Advertisement

Mangaluru: ಟಾಸ್ಕ್ ಫೋರ್ಸ್‌ನೊಂದಿಗೆ ನುಗ್ಗಿ: ಉಪಲೋಕಾಯುಕ್ತ ನ್ಯಾ| ಮೂ| ಬಿ.ವೀರಪ್ಪ

12:35 AM Dec 04, 2024 | Team Udayavani |

ಮಂಗಳೂರು: ಅಕ್ರಮವಾಗಿ ಗಣಿಗಾರಿಕೆ ನಿರತರ ವಿರುದ್ಧ ಸಂಬಂಧಪಟ್ಟ ಇಲಾಖೆಯವರು ತಮ್ಮ ಟಾಸ್ಕ್ ಫೋರ್ಸ್‌ನೊಂದಿಗೆ ನುಗ್ಗಬೇಕು. ಆಗ ಮಾತ್ರ ಅವರನ್ನು ನಿಯಂತ್ರಿಸಲು ಸಾಧ್ಯ ಎಂದು ಉಪಲೋಕಾಯುಕ್ತ ನ್ಯಾ| ಮೂ| ಬಿ.ವೀರಪ್ಪ ತಿಳಿಸಿದ್ದಾರೆ.

Advertisement

ಮರಳುಗಾರಿಕೆ ಸೇರಿದಂತೆ ಅಕ್ರಮ ಗಣಿಗಾರಿಕೆ ವಿರುದ್ಧವೂ ಸರಕಾರಕ್ಕೆ ವರದಿ ಸಲ್ಲಿಸುತ್ತೇವೆ. ಈ ಹಿಂದಿನ ಕೆಲವು ಪ್ರಕರಣಗಳಲ್ಲಿ ಪ್ರಭಾವಿಗಳು ಶಿಕ್ಷೆ ಅನುಭವಿಸಿದ್ದಾರೆ ಎಂದರು.

ಲೋಕಾಯುಕ್ತ ಸಂಸ್ಥೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಲ್ಲಿಸಲಾದ ಒಟ್ಟು 198 ದೂರುಗಳ ಪೈಕಿ ಎರಡು ದಿನಗಳಲ್ಲಿ 81 ಇತ್ಯರ್ಥವಾಗಿದೆ ಎಂದು ತಿಳಿಸಿದರು.

ಪಚ್ಚನಾಡಿಯಲ್ಲಿ ಸುಮಾರು 9 ಲಕ್ಷ ಟನ್‌ ತ್ಯಾಜ್ಯ ಸಂಗ್ರಹವಾಗಿದ್ದು ಅದರಲ್ಲಿ 1 ಲಕ್ಷ ಟನ್‌ ಮಾತ್ರ ವಿಲೇವಾ ರಿಯಾಗಿದೆ. ಉಳಿದ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ತ್ಯಾಜ್ಯದಿಂದ ಸುತ್ತಲಿನ ಪರಿಸರದ ಮೇಲೆ ಆಗಿರುವ ದುಷ್ಪರಿಣಾಮಗಳ ಬಗ್ಗೆ ವರದಿ ನೀಡಲು ಸೂಚಿಸಿದ್ದು, ಸ್ವಯಂಪ್ರೇರಿತವಾಗಿ ಪ್ರಕರಣ ದಾಖ ಲಿಸಿಕೊಳ್ಳಲಾಗಿದೆ ಎಂದು ಹೇಳಿದರು.

Advertisement

ಲೋಕಾಯುಕ್ತ ಅಧಿಕಾರಿಗಳ ಮೇಲೂ ಕಣ್ಣು
ಲೋಕಾಯುಕ್ತ ಅಧಿಕಾರಿಗಳು, ಪೊಲೀಸರು ಸೇರಿದಂತೆ ಎಲ್ಲರ ಮೇಲೆಯೂ ನಾವೇ ನಿಗಾ ಇಡುತ್ತೇವೆ. ಸ್ವಲ್ಪ ಮಾಹಿತಿ ಸಿಕ್ಕಿದರೂ ನಿಗಾ ವಹಿಸುತ್ತೇವೆ. ಈಗಾಗಲೇ ಆರು ಮಂದಿಯನ್ನು ಸಂಸ್ಥೆಯಿಂದ ಹೊರಗೆ ಹಾಕಿದ್ದೇವೆ. ಇಲಾಖಾ ತನಿಖೆ ಕೂಡ ನಡೆಸುತ್ತೇವೆ. ಕಾನೂನು ಬೇರೆಯವರಿಗೆ ಅನ್ವಯವಾಗುವಂತೆ ಲೋಕಾಯುಕ್ತ ಪೊಲೀಸರು, ಇತರ ಪೊಲೀಸರಿಗೂ ಅನ್ವಯವಾಗುತ್ತದೆ. ಸರಕಾರಿ ನೌಕರರೆಲ್ಲರಿಗೂ ಲೋಕಾಯುಕ್ತ ಅನ್ವಯವಾಗುತ್ತದೆ. ಲೋಕಾಯುಕ್ತ ಅಧಿಕಾರಿಗಳು ಕೂಡ ಸಾರ್ವ ಜನಿಕ ಅಧಿಕಾರಿಗಳೇ ಎಂದು ಉಪಲೋಕಾಯುಕ್ತರು ತಿಳಿಸಿದರು.

