Advertisement

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

04:40 PM Nov 22, 2024 | Team Udayavani |

ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ದಾಂಡೇಲಿ ರೈಲ್ವೆ ನಿಲ್ದಾಣದ ರೈಲ್ವೆ ಮಾರ್ಗಕ್ಕೆ ಅಳವಡಿಸಲಾದ ವಿದ್ಯುದ್ದಿಕರಣ ಕಾರ್ಯವನ್ನು ಶುಕ್ರವಾರ ರೈಲ್ವೆ ಇಲಾಖೆಯ ತಾಂತ್ರಿಕ ತಂಡ ಪರಿಶೀಲನೆಯನ್ನು ನಡೆಸಿತು.

Advertisement

ಕೋವಿಡ್ ಸಂದರ್ಭದಲ್ಲಿ ಅಂಬೇವಾಡಿ – ಅಳ್ನಾವರ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ರೈಲು ಸಂಚಾರದ ಪುನರಾರಂಭಕ್ಕೆ ಸ್ಥಳೀಯ ನಗರಸಭಾ ಸದಸ್ಯರಾದ ಸಂಜಯ ನಂದ್ಯಾಳ್ಕರ ಸೇರಿದಂತೆ ನಗರದ ವಿವಿಧ ಸಂಘ-ಸಂಸ್ಥೆಗಳು ಆಗ್ರಹವನ್ನು ಮಾಡಿತ್ತು. ಇದರ ಜೊತೆಯಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಆರ್ ವಿ ದೇಶಪಾಂಡೆ, ಮಾಜಿ ಶಾಸಕರಾದ ಸುನೀಲ‌ ಹೆಗಡೆ ಅವರು ರೈಲ್ವೆ ಸಚಿವರನ್ನು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳನ್ನು ರೈಲು ಸಂಚಾರ ಪುನರಾರಂಭಕ್ಕೆ ಮನವಿ ಮಾಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಅಂಬೇವಾಡಿ ರೈಲು‌ ನಿಲ್ದಾಣ ಎಂದಿದ್ದ ಹೆಸರನ್ನು ದಾಂಡೇಲಿ ರೈಲ್ವೆ‌ ನಿಲ್ದಾಣ ಮಾಡುವಂತೆ ನಗರಸಭೆಯು ನಿರ್ಣಯವನ್ನು ಕೈಗೊಂಡು ರೈಲ್ವೆ ಇಲಾಖೆಗೆ ಮನವಿಯನ್ನು ಮಾಡಿತ್ತು. ಅಂತೆಯೇ ನಗರದ ವಿವಿಧ ಸಂಘ-ಸಂಸ್ಥೆಗಳು ಕೂಡ ಮನವಿಯನ್ನು ಮಾಡಿತ್ತು. ಆನಂತರದ ದಿನಗಳಲ್ಲಿ ಅಂಬೇವಾಡಿ ರೈಲ್ವೆ ನಿಲ್ದಾಣವನ್ನು ದಾಂಡೇಲಿ ರೈಲ್ವೆ ನಿಲ್ದಾಣವನ್ನಾಗಿ ಮರು ನಾಮಕರಣಗೊಳಿಸಲಾಗಿತ್ತು.

ಈಗಾಗಲೆ ದಾಂಡೇಲಿ – ಅಳ್ನಾವರ ರೈಲೆ‌ ಮಾರ್ಗವನ್ನು ವಿದ್ಯುದ್ದೀಕರಣ ಮಾರ್ಗವನ್ನಾಗಿಸಲಾಗಿದ್ದು, ಶುಕ್ರವಾರ ರೈಲ್ವೆ ಇಲಾಖೆಯ ವಿದ್ಯುತ್ ವಿಭಾಗದ ತಾಂತ್ರಿಕ ಅಧಿಕಾರಿಗಳು ಪರಿಶೀಲನೆಯನ್ನು ನಡೆಸಿದರು. ಈ ಎಲ್ಲಾ ಬೆಳವಣಿಗೆಯನ್ನು ನೋಡಿದಾಗ ಆದಷ್ಟು ಶೀಘ್ರ ದಾಂಡೇಲಿ – ಅಳ್ನಾವರ ಪ್ಯಾಸೆಂಜರ್ ರೈಲು ಸಂಚಾರ ಪುನರಾರಂಭವಾಗುವ ಸಾಧ್ಯತೆಯಿದ್ದು, ರೈಲು ಸಂಚಾರ ಪುನರಾರಂಭಕ್ಕೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಮತ್ತಷ್ಟು ಹೆಚ್ಚು ಒತ್ತಡ ಹೇರಬೇಕಾಗಿದೆ ಎಂಬ ಮಾತು ಚರ್ಚೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next