ಹೊಸದಿಲ್ಲಿಯ ರೈಲ್ ಭವನದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ರನ್ನು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಸಂಸದ ಕಾಪ್ಟನ್ ಬ್ರಿಜೇಶ್ ಚೌಟ, ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್ ಭೇಟಿಯಾಗಿ ಕರಾವಳಿ ಭಾಗದ ಕಾರವಾರ, ಕುಂದಾಪುರ, ಉಡುಪಿ-ಮಂಗಳೂರು ನಡುವೆ ಜನರ ಬಯಕೆಯಂತೆ ಹೆಚ್ಚಿನ ರೈಲು ಓಡಿಸಲು ತೀವ್ರ ಅಡ್ಡಿ ಉಂಟು ಮಾಡುತ್ತಿರುವ ಸಕಲೇಶಪುರ ಘಾಟ್ ಸಮಸ್ಯೆಗೆ ಈಗಾಗಲೇ ಪರಿಣಿತರಿಂದ ಸೂಚಿಸಲ್ಪಟ್ಟ ಪರಿಹಾರದ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಲ್ಲಿ ಸಂಸದರ ತಂಡ ಪ್ರಸ್ತಾಪಿಸಿತು.
Advertisement
ಸಕಲೇಶಪುರ-ಸುಬ್ರಹ್ಮಣ್ಯ ನಡುವೆ ಹಳಿ ದ್ವಿಗುಣ, ಸುಬ್ರಹ್ಮಣ್ಯ -ಪಡೀಲ್ ಮಾರ್ಗದ ವೇಗ ಹೆಚ್ಚಳ ಹಾಗೂ ಘಾಟ್ ಭಾಗದ ಹರೇ ಬೆಟ್ಟವನ್ನು ಕ್ರಾಸಿಂಗ್ ನಿಲ್ದಾಣವಾಗಿ ಬಳಸುವ ಕುರಿತು ವಿಸ್ತಾರವಾಗಿ ಚರ್ಚಿಸಿದರು. ಘಾಟ್ ಮಧ್ಯ ಭಾಗದ ಹರೇ ಬೆಟ್ಟ ಕ್ರಾಸಿಂಗ್ ನಿಲ್ದಾಣವಾಗಿ ಆರಂಭವಾದರೆ ಬೆಂಗಳೂರು-ಮಂಗಳೂರು- ಕುಂದಾಪುರ-ಕಾರವಾರ ನಡುವೆ ಹೊಸ ರೈಲು ಹಾಗೂ ಹೆಚ್ಚು ಬೋಗಿ ಅಳವಡಿಸಿ ಉತ್ತಮ ಸಮಯ ಪಟ್ಟಿ ರಚಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬೆಂಗಳೂರು -ಮುರುಡೇಶ್ವರ ರೈಲಿನ ವಾಸ್ಕೋ ವಿಸ್ತರಣೆ ಮತ್ತು ಅದರಿಂದ ಕರಾವಳಿಗೆ ಸಿಗುವ ಗೋವಾ ವಿಮಾನ ನಿಲ್ದಾಣ ಹಾಗೂ ವೇಲಾಂಕಣಿ , ತಿರುಪತಿ, ಉತ್ತರ ಕರ್ನಾಟಕ ಸಂಪರ್ಕದ ಬಗ್ಗೆ, ಎಸ್ಎಂವಿಪಿ ಮುರ್ಡೇಶ್ವರ ಎಕ್ಸ್‌ಪ್ರೆಸ್ ವಾಸ್ಕೋವರೆಗೆ ವಿಸ್ತರಣೆ ಹಾಗೂ ರೈಲು ಸಂಖ್ಯೆ 17317/18 ಎಕ್ಸ್‌ಪ್ರೆಸ್ ಕಾರವಾರದವರೆಗೆ ವಿಸ್ತರಣೆ ಮತ್ತು ರೈಲು ಸಂಖ್ಯೆ 17317/18 ಖಾನಾಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಜೊತೆಗೆ ಹುಬ್ಬಳ್ಳಿ, ಅಂಕೋಲಾ ಹಾಗೂ ತಾಳಗುಪ್ಪ, ಹುಬ್ಬಳ್ಳಿ ರೈಲ್ವೆ ಮಾರ್ಗಗಳ ಕುರಿತು ಸಂಸದರ ತಂಡ ರೈಲ್ವೆ ಸಚಿವರಲ್ಲಿ ವಿನಂತಿಸಿತು.