Advertisement
2024-25ನೇ ಸಾಲಿಗೆ ಈಗಾಗಲೇ ನಿಗದಿಯಾದ ಸ್ವತ್ತಿನ ತೆರಿಗೆ ದರದಲ್ಲಿ ಶೇ.20 ಕ್ಕಿಂತಲೂ ಹೆಚ್ಚು ತೆರಿಗೆ ಹೆಚ್ಚಳ ಹೊಂದಿರುವ ವಾಸ್ತವ್ಯದ ಕಟ್ಟಡಗಳಿಗೆ ಆಸ್ತಿ ತೆರಿಗೆಯನ್ನು ಶೇ.20ಕ್ಕೆ ಸೀಮಿತಗೊಳಿಸುವುದು. ಈಗಾಗಲೇ ತೆರಿಗೆ ಪಾವತಿಯಾದ ಪ್ರಕರಣಗಳಲ್ಲಿ ಮುಂದಿನ 2025- 26ನೇ ತೆರಿಗೆಯನ್ನು ಮುಂದಿನ ಸಾಲಿಗೆ ಹೊಂದಾಣಿಕೆ ಮಾಡುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
Related Articles
ಪ್ರತೀ ಹಣಕಾಸು ವರ್ಷದಲ್ಲಿ ಚಾಲ್ತಿ ಪರಿಷ್ಕೃತ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳನ್ನು ಅಳವಡಿಸಿ ಅಥವಾ ಮಾರ್ಗಸೂಚಿ ದರಗಳ ಪರಿಷ್ಕರಣೆ ಆಗದಿದ್ದಲ್ಲಿ ಪ್ರತೀ ವರ್ಷ ಶೇ.3ರಷ್ಟು ಹೆಚ್ಚಳ ಮಾಡಿ ಆಸ್ತಿ ತೆರಿಗೆಯನ್ನು ವಸೂಲಿ ಮಾಡಬೇಕು ಎಂಬ ನಿಯಮವಿದೆ. ಆಸ್ತಿ ತೆರಿಗೆಯು ನಗರ ಸ್ಥಳೀಯ ಸಂಸ್ಥೆಗಳನ್ನು ಆರ್ಥಿಕವಾಗಿ ಬಲಪಡಿಸಲು ಬಹುಮುಖ್ಯ ಆದಾಯದ ಮೂಲವೂ ಹೌದು. ಹೀಗಾಗಿ ಕಾಯ್ದೆಗಳಲ್ಲಿ ತಿದ್ದುಪಡಿ ಆಗಿರುವ ಅಂಶಗಳನ್ನು ಪರಿಗಣಿಸಿ ‘ಪ್ರಸಕ್ತ ಸಾಲಿನಲ್ಲಿ ಇರುವ ಆಸ್ತಿ ತೆರಿಗೆಯ ಬೇಡಿಕೆಗಿಂತ ಕಡಿಮೆಯಾಗದ ರೀತಿಯಲ್ಲಿ’ ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ತೆರಿಗೆ ವಿಧಿಸಲು ಸರಕಾರದ ಆದೇಶವಿದೆ.
Advertisement
ಮಂಗಳೂರು ನಗರ ವ್ಯಾಪ್ತಿಯಲ್ಲಿ 1-10-2023ರಿಂದ ಪರಿಷ್ಕೃತ ಮಾರುಕಟ್ಟೆ ಮೌಲ್ಯಗಳನ್ನು ಜಾರಿಗೆ ತರಲಾಗಿದೆ. ಈ ಮಾರುಕಟ್ಟೆ ದರಗಳನ್ನು ಅಳವಡಿಸಿ 2024-25ನೇ ಸಾಲಿಗೆ ಆಸ್ತಿ ತೆರಿಗೆ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹೊಸ ಮಾರ್ಗಸೂಚಿ ದರವನ್ನು ಈ ಬಾರಿಗೆ ಅಳವಡಿಸಿದ ಕಾರಣದಿಂದ ವಾಸ್ತವ್ಯ, ವಾಣಿಜ್ಯ, ವಾಸ್ತವ್ಯೇತರ, ಖಾಲಿ ನಿವೇಶನದ ತೆರಿಗೆ ದರಗಳ ಶ್ರೇಣಿ ಕಳೆದ ಬಾರಿಗಿಂತ ದುಪ್ಪಟ್ಟಾಗಿದೆ. ಇದು ಸಾರ್ವಜನಿಕರಿಗೆ ತೆರಿಗೆ ಹೊರೆ ಸೃಷ್ಟಿಸಿತ್ತು.
36 ಸಾವಿರ ಆಸ್ತಿಗಳಿಗೆ ತೆರಿಗೆ ಲಾಭ!‘ತೆರಿಗೆ ಸ್ವರೂಪದಲ್ಲಿ ಬದಲಾವಣೆ ಮಾಡಿದ ಕಾರಣದಿಂದ ಸರಿಸುಮಾರು 36 ಸಾವಿರ ಸ್ವತ್ತುಗಳ ತೆರಿಗೆ ಕ್ರಮದಲ್ಲಿ ಬದಲಾವಣೆ ಆಗಲಿದೆ. ಇಷ್ಟೂ ಸ್ವತ್ತುಗಳಿಗೆ ಶೇ.20ಕ್ಕಿಂತ ಅಧಿಕ ತೆರಿಗೆ ಪಾವತಿ ಮಾಡುವವರಿದ್ದರೆ ಅಥವಾ ಮಾಡಿದ್ದರೆ ಅವರ ತೆರಿಗೆ ಶ್ರೇಣಿ ಶೇ.20ರೊಳಗೆ ಇರಲಿದೆ’ ಎನ್ನುತ್ತಾರೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ. ತೆರಿಗೆ ಬದಲಾದರೂ ಸಾಫ್ಟ್ವೇರ್‌ನಲ್ಲಿ ಬದಲಾಗಿಲ್ಲ!
