Advertisement

ಸಮಾಜ ಸೇವೆಯಲ್ಲಿರುವ ಗೌರವ ರಾಜಕೀಯದಲ್ಲಿಲ್ಲ

06:00 AM Apr 07, 2018 | Team Udayavani |

ಯು.ಆರ್‌. ಸಭಾಪತಿ ಜತೆ 1990ರಿಂದ ರಾಜಕೀಯ ರಂಗದಲ್ಲಿ ಗುರುತಿಸಿಕೊಂಡು, ನಗರಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ ನಿತ್ಯಾನಂದ ಒಳಕಾಡು 1999ರಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಸೋಲು ಕಂಡವರು. “ಉಡುಪಿ ಜಿಲ್ಲಾ ನಾಗರಿಕ ಸಮಿತಿ’ ಹೆಸರಿನಲ್ಲಿ ಸಮಾಜಸೇವೆ ನಿರತರಾಗಿರುವ ಇವರು ತಮ್ಮದೇ ಆದ 2 ಆ್ಯಂಬುಲೆನ್ಸ್‌ಗಳನ್ನು ಹೊಂದಿದ್ದು ಉಡುಪಿ ಪರಿಸರದ ಎಲ್ಲೇ ಅಪಘಾತಗಳಾಗಲಿ, ಸಹಜ ಸಾವು ಸಂಭವಿಸಲಿ ನೆರವಿಗೆ ಧಾವಿಸುತ್ತಾರೆ. ದಿನದ 24 ತಾಸೂ ಈ ಸೇವೆ ಉಚಿತವಾಗಿ ಲಭ್ಯ. ತಮ್ಮ ರಾಜಕೀಯ, ಸಾಮಾಜಿಕ ಕ್ಷೇತ್ರಗಳ ಅನುಭವವನ್ನು “ಮಾತಿನ ಮತ’ದಲ್ಲಿ ಹೀಗೆ ಹಂಚಿಕೊಂಡಿದ್ದಾರೆ.

Advertisement

ಪಕ್ಷೇತರರಾಗಿ ಸ್ಪರ್ಧಿಸಿದ್ದು ಯಾಕೆ?
ನಾನು ಹಿಂದಿನಿಂದಲೂ ಯು.ಆರ್‌. ಸಭಾಪತಿ ಅವರ ಬೆಂಬಲಿಗ, ಅವರು ಯಾವ ಪಕ್ಷಕ್ಕೆ ಹೋದರೂ ಅವರನ್ನು ಬೆಂಬಲಿಸುತ್ತಿದ್ದೆ. ಮಧ್ಯೆ ಕೆಲವೊಂದು ವಿಚಾರದಲ್ಲಿ ಅವರೊಂದಿಗೆ ಉಂಟಾದ ಮನಸ್ತಾಪದಿಂದ ಮತ್ತು ನನ್ನ ಹಿತೈಷಿಗಳ ಒತ್ತಾಯಕ್ಕೆ ಮಣಿದು ಅವರ ವಿರುದ್ಧವೇ ನಾನು ಪಕ್ಷೇತರನಾಗಿ ಸ್ಪರ್ಧಿಸಬೇಕಾಯಿತು.

ನಗರಸಭಾ ಸದಸ್ಯರಾಗಿ ನಿಮ್ಮ ಸೇವೆ?
ಜಿಲ್ಲಾ ನಾಗರಿಕ ಸಮಿತಿಯ ನೇತೃತ್ವದಲ್ಲಿ ಕಳೆದ ಅವಧಿಯಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ 31ನೇ ಬೈಲೂರು ವಾರ್ಡ್‌ಗೆ ನಗರಸಭಾ ಸದಸ್ಯನಾಗಿದ್ದೆ. ಆಗ ನನಗೆ ನನ್ನ ಬೈಲೂರು ವಾರ್ಡ್‌ ಬಿಟ್ಟರೆ ಬೇರೆ ವಾರ್ಡ್‌ನ ಜನರ ಕಷ್ಟ ಸುಖಕ್ಕೆ ಸ್ಪಂದಿಸುವ ಅವಕಾಶ ಇರಲಿಲ್ಲ. ಆದರೂ ನಾನು ಎಲ್ಲ ವಾರ್ಡ್‌ಗಳಿಗೆ ಹೋಗಿ ಕೆಲಸ ಮಾಡುತ್ತಿದ್ದೆ. ನನಗೆ ಎಲ್ಲ ಜಾತಿ, ಮತ, ಪಕ್ಷದವರು ಬೇಕು. ಹೆಣ ತೆಗೆದುಕೊಂಡು ಹೋಗುವಾಗ ಅವ ಕಾಂಗ್ರೆಸ್‌, ಇವ ಬಿಜೆಪಿ ಎಂದು ನೋಡಲಿಕ್ಕೆ ಆಗುತ್ತದಾ?

ಕೇಂದ್ರ, ರಾಜ್ಯ ಸರಕಾರದ ಕುರಿತು ಅಭಿಪ್ರಾಯ?
ಕೇಂದ್ರ ಸರಕಾರದ ಜಿಎಸ್‌ಟಿಯಿಂದ ಸಣ್ಣ ಕೈಗಾರಿಕೆಗಳಿಗೆ ಭಾರೀ ಹೊಡೆತ ಉಂಟಾಗಿದೆ. ಸಾಕಷ್ಟು  ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಕೇಂದ್ರ ಯಾವುದೇ ಉದ್ಯೋಗವನ್ನು ಸೃಷ್ಟಿ ಮಾಡಿಲ್ಲ. ರಾಜ್ಯ ಸರಕಾರವೂ ಕೂಡ ಹಲವಾರು ಭಾಗ್ಯಗಳನ್ನು ನೀಡಿದೆಯಾದರೂ ಯುವಕರಿಗೆ ಉದ್ಯೋಗ ಭಾಗ್ಯವನ್ನು ಕೊಟ್ಟಿಲ್ಲ.

ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಿದ್ದೀರಾ?
ಸಮಾಜಸೇವೆಗೆ ಇರುವಷ್ಟು ಗೌರವ ರಾಜಕೀಯದಲ್ಲಿ ಇಲ್ಲ. ರಾಜಕೀಯದಲ್ಲಿ ಜನರು ಎದು ರಿನಲ್ಲಿ ಚೆನ್ನಾಗಿ ಮಾತನಾಡುತ್ತಾರೆ. ತಮ್ಮ ಕೆಲಸ ಆಗದಿದ್ದರೆ ಜನಪ್ರತಿನಿಧಿಯ ಜತೆಗೆ ಆತನ ಅಪ್ಪ ಆಮ್ಮನನ್ನೂ ಸೇರಿಸಿ ಬೈಯುತ್ತಾರೆ. ಸಮಾಜಸೇವೆಯಲ್ಲಿ ಸಿಗುವಷ್ಟು ತೃಪ್ತಿ ಎಲ್ಲೂ ಸಿಗದು. ಹಾಗಾಗಿ ಸಮಾಜಸೇವೆಯೇ ನನ್ನ ಮೊದಲ ಆದ್ಯತೆ.

Advertisement

ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next