Advertisement
ನೇತ್ರಾವತಿ, ಫಲ್ಗುಣಿ ಹಾಗೂ ಪಾವಂಜೆ ನದಿಗಳ ಹಿನ್ನೀರಿನ ಪ್ರದೇಶದಲ್ಲಿ ಬೆಳೆದು ನಿಂತಿರುವ ಕಾಂಡ್ಲಾವನ ಹಲವು ರೀತಿಯಲ್ಲಿ ಜಲ ಸಂಪತ್ತಿನ ಸಂರಕ್ಷಕ. ಆದರೆ ಇವುಗಳನ್ನು ಕಾಪಿಡುವ ಹಾಗೂ ಇನ್ನಷ್ಟು ಕಾಂಡ್ಲಾ ಗಿಡಗಳ ನೆಡುವ ಬಗ್ಗೆ ಚರ್ಚೆಗಳು ನಡೆದರೂ ಜಾರಿಗೆ ಬಂದಿಲ್ಲ. ಬೈಕಂಪಾಡಿ ಪ್ರದೇಶದಲ್ಲಿ ಬೆಳೆದಿದ್ದ ಕಾಂಡ್ಲಾ ಗಿಡಗಳು ಬೃಹತ್ ಉದ್ದಿಮೆಗಳ ತ್ಯಾಜ್ಯ ನೀರಿನ ದಾಳಿಗೆ ಒಳಗಾಗಿ ನಾಶವಾಗಿವೆ.
ಕಾಂಡ್ಲಾ ಗಿಡಗಳನ್ನು ನೆಟ್ಟು ಇತರ ಗಿಡಗಳಂತೆ ಆರೈಕೆ ಮಾಡಿದರೆ ಸಾಕಾಗುವುದಿಲ್ಲ. ಯಾಕೆಂದರೆ ಕೆಲವೊಮ್ಮೆ 1 ಲಕ್ಷ ಕಾಂಡ್ಲಾ ನೆಟ್ಟರೆ ಅದರಲ್ಲಿ 10-20 ಸಾವಿರ ಮಾತ್ರ ಜೀವ ಪಡೆಯುತ್ತದೆ. ಮತ್ತೆ ಇನ್ನೊಮ್ಮೆ ಕಾಂಡ್ಲಾ ನೆಡಬೇಕು. ನೀರಿನ ಏರಿಳಿತ ಲೆಕ್ಕಾಚಾರದ ಕಾರಣದಿಂದ ಅದರ ಬೆಳವಣಿಗೆ ನಿಂತಿರುತ್ತದೆ. ಒಮ್ಮೆ ಗಿಡ ನೆಟ್ಟರೆ ಈ ಗಿಡಗಳು ಜೀವ ಪಡೆಯುವುದಿಲ್ಲ. ಮಾನ್ಸೂನ್ ಸಂದರ್ಭ ಗಿಡಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಅಂತೂ, ಸುಮಾರು 5 ವರ್ಷ ಅದರ ನಿರ್ವಹಣೆಗೆ ಸಮಯ ಮೀಸಲಿಡಬೇಕು. ಅಂದರೆ, ನಿರ್ವಹಣೆಗೆ ಅನುದಾನ ಇರಬೇಕು. ಆದರೆ, ಇಲ್ಲಿಯವರೆಗೆ ಇಲಾಖೆಗೆ ಯಾವುದೇ ಅನುದಾನವೇ ಬಾರದೆ ಕಾಂಡ್ಲಾ ಗಿಡಗಳ ನಿರ್ವಹಣೆ ಆಗುತ್ತಿಲ್ಲ. ಖಾಸಗಿ ಭೂಮಿಯಲ್ಲಿ ಅಧಿಕ!
ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಾಂಡ್ಲಾವನ ನಿರೀಕ್ಷೆಯಷ್ಟು ಇಲ್ಲ. ಮಂಗಳೂರು, ಕುಂದಾಪುರ ಭಾಗದಲ್ಲಿ ಸುಮಾರು 1600 ಹೆಕ್ಟೇರ್ ಪ್ರದೇಶದಲ್ಲಿ ಕಾಂಡ್ಲಾ ವನವಿದ್ದರೂ ಇದರಲ್ಲಿ 1 ಸಾವಿರ ಹೆಕ್ಟೇರ್ನಷ್ಟು ಖಾಸಗಿ ಭೂಮಿಯಲ್ಲಿದೆ. ಉಳಿದದ್ದು ಕಂದಾಯ ಭೂಮಿಯಲ್ಲಿದೆ. ಹೀಗಾಗಿ ಇದರ ಸಂರಕ್ಷಣೆ ಕಷ್ಟವಾಗುತ್ತಿದೆ. ಒಡಿಶಾ ಹಾಗೂ ಮುಂಬಯಿಯಲ್ಲಿ ಕಾಂಡ್ಲಾ ಕಾಡು ಬೆಳೆಸಲು ಪ್ರತ್ಯೇಕ ವ್ಯವಸ್ಥೆಯೇ ಇದೆ. ಅದಕ್ಕಾಗಿ ರಾಜ್ಯ ಸರಕಾರವೂ ಆರ್ಥಿಕ ನೆರವು ನೀಡುತ್ತಿದೆ.
Related Articles
-ಕಾಂಡ್ಲಾಗಳು ಆಮ್ಲಜನಕ ಕಡಿಮೆ ಇರುವಂತಹ ಹಿನ್ನೀರು, ಜೌಗು ಪರಿಸರದಲ್ಲಿ ಬೆಳೆಯುವ ಸಸ್ಯವರ್ಗ. ಮತ್ಸ್ಯ ಹಾಗೂ ಇತರ ಜಲಚರಗಳ ಬೆಳವಣಿಗೆಗೆ ಪೂರಕ. ಕರಾವಳಿ ಪ್ರದೇಶದ ಭೂ-ಪರಿಸರ ಸಂರಕ್ಷಣೆ ಮಾಡುತ್ತದೆ.
-ಚಿಗುರು ಕಾಂಡ್ಲ, ಪೆನ್ಸಿಲ್ ಕಾಂಡ್ಲ, ಚೀರ್ಕಾಂಡ್ಲ, ಬೇರು ಕಾಂಡ್ಲ, ಗಿರಿಗಿಟ್ಲಿ ಕಾಂಡ್ಲ ಹೀಗೆ ವಿಭಿನ್ನ ಪ್ರಭೇದಗಳ ಕಾಂಡ್ಲಾ ವನವಿದೆ.
-ಕರಾವಳಿಯ ಮತ್ಸ್ಯೋದ್ಯಮಕ್ಕೆ ಬೇಕಾದ ಏಡಿ, ಸಿಗಡಿ, ಕಾಣೆ, ಬೂತಾಯಿ, ಅಂಜಲ್, ಬಂಗುಡೆ, ಮಾಂಜಿ, ತಾಟೆ, ಚಿಪ್ಪುಗಳ ಸಂತಾನೋತ್ಪತ್ತಿ ಹಾಗೂ ಬೆಳವಣಿಗೆಗೆ ಪೂರಕ ಪರಿಸರ ನಿರ್ಮಿಸಿದೆ.
-ಕರಾವಳಿ ಭಾಗದ ಪಕ್ಷಿ ಪ್ರಭೇದಗಳಿಗೂ ಇವು ಆಸರೆ ನೀಡುತ್ತವೆ. ವರ್ಷದ ವಿವಿಧ ಋತುಗಳಲ್ಲಿ ವಲಸೆ ಬರುವ ಪಕ್ಷಿಗಳಿಗೆ ಆಶ್ರಯತಾಣವಾಗಿದೆ.
