Advertisement

ಅಮೆರಿಕ ಕೊಟ್ಟಿತು ವೀಸಾ ಅಭಯ

06:35 AM Jan 10, 2018 | Team Udayavani |

ವಾಷಿಂಗ್ಟನ್‌: ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಟೆಕ್ಕಿಗಳ ಕನಸಿಗೆ ಕೊಳ್ಳಿ ಇಡಲಿದ್ದ ಎಚ್‌1ಬಿವೀಸಾ ನಿಯಮಗಳ ತಿದ್ದುಪಡಿ ಪ್ರಸ್ತಾವನೆಯನ್ನು ಅಮೆರಿಕ ಸರ್ಕಾರ ಸದ್ಯಕ್ಕೆ ಪಕ್ಕಕ್ಕಿಟ್ಟಿದೆ. 

Advertisement

ಮಂಗಳವಾರ, ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿದ ಅಮೆರಿಕ ಪೌರತ್ವ ಹಾಗೂ ವಲಸೆ ಸೇವೆಗಳ ಇಲಾಖೆ (ಯುಎಸ್‌ಸಿಐಎಸ್‌), ಎಚ್‌1ಬಿ ವೀಸಾ ನಿಯಮಾವಳಿಗಳ ತಿದ್ದುಪಡಿ ಕುರಿತಾದ ಪ್ರಸ್ತಾವನೆ ಪರಿಗಣಿಸುವ ವಿಚಾರ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ, ಅಮೆರಿಕದಿಂತ ಏಕಾಏಕಿ ಹೊರದಬ್ಬಲ್ಪಡುವ ಭೀತಿಗೆ ಸಿಲುಕಿದ್ದ 5ರಿಂದ 7.5 ಲಕ್ಷ ಭಾರತೀಯರು ನಿಟ್ಟುಸಿರು ಬಿಡುವಂತಾಗಿದೆ. 

ಈ ಬಗ್ಗೆ ಮತ್ತಷ್ಟು ಸ್ಪಷ್ಟನೆ ನೀಡಿದ ಯುಎಸ್‌ಸಿಐಎಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಜೊನಾಥನ್‌ ವಿಥಿಂಗ್ಟನ್‌, “”ಹಾಗೊಂದು ವೇಳೆ ನಾವು ವಲಸೆ ನಿಯಮ ಬದಲಾವಣೆ ತರಲು ಉದ್ದೇಶಿದರೂ ಅದು ಎಚ್‌1ಬಿ ವೀಸಾದಾರರನ್ನು ಬಾಧಿಸದು. “21ನೇ ಶತಮಾನದ ಅಮೆರಿಕದ ಸ್ಪರ್ಧಾತ್ಮಕ ಕಾಯ್ದೆ’ಯ ಕೆಲವು ಪರಿಚ್ಛೇದದನ್ವಯ ಹಾಲಿ ಎಚ್‌1ಬಿ ವೀಸಾಗಳ ಅವಧಿಯನ್ನು 6 ವರ್ಷಗಳಿಗೂ ಹೆಚ್ಚಿನ ಅವಧಿಗೆ ವಿಸ್ತರಿಸಲು ಅವಕಾಶವಿದೆ. ಅಂದು ಕಂಪನಿಗಳ ಮನವಿಯ ಮೇರೆಗೆ ತೀರ್ಮಾನಿಸಲಾಗುತ್ತದೆ’ ಎಂದರು. 

ಇನ್ನು, ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ “ಬೈ ಅಮೆರಿಕನ್‌, ಹೈರ್‌ ಅಮೆರಿಕನ್‌’ ಘೋಷಣೆ ಕುರಿತಂತೆ ಮಾತನಾಡಿದ ಜೊನಾಥನ್‌, “”ಅಧ್ಯಕ್ಷರ ಘೋಷ ವಾಕ್ಯಗಳನ್ನು ಪರಿಪಾಲನೆ ಮಾಡಲು ವಲಸೆ ನೀತಿಯಡಿ ಇರುವ ಎಚ್‌1ಬಿವೀಸಾ ನಿಯಮಗಳಿಗೆ ಹೊರತಾದ ಇನ್ನಿತರ ನಿಯಮಗಳ ಬದಲಾವಣೆ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next