ಸ್ವಯಂಘೋಷಿತ ಆಸ್ತಿ ತೆರಿಗೆಯ ಸ್ವರೂಪದಲ್ಲಿ ಬದಲಾವಣೆ ಮಾಡಲಾಗಿದೆಯಾದರೂ ಪಾಲಿಕೆ ಸಾಫ್ಟ್ವೇರ್‌ನಲ್ಲಿ ಮಾತ್ರ ಬದಲಾಗಿಲ್ಲ. ಪಾಲಿಕೆ ನಿರ್ಣಯ ಮಾಡಿದೆಯಾದರೂ ಸಾಫ್ಟ್ ವೇರ್‌ನಲ್ಲಿ ಇದು ಅನ್ವಯವಾಗದಿದ್ದರೆ ಹಾಲಿ ತೆರಿಗೆ ಪಾವತಿ ಮಾಡುವವರಿಗೆ ಸದ್ಯಕ್ಕೆ ಲಾಭ ದೊರೆಯದು. ಈ ಮಧ್ಯೆ, ‘ಎರಡು ಪ್ರಸ್ತಾವನೆಗಳಿಗೆ ಸರಕಾರ ಒಪ್ಪಿಗೆ ನೀಡಿದರಷ್ಟೇ ಅಂತಿಮವಾಗಲಿದೆ. ಒಂದು ವೇಳೆ ಹೆಚ್ಚುವರಿ ತೆರಿಗೆ ಪಾವತಿ ಮಾಡಿದ್ದರೆ ಅವರಿಗೆ ಮುಂದಿನ ವರ್ಷದ ತೆರಿಗೆಯಲ್ಲಿ ಹೊಂದಾಣಿಕೆಗೆ ಅವಕಾಶ ಸಿಗಲಿದೆ’ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು. ಮೇಯರ್ ಅವರಿಗೆ ಅಧಿಕಾರ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸರಕಾರವು ಜಾರಿಗೆ ತಂದಿರುವ ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ಅಧಿನಿಯಮ 2021ರ ಪ್ರಕಾರ ಹೊಸ ತಿದ್ದುಪಡಿ ಅಧಿನಿಯಮದಂತೆ ವಸೂಲಿ ಮಾಡಲಾಗುತ್ತಿರುವ ಸ್ವಯಂಘೋಷಿತ ಆಸ್ತಿ ತೆರಿಗೆಯಲ್ಲಿ ಪ್ರಸ್ತುತ ಪರಿಷ್ಕೃತ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳನ್ನು ಅಳವಡಿಸಲಾಗಿತ್ತು. ಸಾರ್ವಜನಿಕರಿಗೆ ಹೊರೆಯಾಗ ದಂತೆ ದರಗಳ ಶ್ರೇಣಿಯನ್ನು ನಿಗದಿಗೊಳಿಸಿ ಮರುಪರಿಶೀಲಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಮಿತಿ ಯೊಂದಿಗೆ ಚರ್ಚಿಸುವ ಕುರಿತು ಮೇಯರ್‌ಗೆ ಅಧಿಕಾರ ನೀಡಲಾಗಿತ್ತು. ಅದರಂತೆ ಮೇಯರ್ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದ್ದು ಎರಡು ನಿರ್ಧಾರಗಳನ್ನು ಇದೀಗ ಕೈಗೊಳ್ಳಲಾಗಿದೆ. ಎರಡು ಮಹತ್ವದ ತೀರ್ಮಾನ
ಸ್ವಯಂಘೋಷಿತ ಆಸ್ತಿ ತೆರಿಗೆಯಲ್ಲಿ ಸದ್ಯ ಸಾರ್ವಜನಿಕರಿಗೆ ಆಗುತ್ತಿರುವ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ, ಆ ತೆರಿಗೆ ಸ್ವರೂಪವನ್ನೇ ಬದಲಾಯಿಸಲಾಗಿದೆ. ಶೇ.20ರಷ್ಟು ತೆರಿಗೆ ನಿಗದಿ ಮಾಡುವ ನಿರ್ಣಯವನ್ನು ಪಾಲಿಕೆ ಕೈಗೊಂಡಿದೆ. ಖಾಲಿ ಆಸ್ತಿಯ ತೆರಿಗೆ ಕಡಿಮೆ ಮಾಡಲು ಸರಕಾರಕ್ಕೆ ಪತ್ರ ಬರೆಯುವ ತೀರ್ಮಾನ ಕೈಗೊಳ್ಳಲಾಗಿದೆ.
– ಮನೋಜ್ ಕುಮಾರ್ ಮೇಯರ್, ಮಂಗಳೂರು ಪಾಲಿಕೆ ಸರಕಾರದ ಗಮನಕ್ಕೆ
ಮಂಗಳೂರು ಪಾಲಿಕೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆಗೆ ಸಂಬಂಧಿಸಿ ಕೈಗೊಂಡ ನಿರ್ಣಯಗಳನ್ನು ಸರಕಾರದ ಗಮನಕ್ಕೆ ತರಬೇಕಿದೆ. ಸರಕಾರ ಒಪ್ಪಿಗೆ ನೀಡಿದ ಬಳಿಕ ಇದರ ಅನುಷ್ಠಾನ ನಡೆಸಲಾಗುತ್ತದೆ.
– ಆನಂದ್ ಸಿ.ಎಲ್. ಆಯುಕ್ತರು, ಮಂಗಳೂರು -ದಿನೇಶ್ ಇರಾ