ಉಡುಪಿ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗ ಮೂಲದ ಪ್ರವೀಣ್ ಕುಮಾರ್ (20) ಮತ್ತು ಅಜಯ್ ಕುಮಾರ್ ( 19) ಅಪರಾಧಿಗಳೆಂದು ಘೋಷಿಸಿದ ಜಿಲ್ಲಾ ವಿಶೇಷ ನ್ಯಾಯಾಲಯ, ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಕುಂದಾಪುರ ಮೂಲದ ಬಾಲಕಿ ಹೆತ್ತವರೊಂದಿಗೆ ಶಿವಮೊಗ್ಗದಲ್ಲಿ ವಾಸಿಸುತ್ತಿದ್ದ ಸಂದರ್ಭ ಆರೋಪಿಗಳು ಪರಿಚಯವಾಗಿದ್ದರು. ಬಾಲಕಿ ತನ್ನ ಅಜ್ಜಿ ಮನೆ ಕುಂದಾಪುರದಿಂದ ಶಾಲೆಗೆ ಹೋಗುತ್ತಿದ್ದಳು. 2022ರ ನವೆಂಬರ್ ತಿಂಗಳ ಒಂದು ದಿನ ಆರೋಪಿಗಳಿಬ್ಬರು ಆಕೆಯನ್ನು ಪುಸಲಾಯಿಸಿ ಹಾಡಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದರು. ಬಾಲಕಿ ಪ್ರಜ್ಞೆ ತಪ್ಪಿ ಬಿದ್ದ ಬಳಿಕ ಆರೋಪಿತರು ಪರಾರಿಯಾಗಿದ್ದರು.
ಸಂಬಂಧಿಕರು ಬಾಲಕಿಯನ್ನು ಹುಡು ಕಾಡಿದಾಗ ಹಾಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಳು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಲೈಂಗಿಕ ಕಿರುಕುಳ ನೀಡಿರುವ ವಿಚಾರ ಬೆಳಕಿಗೆ ಬಂದಿತ್ತು. ಆಕೆಯ ಅಜ್ಜ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ಕುಂದಾಪುರ ಸಿಐ ಗೋಪಿಕೃಷ್ಣ ಕೆ.ಆರ್. ದೋಷರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಒಟ್ಟು 23 ಸಾಕ್ಷಿಗಳ ಪೈಕಿ 12 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, 21 ದಾಖಲೆಗಳನ್ನು ಸಾಕ್ಷ್ಯವಾಗಿ ಗುರುತಿಸ ಲಾಗಿತ್ತು. ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ 3 ವರ್ಷಗಳ ಜೈಲು ಶಿಕ್ಷೆ ಹಾಗೂ 14 ಸಾ.ರೂ. ದಂಡ ವಿಧಿಸಿದ್ದಾರೆ.
ದಂಡದ ಮೊತ್ತದಲ್ಲಿ 10 ಸಾ.ರೂ. ನೊಂದ ಬಾಲಕಿಗೆ, 4 ಸಾ.ರೂ. ಸರಕಾರಕ್ಕೆ ಪಾವತಿಸುವಂತೆ ಮತ್ತು ಸರಕಾರದಿಂದ ಸಂತ್ರಸ್ತೆಗೆ 50 ಸಾವಿರ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.