ಶ್ರೀನಗರ: ಪಾಕಿಸ್ಥಾನದ ಉಗ್ರ ಸಂಘಟನೆ ಲಷ್ಕರ್-ಎ-ತಯ್ಯಬಾದ ಹೊಸ ರೂಪ ‘ದ ರೆಸಿಸ್ಟೆನ್ಸ್ ಫೋರ್ಸ್ (ಟಿಆರ್‌ಎಫ್) ಕರಾಳ ಹಸ್ತ ಚಾಚಲಾರಂಭಿಸಿದೆ.
ಶ್ರೀನಗರದ ಹೊರ ವಲಯದ ಸೌರಾ ಎಂಬ ಮಾರುಕಟ್ಟೆ ಪ್ರದೇಶದಲ್ಲಿ ರಮ್ಜಾನ್ ಉಪವಾಸ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಬ್ರೆಡ್ ಖರೀದಿ ಮಾಡುತ್ತಿದ್ದ ಬಿಎಸ್‌ಎಫ್ ನ ಇಬ್ಬರು ಯೋಧರನ್ನು ಟಿಆರ್‌ಎಫ್ ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಬುಧವಾರ ಸಂಜೆಯ ವೇಳೆಗೆ ಈ ಘಟನೆ ನಡೆದಿದೆ.
ಹುತಾತ್ಮರಾದ ಯೋಧರನ್ನು ಪಶ್ಚಿಮ ಬಂಗಾಳದ ಮುರ್ಶಿರಾಬಾದ್ ಜಿಲ್ಲೆಯ ಜಿಯಾ-ಉಲ್-ಹಕ್ (34) ಮತ್ತು ರಾಣಾ ಮಂಡಲ್ (37) ಎಂದು ಗುರುತಿಸಲಾಗಿದೆ.
ಅವರಿಬ್ಬರೂ ಸ್ನೇಹಿತರಾಗಿದ್ದು, ಪಂಡಾಕ್ ಕ್ಯಾಂಪ್‌ನಲ್ಲಿರುವ ಬಿಎಸ್‌ಎಫ್ ನ 37ನೇ ಬೆಟಾಲಿಯನ್‌ನಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. 2019ರ ಆ.5ರಿಂದ ಅವರಿಬ್ಬರು ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದರು. ಅವರಿಬ್ಬರು ಪೋಷಕರು, ಪತ್ನಿ, ಮಕ್ಕಳನ್ನು ಅಗಲಿದ್ದಾರೆ.
ಪೊಲೀಸ್ ಹುತಾತ್ಮ: ಪುಲ್ವಾಮಾ ಜಿಲ್ಲೆಯ ಪೆರ್ಕೂ ಬ್ರಿಡ್ಜ್ ಸಮೀಪ ಸಿಆರ್‌ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ರ ಜಂಟಿ ಗಸ್ತು ಪಡೆಯ ಮೇಲೆ ಉಗ್ರರು ಗುಂಡು ಹಾರಿಸಿದ ಪರಿಣಾಮ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಮತ್ತೂಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂವರ ಸೆರೆ: ಭದ್ರತಾ ಪಡೆಗಳು ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಕಾರ್ಯಾಚರಣೆ ನಡೆಸಿ, ಉಗ್ರ ಸಂಘಟನೆಗೆ ಸೇರಿದ್ದ ಮೂವರನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಈ ಮೂವರು ಲಷ್ಕರ್ ಇ-ತಯ್ಯಬಾ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಯಾಗಿದ್ದರು. ಕುಪ್ವಾರಾ ಜಿಲ್ಲೆಯ ಸೋಂಗಮ್‌ನಲ್ಲಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಇವರು ಸೆರೆ ಸಿಕ್ಕಿದ್ದಾರೆ.