ಬಸವನಬಾಗೇವಾಡಿ: ದೇವರ ಮೇಲೆ ನಂಬಿಕೆ ಇರಬೇಕು. ಆದರೆ ಅದು ಮೂಢನಂಬಿಕೆಯಾಗಬಾರದು. ದೇವರ ಹೆಸರಿನ ಮೇಲೆ ಜನರ ಶೋಷಣೆಯಾಗಬಾರದು ಎಂದು ಮಾಜಿ ಸಚಿವ, ಶಾಸಕ ಶಿವಾನಂದ ಪಾಟೀಲ ಹೇಳಿದರು.
ಬುಧವಾರ ಪಟ್ಟಣದ ಅಗಸಿ ಒಳಗಡೆ ಇರುವ ಸತ್ಯನಾರಾಯಣ ದೇವಾಲಯ ಜೀರ್ಣೋದ್ಧಾರ ಮತ್ತು ಮೂರ್ತಿ ಮರು ಪ್ರತಿಷ್ಠಾಪನೆ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರ ಸಹಕಾರ ಇದ್ದಾಗ ಮಾತ್ರ ಭವ್ಯ ಮಂದಿರಗಳು ನಿರ್ಮಿಸಲು ಸಾಧ್ಯ ಎಂದರು.
ಜೀವನದಲ್ಲಿ ನಾವು ಗಳಿಸುವ ಆಸ್ತಿ ಅಂತಸ್ತು ಸಂಪತ್ತು ಯಾವುದು ಕೂಡಾ ಶಾಶ್ವತವಲ್ಲ. ನಾವು ಮಾಡುವ ಕಾರ್ಯ ಸಮಾಜಕ್ಕೆ ತೃಪ್ತಿಯಾದಾಗ ಅದು ಶಾಶ್ವತವಾಗಿ ಉಳಿಯಲು ಸಾಧ್ಯ ಎಂದ ಅವರು, ಬಸವಣ್ಣನವರು ಯಾವುದೇ ಜಾತಿ, ಧರ್ಮದ ಮೇಲೆ ಸಮಾಜ ನಿರ್ಮಿಸಿಲ್ಲ. ಲಿಂಗದ ಮೇಲೆ ನವ ಸಮಾಜ ನಿರ್ಮಿಸಿ ಸ್ತ್ರೀ, ಪುರುಷ ಎಂಬ ಬೇಧ ಭಾವವಿಲ್ಲದೇ ಸರ್ವರಿಗೂ ಸಮಾನತೆ ತಂದುಕೊಟ್ಟಿದ್ದಾರೆ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಶ್ರೀಗಳು ಮಾತನಾಡಿ, ಕೋಟಿ ದೇವರಗಳನ್ನು ಪೂಜಿಸುವ ಬದಲು ತಂದೆ-ತಾಯಿಯನ್ನು ಪೂಜಿಸಿದರೆ ಮುಕ್ಕೋಟಿ ದೇವರನ್ನು ಪೂಜಿಸಿದಂತಾಗುತ್ತದೆ ಎಂದರು.
ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ನವೀನ ತಿವಾರಿ, ಶಿವನಗೌಡ ಬಿರಾದಾರ, ಬಿ.ಕೆ. ಕಲ್ಲೂರ, ಈರಣ್ಣ ಪಟ್ಟಣಶೆಟ್ಟಿ, ಸಂಗನಗೌಡ ಚಿಕ್ಕೊಂಡ, ರಮೇಶ ಸೂಳಿಭಾವಿ, ಚಂಪಾಲಾಲ್ ಅಗರವಾಲ, ಲೋಕನಾಥ ಅಗರವಾಲ ಸೇರಿದಂತೆ ಅನೇಕರು ಇದ್ದರು. ಬಬಲುಕೀಶೋರ ಅಗರವಾಲ ಸ್ವಾಗತಿಸಿದರು. ಸಂಗಮೇಶ ಪೂಜಾರಿ ನಿರೂಪಿಸಿದರು. ಹರೀಶ ಅಗರವಾಲ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಆನೆ ಅಂಬಾರಿ ಹಾಗೂ ಕುಂಭಮೇಳ, ಶೋಭಾ ಯಾತ್ರೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಜರುಗಿತು.