Advertisement

ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಬದ್ಧ

09:14 PM Oct 28, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಬೆಂಗಳೂರಿಗೆ ಹತ್ತಿರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆ ಭವಿಷ್ಯದಲ್ಲಿ ಉತ್ತಮ ಪ್ರಗತಿ ಕಾಣಲಿದ್ದು, 10 ವರ್ಷದಲ್ಲಿ ಜಿಲ್ಲೆ ಅಭಿವೃದ್ಧಿಯಲ್ಲಿ ಮಹತ್ತರ ಬದಲಾವಣೆ ಆಗಲಿದೆ. ಅಧಿಕಾರಿಗಳು ಉತ್ಸಾಹದಿಂದ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸರ್ಕಾರ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ ತಿಳಿಸಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿ ನಗರ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಬೆಂಗಳೂರಿಗೆ ಪರ್ಯಾಯವಾಗಿ ಚಿಕ್ಕಬಳ್ಳಾಪುರ ಅಭಿವೃದ್ಧಿಯಾಗುವ ಎಲ್ಲಾ ಲಕ್ಷ್ಮಣಗಳು ಇವೆ ಎಂದರು.

ಸರ್ಕಾರಿ ಜಮೀನು ಉಳಿಸಿ: ಜಿಲ್ಲೆಯು ಭವಿಷ್ಯದ ಅಭಿವೃದ್ಧಿ ದೃಷ್ಟಿಯಿಂದ ಅಧಿಕಾರಿಗಳು ಸರ್ಕಾರಿ ಜಮೀನನ್ನು ಉಳಿಸುವ ಕೆಲಸ ಮಾಡಬೇಕು. ಸಾಕಷ್ಟು ಜಿಲ್ಲೆಗಳಲ್ಲಿ ಅಭಿವೃದ್ಧಿಗೆ ಸರ್ಕಾರಿ ಜಮೀನು ಕೊರತೆ ಇದ್ದು, ಜಿಲ್ಲೆಯಲ್ಲಿ ಆ ಪರಿಸ್ಥಿತಿ ಉಲ್ಬಣಿಸಿಬಾರದು. ಜಿಲ್ಲೆಯ ಸುಧಾರಣೆಗೆ ಪೂರಕವಾಗಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕೆಂದರು.

ಯೋಜನೆ ಅನುಷ್ಠಾನಗೊಳಿಸಿ: ಜಿಲ್ಲೆಯಲ್ಲಿರುವ ವಸತಿ ಹಾಗೂ ನಿವೇಶನ ರಹಿತರನ್ನು ಗುರುತಿಸಿ ವಸತಿ ಹಾಗೂ ನಿವೇಶನ ಕಲ್ಪಿಸುವ ಕೆಲಸ ಮಾಡಬೇಕು. ವಿಶೇಷವಾಗಿ ಕೃಷಿ, ತೋಟಗಾರಿಕೆ, ರೇಷ್ಮೆ ಬಲವರ್ಧನೆಗೆ ಅಧಿಕಾರಿಗಳು ಒತ್ತು ಕೊಟ್ಟು ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಸರ್ಕಾರದ ಸೌಲಭ್ಯಗಳು ಜನ ಸಾಮಾನ್ಯರಿಗೆ ಸಿಗುವಂತೆ ಮಾಡಬೇಕೆಂದರು.

ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಜಿಲ್ಲೆ ಎದುರಿಸುತ್ತಿರುವ ಜಲ್ವಂತ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳಲು ಬದ್ಧವಾಗಿದ್ದೇನೆ. ಜಿಲ್ಲೆಯು ಸುಮಾರು ವರ್ಷಗಳಿಂದ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲು ಸರ್ಕಾರ ಬದ್ಧವಾಗಿದೆ. ಜಿಲ್ಲೆಯ 95 ಗ್ರಾಮಗಳಲ್ಲಿ ಈಗಲೂ ನೀರಿನ ಸಮಸ್ಯೆ ಇದೆ. ವರ್ಷ ವರ್ಷ ಮಳೆ ಕೊರತೆಯಾದರೆ ನೀರಿನ ಸಮಸ್ಯೆ ಇದ್ದೇ ಇರುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸ ಆಗಬೇಕು ಎಂದರು.

Advertisement

ಜಿಲ್ಲಾಡಳಿತಕ್ಕೆ ಶಹಬ್ಬಾಷ್‌ಗಿರಿ: ಜಿಲ್ಲಾಡಳಿತ ಕೂಡ ಮಳೆ ನೀರು ಕೊಯ್ಲು, ಇಂಗು ಗುಂಡಿಗಳ ನಿರ್ಮಾಣ, ಕಲ್ಯಾಣಿಗಳ ಸ್ವತ್ಛತೆ ಮುಂತಾದ ಯೋಜನೆಗಳ ಮುಖಾಂತರ ನೀರು ಸಂರಕ್ಷಣೆಗೆ ಮುಂದಾಗಿರುವುದು ಜಿಲ್ಲಾಡಳಿತದ ಕಾರ್ಯವೈಖರಿ ಮೆಚ್ಚುವಂತಹದ್ದು ಎಂದರು. ಜಿಲ್ಲೆಯನ್ನು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಯಲ್ಲದೇ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸಾಕಷ್ಟು ಅವಕಾಶಗಳು ಇದೆ. ಕೃಷಿ ಬಿಟ್ಟರೆ ಉದ್ಯೋಗ ಅವಕಾಶಗಳು ಸಿಗುವುದು ಪ್ರವಾಸೋದ್ಯಮದಿಂದ. ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿ ಮಾಡಿ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಒದಗಿಸಬೇಕು. ನಂದಿಬೆಟ್ಟ, ಭೋಗನಂದಿಶ್ವರ ದೇವಾಲಯಗಳ ಜೀರ್ಣೋದ್ಧಾರಕ್ಕೆ ಕ್ರಮ ವಹಿಸಲಾಗುವುಗು ಎಂದರು.

