Advertisement

ನಗರದಲ್ಲಿ ಉರಗ ಉಪಟಳಕ್ಕೆ ಬಾಲಕಿ ಬಲಿ 

12:42 PM Jun 17, 2017 | Team Udayavani |

ಬೆಂಗಳೂರು: ಹಾವು ಕಡಿತದಿಂದ ಐದು ವರ್ಷದ ಬಾಲಕಿ ಸಾವನ್ನಪ್ಪಿದ್ದು, ಆಕ್ರೋಶಗೊಂಡ ಸಂಬಂಧಿಗಳು ಹಾವನ್ನು ಕೊಂದು ಸುಟ್ಟು ಹಾಕಿರುವ ಘಟನೆ ಜೆ.ಸಿನಗರದ ಮುನಿರೆಡ್ಡಿ ಪಾಳ್ಯದಲ್ಲಿ ನಡೆದಿದೆ. ಶುಕ್ರವಾರ ನಸುಕಿನಲ್ಲಿ ಮನೆ ಮುಂಭಾಗದ ಮ್ಯಾನ್‌ಹೋಲ್‌ನಿಂದ ಹೊರಬಂದಿರುವ ಹಾವು ಮನೆಗೆ ನುಗ್ಗಿದ್ದು, ಹಾಲ್‌ನಲ್ಲಿ ಮಲಗಿದ್ದ ಸಹನಾ (5) ಬೆರಳಿಗೆ ಕಚ್ಚಿದೆ.

Advertisement

ನೋವಿನಿಂದ ಬಾಲಕಿ ಜೋರಾಗಿ ಕೂಗಿಕೊಂಡಿದ್ದಾಳೆ. ತಕ್ಷಣವೇ ಎಚ್ಚರಗೊಂಡ ಪೋಷಕರು ಬಾಲಕಿಯನ್ನು ವಿಚಾರಿಸಿದಾಗ ಹಾವು ಕಚ್ಚಿದ ಭಾಗದಲ್ಲಿ ರಕ್ತದ ಕಲೆ ಕಂಡಿದೆ. ಕೆಲಹೊತ್ತಿನಲ್ಲಿಯೇ ಬೆರಳು ಹೂದಿಕೊಂಡು ನೀಲಿ ಬಣ್ಣಕ್ಕೆ ತಿರುಗಿದೆ.ಇದರಿಂದ ಗಾಬರಿಗೊಂಡ ಪೋಷಕರು ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಬಾಯಿಂದ ನೊರೆ ಬಂದಿದ್ದು, ಮಾರ್ಗ ಮಧ್ಯೆಯೇ ಬಾಲಕಿ ಹಸುನೀಗಿದ್ದಾಳೆ. 

ಮಗುವನ್ನು ಪರೀಕ್ಷಿಸಿದ ವೈದ್ಯರು ಬಹುಶಃ ನಾಗರಹಾವು ಕಚ್ಚಿರುವುರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಬಾಲಕಿಯ ಮೃತದೇಹದೊಂದಿಗೆ ಬಂದ ಪೋಷಕರು ಹಾಗೂ ಸಂಬಂಧಿಗಳು ಬೆಳಗ್ಗೆ 8 ಗಂಟೆ ಸುಮಾರಿಗೆ ಮನೆಯಲ್ಲಿ ಅಡಗಿದ್ದ ಹಾವನ್ನು ಪತ್ತೆಹಚ್ಚಿ ಕೊಂದು ಸಮೀಪದಲ್ಲಿಯೇ ಸುಟ್ಟು ಹಾಕಿದ್ದಾರೆ. 

“ನಸುಕಿನ 3 ಗಂಟೆ ವೇಳೆಗೆ ಮಗು ಜೋರಾಗಿ ಕಿರುಚಿಕೊಂಡಳು. ಕೂಡಲೇ ಎದ್ದು ನೋಡಿದಾಗ ಮಗು ನೋವಿನಿಂದ ಅಳುತ್ತಿದ್ದಳು. ಈ ವೇಳೆ ಮಗುವಿನ ಬೆರಳಿನಲ್ಲಿ ರಕ್ತದ ಕಲೆ ಇರುವುದು ಕಂಡಿತು. ಕೆಲ ಹೊತ್ತಿನಲ್ಲಿಯೇ ಬೆರಳು ಹೂದಿಕೊಂಡು ನೀಲಿ ಬಣ್ಣಕ್ಕೆ ತಿರುಗಿತ್ತು. ಕೂಡಲೇ ಮಗುವನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲು ಮುಂದಾದೇವು. ಆದರೆ, ದುರಾದೃಷ್ಟವಶಾತ್‌ ಮಗು ಮಾರ್ಗ ಮಧ್ಯೆ ಮಗು ಮೃತಳಾದಳು” ಎಂದು ಹೇಳುತ್ತಾ ಬಾಲಕಿ ತಂದೆ ಆನಂದ್‌ ಕಣ್ಣಲ್ಲಿ ನೀರು ತುಂಬಿಕೊಂಡರು. 

