ಅದು ನನಗೆ ದೊರೆತ ಮೊದಲ ಗೆಲುವು. ಮುಂದೆ ಏರಬೇಕಾಗಿರುವ ಎತ್ತರದ ಮೊದಲ ಮೆಟ್ಟಿಲದು. ಅಲ್ಲಿಯವರೆಗೂ ಆನಂದ ಭಾಷ್ಪದ ಬಗ್ಗೆ ಕೇಳಿದ್ದಷ್ಟೇ. ಆದರೆ ಅಂದೇ ಮೊದಲ ಬಾರಿಗೆ ನನಗೆ ಅನುಭವವಾಗಿದ್ದು.
ಅಂದು ಮೊಬೈಲ್ ಫೋಟೋಗ್ರಾಫಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದೆ. ವೇದಿಕೆಯಲ್ಲಿ ನನ್ನ ಹೆಸರನ್ನು ಘೋಷಿಸುತ್ತಿದ್ದಂತೆ ನನಗಾದ ಅನುಭವ ಈಗಲೂ ರೋಮಾಂಚನ ತರುತ್ತದೆ. ಆ ಸಂತಸ ಹೇಳತೀರದು. ಆ ಚಪ್ಪಾಳೆಯ ಸದ್ದಿನ ಮದ್ಯೆ ಬಹುಮಾನ ಪಡೆಯಲು ಓಡಿ ಹೋದದ್ದು, ಅದನ್ನು ಸೆರೆಹಿಡಿಯಲು ಕೆಮರಾ ಕಣ್ಣುಗಳು ನನ್ನತ್ತ ತಿರುಗಿದ್ದು ಎಲ್ಲವೂ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತೆ ಇದೆ.
ವಿಜಯಪುರದ ಮಹಿಳಾ ವಿವಿಯಲ್ಲಿ ಮಾಧ್ಯಮ ವಿದ್ಯಾರ್ಥಿನಿಯಾದ ನನಗೆ ಮೈಸೂರಿನಲ್ಲಿ ನಡೆದ ಜರ್ನೋತ್ರಿ ಮಾಧ್ಯಮ ಹಬ್ಬ – 2023ರಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿಬಂದಿತ್ತು. ಅಂದು ನಾನು ಎರಡು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ. ಕ್ಲಾಸ್‌ನಲ್ಲಿ ಏರು ಧ್ವನಿಯಲ್ಲಿ ಟೀಚರ್ ಕೇಳ್ಳೋ ಪ್ರಶ್ನೆಗಳಿಗೆ ಉತ್ತರ ನೀಡಲು ತಡಬಡಿಸುವ ನನಗೆ, ಧೈರ್ಯ ತುಂಬಿ ಹತ್ತಾರು ಜನರ ಮಧ್ಯೆ ನಡೆಯುವ ಚರ್ಚಾ ಸ್ಪರ್ಧೆಗೆ ಇಳಿಸಿದ್ದರು. ವೇದಿಕೆ ಹತ್ತಿದ ನನ್ನ ಪಾಡು ನಾಯಿ ಪಡು. ಏನೋ ಹೇಳಲು ಹೊರಟು ಇನ್ನೇನೋ ಹೇಳಿ ತಡಬಡಿಸುತ್ತ ಅರ್ಧದಲ್ಲಿಯೇ ವೇದಿಕೆ ಬಿಟ್ಟು ಕೆಳಗಿಳಿದೆ.
ಇನ್ನು ಉಳಿದಿದ್ದು ನನಗೆ ಅರಿವಿಲ್ಲದೆ ನನ್ನೊಳಗಿರುವ ಫೋಟೋಗ್ರಫಿ ಕಲೆ. ಈ ಸ್ಪರ್ಧೆಗೆ ಹೆಸರು ನೀಡಿದ್ದೆ ಒಂದು ವಿಚಿತ್ರ. ಅಂದು ಬಸ್‌ಗಾಗಿ ಬಸ್‌ಸ್ಟಾಂಡ್ ಕಾಯುತ್ತಾ ನಿಂತಿದ್ದೆ. ಕೇಸರಿನಲ್ಲಿರುವ ನಗುಮೊಗದ ಹೂವೊಂದನ್ನು ಕಂಡ ನನಗೆ ಅದನ್ನು ಮೊಬೈಲ್ ಕೆಮರಾ ಕಣ್ಣಿನಲ್ಲಿ ಸೆರೆಹಿಡಿಯುವ ಮನಸ್ಸಾಯಿತು. ಅದನ್ನು ನೋಡಿದ ನನ್ನ ಸಂಗಡಿಗರು, ಎನಿದು ಹುಚ್ಚಾಟ, ಇಷ್ಟೆಲ್ಲಾ ಫೋಟೋ ಹುಚ್ಚು ಇರಬಾರದು ಎಂದೆಲ್ಲಾ ಹೇಳುತ್ತಿರುವುದನ್ನು ಕೇಳಿ ಕೊಂಚ ಸಂಕೋಚಗೊಂಡಿದ್ದರೂ, ನಾನು ತೆಗೆದ ಫೋಟೋ ನೋಡಿ ಅರೇ! ಫೋಟೋ ಎಷ್ಟು ಚನ್ನಾಗಿದೆ ಎಂದಿದ್ದರು. ಇದಾದ ಸುಮಾರು ಒಂದು ತಿಂಗಳ ಬಳಿಕ ಮೈಸೂರಿನಲ್ಲಿ ಜರ್ನೋತ್ರಿ ಮಾಧ್ಯಮ ಹಬ್ಬ ನಡಿಯುತ್ತಿದೆ, ಅದರಲ್ಲಿ ನಾವೂ ಭಾಗವಹಿಸಲಿದ್ದೇವೆ ಎಂಬ ವಿಷಯ ತಿಳಿಯಿತು. ಅಲ್ಲಿ ಕೆಮರಾ ಹಾಗೂ ಮೊಬೈಲ್ ಫೋಟೋಗ್ರಾಫಿ ಎಂಬ ಎರಡು ಸ್ಪರ್ಧೆಗಳಿದ್ದವು. ಮೊಬೈಲ್ ಫೋಟೋಗ್ರಾಫಿ ಯಾರು ಮಾಡುವಿರಿ ಎನ್ನುವ ಅಧ್ಯಾಪಕರ ಪ್ರಶ್ನೆಗೆ ನನ್ನ ಸೀನಿಯರ್ ಒಬ್ಬರು ನನ್ನ ಹೆಸರನ್ನು ಸೂಚಿಸಿದರು. ಆಗುವುದಿಲ್ಲ ಅಂದರೆ ಸರಿಯಲ್ಲ ಎಂದು ಒಂದು ಪ್ರಯತ್ನ ಮಾಡೋಣ ಅಂತ ಒಪ್ಪಿಕೊಂಡೆ.
ಈ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಬರುತ್ತದೆ ಎಂದು ನಾನು ಕನಸ್ಸಿನಲ್ಲೂ ಯೋಚಿಸಿರಲಿಲ್ಲ. ಎಡನೆಯ ಅಥವಾ ಮೂರನೇ ಸ್ಥಾನ ಸಿಕ್ಕರೆ ಸಾಕು ಎಂದು ಅಂದುಕೊಂಡಿದ್ದ ನನಗೆ ಮೊದಲ ಬಹುಮಾನ ಬಂದಿದ್ದು ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ.
-ಲಕ್ಷ್ಮೀ ಶಿವಣ್ಣ
ಮಹಿಳಾ ವಿವಿ ವಿಜಯಪುರ