ಮೆಷಿನ್‌ ಗನ್‌ ಕೊಟ್ಟರೆ ಫೈರ್‌ !
ಸಾರ್ವಜನಿಕರಿಗೆ ತೊಂದರೆಯಾಗು ವಲ್ಲಿ ಲೋಕಾಯುಕ್ತ ಇದೆ. ಲೋಕಾ ಯುಕ್ತ ಯಾರ ನಿಯಂತ್ರಣದಲ್ಲಿಯೂ ಇಲ್ಲ, ಸರಕಾರದ ಅಡಿಯಾಳಲ್ಲ. ಆದರೆ ಲೋಕಾಯುಕ್ತ ಬಲಾಡ್ಯರಾಗುವುದು ಯಾರಿಗೂ ಇಷ್ಟವಿಲ್ಲ. ಮೆಷಿನ್‌ ಗನ್‌ ಕೊಟ್ಟರೆ ಫೈರ್‌ ಮಾಡಬಹುದು. ಆದರೆ ಯಾವುದೋ ಕಾರ್ಯಕ್ಕೆ ಬಾರದ ಗನ್‌ ನೀಡಿದರೆ ಒದ್ದಾಡಿ ಹೋರಾಟ ಮಾಡಬೇಕಾದೀತು. ಲೋಕಾಯುಕ್ತ ಪೊಲೀಸ್‌ ಸಹಿತ ಸಿಬಂದಿ ಕೊರತೆಯೂ ಇದೆ ಎಂದು ಅವರು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅಧಿಕ ಬಡ್ಡಿ ನೀಡುತ್ತೇವೆ, ಫ್ಲ್ಯಾಟ್‌, ಕಾರು ನೀಡುತ್ತೇವೆ ಎಂದು ಯಾರಾದರೂ ಹೇಳಿದರೆ ಅದನ್ನು ನಂಬಿ ಕೆಲವರು ಹಣ ಹೂಡುತ್ತಾರೆ. ಬೆಂಗಳೂರಿನಲ್ಲೂ ಇಂತಹ ಪ್ರಕರಣಗಳಿವೆ. ಇಂತಹ ವಂಚನೆಗಳ ಬಗ್ಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದರು.

ಅರ್ಧತಾಸಿನಲ್ಲೇ ಆ್ಯಂಬುಲೆನ್ಸ್‌ ಮಂಜೂರು !
ಶಿರಾಡಿಯಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿರುವುದರಿಂದ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್‌ ನೀಡುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದು ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಸೂಚಿಸಲಾಯಿತು. ಅವರು ಅರ್ಧ ತಾಸಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಯವರ ಮೂಲಕ ಆ್ಯಂಬುಲೆನ್ಸ್‌ ಮಂಜೂರು ಮಾಡಿಸಿದ್ದಾರೆ ಎಂದ ಉಪ ಲೋಕಾಯುಕ್ತರು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕೆ ಕೋಟೆಕಾರು ನಗರ ಪಂ. ಮುಖ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಂಡು ವರದಿ ನೀಡಲು ಇಲಾಖೆಯ ಮೇಲಧಿಕಾರಿಗಳಿಗೆ ಸೂಚಿಸಿದ್ದಾಗಿ ತಿಳಿಸಿದರು.

