Advertisement

ಅಪನಂಬಿಕೆಗೆ ಬಲಿಯಾದ ಸಾಂದರ್ಭಿಕ ಶಿಶು

10:06 PM Jul 23, 2019 | Lakshmi GovindaRaj |

ಬೆಂಗಳೂರು: ವಿರುದ್ಧ ಮನಸ್ಥಿತಿಯ ಎರಡು ಪಕ್ಷಗಳು ಒಟ್ಟಾಗಿ ಸರ್ಕಾರ ರಚನೆ ಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ರಾಜ್ಯದ ಮೈತ್ರಿ ಸರ್ಕಾರವೇ ಉದಾಹರಣೆ. ವಿಧಾನಸಭೆ ಚುನಾವಣೆಯಲ್ಲಿ ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪ ಮಾಡಿ, ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ “ಜ್ಯಾತ್ಯತೀತ’ ಪದವನ್ನೇ ಸರ್ಕಾರ ರಚನೆಗೆ ಸೇತುವೆಯನ್ನಾಗಿ ಮಾಡಿಕೊಂಡು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಹದಿನಾಲ್ಕು ತಿಂಗಳು ಕಳೆಯುವಷ್ಟರಲ್ಲಿಯೇ ಅಂತ್ಯ ಕಂಡಿರುವುದು ವಿಪರ್ಯಾಸ.

Advertisement

ಬಹುಮತ ಇಲ್ಲದಿದ್ದರೂ ಅನಿರೀಕ್ಷಿತವಾಗಿ ಬಂದ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದ್ದ ಕುಮಾರಸ್ವಾಮಿ, ಮೈತ್ರಿ ಸರ್ಕಾರದ ಸಾಂದರ್ಭಿಕ ಶಿಶು ಎಂದು ಆರಂಭದಲ್ಲಿಯೇ ತಮ್ಮನ್ನು ತಾವು ಕರೆದುಕೊಳ್ಳುವ ಮೂಲಕ ತಮಗಿಷ್ಟವಿಲ್ಲದ ಜವಾಬ್ದಾರಿಯನ್ನು ಮೇಲಿನವರ ಸೂಚನೆಗೆ ಒಪ್ಪಿಕೊಂಡಿರುವುದನ್ನು ಪರೋಕ್ಷವಾಗಿ ವ್ಯಕ್ತಪಡಿಸುವ ಪ್ರಯತ್ನ ಮಾಡಿದರು.

ಬಿಜೆಪಿಯವರನ್ನು ಅಧಿಕಾರದಿಂದ ದೂರ ಇಡಲೇಬೇಕೆಂಬ ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರದಿಂದ ರಾಜ್ಯ ಕಾಂಗ್ರೆಸ್‌ ನಾಯಕರು ವಿಧಿಯಿಲ್ಲದೇ ಜೆಡಿಎಸ್‌ ಜೊತೆ ಕೈ ಜೋಡಿಸಿ, ಯಾರು ಅವರಪ್ಪನಾಣೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಚುನಾವಣೆ ಸಂದರ್ಭದಲ್ಲಿ ಬಹಿರಂಗವಾಗಿ ಹೇಳಿದ್ದರೋ, ಅವರೇ ಚುನಾವಣೆ ಫ‌ಲಿತಾಂಶ ಬಂದ ಒಂದೇ ಗಂಟೆಯಲ್ಲಿ ನೀವೇ ಮುಖ್ಯಮಂತ್ರಿಯಾಗಿ ಎಂದು ದೇವೇಗೌಡರ ಮನೆಯ ಮುಂದೆ ಕೈ ಕಟ್ಟಿ ನಿಲ್ಲುವಂತಹ ದೈನ್ಯತೆಯ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂಡ ಪ್ರಜಾಪ್ರಭುತ್ವದ ಅಣಕದಂತೆ ನಡೆಯಿತು.

