Advertisement

NREGA; ರಾಜ್ಯದ ‘ಉದ್ಯೋಗ’ ಪ್ರಸ್ತಾವನೆಗಿಲ್ಲ ಕೇಂದ್ರ ‘ಖಾತರಿ’

01:44 AM Dec 15, 2024 | Team Udayavani |

ಬೆಂಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಕೆಲವು ಹೊಸ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ರಾಜ್ಯ ಸರಕಾರದ ಪ್ರಸ್ತಾವನೆಗೆ ವರ್ಷಗಳು ಕಳೆದರೂ ಕೇಂದ್ರ ಸರಕಾರದ “ಖಾತರಿ’ ಸಿಗುತ್ತಿಲ್ಲ.

Advertisement

“ದುಡಿಯ ಬಯಸುವ ಪ್ರತಿಯೊಂದು ಕೈಗೆ ಕೆಲಸ ಕೊಡಬೇಕು’ ಎಂಬ ಉದ್ದೇಶದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ ಅನುಷ್ಠಾನದಲ್ಲಿ ನಮ್ಮ ರಾಜ್ಯ ಮೊದಲಿಂದಲೂ ಮುಂಚೂಣಿಯಲ್ಲಿದೆ. ಆ ಪರಂಪರೆ ಮುಂದುವರಿಸಿಕೊಂಡು ಹೋಗುವುದರ ಜತೆಗೆ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸಲು ಕೆಲವು ಹೊಸ ಅಭಿವೃದ್ಧಿ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳಲು ಅನುಮತಿ ಕೋರಿ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ. ಆದರೆ ಈವರೆಗೆ ಸ್ಪಂದನೆ ಸಿಕ್ಕಿಲ್ಲ.
ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆಯಡಿ ಬರುವ ವಸತಿಶಾಲೆಗಳ ಕಾಂಪೌಂಡ್‌, ಆಟದ ಮೈದಾನ, ಮಳೆ ನೀರು ಕೊçಲು ಸೇರಿದಂತೆ ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೆ ನರೇಗಾ ಕಾಮಗಾರಿಯಲ್ಲಿ ಕ್ರಮ ಕೈಗೊಳ್ಳಲು ಅನುಮತಿ ನೀಡುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ವರ್ಷದ ಮೇಲಾಗಿದೆ. ಆದರೆ ಇಲ್ಲಿವರೆಗೂ ರಾಜ್ಯದ ಪ್ರಸ್ತಾವನೆ ಕೇಂದ್ರಲ್ಲಿ ಬಾಕಿ ಇದೆ. ಈ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಆಯುಕ್ತರು ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಪತ್ರಗಳನ್ನು ಬರೆದಿದ್ದಾರೆ. ಅದಾಗ್ಯೂ ಅನುಮೋದನೆ ಸಿಕ್ಕಿಲ್ಲ.

ಸಿಎಂ ಮೂಲಕ ಪತ್ರ ಬರೆಸಲು ಸೂಚನೆ
ಕೇಂದ್ರ ಸರಕಾರದ ಬಳಿ ಬಾಕಿ ಇರುವ ರಾಜ್ಯ ಸರಕಾರದ ಪ್ರಸ್ತಾವನೆಗಳ ಕುರಿತು ಇತ್ತೀಚೆಗೆ ರಾಜ್ಯ ಸರಕಾರದ ದಿಲ್ಲಿಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಈ ವಿಷಯವನ್ನು ಗಮನಕ್ಕೆ ತಂದಿದ್ದಾರೆ. ಅಲ್ಲದೆ ಕೇಂದ್ರ ಸರಕಾರದ ಬಳಿ ಬಾಕಿ ಇರುವ ರಾಜ್ಯ ಸರಕಾರದ ಪ್ರಸ್ತಾವನೆಗಳ ಕುರಿತು ಅಕ್ಟೋಬರ್‌ನಲ್ಲಿ ಪ್ರಧಾನಿ ಸಚಿವಾಲಯದ ಅಧಿಕಾರಿಗಳು ನಡೆಸಿದ ಪ್ರಗತಿ ಪರಿಶೀಲನೆ ಸಭೆಯಲ್ಲೂ ಈ ವಿಷಯ ಪ್ರಸ್ತಾವವಾಗಿದೆ.

