಲ್ಲಿ ಕೃಷಿಕರಾಗಿ ಹತ್ತಾರು ಎಕ್ರೆ ಹಡಿಲು ಭೂಮಿಯಲ್ಲಿ ಹಸುರು ಉಕ್ಕಿಸುತ್ತಿರುವ ಕೊಂಪದವಿನ ಪದ್ಮನಾಭ ಗೌಡ ಅವರು ಈ ಬಾರಿ ಭಾರಿ ಪ್ರಮಾಣದ ಹೊಡೆತ ತಿಂದಿದ್ದಾರೆ. ಕೃಷಿ ಮಾಡುವ ಅತೀವ ಆಸಕ್ತಿ ಹೊಂದಿದ ಅವರು ಬೇರೆಯವರಿಗೆ ಸೇರಿದ 15 ಎಕ್ರೆ ಜಾಗದಲ್ಲಿ ಭತ್ತದ ಬೇಸಾಯ ಮಾಡಿದ್ದರು. ಹೀರೇಕಾಯಿ, ಬೆಂಡೆ, ಸೌತೆಕಾಯಿ ಮೊದಲಾದ ತರಕಾರಿಗಳನ್ನು ಬೆಳೆದಿದ್ದರು. ಆದರೆ ಡಿ. 2ರಂದು ಫೈಂಜಾಲ್‌ ಚಂಡಮಾರುತ ಕೊಳಂಬೆಯಲ್ಲಿ ಮಾಡಿದ ಕೃಷಿಯನ್ನು ನುಂಗಿಬಿಟ್ಟಿದೆ.

ಅವರು ಕೊಳಂಬೆಯ 15 ಎಕ್ರೆ ಗದ್ದೆಯಲ್ಲಿ ಹಿಂಗಾರು ಬೆಳೆಗೆ ತನ್ನ ಟ್ಯಾಕ್ಟರ್‌ ಮೂಲಕ ಹಸನು, ಬಿತ್ತನೆ ಮಾಡಿ, ನಾಟಿ ಮಾಡಿದ್ದರು. ಮೊದಲು ಜೋರು ಬಿಸಿಲು ಇದ್ದದ್ದರಿಂದ ಗದ್ದೆಗೆ ನೀರು ಬಿಟ್ಟು ಬೇಸಾಯ ಮಾಡಿದ್ದರು. ಈ ಬಾರಿಯ ಬಿಸಿಲಿನಿಂದ ಕೆಲವೆಡೆ ನಾಟಿ ಮಾಡಿದ ನೇಜಿ ಸತ್ತು ಹೋಗಿತ್ತು. 2 ಬಾರಿ ಬಿತ್ತನೆಯೂ ಮಾಡಿದ್ದರು. ಬಳಿಕ ಆ ಜಾಗದಲ್ಲಿ ನಾಟಿ ಮಾಡಲು ಬೇರೆ ನೇಜಿಯನ್ನು ತಯಾರು ಮಾಡಿ ನಾಟಿ ಮಾಡಿದ್ದರು. ಆದರೆ ಈಗ ಫೈಂಜಾಲ್‌ ಚಂಡಮಾರುತ ಒಂದೇ ದಿನದಲ್ಲಿ ಭತ್ತದ ಕೃಷಿಯನ್ನೇ ಹಾನಿ ಮಾಡಿದೆ. ಈಗಾಗಲೇ 6 ದಿನಗಳು ಕಳೆದಿದ್ದು, ಗದ್ದೆಯಲ್ಲಿ ನೇಜಿಗಿಂತ ಮೇಲೆ ನೀರು ನಿಂತಿದೆ. ಕೆಲವೆಡೆ ನೇಜಿ ಕೊಳೆತು ಹೋಗಿದೆ.

ತರಕಾರಿ, ಭತ್ತದ ಬೇಸಾಯದಲ್ಲಿ ಭಾರಿ ಹಾನಿ
ಸ್ವತಃ ಟ್ಯಾಕ್ಟರ್‌ನಲ್ಲಿ ಉಳುಮೆ ಮಾಡಿದ ಕಾರಣ ಅದಕ್ಕಾಗಿ ಮಾಡುವ ಖರ್ಚು ಉಳಿದಿದೆ. ಆದರೆ, ಬಿತ್ತನೆ ಬೀಜ, ಗೊಬ್ಬರ ಇತರ ಖರ್ಚು ಸುಮಾರು 2 ಲಕ್ಷ ರೂಪಾಯಿ ಗಿಂತ ಅಧಿಕ ನಷ್ಟ ವಾಗಿದೆ. ಪಡುಪೆರಾರದಲ್ಲಿ ಎರಡು ಎಕ್ರೆ ಜಾಗದಲ್ಲಿ ಹಾಕಿದ್ದ ಹಿರೇಕಾಯಿ, ಬೆಂಡೆ, ಸೌತೆ ಕಾಯಿ ಬೀಜ ಮೊಳಕೆಯೊಡೆದಿತ್ತು. ಇದಕ್ಕೆ ಉಳುಮೆ, ಗೊಬ್ಬರ, ಕಾರ್ಮಿಕರ ಕೂಲಿ ಸಹಿತ ಇಲ್ಲಿಯೂ ಸುಮಾರು 70 ಸಾವಿರ ರೂಪಾಯಿ ಖರ್ಚಾಗಿದೆ. ಈಗ ಎಲ್ಲವೂ ನೀರಿನಲ್ಲಿ ಹೋಮ ಇಟ್ಟ ಹಾಗಾಗಿದೆ. ಅವರು ನವರಾತ್ರಿಗೆಂದು ಮಿಜಾರಿನಲ್ಲಿನ 2 ಎಕ್ರೆಯಲ್ಲಿ ಹೀರೆ ಕಾಯಿ ಕೃಷಿ ಮಾಡಿದ್ದರು. ಆದರೆ, ಅಲ್ಲಿನ ಬೆಳೆ ಕಳ್ಳರಪಾಲಾಗಿತ್ತು.

Advertisement

ಹಾಕಿದ ಬಂಡವಾಳವೂ ಹೋಗಿದೆ
ಸ್ವಂತ ಭೂಮಿಯಿಲ್ಲದ ಕಾರಣ ಬೇರೆಯವರ ಭೂಮಿಯಲ್ಲಿ ಭತ್ತ ಬೇಸಾಯವನ್ನು ಹಲವು ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ಈ ಬಾರಿಯ ಕೃಷಿಯಲ್ಲಿ ಹೆಚ್ಚು ನಷ್ಟ ಅನುಭವಿಸಿದ್ದೇವೆ. ನನ್ನ ಪರಿಶ್ರಮದ ಲೆಕ್ಕ ಬೇಡ, ಹಾಕಿದ್ದ ಬಂಡವಾಳ ಕೂಡ ಹೋಗಿದೆ.
-ಪದ್ಮನಾಭ ಗೌಡ, ನಷ್ಟ ಅನುಭವಿಸಿದ ರೈತ

-ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next