Advertisement

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಗತ್ಯ

01:00 AM Feb 21, 2019 | Harsha Rao |

ಪೆರ್ಡೂರು: ಅಂತರ್ಜಲ ಮಟ್ಟ ಪೆರ್ಡೂರು ಗ್ರಾ.ಪಂ. ವ್ಯಾಪ್ತಿಯಲ್ಲೂ ತೀವ್ರ ವಾಗಿ ಕುಸಿಯತೊಡಗಿದ್ದು, ನೀರಿನ ಅಭಾವ ಕಾಣಿಸತೊಡಗಿದೆ.  

Advertisement

ಪೆರ್ಡೂರು ಗ್ರಾ. ಪಂ.  ವ್ಯಾಪ್ತಿಯಲ್ಲಿ  10, 927 ಜನಸಂಖ್ಯೆಯಿದ್ದು 3,380 ಕುಟುಂಬಗಳು ಇವೆ. ಇಲ್ಲಿ 1567 ಖಾಸಗಿ ಬಾವಿಗಳು, 22 ಸರಕಾರಿ ಬಾವಿಗಳಿದ್ದು ಶೇ.50ರಷ್ಟು ಜನ ಪಂಚಾಯತ್‌ ನೀರನ್ನೇ ಅವಲಂಬಿಸಿದ್ದಾರೆ. ಒಟ್ಟು  748 ನಳ್ಳಿ ನೀರಿನ ಸಂಪರ್ಕ ನೀಡಲಾಗಿದೆ.  ಕಳೆದ ಬಾರಿ ಸಮಸ್ಯೆ ಇದ್ದ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗಿತ್ತು.  

ಎಲ್ಲೆಲ್ಲಿ ಸಮಸ್ಯೆ? 
ಪಂಚಾಯತ್‌ ವ್ಯಾಪ್ತಿಯ ಹೊಸಂಗಡಿ, ಕೈರು, ಪಕ್ಕಾಲು, ಹೆರ್ಡೆ, ಬಾದಲ್‌ಜಡ್ಡು,  ಪಾಡಿಗಾರ,
ಕುಕ್ಕುಂಡಿ ಮೊದಲಾದ ಪ್ರದೇಶದಲ್ಲಿ  ಹಾಗೂ ಬೈರಂಪಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ  ಹರಿಖಂಡಿಗೆ, ಕುಂಟಾಲ್‌ಕಟ್ಟೆ ಪ್ರದೇಶದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಈ ವರ್ಷ ಮಾರ್ಚ್‌, ಎಪ್ರಿಲ್‌, ಮೇ ತಿಂಗಳಲ್ಲಿ ಸಮಸ್ಯೆ ಬಿಗಡಾಯಿಸುವ ಸಾಧ್ಯತೆ ಇದೆ.  

ಹೆಸರಿಗೆ ಮಾತ್ರ ಕೊಳವೆ ಬಾವಿ 
ಪಂಚಾಯತ್‌ ವ್ಯಾಪ್ತಿಯಲ್ಲಿ 53 ಕೊಳವೆ ಬಾವಿಗಳಿದ್ದರೂ ಈಗ ಕೇವಲ 13 ಮಾತ್ರ ಉಪಯೋಗಿಸಲಾಗುತ್ತಿದೆ. ಉಳಿದ ಕೊಳವೆ ಬಾವಿಗಳನ್ನು ಉಪಯೋಗಿಸದರೆ ನೀರಿನ ಸಮಸ್ಯೆ ಸ್ವಲ್ಪ ನೀಗಬಹುದು.  

ಅಂತರ್ಜಲ ಪೂರಣ ಆಗಬೇಕು
ಹಿಂದೆ ಈ ಭಾಗದಲ್ಲಿ ನೀರಿನ ಸಮಸ್ಯೆ ಇರಲಿಲ್ಲ. ಆದರೆ ಅವ್ಯಾಹತ ಬೋರ್‌ವೆಲ್‌ಗ‌ಳು, ನೀರಿನ ಬಳಕೆಯಿಂದ ಸಮಸ್ಯೆ ಇದೆ. ಆದ್ದರಿಂದ ಈ ಭಾಗದಲ್ಲಿ ಮಳೆ ನೀರಿಂಗಿಸುವಿಕೆಯಂತಹ ಕೆಲಸಗಳನ್ನು ಅಗತ್ಯವಾಗಿ ಮಾಡಬೇಕಿದೆ. ಜತೆಗೆ ಕೆರೆಗಳ ಹೂಳೆತ್ತುವಿಕೆಯೂ ಆಗಬೇಕಿದೆ.  

