Advertisement
ಮೈತ್ರಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಸಕರ ಕ್ಷೇತ್ರಗಳಿಗೆ 25 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಅಲ್ಲದೇ 14ನೇ ಹಣಕಾಸು ಆಯೋಗದ ಅನುದಾನದಲ್ಲಿ ಪ್ರತಿ ಶಾಸಕರ ಕ್ಷೇತ್ರಗಳಿಗೆ 5 ಕೋಟಿ ರೂ. ನಿಗದಿಪಡಿಸಲಾಗಿತ್ತು. ಆದರೆ, ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ನೀಡಲಾಗಿದ್ದ ಅನುದಾನವನ್ನು ಕಡಿತಗೊಳಿಸಿ ಆದೇಶ ಹೊರಡಿಸಲಾಗಿದೆ.
Related Articles
Advertisement
ಆದರೆ, ಕಾಂಗ್ರೆಸ್ ಶಾಸಕರೇ ಪ್ರತಿನಿಧಿಸುವ ರಾಮಲಿಂಗಾ ರೆಡ್ಡಿ ಪ್ರತಿನಿಧಿಸುವ ಬಿಟಿಎಂ ಲೇಔಟ್ ಹಾಗೂ ಅವರ ಪುತ್ರಿ ಸೌಮ್ಯ ರೆಡ್ಡಿ ಪ್ರತಿನಿಧಿಸುವ ಜಯನಗರ ಕ್ಷೇತ್ರದ ಅನುದಾನದ ಬಗ್ಗೆ ಯಾವುದೇ ಬದಲಾವಣೆ ಮಾಡದಿರುವುದು ಕೂಡ ಚರ್ಚೆಗೆ ಗ್ರಾಸವಾಗುವಂತಿದೆ. ಅದೇ ರೀತಿ ಬಿಬಿಎಂಪಿಗೆ 14ನೇ ಹಣಕಾಸು ಆಯೋಗದಿಂದ ಬಿಡುಗಡೆಯಾದ ಅನುದಾನದಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಶಾಸಕರ ಕ್ಷೇತ್ರಗಳಿಗೂ 5 ಕೋಟಿ ರೂಪಾಯಿ ಮೀಸಲಿಡಲಾಗಿತ್ತು.
ಪರಿಷ್ಕೃತ ಬಜೆಟ್‌ನಲ್ಲಿ ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಹೆಬ್ಬಾಳ, ವಿಜಯನಗರ, ಪುಲಕೇಶಿನಗರ, ಚಾಮರಾಜಪೇಟೆ, ಶಾಂತಿನಗರ, ಗಾಂಧಿನಗರ ಕ್ಷೇತ್ರಗಳಿಗೆ ನೀಡಿರುವ ಅನುದಾನವನ್ನು 5 ಕೋಟಿಯಿಂದ 2 ಕೋಟಿಗೆ ಇಳಿಕೆ ಮಾಡಲಾಗಿದ್ದು, ಅನರ್ಹರ ಕ್ಷೇತ್ರಗಳಿಗೆ ನೀಡಿರುವ ಅನುದಾನವನ್ನು ಮಾತ್ರ ಕಡಿತಗೊಳಿಸದೇ ಇರುವುದು ಕಾಂಗ್ರೆಸ್ ಶಾಸಕರನ್ನು ಕೆರಳಿಸುವಂತೆ ಮಾಡಿದೆ.
2019-20 ನೇ ಸಾಲಿನ ಬಿಬಿಎಂಪಿ ಪಾಲಿಕೆ ಆದಾಯ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬರುವ ಅನುದಾನವನ್ನು ಲೆಕ್ಕ ಹಾಕಿ 12997 ಕೋಟಿ ಆದಾಯದ ನಿರೀಕ್ಷೆ ಇಟ್ಟು ಬಜೆಟ್ ಮಂಡಿಸಿ ಅನುಮೋದನೆ ಪಡೆಯಲಾಗಿತ್ತು. ಆದರೆ, ವೆಚ್ಚದ ಪ್ರಮಾಣ 12,958 ಕೋಟಿ ಎಂದು ಅಂದಾಜಿಸಲಾಗಿತ್ತು. ಹೊಸ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಬಿಎಂಪಿ ಅನುಮೋದನೆ ಪಡೆದ ಬಜೆಟ್‌ಗೆ ತಡೆಯೊಡ್ಡಿ ಪರಿಷ್ಕೃರಣೆಗೊಳಿಸಲು ಸೂಚಿಸಿತ್ತು.
