Advertisement

ಜಗಜಟ್ಟಿಗಳ ಯುದ್ಧ, ಮೂರೂ ಪಕ್ಷಗಳಿಗೆ ಪ್ರತಿಷ್ಠೆ

06:47 AM Oct 17, 2018 | |

ಬೆಂಗಳೂರು: ಎರಡು ವಿಧಾನಸಭೆ ಹಾಗೂ ಮೂರು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆ, ರಾಜ್ಯದ ಪ್ರಭಾವಿ ನಾಯಕರಾದ ಜೆಡಿಎಸ್‌ನ ಎಚ್‌. ಡಿ.ದೇವೇಗೌಡ, ಕಾಂಗ್ರೆಸ್‌ನ ಸಿದ್ದರಾಮಯ್ಯ, ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪ್ರತಿಷ್ಠೆಯಾಗಿದೆ. ಜತೆಗೆ, ಬಳ್ಳಾರಿಯಲ್ಲಿ ಕಾಂಗ್ರೆಸ್‌ ಉಸ್ತುವಾರಿ ವಹಿಸಿರುವ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಸಹೋದರಿಯನ್ನು ಕಣಕ್ಕಿಳಿಸಿರುವ, ಬಿಜೆಪಿಯಲ್ಲಿ ಉಪ ಮುಖ್ಯಮಂತ್ರಿ ಮೆಟೀರಿಯಲ್‌ ಎಂದೇ ಬಿಂಬಿತರಾಗಿರುವ ಶ್ರೀರಾಮುಲು ಅವರ ನಾಯಕತ್ವಕ್ಕೆ ಅಗ್ನಿಪರೀಕ್ಷೆಯೂ ಆಗಿದೆ.

Advertisement

ಈ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಗಳ ಪರ ಒಕ್ಕಲಿಗ, ಕುರುಬ, ದಲಿತ, ಮುಸ್ಲಿಂ, ಹಿಂದುಳಿದ ಮತಗಳ ಕ್ರೋಢೀಕರಣವಾಗಬಹುದು. ಬಿಜೆಪಿ ಅಭ್ಯರ್ಥಿಗಳ ಪರ ಲಿಂಗಾಯಿತ, ಬ್ರಾಹ್ಮಣ ಹಾಗೂ ಬಿಜೆಪಿಯ ಸಾಂಪ್ರದಾಯಿಕ ಮತಬ್ಯಾಂಕ್‌ ಕ್ರೋಢೀಕರಣವಾಗಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ. ರಾಮನಗರ ವಿಧಾನಸಭೆ ಹಾಗೂ ಮಂಡ್ಯ ಲೋಕಸಭೆ ಚುನಾವಣೆ ಒಂದು ರೀತಿಯಲ್ಲಿ ಒನ್‌ ಸೈಡೆಡ್‌ ಆಗಿದ್ದು, ಜಮಖಂಡಿ ವಿಧಾನಸಭೆ , ಶಿವಮೊಗ್ಗ ಹಾಗೂ ಬಳ್ಳಾರಿ ಲೋಕಸಭೆ ಕ್ಷೇತ್ರದ ಚುನಾವಣೆ ಜಿದ್ದಾಜಿದ್ದಿನ ಕಣಗಳಾಗಿವೆ. ಈ ಹಿಂದೆ ಚಾಮುಂಡೇಶ್ವರಿ ಉಪ ಚುನಾವಣೆ ನಂತರ ರಾಜ್ಯದಲ್ಲಿ ಎದುರಾದ ತೀವ್ರ ಹೋರಾಟದ ಚುನಾವಣಾ ಕಣ ಇದಾಗಿದೆ. ನಾಯಕರ ಪ್ರಭಾವ, ಜಾತಿ ಲೆಕ್ಕಾಚಾರ, ಸರ್ಕಾರದ ಸಾಧನೆ ಹಾಗೂ ಶಕ್ತಿ , ತಂತ್ರ-ಪ್ರತಿತಂತ್ರ ಎಲ್ಲವೂ ಈ ಚುನಾವಣೆಯಲ್ಲಿ ಪ್ರದರ್ಶನವಾಗಲಿದೆ.