ಜಿಲ್ಲೆಯ ತಾಲೂಕುವಾರು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿರುವುದು ಕಂಡುಬಂದಿದ್ದು, ಶೀಘ್ರವೇ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಫ್ಲೋರೈಡ್‌ ಸಮಸ್ಯೆ ಹೆಚ್ಚಾಗಿದೆ. ದಂತ ವೈದ್ಯರ ನೇಮಕ ಬೇಡಿಕೆ ಈ ಭಾಗದಲ್ಲಿ ಹೆಚ್ಚಿದ್ದು, ಕೂಡಲೇ ದಂತ ವೈದ್ಯರ ನೇಮಕ ಮಾಡಲಾಗುತ್ತದೆ ಎಂದು ಹೇಳಿದರು.

ಕಚೇರಿ ಬಾಗಿಲು ತೆರೆಯವರು ಇಲ್ಲ: ರೇಷ್ಮೆ ಇಲಾಖೆ ಉಪ ನಿರ್ದೇಶಕ ಬೈರಪ್ಪ ಮಾತನಾಡಿ, ರೇಷ್ಮೆ ಇಲಾಖೆ ಜಿಲ್ಲೆಯ ರೈತರಿಗೆ ವರದಾನವಾಗಿದೆ. ಆದರೆ ಕಚೇರಿಯಲ್ಲಿ ತಾಂತ್ರಿಕ ಸಿಬ್ಬಂದಿ ಇಲ್ಲವೇ ಇಲ್ಲ. ಕನಿಷ್ಠ ಕಚೇರಿ ಬಾಗಿಲು ತೆರೆಯಲಿಕ್ಕೆ ಸಿಬ್ಬಂದಿ ಇಲ್ಲ. ನೇರಗಾ ಯೋಜನೆಯಡಿ ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಬಲಯುತವಾಗಿ ಬೆಳೆಯುತ್ತಿದೆ. ಕೊರತೆ ಇರುವ ಸಿಬ್ಬಂದಿ ನೇಮಿಸಿದರೆ ಈ ಭಾಗದ ರೈತರಿಗೆ ತುಂಬ ಅನುಕೂಲ ಎಂದರು.

ಸಭೆಯಲ್ಲಿ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಪಂ ಸಿಇಒ ಬಿ.ಫೌಜಿಯಾ ತರುನ್ನುಮ್‌, ಡಿಸಿಎಂ ಆಪ್ತ ಕಾರ್ಯದರ್ಶಿ ಪ್ರದೀಪ್‌ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿ ವರದಿ ಬೇಡ, ಸಮಸ್ಯೆ ವಿವರಿಸಿ ಎಂದ ಜಿಪಂ ಅಧ್ಯಕ್ಷ: ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ್‌, ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಏನೇ ಸಮಸ್ಯೆ ಇದ್ದರೂ ಸ್ಪಂದಿಸುತ್ತಾರೆ. ಅಧಿಕಾರಿಗಳು ಇಲಾಖೆಗಳ ಪ್ರಗತಿ ವರದಿ ಹೇಳುವುದು ಬಿಟ್ಟು ತಮ್ಮ ಇಲಾಖೆ ಸಮಸ್ಯೆಗಳ ಬಗ್ಗೆ ಸಂಕೋಚ, ಹಿಂಜರಿಕೆ ಇಲ್ಲದೇ ಉಪ ಮುಖ್ಯಮಂತ್ರಿಗಳ ಗಮನಕ್ಕೆ ತನ್ನಿ ಎಂದು ಪ್ರಗತಿ ಪರಿಶೀಲನಾ ಸಭೆ ವೇಳೆ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಡಿಸಿಎಂ ಮಾತನಾಡಿದ್ದೆ ಕಡಿಮೆ: ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌, ಸಭೆಯಲ್ಲಿ ಮಾತನಾಡಿದ್ದೆ ಕಡಿಮೆ. ಸಾಮಾನ್ಯವಾಗಿ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತರಾಟೆಗೆ ತೆಗೆದುಕೊಳ್ಳುವುದು, ಎಚ್ಚರಿಕೆ ಕೊಡುವುದು. ಲೋಪದೋಷಗಳನ್ನು ಎತ್ತಿ ಹಿಡಿದು ಅಧಿಕಾರಿಗಳಿಗೆ ಸಲಹೆ, ಸೂಚನೆ ಕೊಡುವುದು ಸಹಜ.

ಆದರೆ ಡಿಸಿಎಂ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇವು ಯಾವು ಕೂಡ ಕಂಡು ಬರಲಿಲ್ಲ. ಅಧಿಕಾರಿಗಳು ಕೂಡ ಖುಷಿಖುಷಿಯಾಗಿ ಸಭೆಯಲ್ಲಿದ್ದರು. ಅಧಿಕಾರಿಗಳು ನೀಡಿದ ವರದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಿಟ್ಟರೆ ಯಾವುದೇ ಸಲಹೆ, ಸೂಚನೆ ಕೊಟ್ಟಿದ್ದು ಅಷ್ಟಾಗಿ ಕಂಡು ಬರಲೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next