-ಬಿರುಗಾಳಿ, ತ್ಸುನಾಮಿಯಂತಹ ಪ್ರಾಕೃತಿಕ ವಿಕೋಪಗಳನ್ನು ತಡೆಗಟ್ಟಲು ಕಾಂಡ್ಲಾವನ ಬೆಳೆಸುವುದರಿಂದ ಹೆಚ್ಚು ಅನುಕೂಲ
Advertisement
ಕಾಂಡ್ಲಾ ವನ ಘೋಷಣೆಯಷ್ಟೇ; ಅನುದಾನವಿಲ್ಲ!ಮಂಗಳೂರಿನಲ್ಲಿ 3 ಹಾಗೂ ಕುಂದಾಪುರದ 12 ಸ್ಥಳದಲ್ಲಿ ‘ಕಾಂಡ್ಲಾ ವನ’ ನಿರ್ಮಾಣಕ್ಕೆ ಕಳೆದ ವರ್ಷ ಉದ್ದೇಶಿಸಲಾಗಿತ್ತು. ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಕ್ಟೇರ್ನಂತೆ ಒಟ್ಟು 15 ಹೆಕ್ಟೇರ್ ವ್ಯಾಪ್ತಿಯಲ್ಲಿ ಕಾಂಡ್ಲಾವನ ನಿರ್ಮಾಣದ ಗುರಿ ಇತ್ತು. ಈ ಪೈಕಿ ತಣ್ಣೀರುಬಾವಿ ಬೀಚ್ ಸಮೀಪದ ಕುದ್ರು ಪ್ರದೇಶ ಹಾಗೂ ಉಡುಪಿ ಕುಂದಾಪುರದ ಆನಗಳ್ಳಿ ಕೋಡಿಯಲ್ಲಿ ಕಳೆದ ವರ್ಷ ಕಾರ್ಯಕ್ರಮ ಮಾಡಿ ಚಾಲನೆ ನೀಡಲಾಗಿತ್ತು. ಆದರೆ, ಅದು ಮುಂದುವರಿಯಲೇ ಇಲ್ಲ! ‘ಕಾಂಡ್ಲಾವನ ಅಭಿವೃದ್ದಿಗೆ ಅನುದಾನ ಬಂದಿಲ್ಲ. ‘ಮಿಸ್ತಿ’ ಎಂಬ ಕೇಂದ್ರದ ಯೋಜನೆ ಜಾರಿಗೆ ಕಳೆದ ವರ್ಷ ಉದ್ದೇಶಿಸಲಾಯಿತಾದರೂ ಅದಕ್ಕೂ ಸೂಕ್ತ ಅನುದಾನವೇ ಬರಲಿಲ್ಲ. ಅದು ಕಾರ್ಯಕ್ರಮವಾಗಿ ಮಾಡಲಾಗಿದೆಯೇ ವಿನಃ ಸ್ಕೀಂ ಸ್ವರೂಪದಲ್ಲಿ ಜಾರಿಯಾಗಲಿಲ್ಲ. ಅನುದಾನ ಬಾರದೆ ಯೋಜನೆ ಈಗ ಅರ್ಧದಲ್ಲಿಯೇ ನಿಂತಿದೆ’ ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ಪ್ರಸ್ತಾವನೆ ಸಲ್ಲಿಕೆ, ಅನುದಾನ ಬಂದಿಲ್ಲ
ಕಾಂಡ್ಲಾವನ ಅಭಿವೃದ್ದಿಗೆ ಕೇಂದ್ರ-ರಾಜ್ಯದ ಅನುದಾನ 2021-22ರಲ್ಲಿ ಬಂದಿತ್ತು. ಬಳಿಕ ಬರಲೇ ಇಲ್ಲ. ಕಾಂಡ್ಲಾವನ ಅಭಿವೃದ್ದಿಗಾಗಿ ಹೊಸ ಹೊಸ ಪ್ರಸ್ತಾವನೆಯನ್ನು ಇಲಾಖೆಯಿಂದ ಕಳುಹಿಸುತ್ತಲೇ ಇದ್ದೇವೆ. ಅನುದಾನ ಕೇಳುತ್ತಲೇ ಇದ್ದೇವೆ. ಕಳೆದ ವರ್ಷ ಮಿಸ್ತಿ ಎಂಬ ಯೋಜನೆ ಜಾರಿಗೆ ಉದ್ದೇಶಿಸಿತ್ತು. ಅದಕ್ಕೂ ಅನುದಾನ ಸರಿಯಾಗಿ ಬರಲಿಲ್ಲ. ಅನುದಾನವಿಲ್ಲದೆ ಅದರ ನಿರ್ವಹಣೆಯೂ ಕಷ್ಟವಾಗುತ್ತದೆ. ಕಾಂಡ್ಲಾ ಗಿಡ ಕರಾವಳಿಯ ಭವಿಷ್ಯಕ್ಕೆ ದೊಡ್ಡ ಶಕ್ತಿ ಹಾಗೂ ಆಧಾರ.
– ಡಾ| ಕರಿಕಾಳನ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ವೃತ್ತ -ದಿನೇಶ್ ಇರಾ