Advertisement

ಆರೋಗ್ಯ ಸಮಸ್ಯೆ ಪರಿಹಾರಕ್ಕೆ ಬರಲಿದೆ ಲಿವಿಂಗ್‌ ಲ್ಯಾಬ್‌

12:33 PM Dec 01, 2018 | Team Udayavani |

ಬೆಂಗಳೂರು: ಸಮಾನ ಆರೋಗ್ಯ ಸಮಸ್ಯೆಗಳ ಕುರಿತ ಸಂಶೋಧನೆ ನಿಟ್ಟಿನಲ್ಲಿ ರಾಜ್ಯದಲ್ಲಿ ಲಿವಿಂಗ್‌ ಲ್ಯಾಬ್‌ ಸ್ಥಾಪಿಸಲು ಮುಂದಾಗಿದ್ದು, ಇದರಿಂದ ಆರೋಗ್ಯ ಕ್ಷೇತ್ರದ ವಿವಿಧ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದು ಕಿಂಗ್ಡಮ್‌ ಆಫ್ ನೆದರ್‌ಲ್ಯಾಂಡ್ಸ್‌ನ ಕನ್ಸೂಲ್‌ ಜನರಲ್‌ ಗೆರ್ಟ್‌ ಹೈಜ್‌ಕೂಪ್‌ ತಿಳಿಸಿದರು.

Advertisement

ಟೆಕ್‌ ಸಮಿಟ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಮಾನ ಆರೋಗ್ಯ ಸಮಸ್ಯೆಗಳಿಗೆ ಸಂಶೋಧನೆಗಳ ಆಧಾರದ ಮೇಲೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇದರೊಂದಿಗೆ ಇತರೆ ತಂತ್ರಜ್ಞಾನವನ್ನೂ ವಿನಿಮಯ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು. 

ನೆದರ್‌ಲ್ಯಾಂಡ್‌ ಸರ್ಕಾರ 2016ರಲ್ಲಿ ಭಾರತದೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ, ಕರ್ನಾಟಕದಲ್ಲಿ ಲಿವಿಂಗ್‌ ಲ್ಯಾಬ್‌ ಸ್ಥಾಪಿಸಲು ನೆದರ್‌ಲ್ಯಾಂಡ್‌ ಸರ್ಕಾರ ನಿರ್ಧರಿಸಿದೆ. ಇದರಿಂದ ವೈದ್ಯಕೀಯ ಕ್ಷೇತ್ರದಲ್ಲಿನ ನೂತನ ಉಪಕರಣಗಳು, ಇ-ಆರೋಗ್ಯ ಸೇವೆಗಳು, ಔಷಧಗಳ ಮೇಲೆ ನಡೆಯುತ್ತಿರುವ ಸಂಶೋಧನೆಗಳನ್ನು ಪರಿಶೀಲಿಸಿ ಮಾಹಿತಿ ವಿನಿಮಯ ಮೂಲಕ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.

ಲಿವಿಂಗ್‌ ಲ್ಯಾಬ್‌ ಮೂಲಕ ಭಾರತ ಮತ್ತು ನೆದರ್‌ಲ್ಯಾಂಡ್ಸ್‌ ದೇಶಗಳಲ್ಲಿ ಬಳಸುವ ಆರೋಗ್ಯ ಸಂಬಂಧಿ ಸಾಕ್ಷರತಾ ಅಪ್ಲಿಕೇಷನ್‌ಗಳನ್ನು ಸೃಷ್ಟಿಸಲು ಜೆನೆರಿಕ್‌ ಟೂಲ್‌ ಅಭಿವೃದ್ಧಿ, ಯುರಿನರಿ ಟ್ರಾಕ್‌ ಇನ್‌ಫೆಕ್ಷನ್‌ಗೆ ಪಾಯಿಂಟ್‌ ಆಫ್ ಸೆಂಟರ್‌ ಟೂಲ್‌ ಅಭಿವೃದ್ಧಿ ಹಾಗೂ ನರಶಮನಕಾರಿ ಅಥವಾ ನರಶೂಲೆ ರೋಗದಿಂದ ಬಳಲುತ್ತಿರುವವರಿಗೆ ಸ್ಕ್ರೀನಿಂಗ್‌ಗೆ ಬಯೋ ಮಾರ್ಕರ್‌ಗಳನ್ನು ಗುರುತಿಸಲು ಎರಡೂ ದೇಶಗಳು ಮುಂದಾಗುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಗೆರ್ಟ್‌ ಹೈಜ್‌ಕೂಪ್‌ ತಿಳಿಸಿದರು. 

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಸಲಹೆಗಾರ ರಾಜ್‌ ಶ್ರೀವಾತ್ಸವ್‌ ಅವರು, ಕಳೆದ ವರ್ಷ ಟೆಕ್‌ ಕುರಿತ ಅಧ್ಯಯನಕ್ಕಾಗಿ ರಾಜ್ಯದ 10 ವಿದ್ಯಾರ್ಥಿಗಳನ್ನು ಉಚಿತವಾಗಿ ನೆದರ್‌ಲ್ಯಾಂಡ್‌ಗೆ ಕಳುಹಿಸಲಾಗಿತ್ತು. ಆದರೆ, ಈ ಬಾರಿ ನೆದರ್‌ಲ್ಯಾಂಡ್‌ ಪ್ರಾಧ್ಯಾಪಕರನ್ನೇ ಬೆಂಗಳೂರಿಗೆ ಕರೆಸಲಾಗುತ್ತಿದ್ದು, ಜೂನ್‌ ಅಥವಾ ಜುಲೈನಲ್ಲಿ ನಡೆಯಲಿರುವ ಬೇಸಿಗೆ ಶಿಬಿರದಲ್ಲಿ 200 ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು,

Advertisement

ತಂತ್ರಜ್ಞಾನ ಕುರಿತು ಹಲವಾರು ವಿಚಾರಗಳನ್ನು ತಿಳಿಯಲು ಅನುಕೂಲವಾಗಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನೆದರ್‌ಲ್ಯಾಂಡ್‌ನ‌ ಭಾರತೀಯ ರಾಯಭಾರಿ ಮಾರ್ಟಿನ್‌ ವಾನ್‌ ಡೆನ್‌ ಬರ್ಗ್‌, ಹಿರಿಯ ಸಲಹೆಗಾರ ನೈಲ್ಸ್‌ ವ್ಯಾನ್‌ ಲ್ಯೂವೆನ್‌ ಹಾಗೂ ಮಿಚೆಲ್‌ ರ್ಯಾಡಿಮೇಕರ್‌ ಸೇರಿ ಪ್ರಮುಖರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next