Advertisement

ನಾಯಿಗಳನ್ನು ಕೂಡಿಹಾಕದಿರುವುದೇ ಸಮಸ್ಯೆಗೆ ಕಾರಣ?

06:52 AM Jun 26, 2019 | Team Udayavani |

ಬೆಂಗಳೂರು: ಬೀದಿ ನಾಯಿಗಳ ದಾಳಿ ನಿಯಂತ್ರಿಸುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಇತ್ತೀಚೆಗೆ ನೀಲಸಂದ್ರದ ರೋಸ್‌ಗಾರ್ಡ್‌ನಲ್ಲಿ ಹೆಣ್ಣು ಮಗುವಿನ ಮೇಲೆ ನಾಯಿಗಳು ದಾಳಿ ಮಾಡಿದ್ದು, ಮಗು ಗಾಯಗೊಂಡಿದೆ.

Advertisement

ಹಿಂದಿನ ವರ್ಷ ವಿಭೂತಿಪುರದಲ್ಲಿ ನಾಯಿಗಳ ದಾಳಿಯಿಂದ 11 ವರ್ಷದ ಬಾಲಕ ಮೃತಪಟ್ಟ ಸಂದರ್ಭದಲ್ಲಿ ಬಿಬಿಎಂಪಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಭರವಸೆ ನೀಡಿತ್ತು. ಹತ್ತು ವರ್ಷಗಳ ಹಿಂದೆಯೂ ಚಂದ್ರಲೇಔಟ್‌ನಲ್ಲಿ ಸಣ್ಣ ವಯಸ್ಸಿನ ಹೆಣ್ಣು ಮಗುವೊಂದು ಬೀಡಾಡಿ ನಾಯಿಗಳ ದಾಳಿಯಿಂದ ಮೃತಪಟ್ಟಿತ್ತು.

ಇಂತಹ ಹೃದಯ ವಿದ್ರಾವಕ ಘಟನೆಗಳ ನಡುವೆಯೇ ಈಗ ಮತ್ತೆ ಸಣ್ಣ ಮಕ್ಕಳ ಮೇಲೆ ನಗರದಲ್ಲಿ ನಾಯಿಗಳ ದಾಳಿಗಳು ಮರುಕಳಿಸುತ್ತಿವೆ. ಆದರೆ, ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಬಿಬಿಎಂಪಿಗೆ ಕಾನೂನಿನ ತೊಡಕು ಉಂಟಾಗಿದೆ.

ನಾಯಿಗಳನ್ನು ಕೂಡಿಹಾಕುವಂತಿಲ್ಲ: “ಸುಪ್ರೀಂ ಕೋರ್ಟ್‌ ಆದೇಶದಂತೆ ನಾಯಿಗಳನ್ನು ಎಲ್ಲಿಯೂ ಕೂಡಿಹಾಕುವಂತಿಲ್ಲ. ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಯುವ 72 ಗಂಟೆಗಳ ಸಮಯದಲ್ಲಿ ಮಾತ್ರ ನಾಯಿಗಳನ್ನು ಕೂಡಿಹಾಕಿಕೊಳ್ಳಬಹುದು. ಇದರ ಹೊರತಾಗಿ ಯಾವುದೇ ಕಾರಣಕ್ಕೂ ನಾಯಿಗಳನ್ನು ಕೂಡಿಹಾಕುವ ಅವಕಾಶವಿಲ್ಲ.

ಇದು ಸಹ ವ್ಯಾಘ್ರ ನಾಯಿಗಳನ್ನು ನಿಯಂತ್ರಿಸಲು ಸಾಧ್ಯವಾಗದೆ ಇರುವುದಕ್ಕೆ ಕಾರಣ’ ಎನ್ನುತ್ತಾರೆ ಬಿಬಿಎಂಪಿಯ ಅಧಿಕಾರಿಗಳು. ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ಲಸಿಕೆಯನ್ನು ನೀಡಲಾಗುತ್ತದೆ ಹಾಗೂ ಸಾರ್ವಜನಿಕರ ಮೇಲೆ ದಾಳಿ ಮಾಡುವ ನಾಯಿಗಳನ್ನು ಗುರುತಿಸಿ ಹತ್ತು ದಿನಗಳ ಮಟ್ಟಿಗೆ ಪರಿವೀಕ್ಷಣೆಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಇದರ ಹೊರತಾಗಿ ಬಿಬಿಎಂಪಿಗೆ ನಾಯಿಗಳನ್ನು ಕೂಡಿಹಾಕುವ ಅಥವಾ ಪ್ರತ್ಯೇಕ ಸ್ಥಳಗಳಲ್ಲಿ ಇರಿಸುವ ಅವಕಾಶ ಇಲ್ಲ. ಹೀಗಾಗಿ, ನಾಯಿಗಳ ಸಂತತಿಯನ್ನು ಕಡಿಮೆ ಮಾಡುವ ಯೋಜನೆಗಳನ್ನು ಬಿಬಿಎಂಪಿ ರೂಪಿಸಿಕೊಳ್ಳುತ್ತಿದೆ.

ಈ ಹಿಂದೆ ಗೋಶಾಲೆಗಳನ್ನು ಸ್ಥಾಪಿಸಿರುವ ರೀತಿಯಲ್ಲೇ ನಗರದ ನಾಲ್ಕು ಕಡೆಗಳಲ್ಲಿ ನಾಯಿಗಳಿಗೆ ಕೇಂದ್ರವನ್ನು ಸ್ಥಾಪಿಸಲು ಬಿಬಿಎಂಪಿ ಚಿಂತಿಸಿತ್ತು. ಆದರೆ, ಕಾನೂನಿನ ತೊಡಕಿನಿಂದ ಅದೂ ಕೈಗೂಡಿಲ್ಲ.

ಜುಲೈ. 1ಕ್ಕೆ ಅರ್ಜಿ ವಿಚಾರಣೆ: ಸಾರ್ವಜನಿಕರ ಮೇಲೆ ದಾಳಿ ಮಾಡುವ ನಾಯಿಗಳನ್ನು ಏನು ಮಾಡಬೇಕು, ಇದಕ್ಕೆ ಕಾನೂನಿನ ಮೂಲಕ ಕಂಡುಕೊಳ್ಳಬಹುದಾದ ಪರಿಹಾರಗಳ ಬಗ್ಗೆ ಸಲಹೆ ನೀಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಾಣಿ ದಯಾಸಂಘಗಳು ಅರ್ಜಿಸಲ್ಲಿಸಿವೆ. ಇದರ ಅರ್ಜಿ ವಿಚಾರಣೆ ಜುಲೈ.1ಕ್ಕೆ ಬರಲಿದೆ. ಸುಪ್ರೀಂ ಕೋರ್ಟ್‌ ನೀಡುವ ತೀರ್ಪು ನೋಡಿಕೊಂಡು ಮುಂದಿನ ಯೋಜನೆ ರೂಪಿಸಲಾಗುವುದು ಎಂದು ಬಿಬಿಎಂಪಿಯ ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next