ಪಕ್ಷದ ಹೈ ಕಮಾಂಡ್‌ ಸೂಚನೆ ಮೇರೆಗೆ ಸಿದ್ದರಾಮಯ್ಯ ಜೆಡಿಎಸ್‌ ಜೊತೆ ಕೈ ಜೋಡಿಸಲು ಮುಂದಾದರೂ, ಜೆಡಿಎಸ್‌ ಬಗೆಗಿನ ಅವರ ಮನಸ್ಸಲ್ಲಿರುವ ತಿರಸ್ಕಾರ ಭಾವನೆ ಮಾತ್ರ ಒಳಗೊಳಗೆ ಕುದಿಯುತ್ತಿದ್ದಂತೆ ಕಾಣಿಸುತ್ತದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮಾತು ಮೀರದೆ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿ, ಯಾವುದೇ ಅಧಿಕಾರವಿಲ್ಲದೇ ಕೈ ಕಟ್ಟಿ ನಿಂತು ನೀಡಿದ ಅಧಿಕಾರವನ್ನು ಸುಗಮವಾಗಿ ನಡೆಯಲು ಸಿದ್ದರಾಮಯ್ಯ ಅವರೂ ಬಿಡಲಿಲ್ಲ ಎನಿಸುತ್ತದೆ.

ಹೈ ಕಮಾಂಡ್‌ ನಿರ್ಧಾರದಂತೆ ರಚನೆಯಾದ ರಾಜ್ಯದ ಮೈತ್ರಿ ಸರ್ಕಾರ ದೇಶಕ್ಕೆ ಹೊಸ ಸಂದೇಶ ರವಾನಿಸುವ ನಿಟ್ಟಿನಲ್ಲಿ ಬಿಜೆಪಿ ವಿರೋಧಿ ಬಣದಲ್ಲಿ ಗುರುತಿಸಿಕೊಂಡ ಎಲ್ಲ ರಾಜ್ಯಗಳ ಮುಖಂಡರನ್ನು ಪ್ರಮಾಣವಚನಕ್ಕೆ ಕರೆಸಿ ದೇವೇಗೌಡರು ಮಗನ ಅಧಿಕಾರ ಸ್ವೀಕಾರ ಸಮಾರಂಭದ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಅಸ್ತಿತ್ವವನ್ನು ಬಲಗೊಳಿಸಿಕೊಳ್ಳುವ ಯತ್ನ ನಡೆಸಿದರು.

Advertisement

ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ಆರಂಭದಲ್ಲಿಯೇ ಮೈತ್ರಿ ಪಕ್ಷದ ಅಭಿಪ್ರಾಯವನ್ನೂ ಕೇಳದೇ ರೈತರ ಸಾಲ ಮನ್ನಾದಂತಹ ಮಹತ್ವದ ಯೋಜನೆಯನ್ನು ಘೋಷಣೆ ಮಾಡಿದರು. ಅಲ್ಲದೇ, ಅದು ಜೆಡಿಎಸ್‌ನ ಕೊಡುಗೆ ಎನ್ನುವುದನ್ನು ಬಿಂಬಿಸಲು ಪ್ರಯತ್ನ ನಡೆಸಿದರು. ಮೈತ್ರಿ ಪಕ್ಷದ ಭಾಗವಾಗಿದ್ದ ಕಾಂಗ್ರೆಸ್‌ನ ಡಾ.ಜಿ.ಪರಮೇಶ್ವರ್‌ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರೂ, ಹದಿನೈದು ದಿನಗಳ ಕಾಲ ಯಾವುದೇ ಖಾತೆ ನೀಡದೇ ಅವರನ್ನು ಡಮ್ಮಿ ಉಪ ಮುಖ್ಯಮಂತ್ರಿ ಎನ್ನುವುದನ್ನು ಆರಂಭದಲ್ಲಿಯೇ ಜೆಡಿಎಸ್‌ ತೋರಿಸುವ ಪ್ರಯತ್ನ ನಡೆಸಿತು.