ಈ ನಿಟ್ಟಿನಲ್ಲಿ ಆಯಾ ಇಲಾಖೆಗೆ ಸಂಬಂಧಿಸಿದ ಬಾಕಿ ಇರುವ ಪ್ರಸ್ತಾವನೆಗಳ ಕುರಿತು ಕೇಂದ್ರ ಸರಕಾರದ ಸಂಬಂಧಪಟ್ಟ ಸಚಿವಾಲಯಕ್ಕೆ ಮುಖ್ಯಮಂತ್ರಿಯವರಿಂದ ಪತ್ರಗಳನ್ನು ಕಳುಹಿಸ
ಬೇಕು. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಯವರಿಂದಲೂ ಒಂದು ಪತ್ರ ಕಳುಹಿಸಬೇಕು. ಹೊಸ ಪ್ರಸ್ತಾವನೆಗಳ ಮಾಹಿತಿ ಮತ್ತು ಕೇಂದ್ರ ಸರಕಾರಕ್ಕೆ ಬಂದಿರುವ ಎಲ್ಲ ಪತ್ರಗಳ ಪ್ರತಿಯನ್ನು ದಿಲ್ಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರಿಗೆ ಸಲ್ಲಿಸಬೇಕು. ಅವುಗಳನ್ನು ಕ್ರೋಡೀಕರಿಸಿ ನಿವಾಸಿ ಆಯುಕ್ತರು ದಿಲ್ಲಿ ವಿಶೇಷ ಪ್ರತಿನಿಧಿಗೆ ಕಳುಹಿಸಬೇಕು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಹೊಸ ಕಾಮಗಾರಿಗಾಗಿ ಕೋರಿಕೆ
ಗ್ರಾಮ ಪಂಚಾಯತ್‌ಗಳಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣ, ಶಾಲಾ ಕೊಠಡಿಗಳ ನಿರ್ಮಾಣ, ಅಂಗನವಾಡಿ ಕೇಂದ್ರಗಳ ಕಾಂಪೌಂಡ್‌, ರೇಷ್ಮೆ ಸಾಕಾಣಿಕೆ ಮನೆಗಳ ನಿರ್ಮಾಣ ಮೇವಿನ ಮಣ್ಣು ಮತ್ತು ಬಾಳೆ ಕೃಷಿ ಇನ್ನಿತರ ಹೊಸ ಕಾಮಗಾರಿಗಳಿಗೆ ಅವಕಾಶ ಮಾಡಿಕೊಡುವಂತೆಯೂ ರಾಜ್ಯ ಸರಕಾರ ಮನವಿ ಸಲ್ಲಿಸಿದೆ. ವೈಯಕ್ತಿಕವಾಗಿ ಫ‌ಲಾನುಭವಿಗಳು ಕೊçಲೋತ್ತರ ಶೇಖರಣೆ ಘಟಕಗಳನ್ನು ನಿರ್ಮಿಸಿಕೊಳ್ಳಲು ಅನುಮತಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈವರೆಗೆ ಕೇಂದ್ರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

Advertisement

ನರೇಗಾ ಯೋಜನೆ ಅನುಷ್ಠಾನದಲ್ಲಿ ರಾಜ್ಯದ ಮೊದಲಿನಿಂದಲೂ ಪ್ರಥಮ
ಈಗ ಯೋಜನೆಯಡಿ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸಲು ಮುಂದಾಗಿರುವ ರಾಜ್ಯ
ಕೆಲವು ಹೊಸ ಅಭಿವೃದ್ಧಿ ಕಾಮಗಾರಿ ಈ ನರೇಗಾದಡಿ ಕೈಗೆತ್ತಿಕೊಳ್ಳಲು ಪ್ರಸ್ತಾವನೆ

ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next