ಜೆಡಿಎಸ್‌ ಕಾರ್ಯೋನ್ಮುಖಿ
ಸಂಖ್ಯಾಬಲದಲ್ಲಿ ಕಡಿಮೆ ಇದ್ದರೂ ರಾಜಕೀಯವಾಗಿ ಮೇಲುಗೈ ಸಾಧಿಸಿರುವ ಜೆಡಿಎಸ್‌, ಈ ಉಪ ಚುನಾವಣೆಯಲ್ಲಿ ಮತ್ತಷ್ಟು ಸದೃಢವಾಗುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ದೇವೇಗೌಡರಿಗೆ ಮುಂದಿನ ರಾಷ್ಟ್ರರಾಜಕಾರಣದ ದೃಷ್ಟಿಯಿಂದ ಈ ಉಪ ಚುನಾವಣೆ ಮಹತ್ವದ್ದು. ಮೂರೂ ಕ್ಷೇತ್ರ ಮೈತ್ರಿಕೂಟದ ಪಾಲಾದರೆ ರಾಷ್ಟ್ರ ರಾಜಕಾರಣದಲ್ಲಿ ದೇವೇಗೌಡರ “ಖದರ್‌’ ಬದಲಾಗಲಿದೆ.  ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಗಟ್ಟಿಗೊಳ್ಳಲು ಕುಮಾರಸ್ವಾಮಿಗೂ ಈ ಚುನಾವಣೆ ಮಹತ್ವದ್ದು. ರಾಮನಗರ ಹಾಗೂ ಮಂಡ್ಯ ಎರಡೂ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಜೆಡಿಎಸ್‌ಗೆ ಮೊದಲ ಆದ್ಯತೆ. ಮಂಡ್ಯದಲ್ಲಿ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲೂ ಜೆಡಿಎಸ್‌ ಶಾಸಕರೇ ಇರುವುದು ಪ್ಲಸ್‌ ಪಾಯಿಂಟ್‌. ಕಾಂಗ್ರೆಸ್‌ಗೆ ಅಭ್ಯರ್ಥಿಗಳು ಸಿಗದೆ, ಶಿವಮೊಗ್ಗ ಕ್ಷೇತ್ರ ಸಹ ಬಯಸದೆ ಬಂದ ಭಾಗ್ಯ ಜೆಡಿಎಸ್‌ಗೆ. ಜಾತಿವಾರು ಮತಗಳ ಕ್ರೋಢೀಕರಣ ಲೆಕ್ಕಾಚಾರದಲ್ಲಿಯೇ ಮಧು ಬಂಗಾರಪ್ಪ
ಅವರನ್ನು ಕಣಕ್ಕೆ ಇಳಿಸಲಾಗಿದೆ. 

ನಾಯಕರ ‌ ಭವಿಷ್ಯಕ್ಕೂ ಮಹತ್ವದ್ದು
ಕಾಂಗ್ರೆಸ್‌ಗೆ ಭವಿಷ್ಯದ ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಪಕ್ಷದ ಅಸ್ತಿತ್ವದ ಜೊತೆಗೆ ಕೆಲವು ನಾಯಕರ ಭವಿಷ್ಯಕ್ಕೂ ಇದು ಪ್ರತಿಷ್ಠೆಯಾಗಿದೆ. ಶಿವಮೊಗ್ಗದಲ್ಲಿಯೂ ಸಮ್ಮಿಶ್ರ ಸರ್ಕಾರದ ಅಸ್ತಿತ್ವ ಉಳಿಸಿಕೊಳ್ಳುವ ಹೊಣೆಗಾರಿಕೆ ಸಿದ್ದರಾಮಯ್ಯ ಮೇಲಿದೆ. ಜಮಖಂಡಿ ಹಾಗೂ ಬಳ್ಳಾರಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯ ನಡುವೆಯೇ ಪೈಪೋಟಿ ಇದೆ. ಜಮಖಂಡಿ, ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರದ ಪಕ್ಕದ ಕ್ಷೇತ್ರ. ಹೀಗಾಗಿ, ಇಲ್ಲಿ ಪರಮೇಶ್ವರ್‌ ಉಸ್ತುವಾರಿಯಾದರೂ, ಸಿದ್ದರಾಮಯ್ಯಗೆ ಅತ್ಯಂತ ಮಹತ್ವದ್ದಾಗಿದೆ.

