ಗಜೇಂದ್ರಗಡ: ಈ ಭಾಗಕ್ಕೆ ರೈಲು ಯೋಜನೆ ತರುವ ನಿಟ್ಟಿನಲ್ಲಿ ಸಂಸದರು, ಸಚಿವರು, ಹಾಲಿ ಮತ್ತು ಮಾಜಿ ಶಾಸಕರ ಒಳಗೊಂಡ ಪಕ್ಷಾತೀತ ಹೋರಾಟ ಸಮಿತಿ ರಚನೆ ಮಾಡುವ ಮೂಲಕ ಮೂಲ ಗದಗ-ವಾಡಿ ರೈಲು ಯೋಜನೆ ತರುವಲ್ಲಿ ಹೋರಾಟ ಹಮ್ಮಿಕೊಳ್ಳಲು ಸನ್ನದ್ಧರಾಗಬೇಕಿದೆ ಎಂದು ಪಟ್ಟಣದ ಮೈಸೂರ ಮಠದಲ್ಲಿ ಶನಿವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಗದಗ ಜಿಲ್ಲೆಯ ಕಣಗಿನಹಾಳ-ಕೋಟುಮಚಗಿ- ನರೇಗಲ್ಲ-ನಿಡಗುಂದಿ-ಗಜೇಂದ್ರಗಡ-ಹನುಮಸಾ ಗರ-ಇಲಕಲ್ಲ ಮಾರ್ಗವಾಗಿ ಹಾದು ಹೋಗಬೇಕಿದ್ದ ಗದಗ-ವಾಡಿ ರೈಲು ಮಾರ್ಗವನ್ನು ಬದಲಾಯಿಸಿ, ಕೊಪ್ಪಳ ಜಿಲ್ಲೆಯ ತಳಕಲ್ ಮೂಲಕ ವಾಡಿಗೆ ಸೇರ್ಪಡೆ ಮಾಡಿರುವುದು, ಈ ಭಾಗಕ್ಕೆ ಬಹುದೊಡ್ಡ ಅನ್ಯಾಯವಾಗಿದೆ. 1910ರ ಬ್ರಿಟಿಷರ ಕಾಲದಲ್ಲೇ ಜಿಲ್ಲೆಯ 5 ಪ್ರದೇಶಗಳಲ್ಲಿ ಹಾದು ಹೋಗುವ ಯೋಜನೆ ರೂಪಿಸಲಾಗಿತ್ತು. ಆದರೀಗ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ದೂರಿದರು.
ಈ ಭಾಗದ ಜನತೆಯ ಬಹುದಿನದ ಬೇಡಿಕೆಯಾದ ಗದಗ-ವಾಡಿ ರೈಲು ಯೋಜನೆಗಾಗಿ ಪಕ್ಷಾತೀತ ಹೋರಾಟಕ್ಕೆ ಅಣಿಯಾಗುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಹಾವೇರಿ ಸಂಸದ ಶಿವಕುಮಾರ ಉದಾಸಿ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಹಾಗೂ ಜಿಲ್ಲೆಯ ಸಚಿವರು, ಹಾಲಿ ಮತ್ತು ಮಾಜಿ ಶಾಸಕರ ಒಳಗೊಂಡು ಮಹತ್ವ ಸಭೆ ಕರೆಯುವ ಮೂಲಕ ಪಕ್ಷಾತೀತ ಹೋರಾಟ ಸಮಿತಿ ರಚನೆ ಮಾಡಲಾಗುವುದು ಜೊತೆಗೆ ಇನ್ನೇರೆಡು ದಿನಗಳಲ್ಲಿ ತಾಲೂಕು ಸಮಿತಿ ರಚನೆ ಮಾಡುವ ಕುರಿತು ಸಭೆಯಲ್ಲಿ ಪಾಲ್ಗೊಂಡ ಎಲ್ಲರೂ ಒಮ್ಮತದ ನಿರ್ಣಯ ಕೈಗೊಂಡರು. ಗದಗ ಮತ್ತು ಬಾಗಲಕೋಟೆ ಜಿಲ್ಲೆಯ ಜನತೆಯ ಆಶಾಕಿರಣವಾಗಿರುವ ರೈಲು ಯೋಜನೆಯಲ್ಲಿ ಯಾವುದೇ ರಾಜಕೀಯ, ಕೆಸರೆರಚಾಟ, ಪರಸ್ಪರ ಟೀಕೆಗಳನ್ನು ಮಾಡುವುದು ಕೈಬಿಡಬೇಕಿದೆ. ಇದು ನಮ್ಮ ಅಸ್ಮಿತೆಯಾಗಿದ್ದು, ನಾವೆಲ್ಲರೂ ಒಗ್ಗೂಡಿ, ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕಿದೆ ಎಂದರು.
ಬೆಟಗೇರಿ ರೇಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ, ಕಾಂತಿಲಾಲ್ ಜೈನ್, ಮನೋಹರ ಬಡಿಗೇರ, ಅಶೋಕ ಬಾಗಮಾರ, ಡಾ| ಶಿವರಾಮ್ ದಾನಿ, ವೀರಣ್ಣ ಸೊನ್ನದ, ವೀರಣ್ಣ ಶೆಟ್ಟರ, ಶಶಿಧರ ಹೂಗಾರ, ಎಂ.ಎಸ್. ಹಡಪದ, ಬಿ.ಎಂ. ಸಜ್ಜನರ, ಎಚ್.ಎಸ್. ಸೋಂಪೂರ, ಅಶೋಕ ವನ್ನಾಲ, ರಾಜು ಸಾಂಗ್ಲಿಕಾರ, ರವೀಂದ್ರ ಹೊನವಾಡ, ಬಸವರಾಜ ಬಂಕದ, ಅಶೋಕ ಬೇವಿನಕಟ್ಟಿ, ಹನುಮಂತ ಅಬ್ಬಿಗೇರಿ, ವೆಂಕಟೇಶ ಮುದಗಲ್ಲ, ಮಾರುತಿ ಚಿಟಗಿ, ಬಿ.ಎಸ್. ಶೀಲವಂತರ, ಉಮೇಶ ರಾಠೊಡ, ಅಂಬರೀಶ ಬಳಿಗೇರ, ಪ್ರಭು ಚವಡಿ, ಬಾಲು ರಾಠೊಡ, ಮಾರುತಿ ಚಿಟಗಿ ಸೇರಿ ಇತರರಿದ್ದರು.