Advertisement

ದಲಿತರ ಸಮಸ್ಯೆ ಬಗ್ಗೆ ಕಣ್ಣು ಬಿಡಲಿ ಜಿಲ್ಲಾಡಳಿತ

07:29 AM Feb 25, 2019 | |

ಮುಳಬಾಗಿಲು: ಬಂಡೆಯ ಮೇಲೆ 10 ದಲಿತ ಕುಟುಂಬಗಳ ವಾಸ…ಮಣ್ಣಿನ ಗೋಡೆಗಳ ಮೇಲೆ ಸಿಮೆಂಟ್‌ ಶೀಟ್‌ಗಳ ಹೊದಿಕೆ…ಅಲ್ಲಲ್ಲಿ ಕಾಣಿಸುವ ಗುಡಿಸಲುಗಳು…ಮಳೆ-ಗಾಳಿಗೆ ಮನೆ ಬಿದ್ದರೆ ಹೊಸ ಮನೆ ಕಟ್ಟಿಕೊಳ್ಳಲು ಇಲ್ಲದ ನಿವೇಶನ… ಸಮರ್ಪಕ ವಿದ್ಯುತ್‌ ಇಲ್ಲ.. ಕುಡಿಯುವ ನೀರಿಲ್ಲ…ಶೌಚಾಲಯಗಳ ಸ್ಥಿತಿಯಂತೂ ಕೇಳುವವರೇ ಇಲ್ಲ… ಇದು ಸುಮಾರು 50 ಮಂದಿ ದಲಿತರು ವಾಸಿಸುವ ದುಸ್ಥಿತಿಯಾಗಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. 

Advertisement

ತಾಲೂಕಿನ ಪುರಾಣ ಪ್ರಸಿದ್ಧ ಆವಣಿ ಸೀತಾಪಾರ್ವತಿ ಬೆಟ್ಟದ ತಪ್ಪಲಿನ ಅಂತರಗಂಗೆ ಮತ್ತು ಅದರ ಪಕ್ಕದ ಸುಮಾರು 10 ದಲಿತ ಕುಟುಂಬಗಳ ಪಾಡು ಹೇಳತೀರದಾಗಿದೆ. ತಾಲೂಕಿನ ಆವಣಿ ಗ್ರಾಮದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧೀನದ ಶ್ರೀ ರಾಮಲಿಂಗೇಶ್ವರಸ್ವಾಮಿ ದೇವಾಲಯವಿದ್ದು ಅದರ ಎಡಕ್ಕೆ ಪುರಾಣ ಪ್ರಸಿದ್ಧ ಸೀತಾಪಾರ್ವತಿ ಬೆಟ್ಟವಿದೆ.

ಹಿಂಬದಿ ತಪ್ಪಲಿನಲ್ಲಿ ಶ್ರೀಗಂಗಾಧರೇಶ್ವರ ದೇಗುಲವಿದ್ದು ಅದರ ಅಂಚಿನಲ್ಲಿ ಅತ್ಯಂತ ಮಹತ್ವವಾದ 10*10 ಅಡಿ ಅಗಲದ ಪ್ರಸಿದ್ಧ ಅಂತರಗಂಗೆ ಇದೆ. ಕೋಲಾರದ ಅಂತರಗಂಗೆಯಂತೆಯೇ ಇಲ್ಲಿಯೂ ವರ್ಷವಿಡೀ ಬಸವಣ್ಣನ ಹೊಕ್ಕಳಿನಲ್ಲಿ ನೀರು ಬರುತ್ತಿರುತ್ತದೆ. ಸದರೀ ಅಂತರಗಂಗೆ ಪಕ್ಕದಲ್ಲಿಯೇ ಬೆಟ್ಟಕ್ಕೆ ಸೇರಬಹುದಾದ ಬಂಡೆಯೊಂದರ ಮೇಲೆ ನೂರಾರು ವರ್ಷಗಳಿಂದ ಹಲವು ದಲಿತ ಕುಟುಂಬಗಳು ವಾಸವಾಗಿವೆ. ಆದರೆ, ಇಂದಿಗೂ ಶೋಚನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವುದು ದುರದೃಷ್ಟಕರ. 