ಬಿಬಿಎಂಪಿ ಆಯವ್ಯಯದಲ್ಲಿ ನಿರೀಕ್ಷಿತ ಆದಾಯ ಬರದಿದ್ದರೂ, ವೆಚ್ಚಗಳಿಗೆ ಬರುವ ಅನುದಾನಕ್ಕೆ ಅನುಗುಣವಾಗಿ ಜಾಬ್ ಕೋಡ್ ನೀಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದರಿಂದ ಪ್ರತಿ ವರ್ಷ ಗುತ್ತಿಗೆದಾರರಿಗೆ ನೀಡುವ ಬಾಕಿ ಪ್ರಮಾಣ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ಅನುದಾನ ಕಡಿತ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. 2018-19 ನೇ ಸಾಲಿಗೆ ಹೋಲಿಸಿದಾಗ 19-20 ನೇ ಸಾಲಿನಲ್ಲಿ ಪಾಲಿಕೆ ಸ್ವಂತ ಮೂಲಗಳಿಂದ ಸಂಗ್ರಹಿಸಿದ ಆದಾಯ ಮತ್ತು ವೆಚ್ಚದ ಲೆಕ್ಕದಲ್ಲಿ ವ್ಯತ್ಯಾಸವಿದ್ದು,
ಆದಾಯದ ಪ್ರಮಾಣ 148.51 ಇದ್ದು, ವೆಚ್ಚದ ಪ್ರಮಾಣ 151.90 ಯಷ್ಟಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಅನುದಾನದಲ್ಲಿಯೂ ಅದೇ ರೀತಿಯ ವ್ಯತ್ಯಾಸವಿರುವುದರಿಂದ ಆಯವ್ಯಯ ಪರಿಷ್ಕರಿಸಲು ಸರ್ಕಾರ ಸೂಚನೆ ನೀಡಿದ್ದು, ಅದರಂತೆ ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಕಾಮಗಾರಿಗಳಿಗೆ ಬಿಡುಗಡೆಯಾಗಿರುವ ಯೋಜನೆಗಳಿಗೆ ಕತ್ತರಿ ಹಾಕಿ ಪರಿಷ್ಕೃತಗೊಳಿಸಿ ಆದೇಶ ಹೊರಡಿಸಲಾಗಿದೆ. ಇದರಿಂದ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಬಿಡುಗಡೆಯಾಗಿದ್ದ ಹಣ ವಾಪಸ್ ಪಡೆಯಲಾಗಿದ್ದು ಕಾಂಗ್ರೆಸ್ ಶಾಸಕರ ಕೆಂಗಣ್ಣಿಗೆ ಗುರಿಯಾಗಿದೆ.
ನಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಈಗಾಗಲೇ ಬಿಡುಗಡೆಯಾಗಿರುವ ಹಣವನ್ನು ವಾಪಸ್ ಪಡೆದರೆ ನಾವು ಹೇಗೆ ಕೆಲಸ ಮಾಡುವುದು. ಹಣ ಬಿಡುಗಡೆಯಾಗಿದೆ ಎಂದು ಜನರಿಗೆ ಭರವಸೆ ನೀಡಿ ಕೆಲಸ ಆರಂಭಿಸಿರುತ್ತೇವೆ. ಈ ಸಂದರ್ಭದಲ್ಲಿ ಹಣ ವಾಪಸ್ ಪಡೆದರೆ, ಜನರಿಗೆ ಏನು ಉತ್ತರ ಹೇಳುವುದು. ಈ ರೀತಿ ದ್ವೇಷ ಮಾಡಿದರೆ ಹೇಗೆ ?-ಎನ್.ಎ. ಹ್ಯಾರೀಸ್, ಶಾಂತಿನಗರ ಕಾಂಗ್ರೆಸ್ ಶಾಸಕ * ಶಂಕರ ಪಾಗೋಜಿ