ಮಂಗಳೂರು: ನಗರದ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ)ದಲ್ಲಿ ಸಾಂಪ್ರದಾಯಿಕ ಭತ್ತದ ತಳಿಗಳ ಅಧ್ಯಯನದ ಕ್ಷೇತ್ರೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸತ್ಯನಾರಾಯಣ ಬೆಳೇರಿ ಮಾತನಾಡಿ, ಕೆವಿಕೆಯಲ್ಲಿ ಕೈಗೊಂಡ ಹತ್ತು ಸಾಂಪ್ರದಾಯಿಕ ಭತ್ತದ ತಳಿಗಳ ವಿಶೇಷ ಗುಣಗಳ ಬಗ್ಗೆ ತಿಳಿಸಿ ನಮ್ಮ ಪ್ರದೇಶಕ್ಕೆ ಸೂಕ್ತವಾದ ತಳಿಗಳನ್ನು ಆಯ್ಕೆಮಾಡಿ ರೈತರಿಗೆ ಹಾಗೂ ಸಾಮಾನ್ಯ ಜನರಿಗೆ ಇವುಗಳ ಪ್ರಯೋಜನ ಸಿಗಬೇಕಾದರೆ ವಿಜ್ಞಾನಿಗಳಿಗೆ ರೈತರ ಸಹಕಾರ ತುಂಬಾ ಮುಖ್ಯ ಎಂದರು.
ಕೆವಿಕೆ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ| ಟಿ.ಜೆ.ರಮೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಜಿಲ್ಲೆಯ ಪ್ರಗತಿಪರ ಕೃಷಿಕರ ಸಾಧನೆಗಳನ್ನು ಸ್ಮರಿಸಿ ಅಪೌಷ್ಟಿಕತೆ ಹಾಗೂ ಆರೋಗ್ಯ ಸಮಸ್ಯೆ ನಿವಾರಣೆಗೆ ಔಷಧೀಯ ಗುಣಗಳನ್ನು ಹೊಂದಿರುವ ಭತ್ತದ ತಳಿಗಳನ್ನು ಹೆಚ್ಚಾಗಿ ಸ್ವಬಳಕೆಗೆ ಬೆಳೆದು ಉಪಯೋಗಿಸಿ, ಅನಂತರ ಸೂಕ್ತ ಪ್ರದೇಶಗಳಿಗೆ ದೊರಕುವಂತೆ ಮಾಡಲು ಎಲ್ಲ ರೈತರಿಗೆ ಉತ್ತೇಜನ ನೀಡಿದರು.
ಕಾರ್ಯಕ್ರಮದ ಆಯೋಜಕ ಡಾ| ಮಲ್ಲಿಕಾರ್ಜುನ ಎಲ್ ಪ್ರಸ್ತಾವಿಸಿದರು. ಡಾ| ಹರೀಶ್ ಶೆಣೈ ಸ್ವಾಗತಿಸಿ, ಡಾ| ಕೇದಾರನಾಥ ವಂದಿಸಿದರು.
ರಾಜ್ಯ ರೈತ ಸಂಘದ ಸಂಘಟನ ಕಾರ್ಯದರ್ಶಿ ಮನೋಹರ ಶೆಟ್ಟಿ, ಪ್ರಗತಿಪರ ಕೃಷಿಕರಾದ ಕೆನ್ಯೂಟ್ ಅರೆನ್ಹಾ, ಕೇಶವ ಶೆಟ್ಟಿ, ಜಯಶೀಲ ಶೆಟ್ಟಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಮೋಹನ್ ಕುಮಾರ, ತೋಟಗಾರಿಕೆ ವಿಜ್ಞಾನಿ ಡಾ| ರಶ್ಮಿ ಪಾಲ್ಗೊಂಡರು.