ಉರಗಗಳ ಕುರಿತು ಎಚ್ಚರ ವಹಿಸಿ!: ಮಳೆಗಾಲದಲ್ಲಿ ಕಾಲುವೆಗಳು ತುಂಬಿ ಹರಿಯುವುದರಿಂದ ಮನೆಗಳಿಗೆ ನೀರು ಪ್ರವೇಶಿಸುವ ಘಟನೆಗಳು ನಡೆಯುತ್ತವೆ. ಈ ವೇಳೆ ನೀರಿನೊಂದಿಗೆ ಹಾವುಗಳು ಮನೆಗಳಿಗೆ ಪ್ರವೇಶಿಸುವ ಸಾಧ್ಯತೆಯಿದೆ. ಹೀಗಾಗಿ ನಾಗರಿಕರು ತೊಂದರೆ ಅನುಭವಿಸುವಂತಾಗಿದ್ದು,  ಇದನ್ನು ತಪ್ಪಿಸಲು ಪಾಲಿಕೆಯಿಂದ ಉರಗ ತಜ್ಞರ ತಂಡವನ್ನು ನೇಮಿಸಿಕೊಳ್ಳಲಾಗಿದೆ.

Advertisement

ಸಾರ್ವಜನಿಕರು ಹಾವು ಕಂಡರೆ  9880108801, 9448987920, 9980855720 ಅಥವಾ ಪಾಲಿಕೆಯ ಕೇಂದ್ರ ನಿಯಂತ್ರಣ ಕೊಠಡಿ 080-22221188 ಸಂಪರ್ಕಿಸಬಹುದಾಗಿದೆ.  ಜತೆಗೆ ಸಾರ್ವಜನಿಕರು ಹಾವುಗಳು ಬರದಂತೆ ಕೆಲವೊಂದು ಕ್ರಮಗಳನ್ನು ಕೈಗೊಳ್ಳಬೇಕು.

ಕಾಲುವೆ ಸುತ್ತಮುತ್ತಲಿನ ಭಾಗಗಳಲ್ಲಿ ವಾಸಿಸುವ ನಿವಾಸಿಗಳು ಮನೆ ಸುತ್ತಮುತ್ತಲಿನ ಭಾಗಗಳಲ್ಲಿ ಬೆಳ್ಳುಳ್ಳಿಯ ಸಿಪ್ಪೆಗಳನ್ನು ಹಾಕುವಂತಹ ಸುಲಭ ವಿಧಾನಗಳ ಮೂಲಕ ಹಾವುಗಳು ಬರುವುದನ್ನು ತಡೆಯಬಹುದಾಗಿದೆ. ಇದರೊಂದಿಗೆ ಮನೆಯೊಳಗೆ ಪ್ರವೇಶಿಸಿದಂತೆ ಬಾಗಿಲು ಹಾಗೂ ಕಿಟಕಿಗಳನ್ನು ಹಾಕಲಾಗಿದೆಯೇ ಎಂಬುದನ್ನು ಮಲಗುವ ಮೊದಲು ನೋಡಿಕೊಳ್ಳಬೇಕು ಎಂಬುದು ಉರಗ ತಜ್ಞರ ಸಲಹೆಯಾಗಿದೆ. 

ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮಗಳೇನು?
– ಶೂ ಮತ್ತು ಸಾಕ್ಸ್‌ಗಳನ್ನು ಎತ್ತರದ ಪ್ರದೇಶದಲ್ಲಿ ಇಡಬೇಕು 
– ಮನೆಯ ಗೋಡೆಗಳ ಮೇಲೆ ಬಳ್ಳಿ ಹಬ್ಬಿಸುವುದು ಕಡಿಮೆ ಮಾಡಿ
– ಮನೆಯ ಸುತ್ತಮುತ್ತಲಿನ ಭಾಗಳಲ್ಲಿ ಕಟ್ಟಿಗೆಗಳನ್ನು ಇರಿಸಬೇಡಿ
– ಮನೆಗೆ ಹೊಂದಿಕೊಂಡಂತೆ ಹೆಚ್ಚಿನ ಹೂ ಕುಂಡ ಇಡ‌ಬೇಡಿ
– ಮನೆಯಿಂದ ಮೋರಿಗೆ ಹೋಗುವ ಪೈಪ್‌ ಪರೀಕ್ಷಿಸುತ್ತಿರಿ
– ಹಾವು ಕಂಡ ಕೂಡಲೇ ಮನೆಯಲ್ಲಿರುವವರು ಸುರಕ್ಷಿತವಾದ ಸ್ಥಳಕ್ಕೆ ಹೋಗಿ
– ಅರಣ್ಯ, ಬಿಬಿಎಂಪಿ ಅಥವಾ ಹಾವು ಹಿಡಿಯುವವರಿಗೆ ಮಾಹಿತಿ ನೀಡಿ
– ಯಾವುದೇ ಕಾರಣಕ್ಕೂ ಹಾವನ್ನು ಕೊಲ್ಲಲು ಮುಂದಾಗಬೇಡಿ
– ಮನೆಯ ಸುತ್ತಮುತ್ತಲಿನ ಭಾಗದಲ್ಲಿ ಸ್ವತ್ಛತೆ ಕಾಪಾಡಿ

Advertisement

Udayavani is now on Telegram. Click here to join our channel and stay updated with the latest news.

Next