ಆರಂಭದಲ್ಲಿಯೇ ಅಪಸ್ವರ ಎತ್ತಿದ ಸಿದ್ದರಾಮಯ್ಯ: ಮೈತ್ರಿ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ ಎನ್ನುವ ವಿಷಯದಲ್ಲಿಯೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ತಿಕ್ಕಾಟ ಶುರುವಾದಾಗ ಈ ಬಗ್ಗೆ ಯಾರಿಗೆ ಯಾವ ಖಾತೆ ದೊರೆಯಬೇಕು ಎನ್ನುವ ಬಗ್ಗೆಯೇ ಸಿದ್ದರಾಮಯ್ಯ ಆರಂಭದಲ್ಲಿಯೇ ಪಟ್ಟು ಹಿಡಿದು, ಕಾಂಗ್ರೆಸ್‌ಗೆ ಮೂರನೇ ಎರಡರಷ್ಟು ಖಾತೆಗಳು ದೊರೆಯುವಂತೆ ನೋಡಿಕೊಂಡರು. ಅಲ್ಲದೇ ಜಲ ಸಂಪನ್ಮೂಲ, ಕಂದಾಯ, ಗ್ರಾಮೀಣಾಭಿವೃದ್ದಿಯಂತಹ ಮಹತ್ವದ ಖಾತೆಗಳು ಕಾಂಗ್ರೆಸ್‌ಗೆ ದೊರೆಯುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು. ಅದೇ ಕಾರಣಕ್ಕೆ ಗೊಂದಲ ಗಳುಂಟಾಗಬಾರದು ಎನ್ನುವ ಕಾರಣಕ್ಕೆ ಎರಡೂ ಪಕ್ಷಗಳ ನಡುವೆ ಅಧಿಕಾರ ಹಂಚಿಕೆಯ ಲಿಖೀತ ಒಪ್ಪಂದವೂ ಎರಡೂ ಪಕ್ಷಗಳ ಹೈ ಕಮಾಂಡ್‌ ನೇತೃತ್ವದಲ್ಲಿಯೇ ಅಧಿಕೃತವಾಗಿ ನಡೆದು, ಕುಮಾರಸ್ವಾಮಿಯೇ ಐದು ವರ್ಷ ಮುಖ್ಯಮಂತ್ರಿ ಎಂದು ಕಾಂಗ್ರೆಸ್‌ ಬರೆದು ಕೊಡುವಂತಾಯಿತು.

ಶುರುವಾದ ಅಪನಂಬಿಕೆ: ಅಧಿಕಾರ ಹಂಚಿಕೆಯ ನಂತರ ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯಗೆ ಯಾವುದೇ ಸ್ಥಾನಮಾನ ಇಲ್ಲದಿರುವುದು ಕಾಂಗ್ರೆಸ್‌ನ ಒಂದು ಬಣದ ಶಾಸಕರ ಅಸಮಾಧಾನಕ್ಕೆ ಕಾರಣವಾಯಿತು. ಅದು ಮೈತ್ರಿ ಪಕ್ಷಗಳ ನಡುವೆ ಸಣ್ಣ ಅಂತರ ಹುಟ್ಟಿಕೊಳ್ಳಲು ಕಾರಣವಾಯಿತು. ಅವರ ಅಸಮಾಧಾನದ ಫ‌ಲವಾಗಿ ಸಿದ್ದರಾಮಯ್ಯ ಅವರನ್ನು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಯಿತು. ಆದರೆ, ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡದೇ ಅವಮಾನ ಮಾಡಲಾಯಿತು ಎಂದು ಕಾಂಗ್ರೆಸ್‌ನ ಒಂದು ವಲಯದಲ್ಲಿ ಬೇಸರಕ್ಕೆ ಕಾರಣವಾಯಿತು. ಅದು ಮೈತ್ರಿ ಸರ್ಕಾರದಲ್ಲಿ ಎರಡು ಶಕ್ತಿ ಕೇಂದ್ರಗಳು ಹುಟ್ಟಿಕೊಳ್ಳಲು ಕಾರಣವಾಯಿತು.

