ಸಾಗರ: ಬೆಂಗಳೂರು ಮೂಲದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಖಾಸಗಿ ವಿದ್ಯಾಸಂಸ್ಥೆ ಮುಖ್ಯಸ್ಥರನ್ನು ಬಂಧಿಸಬೇಕು ಮತ್ತು ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಒತ್ತಾಯಿಸಿ ನ.12ರ ಮಂಗಳವಾರ ಪ್ರೊ. ಬಿ. ಕೃಷ್ಣಪ್ಪ ಬಣದ ದಲಿತ ಸಂಘರ್ಷ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ವರದಹಳ್ಳಿ ರಸ್ತೆಯಲ್ಲಿರುವ ಈ ವಸತಿ ಶಾಲೆ ಅನೇಕ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿತ್ತು. ಈ ಶಾಲೆಗೆ ಹೊರರಾಜ್ಯ ಮತ್ತು ನಮ್ಮ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಡ ಮಕ್ಕಳನ್ನು ಕರೆದುಕೊಂಡು ಬಂದು ಊಟ, ವಸತಿ, ಶಿಕ್ಷಣ ಕೊಡುವ ನೆಪದಲ್ಲಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಹಿಂದೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಜೈಲುಪಾಲಾಗಿದ್ದ ವ್ಯಕ್ತಿ ಪ್ರತಿಷ್ಟಿತ ಸಮುದಾಯದವರಾಗಿದ್ದು ರಾಜಕೀಯವಾಗಿ, ಆರ್ಥಿಕವಾಗಿ, ಪ್ರಬಲವಾಗಿದ್ದು ಬೇಗ ಹೊರಗೆ ಬಂದಿದ್ದಾರೆ. ಇತ್ತೀಚೆಗೆ ಅದೇ ಚಾಳಿಯನ್ನು ಮುಂದುವರೆಸಿಕೊಂಡು ಬಂದಿದ್ದು ಬೆಂಗಳೂರು ಮೂಲದ ವಿದ್ಯಾರ್ಥಿನಿಗೆ ಸುಮಾರು 4 ತಿಂಗಳಿನಿಂದ ಲೈಂಗಿಕ ಕಿರುಕುಳ ನೀಡುತ್ತಿರುವುದು ತಿಳಿದು ಬಂದಿದೆ. ಇಂತಹ ಪ್ರಕರಣಗಳು ವಸತಿ ಶಾಲೆಯಲ್ಲಿ ಸಾಕಷ್ಟು ನಡೆದಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿ ಅವರ ಪೋಷಕರು ಬಂದು ಗಲಾಟೆ ಮಾಡಿದಾಗ ಪೊಲೀಸರು ಬಂಧಿಸುತ್ತಾರೆ ಎಂದು ಹೆದರಿ ಆರೋಪಿ ಪರಾರಿಯಾಗಿರುತ್ತಾರೆ. ಈ ತನಕ ಅವರು ಎಲ್ಲಿದ್ದಾರೆ ಎಂಬ ಸುಳಿವು ಸಹ ಇಲ್ಲ. ದಲಿತ ಹೆಣ್ಣುಮಕ್ಕಳ ಶೋಷಣೆ ಮಾಡುತ್ತಿರುವ ಆರೋಪಿಯನ್ನು ಗಲ್ಲಿಗೇರಿಸಬೇಕು. ನೊಂದ ಬಾಲಕಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಂಚಾಲಕ ನಾಗರಾಜ್, ನಾರಾಯಣ ಮಂಡಗಳಲೆ, ಲಲಿತಮ್ಮ, ಶಿವಪ್ಪ, ನಾರಾಯಣ ಅರಮನೆಕೇರಿ, ಗೋಳಗೋಡು ನಾರಾಯಣ, ಮಂಜು ಖಂಡಿಕಾ, ನಾಗರತ್ನ, ಚಂದ್ರಪ್ಪ, ಮುರುಗೇಶ್, ರಾಮಣ್ಣ ಹಸಲರು ಇನ್ನಿತರರು ಹಾಜರಿದ್ದರು.