Advertisement

ನಾಳೆಯಿಂದ ಆಕಾಶವಾಣಿಯಲ್ಲಿ ಪದಸಂಸ್ಕೃತಿ ಕಾರ್ಯಕ್ರಮ

12:38 PM Oct 31, 2018 | |

ಮೈಸೂರು: ಕನ್ನಡ ಭಾಷಾ ಸಂಸ್ಕೃತಿಯೊಳಗೆ ಹೇರಳವಾಗಿರುವ ಹಾಗೂ ಅಪರೂಪವಾಗಿ ಬಳಸುವ ಪದಗಳ ಬಗ್ಗೆ ಕನ್ನಡಿಗರಿಗೆ ನೆನಪಿಸುವ ಜತೆಗೆ ಅದರ ಮಹತ್ವವನ್ನು ತಿಳಿಸಲು ಮೈಸೂರು ಆಕಾಶವಾಣಿ ಕೇಂದ್ರ ಮುಂದಾಗಿದೆ. ಇದಕ್ಕಾಗಿ “ಪದಸಂಸ್ಕೃತಿ’ ಶೀರ್ಷಿಕೆಯಡಿ ಕನ್ನಡವನ್ನು ಬಳಸುವ ಹಾಗೂ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದೆ. 

Advertisement

ಕರ್ನಾಟಕದ ಪ್ರತಿ ಪ್ರದೇಶಗಳಿಗೆ ತಕ್ಕಂತೆ ಬೇರೆ ಬೇರೆ ಬಗೆಯ ಭಾಷೆಗಳು ಬಳಕೆಯಲ್ಲಿದ್ದು, ಉತ್ತರ ಹಾಗೂ ದಕ್ಷಿಣ ಕರ್ನಾಟಕ ಭಾಗದಲ್ಲಿ ಕೆಲವು ಪದಗಳ ಬಳಕೆ ಇಂದಿಗೂ ಪ್ರಚಲಿತದಲ್ಲಿದೆ. ಹೀಗೆ ರಾಜ್ಯದ ವಿವಿಧ ಪ್ರಾಂತ್ಯಗಳಲ್ಲಿ ಬಳಕೆಯಲ್ಲಿರುವ ಪದಗಳನ್ನು ಪರಿಚಯಿಸಿ, ಅದರ ಮಹತ್ವವನ್ನು ತಿಳಿಸಿ ಪದಸಂಸ್ಕೃತಿಯನ್ನು ಉಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮೈಸೂರು ಆಕಾಶವಾಣಿ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮ ನ.1ರಿಂದ ಆರಂಭವಾಗಲಿದೆ ಎಂದು ಆಕಾಶವಾಣಿ ಸಹಾಯಕ ನಿರ್ದೇಶಕ ಎಚ್‌. ಶ್ರೀನಿವಾಸ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಒಂದು ವರ್ಷ ಪ್ರಸಾರ: ಇತ್ತೀಚೆಗೆ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿದ್ದು, ವಿದ್ಯಾರ್ಥಿಗಳು, ಯುವಜನತೆ ಕನ್ನಡದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನ.1ರಿಂದ 365 ದಿನಗಳವರೆಗೆ ಪದಸಂಸ್ಕೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿನಿತ್ಯ ಬೆಳಗ್ಗೆ 6:45 ರಿಂದ 6:55ರವರೆಗೆ ಏಕಕಾಲಕ್ಕೆ 13 ಆಕಾಶವಾಣಿ ಬಾನುಲಿ ಕೇಂದ್ರಗಳಲ್ಲಿ ಪ್ರಸಾರವಾಗಲಿದೆ. ರಾಜ್ಯದ ಹಲವು ಭಾಗಗಳಲ್ಲಿನ ಭಾಷಾ ತಜ್ಞರು ಈ ಕಾರ್ಯಕ್ರಮ ನಡೆಸಿಕೊಡಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಈ ಕಾರ್ಯಕಮ ನಡೆಸಲಾಗುತ್ತಿದೆ ಎಂದರು. 