ಎರಡು ಶಕ್ತಿ ಕೇಂದ್ರಗಳು: ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಜಂಟಿಯಾಗಿ ಅಧಿಕಾರ ನಡೆಸುತ್ತಿದ್ದರೂ, ಎರಡೂ ಪಕ್ಷಗಳ ತೀರ್ಮಾನಗಳು ಸರ್ಕಾರದ ಮಟ್ಟದಲ್ಲಿ ಆಗುವ ಬದಲು ಜೆಡಿಎಸ್‌ನ ತೀರ್ಮಾನಗಳು ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿಯಾದರೆ, ಕಾಂಗ್ರೆಸ್‌ನ ತೀರ್ಮಾನಗಳು ಸಿದ್ದರಾಮಯ್ಯ ವಾಸವಾಗಿರುವ (ಅನಧಿಕೃತ ನಿವಾಸ, ಸಚಿವ ಕೆ.ಜೆ.ಜಾರ್ಜ್‌ಗೆ ನೀಡಿದ್ದ ನಿವಾಸದಲ್ಲಿ ಸಿದ್ದರಾಮಯ್ಯ ವಾಸವಾಗಿದ್ದಾರೆ) ಕಾವೇರಿ ನಿವಾಸದಲ್ಲಿ ನಿರ್ಧಾರವಾಗತೊಡಗಿದವು. ಇದು ಎರಡೂ ಪಕ್ಷಗಳ ನಡುವೆ ಅಪನಂಬಿಕೆ ಹೆಚ್ಚಾಗಲು ಕಾರಣವಾಯಿತು. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ ಶಾಸಕರು ತಮ್ಮ ಕೆಲಸಗಳು ಆಗದಿದ್ದರೆ, ಸಿದ್ದರಾಮಯ್ಯ ಅವರ ಮೊರೆ ಹೋಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಒತ್ತಡ ಹೇರುವ ಕಾರ್ಯ ಆರಂಭಿಸಿದರು. ಸಿದ್ದರಾಮಯ್ಯನವರು, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಏಕಪಕ್ಷೀಯವಾಗಿ ತೆಗೆದುಕೊಂಡ ಕೆಲವು ನಿಗಮ ಮಂಡಳಿ ಹಾಗೂ ಪ್ರಾಧಿಕಾರಗಳ ನೇಮಕಕ್ಕೆ ಆಕ್ಷೇಪ ಎತ್ತಿ ಬಹಿರಂಗವಾಗಿಯೇ ಮುಖ್ಯಮಂತ್ರಿಗೆ ಪತ್ರ ಬರೆಯುವ ಮೂಲಕ ಅವರ ನಿರ್ಧಾರಗಳಿಗೆ ತಡೆಯೊಡ್ಡುವ ಪ್ರಯತ್ನಗಳನ್ನು ಮಾಡಿದರು. ಇದು ಮೈತ್ರಿ ಸರ್ಕಾರದಲ್ಲಿ ಎರಡು ಶಕ್ತಿಕೇಂದ್ರಗಳು ಸಕ್ರೀಯವಾಗಿ ಕಾರ್ಯ ನಿರ್ವಹಿಸಲು ಕಾರಣವಾದಂತಾಯಿತು.

ನಾಲ್ಕು ಜಿಲ್ಲೆಗೆ ಸೀಮಿತ ಬಜೆಟ್‌: ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ಮೇಲೆ ಎರಡು ಬಜೆಟ್‌ ಮಂಡನೆ ಮಾಡಿದರು. ಆದರೆ, ಎರಡೂ ಬಜೆಟ್‌ಗಳೂ ಕೇವಲ ಹಳೆ ಮೈಸೂರು ಭಾಗದ ನಾಲ್ಕು ಜಿಲ್ಲೆಗಳಿಗೆ ಮಾತ್ರ ಸೀಮಿತವಾದ ಬಜೆಟ್‌ ಎಂಬ ಆರೋಪ ಕೇಳಿ ಬಂದಿತು. ರಾಮನಗರ, ಹಾಸನ, ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಬಜೆಟ್‌ನಲ್ಲಿ ಅತಿ ಹೆಚ್ಚು ಅನುದಾನ ನೀಡಿದ್ದಾರೆ ಎಂಬ ಆರೋಪ ಮೈತ್ರಿ ಪಕ್ಷದ ಭಾಗವಾಗಿದ್ದ ಕಾಂಗ್ರೆಸ್‌ನವರಿಂದಲೇ ಕೇಳಿ ಬರುವಂತಾಯಿತು. ಸಾಲ ಮನ್ನಾ ಯೋಜನೆಯಲ್ಲಿಯೂ ಅನಗತ್ಯ ಗೊಂದಲ ಸೃಷ್ಠಿಸಿಕೊಂಡು ಅದು ಕೂಡ ಕೇವಲ ಹಳೆ ಮೈಸೂರು ಭಾಗದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಘೋಷಣೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದು ಮೈತ್ರಿ ಸರ್ಕಾರ ಹಳೆ ಮೈಸೂರು ಭಾಗಕ್ಕೆ ಮಾತ್ರ ಸೀಮಿತ ಎನ್ನುವ ಭಾವನೆ ರಾಜ್ಯದ ಜನರಲ್ಲಿ ಅಷ್ಟೇ ಅಲ್ಲ, ಸ್ವತ: ಮೈತ್ರಿ ಸರ್ಕಾರದ ಭಾಗವಾಗಿದ್ದ ಕಾಂಗ್ರೆಸ್‌ ಶಾಸಕರಲ್ಲಿಯೂ ಮೂಡುವಂತಾಯಿತು.

