Advertisement

ಪಿಪಿಪಿ ಮಾದರಿ ಸಬ್‌ಅರ್ಬನ್‌?

06:00 AM Jun 20, 2020 | Lakshmi GovindaRaj |

ಬೆಂಗಳೂರು: ಬಹು ನಿರೀಕ್ಷಿತ ಉಪನಗರ ರೈಲು ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲು ಸರ್ಕಾರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಶೀಘ್ರ ಸಚಿವ ಸಂಪುಟದ ಮುಂದೆ ಯೋಜನೆಗೆ ಸಂಬಂಧಿಸಿದ  ಪ್ರಸ್ತಾವನೆ ಬರುವ ಸಾಧ್ಯತೆ ಇದೆ. ಹಾಗೊಂದು ವೇಳೆ ಅನುಮೋದನೆಗೊಂಡರೆ, ದೇಶದಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಸಹಭಾಗಿತ್ವದಲ್ಲಿ ಉಪನಗರ ರೈಲು ಆಸ್ತಿತ್ವಕ್ಕೆ ಬರಲಿದೆ.

Advertisement

ಕೇಂದ್ರದ ಸೂಚನೆಯಂತೆ ಯೋಜನೆ ಪರಿಷ್ಕರಿಸಿ ಸುಮಾರು 18,620 ಕೋಟಿ ಮೊತ್ತದ ಯೋಜನೆಯಲ್ಲಿ ರೋಲಿಂಗ್‌ ಸ್ಟಾಕ್‌ (ಬೋಗಿಗಳು-ರೈಲು)  ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಖಾಸಗಿ- ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿ ಯಲ್ಲಿ ಕೈಗೆತ್ತಿಕೊಳ್ಳಲು ಚಿಂತನೆ  ನಡೆದಿದೆ. ಇದಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು, ಕೇಂದ್ರಕ್ಕೆ ಕಳುಹಿಸುವ ಸಂಬಂಧ ಚರ್ಚೆ ನಡೆದಿದೆ. ಈ ನಿಟ್ಟಿನಲ್ಲಿ ಸರ್ಕಾರ ಯೋಜನೆಗಾಗಿ ನಿರ್ಮಿಸಿದ ಮೂಲಸೌಕರ್ಯ ಮತ್ತು ಅದಕ್ಕಾಗಿ ಬಳಸಿದ ಭೂಮಿಯನ್ನು ಸುಮಾರು 30 ವರ್ಷ ಗುತ್ತಿಗೆ ರೂಪದಲ್ಲಿ ಖಾಸಗಿ ಕಂಪನಿಗಳಿಗೆ ಬಳಕೆಗಾಗಿ ನೀಡಲಾಗುತ್ತದೆ.

