ಭುವನೇಶ್ವರ್: ಕಾರಿಗೆ ಡಂಪರ್ ಟ್ರಕ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಬಿಜೆಪಿ ನಾಯಕರು ಮೃ*ತಪಟ್ಟಿರುವ ಘಟನೆ ಭಾನುವಾರ (ಜ.5ರಂದು) ಮುಂಜಾನೆ ಒಡಿಶಾದ ಸಂಬಲ್ಪುರ್ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ದೇಬೇಂದ್ರ ನಾಯಕ್ ಮತ್ತು ಮುರಳೀಧರ್ ಚುರಿಯಾ ಎಂದು ಗುರುತಿಸಲಾಗಿದೆ. ನಾಯಕ್ ಬಿಜೆಪಿಯ ಗೋಶಾಲಾ ಮಂಡಲ ಅಧ್ಯಕ್ಷರಾಗಿದ್ದರೆ, ಚುರಿಯಾ ಮಾಜಿ ಸರಪಂಚ್ ಆಗಿದ್ದರು. ಇವರಿಬ್ಬರೂ ಬಿಜೆಪಿಯ ಹಿರಿಯ ನಾಯಕಿ ನೌರಿ ನಾಯ್ಕ್ಗೆ ಆಪ್ತರಾಗಿದ್ದರು.
ಬುರ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎನ್ಎಚ್ 53 ರಂದು ಭಾನುವಾರ ಮುಂಜಾನೆ 1.30 ರ ಸುಮಾರಿಗೆ ಈ ಘಟನೆ ನಡೆದಿದೆ. ಕಾರಿನಲ್ಲಿ ಚಾಲಕ ಸೇರಿದಂತೆ ಆರು ಜನರಿದ್ದರು ಮತ್ತು ಅವರು ಭುವನೇಶ್ವರದಿಂದ ಕಾರ್ಡೋಲಾಕ್ಕೆ ಮನೆಗೆ ಮರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿ ಮನೆಗೆ ವಾಪಾಸ್ ಆಗುತ್ತಿದ್ದ ವೇಳೆ ಡಂಪರ್ ಟ್ರಕ್ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಪರಿಣಾಮ ಆರು ಮಂದಿ ಗಾಯಗೊಂಡಿದ್ದಾರೆ. ಅವರನ್ನು ಪಕ್ಕದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಆದರೆ ಚಿಕಿತ್ಸೆ ವೇಳೆ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಟ್ರಕ್ ನಮ್ಮ ಕಾರಿಗೆ ಎರಡು ಬಾರಿ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಯಾರೋ ಉದ್ದೇಶಪೂರ್ವಕವಾಗಿ ನಮ್ಮ ವಾಹನವನ್ನು ಢಿಕ್ಕಿ ಹೊಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಶಂಕಿಸಿದ ಚಾಲಕ, ಕಾಂತಪಲ್ಲಿ ಚೌಕದ ಬಳಿ ಹೆದ್ದಾರಿಯಿಂದ ಗ್ರಾಮಾಂತರ ರಸ್ತೆಯ ಕಡೆಗೆ ಕಾರನ್ನು ತಿರುಗಿಸಿದ್ದಾನೆ. ಡಂಪರ್ ನಮ್ಮ ವಾಹನವನ್ನು ಹಿಂಬಾಲಿಸಿಕೊಂಡು ಬಂದಿದೆ. ಅದರ ಪರಿಣಾಮವಾಗಿ ಕಾರು ಪಲ್ಟಿಯಾಯಿತು. ಹೆದ್ದಾರಿಯಲ್ಲಿ ತಮ್ಮ ಕಾರಿಗೆ ಡಂಪರ್ ಎರಡು ಬಾರಿ ಢಿಕ್ಕಿ ಹೊಡೆಯುವವರೆಗೂ ತನಗೆ ಪ್ರಜ್ಞೆ ಇತ್ತು. ಆದರೆ ಅದು ಮೂರನೇ ಬಾರಿಗೆ ಢಿಕ್ಕಿ ಹೊಡೆದಾಗ ಪ್ರಜ್ಞೆ ತಪ್ಪಿತು ಎಂದು ಅಪಘಾತದಲ್ಲಿ ಗಾಯಗೊಂಡ ಸುರೇಶ ಚಂದಾ ಹೇಳಿದ್ದಾರೆ.
ಗಾಯಾಳುಗಳನ್ನು ಭೇಟಿ ಮಾಡಿದ ನಂತರ ಮಾಜಿ ಶಾಸಕ ರೆಂಗಾಳಿ ನಾಯ್ಕ್, ಇದು ಅಪಘಾತವಲ್ಲ, ಉದ್ದೇಶಪೂರ್ವಕ ಢಿಕ್ಕಿ ಮಾಡಿದ್ದಾರೆ ಆರೋಪಿಸಿದ್ದಾರೆ.
ನಾವು ಡಂಪರ್ ನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಅದರ ಚಾಲಕನನ್ನು ವಶಕ್ಕೆ ಪಡೆದಿದ್ದೇವೆ. ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಸಂತ್ರಸ್ತರ ಕುಟುಂಬ ಸದಸ್ಯರು ಆರೋಪಿಸಿದ್ದರಿಂದ ಆ ಕೋನದಲ್ಲೂ ತನಿಖೆ ನಡೆಸುತ್ತೇವೆ ಎಂದು ಎಸ್ಪಿ ಮುಖೇಶ್ ಕುಮಾರ್ ಭಾಮೂ ಹೇಳಿದ್ದಾರೆ.