ಮುಂಬಯಿ: ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಇತ್ತೀಚೆಗೆ ರವಾನಿಸಲಾಗಿದ್ದ ಸರಣಿ ಹುಸಿ ಬಾಂಬ್ ಬೆದರಿಕೆ ಸಂದೇಶಗಳ ಜತೆಗೆ ರೈಲ್ವೇ, ಪ್ರಧಾನಮಂತ್ರಿ ಕಚೇರಿ, ಸರಕಾರಿ ಅಧಿಕಾರಿಗಳಿಗೆ 354ಕ್ಕೂ ಅಧಿಕ ಬೆದರಿಕೆ ಸಂದೇಶ ಕಳುಹಿಸಿದ ಮಹಾರಾಷ್ಟ್ರದ ಜಗದೀಶ್ ಉಯಿಕೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಗೋಂಡಿಯಾ ಜಿಲ್ಲೆಯ ನಿವಾಸಿ ಯಾಗಿರುವ ಜಗದೀಶ್ ಭಯೋತ್ಪಾದನೆಗೆ ಸಂಬಂಧಿಸಿ “ಆತಂಕವಾದ್-ಏಕ್ ತೂಫಾನಿ ರಾಕ್ಷಸ್’ ಎಂಬ ಪುಸ್ತಕ ಬರೆದಿದ್ದಾನೆ. ಅದನ್ನು ಪ್ರಧಾನ ಮಂತ್ರಿ ಕಚೇರಿಯು ಪ್ರಕಟಿಸಬೇಕು ಎಂದು ಅನೇಕ ಬಾರಿ ಪಿಎಂಒಗೆ, ರಾಜಕಾರಣಿಗಳಿಗೆ, ಸರಕಾರಿ ಅಧಿಕಾರಿಗಳಿಗೆ ಇ-ಮೇಲ್ ಮಾಡಿದ್ದ. ಆದರೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದು ಹಾಗೂ ಹತಾಶೆಗೊಂಡು ಎಲ್ಲರಿಗೂ ಹುಸಿ ಬಾಂಬ್ ಬೆದರಿಕೆಗಳನ್ನು ಕಳುಹಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಜನವರಿಯಿಂದಲೂ ಆತ ಇಂತಹ ಬೆದರಿಕೆ ಸಂದೇಶ ಕಳುಹಿಸುತ್ತಿದ್ದ. ಯುಪಿ ಅಡ್ರೆಸ್ ಮೂಲಕ ಈತನೇ ಸಂದೇಶ ಕಳುಹಿಸುತ್ತಿರುವುದು ಎಂಬುದನ್ನು ಪತ್ತೆ ಹಚ್ಚಲಾಗಿತ್ತು. ಆದರೆ ಆತ ತಲೆಮರೆಸಿಕೊಂಡಿದ್ದ. ಈಗ ದಿಲ್ಲಿಯಿಂದ ನಾಗ್ಪುರಕ್ಕೆ ಬಂದಾಗ ಆತನನ್ನು ಬಂಧಿಸಲಾಗಿದ್ದು, ಮೊಬೈಲ್, ಲ್ಯಾಪ್ಟಾಪ್ ಸಹಿತ ಹಲವು ವಸ್ತುಗಳನ್ನು ಆತನಿಂದ ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ. ಭಯೋತ್ಪಾದನೆಗೆ ಸಂಬಂಧಿಸಿ ಇಂಟರ್ನೆಟ್ನಲ್ಲಿ ಸಿಗುವ ಮಾಹಿತಿಗಳನ್ನೇ ಆಧರಿಸಿ ಜಗದೀಶ್ ಪುಸ್ತಕ ಬರೆದಿದ್ದು, ಪ್ರಚಾರ ಪಡೆಯಲು ಇಂತಹ ಹುಚ್ಚಾಟ ಮಾಡಿದ್ದಾನೆ. ಈ ಹಿಂದೆ 2021ರಲ್ಲಿಯೂ ಇಂಥದ್ದೇ ಪ್ರಕ ರ ಣಲ್ಲಿ ಆತನನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಏನಿದು ಪ್ರಕರಣ?
-ಭಯೋತ್ಪಾದನೆ ಬಗ್ಗೆ ಪುಸ್ತಕ ಬರೆದಿದ್ದ ಜಗದೀಶ್ ಉಯಿಕೆ
-ಪ್ರಧಾನಿ ಕಚೇರಿಯೇ ಪುಸ್ತಕ ಪ್ರಕಟಿಸಲಿ ಎಂದು ಪಟ್ಟು
-ಅಧಿಕಾರಿಗಳಿಗೂ ಈ ಬಗ್ಗೆ ಕೋರಿಕೆ ಇ-ಮೇಲ್ ರವಾನೆ
-ಪ್ರತ್ಯುತ್ತರ ಬಾರದ್ದಕ್ಕೆ ಸಿಟ್ಟಿಗೆದ್ದು ಬೆದರಿಕೆ ಸಂದೇಶ