ಸಂಬಳ ತಗೊಳ್ತೀರಿ, ಕೆಲಸ ಮಾಡುವುದಿಲ್ಲ
ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಉಪಲೋಕಾಯುಕ್ತ
ಮಂಗಳೂರು: ಸಂಬಳ ತಗೊಳ್ತೀರಿ, ಕೆಲಸ ಮಾಡುವುದಿಲ್ಲ. ಸರಕಾರಿ ಜಾಗ ಅತಿಕ್ರಮಣವಾದರೆ ಸುಮ್ಮನಿರುತ್ತೀರಿ. ಕೆಲವರು ನೋಟಿಸ್‌ ಕೊಟ್ಟು ಸುಮ್ಮನಿರುತ್ತೀರಿ.ಅನ್ಯಾಯ ಕ್ಕೊಳಗಾದವರು ದೂರು ನೀಡಿ ವರ್ಷಗಳಾದರೂ ಕ್ರಮ ಕೈಗೊಳ್ಳದೆ ಕತೆ ಹೇಳಿ ತಪ್ಪಿಸಿಕೊಳ್ಳುತ್ತೀರಿ…

– ಇದು ಉಪಲೋಕಾಯುಕ್ತ ನ್ಯಾ| ಮೂ| ಬಿ.ವೀರಪ್ಪ ಅವರು ಮಂಗಳವಾರದಂದು ಜಿ.ಪಂ.ನಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಜನರ ದೂರು ವಿಚಾರಣೆ ವೇಳೆ ಅಧಿಕಾರಿ ಗಳನ್ನು ಈ ರೀತಿ ತರಾಟೆಗೆ ತೆಗೆದುಕೊಂಡರು.

ಎರಡನೇ ದಿನದ ದೂರು ಅರ್ಜಿ ವಿಚಾರಣೆ ವೇಳೆ ಅವರು, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೆಲವು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆಯೂ ಮೇಲಧಿಕಾರಿಗಳಿಗೆ ಸೂಚಿಸಿದರು.

ಶ್ಮಶಾನಕ್ಕೆ ಮೀಸಲಿಟ್ಟ ಜಾಗದ ರಕ್ಷಣೆಗೆ ಕ್ರಮ ಕೈಗೊಳ್ಳದ ನೆರಿಯ ಗ್ರಾ.ಪಂ. ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು. ಸುಳ್ಯದಲ್ಲಿ ಸರಕಾರಿ ಜಾಗ ಅತಿಕ್ರಮಣ ನಡೆದ ಕುರಿತಾದ ದೂರು ಸಂಬಂಧ ಕೂಡಲೇ ಸ್ಥಳ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದರು.

ಸುಳ್ಯ ನಗರ ಪಂ.ನಲ್ಲಿ ಕುಡಿಯುವ ನೀರು ಕಲುಷಿತಗೊಂಡಿ ರುವ ಕುರಿತಾದ ದೂರು ಸ್ವೀಕರಿಸಿದ ಲೋಕಾಯುಕ್ತರು, ಕೂಡಲೇ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇನ್ನೊಂದು ದೂರಿನ ವಿಚಾರಣೆ ವೇಳೆ ಪಿಡಿಒರವರ ಪರವಾಗಿ ತಾನೇ ಕ್ಷಮೆ ಕೇಳುವುದಾಗಿ ಉಪಲೋಕಾಯುಕ್ತರು ತಿಳಿಸಿದರು.

94 ಸಿ ಅರ್ಜಿಯ ದಾಖಲೆಗೆ ಸಂಬಂಧಿ ಸಿ ಪುತ್ತೂರಿನ ವ್ಯಕ್ತಿಯೊಬ್ಬರು 2023ರಲ್ಲೇ ಕಂದಾಯ ಇಲಾಖೆಯಿಂದ ಮಾಹಿತಿ ಕೇಳಿದ್ದರು. ಆದರೆ ಮಾಹಿತಿ ನೀಡಿರಲಿಲ್ಲ. ಲೋಕಾಯುಕ್ತರಿಗೆ ದೂರು ನೀಡಿದ ಅನಂತರ ದಾಖಲೆಗಳು ಮನೆಗೆ ತಲುಪಿಸಲಾಗಿತ್ತು ಎಂದು ದೂರುದಾರರು ಉಪಲೋಕಾಯುಕ್ತರ ಗಮನಕ್ಕೆ ತಂದರು.

ತೆಂಕ ಕಜೆಕಾರು ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆಗಿನ ದೂರಿನ ವಿಚಾರಣೆ ನಡೆಸಿದ ಉಪಲೋಕಾಯುಕ್ತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next