ಉ. ಕರ್ನಾಟಕ ಕಡೆಗಣನೆ: ಮೈತ್ರಿ ಸರ್ಕಾರದಲ್ಲಿ ಅಧಿಕಾರ ಹಂಚಿಕೆಯಲ್ಲಿ ಎಲ್ಲವನ್ನೂ ದಕ್ಷಿಣ ಕರ್ನಾಟಕ ಭಾಗದವರಿಗೆ ನೀಡಲಾಗಿದೆ ಎಂಬ ಆರೋಪ ಮೈತ್ರಿ ಸರ್ಕಾರದ ಆರಂಭದಿಂದಲೂ ಕೇಳಿ ಬರತೊಡಗಿತ್ತು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷರು, ಲೋಕೋಪಯೋಗಿ, ಇಂಧನ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಪ್ರಮುಖ ಖಾತೆಗಳೂ ದಕ್ಷಿಣ ಕರ್ನಾಟಕದವರ ಕೈಯಲ್ಲಿಯೇ ಉಳಿಯುವಂತಾಯಿತು. ಇದು ಕಾಂಗ್ರೆಸ್‌ನ ಉತ್ತರ ಕರ್ನಾಟಕ ನಾಯಕರ ಅಸಮಾಧಾನಕ್ಕೆ ಕಾರಣವಾಯಿತು.  ಉತ್ತರ ಕರ್ನಾಟಕ ಭಾಗದ ಹಿರಿಯ ಪ್ರಭಾವಿ ಶಾಸಕರಾದ ಎಂ.ಬಿ.ಪಾಟೀಲ್‌, ಎಚ್‌.ಕೆ. ಪಾಟೀಲ್‌ ಸೇರಿದಂತೆ ಹಿರಿಯ ಶಾಸಕರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಹೆಚ್ಚಾಯಿತು.

ವಿಶೇಷವಾಗಿ ಲಿಂಗಾಯತ ಸಮುದಾಯವನ್ನು ಮೈತ್ರಿ ಸರ್ಕಾರ ತುಳಿಯುವ ಪ್ರಯತ್ನ ಮಾಡುತ್ತಿದೆ ಎಂಬ ಸಂದೇಶವೂ ರವಾನೆಯಾಗುವಂತಾಯಿತು. ಇದು ಕಾಂಗ್ರೆಸ್‌ನಲ್ಲಿ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಯಿತು. ಹೀಗಾಗಿ, ಲಿಂಗಾಯತ ಸಮುದಾಯದ ಪ್ರಭಾವಿ ಶಾಸಕರು ಬಹಿರಂಗವಾಗಿಯೇ ರಾಜ್ಯ ಸರ್ಕಾರದ ವಿರುದ್ಧ ಬಂಡಾಯವೇಳಲೂ ಕಾರಣವಾಯಿತು. ಮೈತ್ರಿ ಸರ್ಕಾರದ ಉತ್ತರ ಕರ್ನಾಟಕದ ಬಗ್ಗೆ ವಿರೋಧಿ ಧೋರಣೆ ಹೆಚ್ಚಾದಂತೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಹೆಚ್ಚಾಗತೊಡಗಿತು. ಈ ಬಗ್ಗೆ ಆ ಭಾಗದ ಶಾಸಕರು ಸಿದ್ದರಾಮಯ್ಯ ಮುಂದೆ ತಮ್ಮ ಅಳಲು ತೋಡಿಕೊಳ್ಳಲು ಆರಂಭಿಸಿದರು. ಅವರ ಬೇಡಿಕೆಗಳನ್ನು ಈಡೇರಿಸುವಂತೆ ಸಿದ್ದರಾಮಯ್ಯನವರು ಕುಮಾರಸ್ವಾಮಿಗೆ ಸೂಚಿಸಿದರೂ ಸರಿಯಾಗಿ ಸ್ಪಂದಿಸದೇ ಇರುವುದು, ಸಿದ್ದರಾಮಯ್ಯ ಕೂಡ ಮೈತ್ರಿ ಸರ್ಕಾರದ ಬಗ್ಗೆ ಬೇಸರಗೊಳ್ಳಲು ಕಾರಣ ಹೆಚ್ಚಾಯಿತು.

