-ಸಾಮಾನ್ಯವಾಗಿ ಮೊದಲ ಹಾಲುಹಲ್ಲು 4ರಿಂದ 12 ತಿಂಗಳು ವಯಸ್ಸಿನಲ್ಲಿ ಮೂಡಿಬರುತ್ತದೆ. ಶಿಶು ತನ್ನ ಕೈಬೆರಳುಗಳನ್ನು, ಆಟಿಕೆಗಳನ್ನು ಅಥವಾ ಕೈಗೆಟಕುವ ಯಾವುದೇ ವಸ್ತುವನ್ನು ಬಾಯಿಗೆ ತುರುಕಿ ಚೀಪುವುದು ಹಾಲುಹಲ್ಲು ಮೂಡುವ ಮೊದಲ ಲಕ್ಷಣವಾಗಿದೆ.
-ಹಲ್ಲು ಮೂಡುವ ವಿಷಯಕ್ಕೆ ಸಂಬಂಧಿಸಿ ಹೇಳುವುದಾದರೆ ಇದು ಪ್ರತಿಯೊಂದು ಶಿಶುವಿಗೂ ವಿಭಿನ್ನವಾಗಿರುತ್ತದೆ. ಕೆಲವು ಶಿಶುಗಳಿಗೆ ನೋವು ಅಥವಾ ಕಿರಿಕಿರಿ ಉಂಟು ಮಾಡದೆಯೇ ಹಲ್ಲುಗಳು ಮೂಡಿಬರುತ್ತವೆ. ಇನ್ನು ಕೆಲವು ಶಿಶುಗಳಲ್ಲಿ ವಸಡುಗಳು ನೋವಿನಿಂದ ಕೂಡಿ ಕೆಂಪಾಗಬಹುದು. ಹಲ್ಲುಗಳು ವಸಡನ್ನು ಛೇದಿಸಿ ಮೂಡಿಬರುವಾಗ ಕೆಲವು ಶಿಶುಗಳ ಗಲ್ಲಗಳು ಕೆಂಪೇರಬಹುದು, ಸ್ವಲ್ಪ ಜ್ವರವೂ ಕಾಣಿಸಿಕೊಳ್ಳಬಹುದು. ಜೊಲ್ಲು ಹೆಚ್ಚು ಸುರಿಯುವುದರಿಂದಾಗಿ ಕೆಲವು ಶಿಶುಗಳ ಮುಖದಲ್ಲಿ ದದ್ದುಗಳು ಉಂಟಾಗಬಹುದು.
-ಈ ಸಮಯದಲ್ಲಿ ಶಿಶುಗಳು ಹೆಚ್ಚು ಕಿರಿಕಿರಿ ಮಾಡಬಹುದು, ನಿದ್ದೆ ಕಡಿಮೆಯಾಗಬಹುದು. ಹಲ್ಲು ಮೂಡುವ ಸಮಯದಲ್ಲಿ ಕೈಗೆ ಸಿಕ್ಕಿದ್ದನ್ನು ಬಾಯಿಗೆ ಹಾಕಿ ಚೀಪುವುದರಿಂದಾಗಿ ಕೆಲವೊಮ್ಮೆ ಹಲ್ಲು ಮೂಡುವ ಸಮಯದಲ್ಲಿ ಶಿಶುಗಳಿಗೆ ಭೇದಿಯೂ ಕಾಣಿಸಿಕೊಳ್ಳಬಹುದಾಗಿದೆ.
-ಶುಚಿಯಾಗಿ ಕೈತೊಳೆದುಕೊಂಡು ಬೆರಳುಗಳಿಂದ ಅಥವಾ ಶುಚಿಯಾದ ಒದ್ದೆಬಟ್ಟೆಯಿಂದ ಯಾ ಬ್ಯಾಂಡೇಜ್ ಬಟ್ಟೆಯಿಂದ ಶಿಶುವಿನ ವಸಡುಗಳನ್ನು ಮೃದುವಾಗಿ ನೀವುವುದರಿಂದ ನೋವು, ಕಿರಿಕಿರಿಗೆ ಉಪಶಮನ ಒದಗಿಸಲು ಸಾಧ್ಯವಿದೆ.
-ಟೀತಿಂಗ್ ರಿಂಗ್‌ಗಳನ್ನು ಉಪಯೋಗಿಸಬಹುದು; ಆದರೆ ದ್ರವಾಂಶ ಹೊಂದಿರುವ ಟೀತಿಂಗ್ ರಿಂಗ್ ಬಳಕೆ ಬೇಡ. ಈ ರಿಂಗ್‌ಗಳನ್ನು ಉಪಯೋಗಕ್ಕೆ ಮುನ್ನ ಸ್ವಲ್ಪ ಹೊತ್ತು ಫ್ರಿಜ್‌ನಲ್ಲಿ ಇರಿಸಿ ತಂಪು ಮಾಡಿಕೊಳ್ಳಬಹುದು. ಇದನ್ನು ಶಿಶುವಿನ ಕೊರಳಿಗೆ ಕಟ್ಟಬೇಡಿ, ಅಪಾಯ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.
-ಶಿಶು ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನದ್ದಾಗಿದ್ದು, ಮೃದುವಾದ ಘನ ಆಹಾರವನ್ನು ಸೇವಿಸಲು ಪ್ರಾರಂಭಿಸಿದ್ದರೆ ಕಲ್ಲಂಗಡಿ, ಮುಳ್ಳುಸೌತೆ ಮತ್ತು ಕ್ಯಾರಟ್‌ನಂತಹ ಹಸಿ ತರಕಾರಿಗಳನ್ನು ತಮ್ಮ ನೋವಿರುವ ವಸಡುಗಳನ್ನು ತಣಿಸುವುದಕ್ಕಾಗಿ ಶಿಶುವಿಗೆ ಚೀಪಲು ಕೊಡಬಹುದು.
-ಜೊಲ್ಲು ಮೆತ್ತಿಕೊಂಡು ಮುಖದಲ್ಲಿ ದದ್ದುಗಳು ಕಾಣಿಸಿಕೊಳ್ಳದಂತೆ ಶಿಶುವಿನ ಬಾಯಿ, ಮುಖವನ್ನು ಆಗಾಗ ಶುಚಿಗೊಳಿಸುತ್ತಿರಬೇಕು.
-ಮಗುವಿಗೆ ಸಾಕಷ್ಟು ದ್ರವಾಹಾರ ಕೊಡಿ. ವೈದ್ಯರು ಶಿಫಾರಸು ಮಾಡದ ವಿನಾ ಔಷಧಯುಕ್ತ ಟೀತಿಂಗ್ ಜೆಲ್‌ಗಳನ್ನು ಉಪಯೋಗಿಸಬಾರದು.
Advertisement
ಡಾ| ದೀಪಿಕಾ ಪೈ, ಮಕ್ಕಳ ದಂತವೈದ್ಯರು, ಕೆಎಂಸಿ ಆಸ್ಪತ್ರೆ, ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು