ನವದೆಹಲಿ: ನೈಜ ಘಟನೆ ಆಧಾರಿತ ‘ಕಾಶ್ಮೀರ್ ಫೈಲ್ಸ್’ ಚಿತ್ರ ಭಾರಿ ಸುದ್ದಿಯಾಗುತ್ತಿದ್ದು, ಬಾಕ್ಸ್ ಆಫೀಸ್ ನಲ್ಲೂ ಯಶಸ್ವಿಯಾಗಿದ್ದು, 2 ದಿನಗಳಲ್ಲಿ ವಿವೇಕ್ ಅಗ್ನಿಹೋತ್ರಿ ಅವರ ಚಲನಚಿತ್ರವು ಬರೋಬ್ಬರಿ 8.5 ಕೋಟಿ ರೂ. ಗಳಿಸಿರುವುದಾಗಿ ತಿಳಿದು ಬಂದಿದೆ.
ಚಲನಚಿತ್ರ ಪ್ರೇಮಿಗಳ ಮೊದಲ ಆಯ್ಕೆಯಾಗಿ ಹೊರಹೊಮ್ಮಿರುವ ಚಿತ್ರವನ್ನು ಈಗಾಗಲೇ ಗಣ್ಯಾತಿಗಣ್ಯರು ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಿರುವ ಹಲವರು ಚಿತ್ರ ಮಂದಿರದಿಂದ ಕಣ್ಣೀರಿಟ್ಟು ಹೊರ ಬಂದಿದ್ದಾರೆ.
ಕುತೂಹಲಕಾರಿ ವಿಚಾರವೆಂದರೆ ರಾಧೆ ಶ್ಯಾಮ್, ಬ್ಯಾಟ್‌ಮ್ಯಾನ್ ಮತ್ತು ಗಂಗೂಬಾಯಿ ಕಥಿಯಾವಾಡಿ ಸೇರಿದಂತೆ ದೊಡ್ಡ ಬಜೆಟ್ ಚಿತ್ರಗಳು ಚಿತ್ರಮಂದಿರಗಳಲ್ಲಿ ಓಡುತ್ತಿದ್ದರೂ ಕಾಶ್ಮೀರ ಫೈಲ್ಸ್ ಚಲನಚಿತ್ರ ಪ್ರೇಕ್ಷಕರ ಮನಗೆಲ್ಲುವಲ್ಲಿ, ಸುದ್ದಿಯಾಗುವಲ್ಲಿ ಯಶಸ್ವಿಯಾಗಿದೆ.
ರಾಧೆ ಶ್ಯಾಮ್‌ಗೆ ಸೌತ್ ಸೂಪರ್‌ಸ್ಟಾರ್ ಪ್ರಭಾಸ್ ನಾಯಕನಾಗಿದ್ದರೆ, ಬ್ಯಾಟ್‌ಮ್ಯಾನ್ ಹಾಲಿವುಡ್ ಹಾರ್ಟ್‌ಥ್ರೋಬ್ ರಾಬರ್ಟ್ ಪ್ಯಾಟಿನ್ಸನ್‌ರನ್ನು ಹೊಂದಿದ್ದಾರೆ. ಗಂಗೂಬಾಯಿ ಕಥಿಯಾವಾಡಿಯನ್ನು ಬಾಲಿವುಡ್‌ನ ಖ್ಯಾತ ಚಲನಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದಾರೆ ಮತ್ತು ಆಲಿಯಾ ಭಟ್ ನಟಿಸಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ಅವರ ತಾರಾಗಣ ಒಳಗೊಂಡಿದೆ. 1990 ರಲ್ಲಿ ಕಣಿವೆಯಲ್ಲಿದ್ದ ಎಲ್ಲವನ್ನೂ ಬಿಟ್ಟು ಹೋಗಬೇಕಾದ ಐದು ಲಕ್ಷಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರ ದುಸ್ಥಿತಿಯನ್ನು ಹೊರತರುವ “ಪ್ರಾಮಾಣಿಕ” ಮತ್ತು “ಶ್ರದ್ಧೆಯ” ಪ್ರಯತ್ನಕ್ಕಾಗಿ ಚಲನಚಿತ್ರವನ್ನು ವ್ಯಾಪಕವಾಗಿ ಪ್ರಶಂಸಿಸಲಾಗುತ್ತಿದೆ.