ಪದಸಂಸ್ಕೃತಿ ಸ್ವರೂಪ: ಪದಸಂಸ್ಕೃತಿ ಕಾರ್ಯಕ್ರಮ ಮೂರು ಭಾಗಗಳಲ್ಲಿ ನಡೆಯಲಿದೆ. ಮೊದಲ ಭಾಗದಲ್ಲಿ “ಪದ ಪರಿಚಯ’ ನಡೆಯಲಿದ್ದು, ಇದರಲ್ಲಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಮರೆಯಾಗುತ್ತಿರುವ ಪದಗಳನ್ನು ಪರಿಚಯಿಸಲಾವುದು. ಎರಡನೇ “ತಪ್ಪು-ಒಪ್ಪು’ ಭಾಗದಲ್ಲಿ ಭಾಷಾ ಬಳಕೆಯಲ್ಲಿ ಉಂಟಾಗುವ ವ್ಯಾಕರಣ ದೋಷದ ಕುರಿತು ಉದಾಹರಣೆಯೊಂದಿಗೆ ವಿವರಿಸಲಾಗುತ್ತದೆ. 3ನೇ ಭಾಗವಾಗಿ ಸುಮಧುರ ಶೀರ್ಷಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಒಂದು ಗೀತೆ, ಪಂದ್ಯ ಅಥವಾ ಸಿನಿಮಾ ಹಾಡನ್ನು ಪ್ರಸಾರ ಮಾಡಲಾಗುತ್ತದೆ. ನಂತರ ಗೀತೆಯ ವಿವರಣೆ, ಸಾರಾಂಶವನ್ನು ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು. 

ಹರಿದಾಸ ಸಾಹಿತ್ಯ ಬೆಳಕು: ಅಂತೆಯೇ ನ.2ರಿಂದ ಪ್ರತಿ ಶುಕ್ರವಾರ ಬೆಳಗ್ಗೆ 8:30ಕ್ಕೆ “ಹರಿಯನ್ನರಿಸಿದ ವನಿತೆಯರು’ ಕಾರ್ಯಕ್ರಮ ಆರಂಭವಾಗುತ್ತಿದೆ. ಕಾರ್ಯಕ್ರಮದಲ್ಲಿ 13 ಮಂದಿ ಮಹಿಳೆಯರು ಕೀರ್ತನೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಪ್ರತಿದಿನ 30 ನಿಮಿಷದ ಅವಧಿಯ ಈ ಕಾರ್ಯಕ್ರಮದಲ್ಲಿ 14 ಕಾರ್ಯಕ್ರಮಗಳು ಹಾಗೂ 64 ಹೊಸ ಕೀರ್ತನೆಗಳ ಪರಿಚಯ ಮಾಡಿಕೊಡಲಿದ್ದಾರೆ.

Advertisement

ಹರಿದಾಸರ ಕೀರ್ತನೆಗಳ ಕಾರ್ಯಕ್ರಮದ ಪರಿಕಲ್ಪನೆ, ನಿರೂಪಣೆ ಹಾಗೂ ನಿರ್ದೇಶನವನ್ನು ಖ್ಯಾತ ಸಂಗೀತಗಾರರಾದ ಡಾ. ಸುಕನ್ಯಾ ಪ್ರಭಾಕರ್‌ ನಿರ್ವಹಿಸಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಆಕಾಶವಾಣಿ ಕೇಂದ್ರದ ಮುಖ್ಯಸ್ಥ ಸುನೀಲ್‌ ಭಾಟಿಯಾ ಹಾಜರಿದ್ದರು.

ಖಾಸಗಿ ಎಫ್.ಎಂ. ವಾಹಿನಿಗಳಿಂದ ಮೈಸೂರು ಆಕಾಶವಾಣಿಗೆ ಯಾವುದೇ ಪೈಪೋಟಿ ಇಲ್ಲ. ಮೈಸೂರು ಆಕಾಶವಾಣಿ ಕೇಂದ್ರದಿಂದ ಎಲ್ಲಾ ವರ್ಗದ ಕೇಳುಗರಿಗೆ ಅಗತ್ಯಕ್ಕೆ ತಕ್ಕಂತೆ, ಉಪಯುಕ್ತವಾದ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಆಕಾಶವಾಣಿ ಕಾರ್ಯಕ್ರಮಗಳಿಗೆ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರ್ಥಿಕವಾಗಿ ಸಹ ಆಕಾಶವಾಣಿ ಕೇಂದ್ರ ಲಾಭದಲ್ಲಿದ್ದು, ಕಳೆದ ಸಾಲಿನಲ್ಲಿ 76 ಲಕ್ಷ ರೂ. ವಾರ್ಷಿಕ ಆದಾಯ ಗಳಿಸಿತ್ತು. ಈ ವರ್ಷದಲ್ಲಿ 60 ಲಕ್ಷ ರೂ. ಆದಾಯ ಗಳಿಸಿದೆ. 
-ಎಚ್‌. ಶ್ರೀನಿವಾಸ್‌, ಸಹಾಯಕ ನಿರ್ದೇಶಕ, ಮೈಸೂರು ಆಕಾಶವಾಣಿ

Advertisement

Udayavani is now on Telegram. Click here to join our channel and stay updated with the latest news.

Next