ವಿಜಯಪುರ: ವೈದ್ಯಕೀಯ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯ ವಿಷಯದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಕೂಡಲೇ ಪರಿಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವೈದ್ಯಕೀಯ ವಿದ್ಯಾರ್ಥಿಗಳು ಎಐಡಿಎಸ್‌ಒ ವಿಜಯಪುರ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆ ಜಿಲ್ಲಾಧ್ಯಕ್ಷೆ ಸುರೇಖಾ ಕಡಮಟ್ಟಿ ಮಾತನಾಡಿ, ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ವೈದ್ಯಕೀಯ ಪರೀಕ್ಷೆಗಳ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದೆ. ಆ ಸುತ್ತೋಲೆ ಪ್ರಕಾರ ಎರಡನೇ ವರ್ಷದ ಪರೀಕ್ಷೆಗಳನ್ನು ಜನವರಿ ಮಧ್ಯ ವಾರಕ್ಕೆ ಮತ್ತು ಅಂತಿಮ ವರ್ಷದ ಪರೀಕ್ಷೆಗಳನ್ನು ಫೆಬ್ರವರಿ ಮಧ್ಯ ವಾರಕ್ಕೆ ನಡೆಸಲು ನಿರ್ಧರಿಸಲಾಗಿದೆ. ಈ ದಿಢೀರ್ ಬದಲಾವಣೆ ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯಕೀಯ ಉಪನ್ಯಾಸಕರನ್ನು ಆತಂಕಕ್ಕೆ ದೂಡಿದೆ ಎಂದರು.
ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾಗಿದ್ದು ಮಾರ್ಚ್ ತಿಂಗಳಲ್ಲಿ ಜೂನ್ ತಿಂಗಳವರೆಗೂ ಆನ್‌ಲೈನ್‌ನಲ್ಲಿಯೆ ತರಗತಿಗಳು ನಡೆದಿವೆ. ಈ ಕಾರಣದಿಂದ ಅಗತ್ಯವಿದ್ದಷ್ಟು ಕ್ಲಿನಿಕಲ್ ಪೋಸ್ಟಿಂಗ್ ಆಗಿರಲಿಲ್ಲ. ಅಲ್ಲದೆ ಅಂತಿಮ ವರ್ಷದ ವಿದ್ಯಾರ್ಥಿಗಳು ಕೋವಿಡ್ ಸಂದರ್ಭದಲ್ಲಿ ಆಗಿನ ಅವಶ್ಯಕತೆಗೆ ಓಗೊಟ್ಟು, ಕೆಲ ತಿಂಗಳ ಕಾಲ ಕೋವಿಡ್ ಸೇವೆಯ ಕರ್ತವ್ಯ ನಿರ್ವಹಿಸಿದ್ದರು. ಇದರೊಂದಿಗೆ ಈ ಬ್ಯಾಚ್‌ನ ವಿದ್ಯಾರ್ಥಿಗಳು ಎರಡು ತಿಂಗಳು ಟೆಲಿ ಕಮ್ಯುನಿಕೇಷನ್ ಕರ್ತವ್ಯ ನಿರ್ವಹಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಶೈಕ್ಷಣಿಕ ವೇಳಾಪಟ್ಟಿ ಕುಸಿದು, ಪರೀಕ್ಷೆ ತಯಾರಿಗೆ ಸಮಯ ಕಡಿಮೆಯಾಗಿದೆ. ಈಗ ಫೆಬ್ರವರಿ ಮಧ್ಯ ವಾರಕ್ಕೆ ಪರೀಕ್ಷೆ ಎನ್ನುವುದು ಮತ್ತಷ್ಟು ದುಗುಡಕ್ಕೆ ಕಾರಣವಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು.
ವೈದ್ಯಕೀಯ ವಿದ್ಯಾರ್ಥಿ ಪುರುಷೋತ್ತಮ ದೇಶಪಾಂಡೆ, ತೌಖೀರ್ ಮಾತನಾಡಿ, ಎರಡನೇ ವರ್ಷದ ವಿದ್ಯಾರ್ಥಿಗಳಿಗೆ 18 ತಿಂಗಳ ವೇಳಾಪಟ್ಟಿಯಿಂದ ಕೇವಲ 10 ತಿಂಗಳ ವೇಳಾಪಟ್ಟಿಗೆ ಹೊಂದಾಣಿಕೆ ಆಗುವುದೇ ದೊಡ್ಡ ಸಾಹಸವಾಗಿದೆ. ಶೈಕ್ಷಣಿಕ ವರ್ಷ ಆರಂಭವಾದ 3 ತಿಂಗಳು ಆನ್ ಲೈನ್ ಮೂಲಕ ತರಗತಿಗಳು ನಡೆದಿವೆ. ಆದ ಕಾರಣ, ಈ ವಿದ್ಯಾರ್ಥಿಗಳಿಗೆ ಮೂಲ ವಿಷಯಗಳ ಬಗ್ಗೆ ಸಮರ್ಪಕ ಅಡಿಪಾಯ ದೊರಕಲು ಸಾಧ್ಯವಾಗಿಲ್ಲ ಎಂದು ಸಮಸ್ಯೆ ನಿವೇದಿಸಿದರು.
ಅಂತಿಮ ಪರೀಕ್ಷೆಯನ್ನು ಜನವರಿ ಮಧ್ಯ ವಾರಕ್ಕೆ ಮಾಡಲು ತೀರ್ಮಾನಿಸಲಾಗಿದೆ. ಆದರೆ ಎಷ್ಟೋ ಕಾಲೇಜುಗಳು ನವೆಂಬರ್ ಕಳೆಯುತ್ತಿದ್ದರೂ ಇನ್ನೂ ಎರಡನೇ ಆಂತರಿಕ ಪರೀಕ್ಷೆ ಮಾಡಲು ಸಾಧ್ಯವಾಗಿಲ್ಲ. ಈಗ ಎರಡನೆಯದು ಮುಗಿಸಿ, ಮೂರನೆಯದನ್ನು ಮಾಡಿ, ಜನವರಿ ಒಳಗೆ ಅಂತಿಮ ಪರೀಕ್ಷೆ ಎಂದರೆ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ ಎಂದು ಸಮಸ್ಯೆಯನ್ನು ವಿವರಿಸಿದರು. ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.