ಇದಲ್ಲದೆ, ಕಾರ್ಯಾಚರಣೆ ಮತ್ತು ನಿರ್ವಹಣೆ ಯೋಜನೆ ಅನುಷ್ಠಾನಕ್ಕೆ ಮುಂದೆ ಬಂದ ಕಂಪನಿಯ ಜವಾಬ್ದಾರಿ ಆಗಿರಲಿದೆ. ಇದರಿಂದ ಬಂದ ಆದಾಯದಲ್ಲಿ ಸರ್ಕಾರದ ಪಾಲು ಇರಲಿದೆ. ಆದರೆ, ಇದು ಇನ್ನೂ ಪ್ರಸ್ತಾವನೆ ಹಂತದಲ್ಲಿದ್ದು, ಬರುವ ಸಚಿವ ಸಂಪುಟದಲ್ಲಿ ಈ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಈ ಮಧ್ಯೆ ಮೂಲಸೌಕರ್ಯ ನಿರ್ಮಾಣಕ್ಕೆ  ತಗಲುವ ವೆಚ್ಚ ಮತ್ತು ಮಾಲಿಕತ್ವದ ಪಾಲುದಾರಿಕೆ ಹಿಂದೆ ರಾಜ್ಯ-ಕೇಂದ್ರ ಕ್ರಮವಾಗಿ ಶೇ. 49, ಶೇ.51ರಷ್ಟಿತ್ತು. ಈಗ ಅದು ತಲಾ ಶೇ.50ರಷ್ಟಾಗಿದೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಇಂದು ತೀರ್ಮಾನ; ಅಧಿಕಾರಿ: “ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳುವ ಚಿಂತನೆ ಇದೆ. ಆದರೆ, ಇದು ಶನಿವಾರ ನಡೆಯಲಿರುವ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಪ್ರಾಥಮಿಕ ತೀರ್ಮಾನ ಆಗಲಿದೆ.  ನಂತರ ಸಚಿವ ಸಂಪುಟದ ಮುಂದೆ ಬರಲಿದೆ. ಸದ್ಯಕ್ಕೆ ರೋಲಿಂಗ್‌ ಸ್ಟಾಕ್‌ ಹಾಗೂ ಕಾರ್ಯಾಚರಣೆ ಮತ್ತು ನಿರ್ವಹಣೆ ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳುವುದು, ಜೋಡಿ ಹಳಿ ನಿರ್ಮಾಣವನ್ನು ನೋಡಲ್‌ ಏಜೆನ್ಸಿ ಕೆ-ರೈಡ್‌  (ಕರ್ನಾಟಕ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆ) ಮೂಲಕ ತೆಗೆದುಕೊಳ್ಳುವ ಕುರಿತು ಚರ್ಚೆ ನಡೆದಿದೆ’ ಎಂದು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಸ್ಪಷ್ಟಪಡಿಸಿದರು.

ಅಷ್ಟಕ್ಕೂ  ಉಪನಗರ ರೈಲು ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆ ಸಚಿವ ಸಂಪುಟದ ಮುಂದೆ ಹೋಗುತ್ತಿರುವುದು ಇದೇ ಮೊದಲಲ್ಲ; ಕಳೆದ 3 ವರ್ಷಗಳಲ್ಲಿ ಹಲವು ಬಾರಿ ಸಂಪುಟದಲ್ಲಿ ಅನುಮೋದನೆಗೊಂಡು ಕೇಂದ್ರಕ್ಕೆ ಕಳುಹಿಸಲಾಗಿದೆ.  ಆದರೆ, ಫ‌ಲಿತಾಂಶ ಇದುವರೆಗೆ ಶೂನ್ಯ. ಒಂದಿಲ್ಲೊಂದು ಕಾರಣಕ್ಕೆ ಮುಂದೂಡಿಕೆ ಆಗುತ್ತಲೇ ಇದೆ. ಇನ್ನು ಇಡೀ ಯೋಜನೆ ಪ್ರಸ್ತಾವನೆ 2010ರಲ್ಲೇ ಸಲ್ಲಿಕೆಯಾಗಿದ್ದು, ದಶಕದಿಂದಲೂ ಅನುಷ್ಠಾನಕ್ಕೆ ವಿಘ್ನಗಳು ಎದುರಾಗುತ್ತಿವೆ ಎಂದು  ರೈಲ್ವೆ ಹೋರಾಟಗಾರರು ಬೇಸರ ವ್ಯಕ್ತಪಡಿಸುತ್ತಾರೆ. “ಖಾಸಗಿ ಸಹಭಾಗಿತ್ವ ಅಥವಾ ಇನ್ಯಾವುದೇ ಮಾದರಿಯಲ್ಲಾ ದರೂ ಆದಷ್ಟು ಶೀಘ್ರ ಯೋಜನೆ ಕಾರ್ಯಗತಗೊಳಿಸಬೇಕು.

