Advertisement

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

12:06 AM Jan 04, 2025 | Team Udayavani |

ಬೆಂಗಳೂರು: ಸಂಶೋಧನೆ, ವಸ್ತುನಿಷ್ಠ ಪಠ್ಯಕ್ರಮಗಳು ಮತ್ತು ರೋಗಿಗಳ ಬಗೆಗಿನ ವಿಶೇಷ ಕಾಳಜಿ ತೋರುವ ನಿಮ್ಹಾನ್ಸ್‌ನ ನಡೆಯು ಈ ಸಂಸ್ಥೆಯನ್ನು ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿ ಸ್ಥಾನಕ್ಕೆ ತಂದಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

Advertisement

ನಿಮ್ಹಾನ್ಸ್‌ನ ಸಂಸ್ಥೆಯ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಹಾನ್ಸ್‌ನ ಸುವರ್ಣ ಮಹೋತ್ಸವ ಎಂದರೆ ಇಡೀ ದೇಶವೇ ಸಂಭ್ರಮಿಸಬೇಕಾದ ಕಾರ್ಯಕ್ರಮ. ಭಾರತವು ಮಾನಸಿಕ ಕಾಯಿಲೆಗೆ ಸಂಬಂಧಿಸಿದಂತೆ ಪಾಶ್ಚಾತ್ಯ ದೇಶಗಳಿಗಿಂತ ವಿಭಿನ್ನ ಮತ್ತು ಕ್ಲಿಷ್ಟಕರ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಬಳ್ಳಾರಿ ಮಾಡೆಲ್‌ (ಮೂಲಭೂತ ಮಾನಸಿಕ ಆರೋಗ್ಯ ಕಾಳಜಿಗಾಗಿ ಸಮುದಾಯ ಆಧಾರಿತ ಮಾದರಿ) ಮಾನಸಿಕ ಸಮಸ್ಯೆಯನ್ನು ಸ್ಥಳೀಯ ಮಟ್ಟದಲ್ಲಿ ಸರಿಪಡಿರುವ ಯಶಸ್ವಿ ವಿಧಾನವಾಗಿ ಹೊರಹೊಮ್ಮಿದೆ. ಸಂಸ್ಥೆಯು ಆಧುನಿಕ ವೈದ್ಯ ಪದ್ಧತಿ ಜತೆಗೆ ಯೋಗ, ಆಯುರ್ವೇದದ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ನಡೆಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರದ ಆರೋಗ್ಯ ಸಚಿವ ಜೆ. ಪಿ. ನಡ್ಡಾ ಮಾತನಾಡಿ, ವಿಶ್ವದ ಅಗ್ರ 200 ಆಸ್ಪತ್ರೆಗಳಲ್ಲಿ ನಿಮ್ಹಾನ್ಸ್‌ ಸಹ ಒಂದು ಎಂದವರು ಪ್ರಶಂಶಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಿಮ್ಹಾನ್ಸ್‌ ಸಂಸ್ಥೆಯ ಕಾರ್ಯನಿರ್ವಹಣೆಗಾಗಿ ಪ್ರತಿವರ್ಷ 137 ಕೋಟಿ ರೂ.ಗಳನ್ನು ಒದಗಿಸುವ ಮೂಲಕ ರಾಜ್ಯ ಸರಕಾರ ತನ್ನ ಬದ್ಧತೆಯನ್ನು ನಿರೂಪಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next