ರೇವಣ್ಣ ಹಸ್ತಕ್ಷೇಪದ ಆರೋಪ: ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರ ಹಸ್ತಕ್ಷೇಪವೂ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ ಶಾಸಕರ ಅಸಮಾಧಾನಕ್ಕೆ ಪ್ರಮುಖ ಕಾರಣವಾಯಿತು. ಶಾಸಕರು ತಮ್ಮ ಕ್ಷೇತ್ರಗಳಿಗೆ ಅಧಿಕಾರಿಗಳನ್ನು ವರ್ಗಾಯಿಸಿಕೊಳ್ಳಲು ಅಧಿಕಾರ ಇಲ್ಲದಂತೆ ಎಲ್ಲವನ್ನೂ ಅವರೇ ನಿರ್ಣಯಿಸುತ್ತಿದ್ದರು ಎನ್ನುವ ಆರೋಪ ರೇವಣ್ಣ ಅವರ ಮೇಲೆ ಕಾಂಗ್ರೆಸ್‌ ಶಾಸಕರು ಮಾಡುವಂತಾಯಿತು. ಅಲ್ಲದೆ, ತಮ್ಮ ವಿರುದ್ಧ ಸೋತಿದ್ದ ಜೆಡಿಎಸ್‌ ಅಭ್ಯರ್ಥಿಗಳ ಕೆಲಸಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ತಕ್ಷಣ ಮಾಡಿಕೊಟ್ಟು, ಕಾಂಗ್ರೆಸ್‌ ಶಾಸಕರನ್ನು ಗಂಟೆಗಟ್ಟಲೇ ಕಾಯಿಸಿ, ಅನಗತ್ಯ ವಿಳಂಬ ಮಾಡುವ ಪ್ರವೃತ್ತಿಯೂ ಕಾಂಗ್ರೆಸ್‌ ಶಾಸಕರ ಮುನಿಸು ಹೆಚ್ಚಾಗಲು ಕಾರಣವಾಯಿತು.

ಸಿದ್ದು ಮತ್ತೆ ಸಿಎಂ ಕೂಗು: ಒಂದು ವರ್ಷದವರೆಗೆ ಪಕ್ಷದ ನಾಯಕರ ಸೂಚನೆಯಂತೆ ಎಲ್ಲವನ್ನು ಸಹಿಸಿಕೊಂಡಿದ್ದ ಕಾಂಗ್ರೆಸ್‌ ಶಾಸಕರು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಬಹಿರಂಗ ಆರೋಪಗಳನ್ನು ಮಾಡತೊಡಗಿದರು. ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜ್‌ ಸೇರಿದಂತೆ ಕೆಲವು ಶಾಸಕರು ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿಗಳು ಎಂದು ಬಹಿರಂಗವಾಗಿಯೇ ಹೇಳುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಧೋರಣೆಯನ್ನು ಖಂಡಿಸತೊಡಗಿದರು. ಇದು ಮಾಜಿ ಪ್ರಧಾನಿ ದೇವೇಗೌಡರ ಆಕ್ರೋಶಕ್ಕೆ ಕಾರಣವಾಯಿತು. ಸಿದ್ದರಾಮಯ್ಯ ಮೈತ್ರಿ ಸರ್ಕಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ಕಾಂಗ್ರೆಸ್‌ ಹೈಕಮಾಂಡ್‌ಗೆ ತಲುಪಿಸಿ ಅವರ ಮೂಲಕ ಸಿದ್ದರಾಮಯ್ಯ ಅವರನ್ನು ನಿಯಂತ್ರಿಸುವ ಕೆಲಸವನ್ನು ದೇವೇಗೌಡರು ಮಾಡಲು ಆರಂಭಿಸಿದರು.