Advertisement

ಕಾಲಹರಣ ಸಲ್ಲದು. ಖಾಸಗಿ ಸಹಭಾಗಿತ್ವದಲ್ಲಿ  ಕೈಗೆತ್ತಿಕೊಂಡರೂ ಅಭಿವೃದ್ಧಿ ಕೇವಲ ಮಾರ್ಗಕ್ಕೆ ಸೀಮಿತವಾಗದೆ, ಆ ಮಾರ್ಗದುದ್ದಕ್ಕೂ ಪ್ರಾಪರ್ಟಿ ಡೆವೆಲಪ್‌ಮೆಂಟ್‌ ಒಳಗೊಂಡಂತೆ ಸಮಗ್ರ ಅಭಿವೃದ್ಧಿ  ಪರಿಕಲ್ಪನೆಯಲ್ಲಿ ಯೋಜನೆ ರೂಪಿಸಬೇಕು. ಉದಾಹರಣೆಗೆ ವಿಮಾನ  ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವು ಅಲ್ಲಿಗೆ ಬಂದಿಳಿಯುವ ಸರಕು ಅನ್ನು ಇದೇ ಮಾರ್ಗ ಬಳಸಿಕೊಂಡು, ಮೈಸೂರು, ಬೆಂಗಳೂರು ಮತ್ತಿತರ ಕಡೆಗೆ ಸಾಗಿಸುವಂತಿರಬೇಕು’ ಎಂದು ಪ್ರಜಾರಾಗ್‌ ಸಂಸ್ಥೆಯ ಸಂಜೀವ್‌  ದ್ಯಾಮಣ್ಣವರ್‌ ಅಭಿಪ್ರಾಯಪಡುತ್ತಾರೆ.

300ಕ್ಕೂ ಅಧಿಕ ಬೋಗಿಗಳು: ಅಂದಾಜು 148.17 ಕಿ.ಮೀ. ಉದ್ದದ ಈ ಯೋಜನೆ 2026ಕ್ಕೆ ಪೂರ್ಣಗೊಳಿಸುವ ಗುರಿ ಹೊಂದಿದ್ದು, ಆಗ ಸೇವೆಗೆ ಮುಕ್ತಗೊಳ್ಳುವ ಹೊತ್ತಿಗೆ ಒಟ್ಟಾರೆ 300ಕ್ಕೂ ಅಧಿಕ ಹವಾನಿಯಂತ್ರಿತ ಬೋಗಿಗಳು  ಬೇಕಾಗುತ್ತವೆ. ಇದಕ್ಕೆ ತಗ ಲುವ ವೆಚ್ಚ ಸುಮಾರು 2,200 ಕೋಟಿ ರೂ. ಆಗಿದೆ.

ಹೂಡಿಕೆಗೆ ಮುಂದೆ ಬರುವುದು ಅನುಮಾನ?: ಪ್ರಸ್ತುತ ಸ್ಥಿತಿಯಲ್ಲಿ ಖಾಸಗಿ ಕಂಪನಿಗಳು ಹೀಗೆ ದೊಡ್ಡ ಮಟ್ಟದಲ್ಲಿ ಹೂಡಿಕೆಗೆ ಮುಂದಾಗಲಿವೆಯೇ ಎಂಬ ಅನುಮಾನ ತಜ್ಞರಿಂದ ವ್ಯಕ್ತವಾಗಿದೆ. ಲಾಕ್‌ಡೌನ್‌ ಪರಿಣಾಮ ಸರ್ಕಾರದ  ಖಜಾನೆ ಖಾಲಿ ಆಗಿದ್ದು, ದೊಡ್ಡ ಯೋಜನೆಗಳಿಗೆ ಕೈಹಾಕುವುದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಸರ್ಕಾರ ಪಿಪಿಪಿ ಮಾದರಿಗೆ ಆದ್ಯತೆ ನೀಡುತ್ತಿದೆ. ಆದರೆ, ಖಾಸಗಿ ಕಂಪನಿಗಳ ಸ್ಥಿತಿಯೂ ಸದ್ಯಕ್ಕೆ ಇದಕ್ಕಿಂತ ಭಿನ್ನವಾಗಿಲ್ಲ. ಹಾಗೂ ಇದು  ಹೊಸ ಪ್ರಯೋಗವಾಗಿದ್ದು, ಹೂಡಿಕೆಗೆ ಮುಂದೆ ಬರುತ್ತವೆಯೇ ಎಂಬುದನ್ನು ಕಾದುನೋಡಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next