ಜಮಖಂಡಿ ಕ್ಷೇತ್ರದಲ್ಲಿ ಪ್ರಮುಖವಾಗಿ ಪಂಚಮಸಾಲಿ ಹಾಗೂ ಕುರುಬ ಸಮುದಾಯದ ಮತಗಳೇ ನಿರ್ಣಾಯಕವಾಗಿದ್ದು, ಒಂದು ವೇಳೆ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸದೇ ಇದ್ದರೆ ಕ್ಷೇತ್ರ ಕೈ ತಪ್ಪುವ ಸಾಧ್ಯತೆ ಇದೆ. ಬಳ್ಳಾರಿಯಲ್ಲಿ ಗೆಲ್ಲುವುದು ಕಾಂಗ್ರೆಸ್‌, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ಗೂ ಅಷ್ಟೇ ಪ್ರತಿಷ್ಠೆಯಾಗಿದೆ. ಗೆದ್ದರೆ, ಬಳ್ಳಾರಿಯನ್ನು ಭದ್ರ ಕೋಟೆ ಮಾಡಿಕೊಂಡಿರುವ ಶ್ರೀರಾಮುಲುರನ್ನು ಎದುರಿಸಿದಂತಾಗುತ್ತದೆ. ಜೊತೆಗೆ, ಜಾರಕಿಹೊಳಿ ಸಹೋದರರ ಸವಾಲಿಗೆ ಉತ್ತರ ಕೊಟ್ಟಂತಾಗುತ್ತದೆ 20 ವರ್ಷಗಳ ನಂತರ ಬಳ್ಳಾ ರಿಯನ್ನು ವಶಪಡಿಸಿಕೊಳ್ಳುವ ಮೂಲಕ ಹೈ ಕಮಾಂಡ್‌ ಮಟ್ಟದಲ್ಲಿ ವರ್ಚಸ್ಸು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.

Advertisement

ಪ್ರತಿಷ್ಠೆಯೇ ಪಣಕ್ಕಿಟ್ಟಂತಿದೆ 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಪ್ರತಿಷ್ಠೆಯೇ ಪಣಕ್ಕಿಟ್ಟಂತಿದೆ ಈ ಚುನಾವಣೆ. ಮೇ ಹೊತ್ತಿಗೆ ಯಡಿಯೂರಪ್ಪ ಅವರ ರಾಜ್ಯಾಧ್ಯಕ್ಷ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ತಮ್ಮ ವರ್ಚಸ್ಸು ಹಾಗೂ ಪ್ರಭಾವವನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆಯಿದೆ. ಇನ್ನೊಂದೆಡೆ ಶ್ರೀರಾಮುಲು ಪರಿಶಿಷ್ಟ ಪಂಗಡದ ಪ್ರಬಲ ನಾಯಕರೆಂದೇ ಬಿಂಬಿತರಾ ದವರು. ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಉಪಮುಖ್ಯಮಂತ್ರಿ ಸ್ಥಾನ ಪಡೆಯಲಿದ್ದಾರೆ ಎಂದೇ ಗುರುತಿಸಿಕೊಂಡಿದ್ದ ಶ್ರೀರಾಮುಲು ಅವರು ಮತ್ತೆ ತಮ್ಮ ಸಾಮರ್ಥಯ, ಬಳ್ಳಾರಿ ಮೇಲಿನ ತಮ್ಮ ಹಿಡಿತವನ್ನು ದೃಢಪಡಿಸಬೇಕಿದೆ. ಲಿಂಗಾಯಿತ ಸಮುದಾಯದ ಅದ್ವಿತೀಯ ನಾಯಕರೆನಿಸಿದ ಯಡಿಯೂರಪ್ಪಗೆ ಜಮಖಂಡಿ
ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಸಮುದಾಯದಲ್ಲಿನ ತಮ್ಮ ಹಿಡಿತವನ್ನು ಇನ್ನಷ್ಟು ಬಿಗಿಪಡಿಸಿಕೊಳ್ಳಬೇಕಿದೆ. ಬಳ್ಳಾರಿಯಲ್ಲಿ ಚುನಾವಣಾ ಉಸ್ತುವಾರಿಯನ್ನು ವಹಿಸಿ ಕೊಂಡಿರುವ ಶ್ರೀರಾಮುಲು, ವಾಲ್ಮೀಕಿ ಸಮುದಾಯ ಪ್ರಬಲ ನಾಯಕರಾಗಿ ಹೊರಹೊಮ್ಮಲು ತಮ್ಮ ಸಮುದಾಯ ಬೆಂಬಲವನ್ನು ಮತ್ತೂಮ್ಮೆ ಸಾರಿ ಹೇಳಬೇಕಿದೆ.

● ಎಸ್‌.ಲಕ್ಷ್ಮೀ ನಾರಾಯಣ/ ಶಂಕರ ಪಾಗೋಜಿ/ ಎಂ. ಕೀರ್ತಿ ಪ್ರಸಾದ್   

Advertisement

Udayavani is now on Telegram. Click here to join our channel and stay updated with the latest news.

Next