ಲೋಕಸಭೆ ಚುನಾವಣೆ ಸೋಲು: ಲೋಕಸಭೆ ಚುನಾವಣೆಯನ್ನು ಮೈತ್ರಿ ಪಕ್ಷಗಳು ಜಂಟಿಯಾಗಿ ಎದುರಿಸಿದರೂ, ಎರಡೂ ಪಕ್ಷಗಳ ನಾಯಕರಲ್ಲಿ ಹೊಂದಾಣಿಕೆಯ ಕೊರತೆಯಿಂದ ಒಬ್ಬರ ವಿರುದ್ಧ ಒಬ್ಬರು ಪರೋಕ್ಷವಾಗಿ ಚುನಾವಣೆಯಲ್ಲಿ ಅಪನಂಬಿಕೆಯಿಂದ ಕೆಲಸ ಮಾಡುವಂತಾಯಿತು. ಮಂಡ್ಯ, ಹಾಸನ, ತುಮಕೂರಿನಲ್ಲಿ ದೇವೇಗೌಡರ ಕುಟುಂಬದ ಅಭ್ಯರ್ಥಿಗಳನ್ನು ಸೋಲಿಸಲು ಸಿದ್ದರಾಮಯ್ಯ ಪರೋಕ್ಷ ಯತ್ನ ನಡೆಸಿದ್ದರು ಎನ್ನುವ ಆರೋಪ ಕೇಳಿ ಬಂದಿತು. ಅದಕ್ಕೆ ಪ್ರತಿಯಾಗಿ ಜೆಡಿಎಸ್‌ ಕೂಡ ಕಾಂಗ್ರೆಸ್‌ ಅಭ್ಯರ್ಥಿಗಳ ವಿರುದ್ಧ ಪರೋಕ್ಷ ಕೆಲಸ ಮಾಡುವಂತ ಪರಿಸ್ಥಿತಿ ನಿರ್ಮಾಣವಾಯಿತು. ಅದು ಮೈತ್ರಿ ಪಕ್ಷಗಳಲ್ಲಿ ಮತ್ತಷ್ಟು ಅಪನಂಬಿಕೆ ಹೆಚ್ಚಾಗಲು ಕಾರಣವಾಯಿತು.

ಅದರ ಪರಿಣಾಮ ಕಾಂಗ್ರೆಸ್‌ನಲ್ಲಿ ಸರ್ಕಾರದಿಂದ ಹೊರ ಬರಬೇಕೆಂಬ ಕೂಗು ಕೇಳತೊಡಗಿತು. ಪ್ರತಿಪಕ್ಷದಲ್ಲಿ ಕುಳಿತರೂ ಸರಿ, ಜೆಡಿಎಸ್‌ ಜೊತೆಗೆ ಮೈತ್ರಿ ಮುಂದುವರೆಸುವುದು ಬೇಡ ಎಂಬ ಅಭಿಪ್ರಾಯ ಬಲಗೊಂಡಿತು. ಸ್ವತ: ಸಿದ್ದರಾಮಯ್ಯ ಕೂಡ ಚುನಾವಣೆ ಸೋಲಿನ ನಂತರ ಮೈತ್ರಿಯಿಂದ ಕಾಂಗ್ರೆಸ್‌ಗೆ ಭವಿಷ್ಯದಲ್ಲಿ ಹೆಚ್ಚು ನಷ್ಟವಾಗುತ್ತಿದೆ ಎಂದು ಮೈತ್ರಿಯಿಂದ ಹೊರ ಬರುವ ಬಗ್ಗೆಯೇ ಹೈ ಕಮಾಂಡ್‌ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದರು. ಅದಕ್ಕೆ ತದ್ವಿರುದ್ಧವಾಗಿ ಮಾಜಿ ಪ್ರಧಾನಿ ದೇವೇಗೌಡರು ಸಿದ್ದರಾಮಯ್ಯ ವಿರುದ್ಧವೇ ಕಾಂಗ್ರೆಸ್‌ ಹೈ ಕಮಾಂಡ್‌ಗೆ ದೂರು ನೀಡಿ ಅವರನ್ನು ನಿಯಂತ್ರಿಸುವಂತೆ ಮನವಿ ಮಾಡಿಕೊಂಡರು. ಅದು ಮೈತ್ರಿಯಲ್ಲಿ ಮತ್ತಷ್ಟು ಬಿರುಕು ಹೆಚ್ಚಾಗಲು ಕಾರಣವಾಯಿತು. ಅತೃಪ್ತರ ಬಂಡಾಯ ಬಲಗೊಳ್ಳಲು ಅದು ಪರೋಕ್ಷವಾಗಿ ಕಾರಣವಾಯಿತು.