Advertisement

ಬೈರಂಪಳ್ಳಿಯಲ್ಲಿಯೂ ಸಮಸ್ಯೆ 
ಪೆರ್ಡೂರು ಗ್ರಾ.ಪಂ. ಹತ್ತಿರದ ಬೈರಂಪಳ್ಳಿ ಗ್ರಾ.ಪಂ.ನ ಹರಿಖಂಡಿಗೆ ಕುಂಟಾಲ್‌ಕಟ್ಟೆಯಲ್ಲಿ ಕೂಡ ಪ್ರತಿವರ್ಷ ನೀರಿನ ಸಮಸ್ಯೆಯಿದೆ. ಎಪ್ರಿಲ್‌ ಮೇ ತಿಂಗಳಲ್ಲಿ ಇಲ್ಲಿಗೆ ಟ್ಯಾಂಕರ್‌ ನೀರಿನ ಮೂಲಕ ಪೂರೈಕೆ ಮಾಡಲಾಗುತ್ತದೆ. ಹರಿಖಂಡಿಗೆಯಲ್ಲಿ ಕೇವಲ ಒಂದು ಬೋರ್‌ವೆಲ್‌ ಇದ್ದು ಇಲ್ಲಿ ನೀರಿನ ಟ್ಯಾಂಕ್‌ ನಿರ್ಮಾಣವಾದರೆ ಸ್ವಲ್ಪ ಸಮಸ್ಯೆ ದೂರವಾಗುತ್ತದೆ ಎಂದು ಬೈರಂಪಳ್ಳಿ ಗ್ರಾ.ಪಂ. ಅಧ್ಯಕ್ಷ ಸದಾಶಿವ ಪೂಜಾರಿ ತಿಳಿಸಿದ್ದಾರೆ.

ಟ್ಯಾಂಕರ್‌ ಮೂಲಕ ನೀರು
ನೀರಿನ ಸಮಸ್ಯೆ ಪ್ರದೇಶಗಳಿಗೆ ಕಳೆದ ವರ್ಷದಂತೆ ಈ ವರ್ಷ ಕೂಡ ಟ್ಯಾಂಕರ್‌ ಮೂಲಕ ನೀರನ್ನು ಪೂರೈಸಲಾಗುವುದು. ಸಮಸ್ಯೆ ಬಂದಲ್ಲಿ ತತ್‌ಕ್ಷಣ ಸ್ಪಂದನೆ ನೀಡಲಾಗುತ್ತದೆ.
-ಸುರೇಶ್‌ , ಪಂ.ಅಭಿವೃದ್ಧಿ ಅಧಿಕಾರಿ, ಪೆರ್ಡೂರು ಗ್ರಾ.ಪಂ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬೇಕು
ಬೇಗ ಮಳೆ ನಿಂತದ್ದರಿಂದ ಈ ಬಾರಿ ನೀರಿನ ಸಮಸ್ಯೆ ಹೆಚ್ಚಾಗಲಿದೆ. ಸಮಸ್ಯೆಗಳಿರುವ ಪ್ರದೇಶಗಳಲ್ಲಿ  ಈ ಬಾರಿ ಬಾವಿಗಳನ್ನು ತೋಡಲಾಗಿದೆ. ಕಳೆದ ವರ್ಷ ರೂಪುಗೊಂಡ ನೀರಿನ ಸೆಲೆ ಇರುವ ಪುತ್ತಿಗೆ ಹೊಳೆ ಮೂಲಕ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಂಡಲ್ಲಿ ಸಮಸ್ಯೆ ಬಗೆಹರಿಯಬಹುದು.                                                                              
 -ಶಾಂಭವಿ ಕುಲಾಲ್‌ ಪೆರ್ಡೂರು ಗ್ರಾ.ಪಂ. ಅಧ್ಯಕ್ಷರು

– ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next