ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ಸಫ್ದರ್ಜಂಗ್ ಆಸ್ಪತ್ರೆಯಿಂದ ಅಪಹರಣಕ್ಕೊಳಗಾದ ಒಂದೂವರೆ ತಿಂಗಳ ಹಸುಳೆಯನ್ನು ಉತ್ತರ ಪ್ರದೇಶದ ಶಹಜಹಾನ್ಪುರ ರೈಲು ನಿಲ್ದಾಣದಲ್ಲಿ ರಕ್ಷಿಸಲಾಗಿದ್ದು, ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ರವಿವಾರ(ನ17) ತಿಳಿಸಿದ್ದಾರೆ.
ರಕ್ಷಣ ಕಾರ್ಯಾಚರಣೆಯನ್ನು ದೆಹಲಿ ಪೊಲೀಸರು ಸರಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ) ಮತ್ತು ರೈಲ್ವೇ ರಕ್ಷಣಾ ಪಡೆ (ಆರ್ಪಿಎಫ್) ಸಹಯೋಗದಲ್ಲಿ ನಡೆಸಿದ್ದರು.
ಹೆಚ್ಚುವರಿ ಉಪ ಪೊಲೀಸ್ ಆಯುಕ್ತೆ ಆಕಾಂಕ್ಷಾ ಯಾದವ್, “ದೂರುದಾರ ಮಹಿಳೆ ನವೆಂಬರ್ 15 ರಂದು ತನ್ನ ಪತಿಗೆ ಮೂತ್ರಪಿಂಡ ಚಿಕಿತ್ಸೆಗಾಗಿ ಸಫ್ದರ್ಜಂಗ್ ಆಸ್ಪತ್ರೆಯಲ್ಲಿದ್ದಾಗ ಮಹಿಳೆಯೊಬ್ಬರು ಸಂಭಾಷಣೆಯಲ್ಲಿ ತೊಡಗಿದ್ದರು, ವಿಶ್ವಾಸ ಗಳಿಸಿದ ಬಳಿಕ ಮಗುವನ್ನು ಹಿಡಿದುಕೊಂಡು ಮುದ್ದಿಸಿದಂತೆ ಮಾಡಿ ಆಟೋ ರಿಕ್ಷಾದಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಪರಾರಿಯಾದರು ಎಂದು ಅಧಿಕಾರಿ ಹೇಳಿದರು.
ಸಫ್ದರ್ಜಂಗ್ ಎನ್ಕ್ಲೇವ್ ಪೊಲೀಸ್ ಠಾಣೆಯಲ್ಲಿ ತತ್ ಕ್ಷಣವೇ ಎಫ್ಐಆರ್ ದಾಖಲಿಸಲಾಗಿದ್ದು, ಎಸಿಪಿ ರಣಬೀರ್ ಸಿಂಗ್ ಅವರ ಮೇಲ್ವಿಚಾರಣೆಯಲ್ಲಿ ತನಿಖೆಯನ್ನು ಕೈಗೊಳ್ಳಲಾಗಿದೆ. ದೆಹಲಿ-ಎನ್ಸಿಆರ್ನಲ್ಲಿರುವ ಎಲ್ಲಾ ಪ್ರಮುಖ ಬಸ್ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳನ್ನು ಮೇಲ್ವಿಚಾರಣೆ ಮಾಡಲು ತಂಡಗಳನ್ನು ರಚಿಸಲಾಗಿದೆ ಮತ್ತು ಕಳುಹಿಸಲಾಗಿತ್ತು” ಎಂದು ಹೆಚ್ಚುವರಿ ಡಿಸಿಪಿ ಯಾದವ್ ಹೇಳಿದ್ದಾರೆ.
ಸಫ್ದರ್ಜಂಗ್ ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಮಹಿಳೆಯನ್ನು ಗುರುತಿಸಲಾಗಿತ್ತು ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಟ್ರ್ಯಾಕ್ ಮಾಡಲಾಗಿದೆ, ಇಬ್ಬರು ಶಂಕಿತರು ಬರೇಲಿ-ಬೌಂಡ್ ಸದ್ಭಾವನಾ ಎಕ್ಸ್ಪ್ರೆಸ್ ರೈಲನ್ನು ಹತ್ತಿದ್ದರು. ಮಾರುವೇಷದಲ್ಲಿದ್ದವರನ್ನು ಬಂಧಿಸಿ ಮಗುವನ್ನು ರಕ್ಷಿಸಲಾಯಿತು. ಇಬ್ಬರು ಆರೋಪಿಗಳನ್ನು ಉತ್ತರ ಪ್ರದೇಶದ ಮಹಿ ಸಿಂಗ್ (24) ಮತ್ತು ರೋಹಿತ್ ಕುಮಾರ್ (32) ಎಂದು ಗುರುತಿಸಲಾಗಿದೆ. ಶಿಶುವನ್ನು ಕುಟುಂಬದೊಂದಿಗೆ ಮತ್ತೆ ಸೇರಿಸಲಾಗಿದೆ.