Advertisement

DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ

01:06 AM Nov 28, 2024 | Team Udayavani |

ಬೆಂಗಳೂರು: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಮಹದಾಯಿ, ಕಳಸಾ-ಬಂಡೂರಿ ನಾಲೆ ಜೋಡಣೆ, ಮೇಕೆದಾಟು ಕುಡಿ ಯುವ ನೀರು ಯೋಜನೆ, ಭದ್ರಾ ಮೇಲ್ದಂಡೆ, ಕೃಷ್ಣಾ ನ್ಯಾಯಾಧಿಕರಣ ತೀರ್ಪಿನ ಅಧಿಸೂಚನೆ ಸೇರಿದಂತೆ ಹಲವು ವಿಷಯಗಳಲ್ಲಿ ಸಹಕಾರ ನೀಡಬೇಕು ಎಂದು ಕೇಂದ್ರ ಸಚಿವರಿಗೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಮನವಿ ಮಾಡಿದರು.

Advertisement

ಬುಧವಾರ ದಿಲ್ಲಿಯಲ್ಲಿ ಕೇಂದ್ರ ಪರಿಸರ, ಅರಣ್ಯ ಖಾತೆ ಸಚಿವ ಭೂಪೇಂದ್ರ ಯಾದವ್‌, ಪ್ರಹ್ಲಾದ್‌ ಜೋಶಿ ಅವರನ್ನು ಭೇಟಿ ಮಾಡಿದ ಶಿವಕುಮಾರ್‌ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಿದರು.

ಕಳಸಾ-ಬಂಡೂರಿ ವಿಚಾರ ದಲ್ಲಿ ಕೇಂದ್ರ ಸಚಿವರು ಮಧ್ಯ ಪ್ರವೇಶ ಮಾಡಿ ಅಗತ್ಯವಿರುವ ಅರಣ್ಯ, ವನ್ಯಜೀವಿ ಮಂಡಳಿಯ ಅನುಮತಿ ಕೊಡಿಸಬೇಕು ಎಂದರು.

ಅ. 9ರಂದು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯೀ ಸಮಿತಿಯು ತನ್ನ 80ನೇ ಸಭೆಯಲ್ಲಿ ಕರ್ನಾಟಕದ ಅರ್ಜಿ ವಿಚಾರಣೆಯನ್ನು ಮುಂದೂಡಿ ಈ ವಿಚಾರವಾಗಿ ಇರುವ ಕಾನೂನು ಸಮಸ್ಯೆಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿತ್ತು. ಈ ಸಂಬಂಧ ದಾಖಲೆಗಳನ್ನು ನೀಡಲಾಗಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ರಚಿಸಿದ್ದ ತಜ್ಞರ ತಂಡವು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ತನ್ನ ವರದಿ ಸಲ್ಲಿಸಿದೆ. ಇನ್ನು ಈ ಯೋಜನೆ ಜಾರಿ ವಿಚಾರದಲ್ಲಿ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್‌ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಕಾನೂನು ಪ್ರಕಾರವಾಗಿ ಕೇಂದ್ರ ಸರಕಾರದ ಎಲ್ಲ ಅನುಮತಿಗಳು ಸಿಕ್ಕಿದ ಅನಂತರವಷ್ಟೇ ಈ ಯೋಜನೆ ಕಾಮಗಾರಿ ಕೈಗೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದರು.

Advertisement

ಕಡಿಮೆ ಅರಣ್ಯ ಭೂಮಿ ಬಳಕೆ
ಕಳಸಾ ನಾಲೆ ಯೋಜನೆಯು ಅಭಯಾರಣ್ಯದ ಭಾಗ ಅಲ್ಲ. ಆದರೆ ಕಾಳಿ ಹಾಗೂ ಸಹ್ಯಾದ್ರಿ ಹುಲಿ ಸಂರಕ್ಷಣ ಪ್ರದೇಶದಲ್ಲಿ 10.6852 ಹೆಕ್ಟೇರ್‌ ಅರಣ್ಯ ಭೂಮಿ ಅಗತ್ಯವಿದೆ. ಇದರಲ್ಲಿ ಜಾಕ್‌ವೆಲ್‌ಸಹಿತ ಪಂಪ್‌ ಹೌಸ್‌, ವಿದ್ಯುತ್‌ ಉಪಕೇಂದ್ರಗಳನ್ನು ನಿರ್ಮಿಸಲಾಗುವುದು.

ವನ್ಯಜೀವಿಗಳಿಗೂ ಅಗತ್ಯ ನೀರು ಪೂರೈಸಲಾಗುವುದು. ಇನ್ನು ಕಳಸಾ ನಾಲೆಗೆ ಯೋಜನೆಗೆ ಅಗತ್ಯವಿರುವ ಅರಣ್ಯ ಪ್ರದೇಶ ಭೂಮಿಯ ಪ್ರಮಾಣವನ್ನು 258 ಹೆಕ್ಟೇರ್‌ನಿಂದ ಕೇವಲ 26.92 ಹೆಕ್ಟೇರ್‌ಗೆ ಇಳಿಸಿದೆ. ಬಂಡೂರಿ ನಾಲೆ ಯೋಜನೆಗೆ ಅಗತ್ಯವಿರುವ ಅರಣ್ಯ ಪ್ರದೇಶವನ್ನು 243 ಹೆಕ್ಟೇರ್‌ನಿಂದ 28.44 ಹೆಕ್ಟೇರ್‌ಗೆ ಇಳಿಸಿದೆ. ಕೇಂದ್ರ ಅರಣ್ಯ ಸಚಿವರಾದ ತಾವು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿ ಪ್ರಾಧಿಕಾರದ ಅಭಿಪ್ರಾಯವನ್ನು ಪರಿಶೀಲಿಸಿ ಆದಷ್ಟು ಬೇಗ ಯೋಜನೆಗೆ ಅನುಮತಿ ನೀಡಬೇಕು ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next