ಬೆಂಗಳೂರು: ಹತ್ತು ವರ್ಷಗಳಿಗೂ ಕಡಿಮೆ ಅವಧಿಗೆ ಶಿಕ್ಷೆ ವಿಧಿಸಬಹುದಾಗಿರುವ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿಗಳನ್ನು ಪ್ರಕರಣ ದಾಖಲಾದ 60 ದಿನಗಳ ಬಳಿಕ ಪೊಲೀಸ್ ವಶಕ್ಕೆ ನೀಡಲಾಗದು ಎಂದು ಹೇಳಿರುವ ಹೈಕೋರ್ಟ್, ಮಾಜಿ ಶಾಸಕ ಮೊಯ್ದಿನ್ ಬಾವಾ ಸಹೋದರ ಬಿ.ಎಂ. ಮುಮ್ತಾಜ್ ಅಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡುವಂತೆ ತನಿಖಾಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಪ್ರಕರಣ ದಾಖಲಾದ 60 ದಿನಗಳ ಬಳಿಕ ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಬೇಕು ಎಂದು ಕೋರಿ ಮಂಗಳೂರಿನ ಕಾವೂರು ಪೊಲೀಸರು ಮತ್ತು ಮತ್ತು ಪ್ರಕರಣದ ದೂರುದಾರ ಹೈದರ್ ಅಲಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಪೊಲೀಸ್ ವಶಕ್ಕೆ ಪಡೆಯಲು ಕೊಲೆ ಪ್ರಕರಣದಲ್ಲಿ (10 ವರ್ಷಕ್ಕೂ ಮೇಲ್ಪಟ್ಟು ಶಿಕ್ಷೆ) 90 ದಿನಗಳವರೆಗೂ ತನಿಖೆಗೆ ಅವಕಾಶವಿರಲಿದೆ. ಈ ಸಂದರ್ಭದಲ್ಲಿ ಪ್ರಕರಣ ದಾಖಲಾದ 60 ದಿನಗಳವರೆಗೂ ಆರೋಪಿಗಳನ್ನು 15 ದಿನಗಳ ಕಾಲ ಪೊಲೀಸ್ ವಶದಲ್ಲಿಟ್ಟುಕೊಳ್ಳುವುದಕ್ಕೆ ಅವಕಾಶವಿದೆ.
ಆದರೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಗಳಲ್ಲಿ (10 ವರ್ಷದೊಳಗಿನ ಶಿಕ್ಷೆ) 60 ದಿನಗಳ ಕಾಲ ತನಿಖೆಗೆ ಅವಕಾಶವಿರಲಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದ 40 ದಿನಗಳ ಅವಧಿಯಲ್ಲಿ 15 ದಿನಗಳವರೆಗೂ ಪೊಲೀಸ್ ವಶಕ್ಕೆ ಪಡೆದುಕೊಳ್ಳುವುದಕ್ಕೆ ಅವಕಾಶವಿರಲಿದೆ.
ಆದರೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಿಎನ್‌ಎಸ್‌ಎಸ್ 108 (ಈ ಹಿಂದೆ ಐಪಿಸಿ 306) ಪ್ರಕಾರ ಆತ್ಮಹತ್ಯೆಗೆ ಪ್ರಚೋದನೆ ನೀಡುವ ವ್ಯಕ್ತಿಗೆ 10 ವರ್ಷಗಳ ವರೆಗೂ ವಿಸ್ತರಿಸಬಹುದಾದ ಶಿಕ್ಷೆ ವಿಧಿಸಬಹುದಾಗಿದೆ. ಶಿಕ್ಷೆ ವಿಧಿಸುವುದು ವಿಚಾರಣ ನ್ಯಾಯಾಲಯದ ವಿವೇಚನೆಗೆ ಬಿಟ್ಟಿದ್ದಾಗಿದೆ. ಇದರ ಅರ್ಥ ಹತ್ತು ವರ್ಷ ಶಿಕ್ಷೆ ವಿಧಿಸಬೇಕು ಎಂದಾಗುವುದಿಲ್ಲ ಎಂದು ತಿಳಿಸಲಾಗಿದೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು?
2024ರ ಅ. 6ರಂದು ಉದ್ಯಮಿ ಬಿ.ಎಂ. ಮುಮ್ತಾಜ್ ಅಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಮುಮ್ತಾಜ್ ಅವರ ಸಹೋದರ ಹೈದರ್ ಅಲಿ ತನ್ನ ಸೋದರನ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದೇ ಕಾರಣ ಎಂದು ದೂರು ನೀಡಿದ್ದರು. ಪ್ರಕರಣದಲ್ಲಿ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದರು. ಮೂವರು ಆರೋಪಿಗಳನ್ನು ಪೊಲೀಸ್ ವಶಕ್ಕೆ ಕಳುಹಿಸುವ ಮನವಿಯನ್ನು ವಿಚಾರಣ ನ್ಯಾಯಾಲಯ ಒಪ್ಪಿಕೊಂಡಿತ್ತು ಮತ್ತು ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ವಿಚಾರಣ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿದ ಪೊಲೀಸರು ಮತ್ತು ದೂರುದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.