ಬೆಂಗಳೂರು: ನಾಗರಿಕ ಹಕ್ಕು ಜಾರಿ ನಿರ್ದೇಶನಾ ಲಯ (ಡಿಸಿಆರ್‌ಇ) ಸಂಗ್ರಹ ಶಾಖೆಯ ಪ್ರಥಮ ದರ್ಜೆ ಸಹಾಯಕ ದರ್ಜೆಯ ಸಿಬ್ಬಂದಿಯೊಬ್ಬರು 65 ಲಕ್ಷ ರೂ.ಗೂ ಹೆಚ್ಚು ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಡಿಸಿಆರ್‌ಇನ ಪ್ರಭಾರ ಆಡಳಿತಾಧಿಕಾರಿ ಎಂ. ಕಿರಣ್ ಎಂಬುವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಠಾಣೆ ಪೊಲೀಸರು, ಸಂಗ್ರಹ ಶಾಖೆಯ ಪ್ರಥಮ ದರ್ಜೆ ಸಹಾಯಕ ಸಂತೋಷ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇನ್ನು ಆರೋಪ ಬೆನ್ನಲ್ಲೇ ನ.29ರಿಂದ ಆರೋಪಿತ ಸಿಬ್ಬಂದಿ ಸಂತೋಷ್ ಕುಮಾರ್ ತಲೆಮರೆಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಆರೋಪಿ ಸಂತೋಷ್ ಕುಮಾರ್ 2004ರಲ್ಲಿ ಡಿಸಿಆರ್‌ಇ ಘಟಕಕ್ಕೆ ದ್ವಿತೀಯ ದರ್ಜೆ ಸಹಾಯಕರಾಗಿ ನೇಮಕಕೊಂಡಿದ್ದರು. 2007ರಿಂದ ಡಿಸಿಆರ್‌ಇ ಕೇಂದ್ರ ಕಚೇರಿಯಲ್ಲಿ ಸಂಗ್ರಹ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂತೋಷ್ ಇತರರ ಜತೆ ಸೇರಿಕೊಂಡು, ಒಳಸಂಚು ರೂಪಿಸಿ 65 ಲಕ್ಷಕ್ಕೂ ಅಧಿಕ ಹಣವನ್ನು ದುರುಪಯೋಗ ಮಾಡಿ ಇಲಾಖೆಗೆ ನಷ್ಟವುಂಟು ಮಾಡಿರುವುದು ಡಿ.5ರಂದು ನಡೆದ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ಸರ್ಕಾರದಿಂದ ಬಿಡುಗಡೆಯಾದ ಅನುದಾನ ದುರ್ಬಳಕೆ ಆಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇಲಾಖೆಯ ವಿಚಾರಣೆಯಲ್ಲೂ ಅಕ್ರಮ ಪತ್ತೆ: ತುಮಕೂರು ಡಿಸಿಆರ್‌ಇ ಘಟಕದ ಪಿಐ ಎನ್. ಎನ್. ಜಯಲಕ್ಷ್ಮಮ್ಮ ಅವರು ನಡೆಸಿದ ಇಲಾಖಾ ಪ್ರಾಥಮಿಕ ತನಿಖೆಯಲ್ಲೂ ಸಂತೋಷ್ ಅಕ್ರಮ ಎಸಗಿರುವುದು ಸಾಬೀತಾಗಿದೆ. 2017ರಿಂದ 2024ರ ಅಕ್ಟೋಬರ್‌ವರೆಗೆ ಸಂಗ್ರಹ ಶಾಖೆಯ ಕಡತಗಳನ್ನು ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ ಸಂತೋಷ್, ಅಧಿಕಾರಿಗಳ ದಿಕ್ಕು ತಪ್ಪಿಸುವ ಉದ್ದೇಶದಿಂದ ಒಂದೇ ಕಡತ ಸಂಖ್ಯೆಯಲ್ಲಿ ಬೇರೆ ಬೇರೆ ಸಾಮಗ್ರಿಗಳನ್ನು ಖರೀದಿಸಿ ಎರಡೆರಡು ಬಿಲ್ಲುಗಳನ್ನು ತಯಾರಿಸಿ ಒಂದು ಬಿಲ್ ಅನ್ನು ಕಡತದಲ್ಲಿ ಇರಿಸಲಾಗಿದೆ. ನಕಲಿ ಬಿಲ್‌ಗೆ ಮಂಜೂರು ಪಡೆದು ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ.
ಈ ಮೂಲಕ ಸರ್ಕಾರದ ಅನುದಾನದಲ್ಲಿ ಬಿಡುಗಡೆಯಾಗಿರುವುದು ಗೊತ್ತಾಗಿದೆ. ಹೀಗಾಗಿ ಸಂತೋಷ್ ಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಿರಣ್ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.