ಬಂಡಾಯದ ನಿರ್ಲಕ್ಷ್ಯ: ಮುಖ್ಯಮಂತ್ರಿ ಕುಮಾರಸ್ವಾಮಿಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದ ಕಾಂಗ್ರೆಸ್‌ ಶಾಸಕರು, ಸಿದ್ದರಾಮಯ್ಯ ಅವರನ್ನು ತಮ್ಮ ನಾಯಕ ಎನ್ನುವುದನ್ನು ಬಿಂಬಿಸತೊಡಗಿದರು. ಅದಕ್ಕೆ ಸಿದ್ದರಾಮಯ್ಯ ಕೂಡ ಪರೋಕ್ಷ ಬೆಂಬಲ ನೀಡುತ್ತಲೇ ಬಂದರು ಎನ್ನುವ ಮಾತುಗಳು ಕೇಳಿ ಬಂದವು. ಹೀಗಾಗಿ ಕಾಂಗ್ರೆಸ್‌ ಶಾಸಕರು ಬಹಿರಂಗವಾಗಿ ಆರೋಪ ಮಾಡಿದರೂ, ಅವರ ವಿರುದ್ಧ ಕಾಂಗ್ರೆಸ್‌ ಯಾವುದೇ ಕ್ರಮ ಕೈಗೊಳ್ಳದಂತಹ ಸ್ಥಿತಿ ನಿರ್ಮಾಣವಾಯಿತು. ಅದು ದೇವೇಗೌಡರ ಆಕ್ರೋಶ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು. ಅದನ್ನು ತಡೆಯುವಂತೆ ದೇವೇಗೌಡರು ಕಾಂಗ್ರೆಸ್‌ ಹೈಕಮಾಂಡ್‌ ಮೂಲಕವೇ ಒತ್ತಡ ಹೇರುವ ಪ್ರಯತ್ನ ನಡೆಸಿದರು. ಅದು ಸಿದ್ದರಾಮಯ್ಯ ಅವರ ಅಸಮಾಧಾನ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು. ಅದೂ ಕೂಡ ಪರೋಕ್ಷವಾಗಿ ಕಾಂಗ್ರೆಸ್‌ನಲ್ಲಿ ಬಂಡಾಯ ಹೆಚ್ಚಾಗಲು ಕಾರಣವಾಯಿತು.

ಮೈತ್ರಿ ಪಕ್ಷಗಳ ನಾಯಕರು ಶಾಸಕರ ಅಸಮಾಧಾನವನ್ನು ಗಂಭೀರವಾಗಿ ಪರಿಗಣಿಸದೆ ತಮ್ಮದೇ ಆದ ಲೆಕ್ಕಾಚಾರದಲ್ಲಿ ಸರ್ಕಾರ ಉಳಿಸಿಕೊಳ್ಳುವ ಕಸರತ್ತು ನಡೆಸಿ, ಅಪನಂಬಿಕೆಯಲ್ಲಿಯೇ ಅಂತ್ಯದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುವ ಪ್ರಯತ್ನ ನಡೆಸಿದರು. ಆದರೂ, ನಾಯಕರ ನಡುವಿನ ಅಪನಂಬಿಕೆಯಿಂದಲೇ ಮೈತ್ರಿ ಅಂತ್ಯ ಕಾಣುವಂತಾಗಿರುವುದು ಮಾತ್ರ ವಾಸ್ತವ.

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next