ಆ ಗ್ರಾಮದ ಆಂಜಪ್ಪ, ಗಿರಿಯಪ್ಪ, ಶೇಷಪ್ಪ, ವೆಂಕಟೇಶಪ್ಪ, ನಾಗಪ್ಪ, ಲಕ್ಷ್ಮಕ್ಕ, ನಾಗರಾಜಪ್ಪ, ದಾಸಪ್ಪ ಸೇರಿ 10 ದಲಿತ ಕುಟುಂಬಗಳು ಸುಮಾರು 50 ಜನರು ಕೂಲಿ ಮಾಡಿಕೊಂಡು 10*20 ಅಳತೆ ಚಿಕ್ಕ ಪುಟ್ಟ ಗುಡಿಸಲು ಮನೆಗಳನ್ನು ಕಟ್ಟಿಕೊಂಡು ಇಂದಿಗೂ ಜೀವನ ಸವೆಸುತ್ತಿದ್ದಾರೆ. ಗುಡಿಸಲು ಮನೆಗಳ ಛಾವಣಿಗಳು ಬಿದ್ದರೆ ಅನ್ಯ ಮಾರ್ಗವಿಲ್ಲದೆ ಕೂಲಿಯಿಂದ ಬಂದ ಹಣದಿಂದಲೇ ಮಣ್ಣಿನ ಗೋಡೆಗಳಿಗೆ ಸಿಮೆಂಟ್‌ ಶೀಟ್‌ಗಳನ್ನು ಹಾಕಿಕೊಳ್ಳುತ್ತಿದ್ದಾರೆ.

ಈ ಮನೆಗಳಿಗೆ ವಿದ್ಯುತ್‌ ಸಂಪರ್ಕವಿಲ್ಲ, 2 ಕುಟುಂಬಕ್ಕೆ ಮಾತ್ರ ಬೆಸ್ಕಾಂ ಇಲಾಖೆ ವಿದ್ಯುತ್‌ ಸಂಪರ್ಕ ನೀಡಿದೆ. ಉಳಿದೆಲ್ಲಾ ಕುಟುಂಬಗಳು ಗುಡಿಸಲುಗಳೆಂಬ ಕಾರಣಕ್ಕೆ ವಿದ್ಯುತ್‌ ನೀಡಿಲ್ಲ. ಇನ್ನು ರಾತ್ರಿ ವೇಳೆ ಮನೆಗಳಲ್ಲಿ ಬೆಳಕಿಗೆ ಸೀಮೆಎಣ್ಣೆ ದೀಪಗಳನ್ನು ಆಶ್ರಯಿಸುವಂತಾಗಿದೆ. ಕುಡಿಯುವ ನೀರಿನ ಸಮಸ್ಯೆ ಇದ್ದು ಇತ್ತೀಚಿನ ದಿನಗಳಲ್ಲಿ ಗ್ರಾಪಂ ನಿಂದ ಸಿಸ್ಟನ್‌ ಹಾಕಲಾಗಿದೆ.

Advertisement

ಅದರಲ್ಲಿ 3-4 ದಿನಕ್ಕೊಮ್ಮೆ ಪ್ರತಿ ಮನೆಗೆ ತಲಾ 10 ಬಿಂದಿಗೆ ಮಾತ್ರ ನೀರು ಬರುತ್ತದೆ. ನೀರಿನ ಸಮಸ್ಯೆಯಿಂದ ಅಂತರಗಂಗೆಯನ್ನೇ ಆಶ್ರಯಿಸುವಂತಾಗಿದೆ. ಆದರೆ ಅಂತರಗಂಗೆಯೂ ಪ್ರಸ್ತುತ ಕುಂಟೆಯಂತಾಗಿ ಕಲುಷಿತವಾದ್ದರಿಂದ ಶುದ್ಧ ನೀರಿಗೆ ಕೊರತೆಯಾಗಿದೆ. ಹೀಗಾಗಿ ಅಂತರಗಂಗೆ ನವೀಕರಣ ಮಾಡಬೇಕಾಗಿದೆ. ಈ ಕಾಲೋನಿಗೆ ಹೋಗಲು ರಸ್ತೆಯಿಲ್ಲ. ಆದರೂ, 4-5 ವರ್ಷಗಳ ಹಿಂದೆ ರಸ್ತೆ ನಿರ್ಮಿಸಿದ್ದರೂ ಆವಣಿ ಗ್ರಾಮದ ಕೆಲವರು ತಮ್ಮ ಜಮೀನಿನಲ್ಲಿ ನಿರ್ಮಿಸಿರುವ ರಸ್ತೆಯಲ್ಲಿ ಯಾರೂ ಓಡಾಡಬಾರದೆಂದು ರಸ್ತೆಗೆ ಅಡ್ಡಿಯುಂಟು ಮಾಡುತ್ತಿರುತ್ತಾರೆ.

ವಿಧಿಯಿಲ್ಲದೇ ಅಲ್ಲಿಯೇ ಓಡಾಡುವಂತಾಗಿದೆ ಎನ್ನುತ್ತಾರೆ ದಲಿತರು. ಅಲ್ಲದೇ ಸದರೀ ಬಂಡೆ ಸ್ಥಳ ತಮ್ಮದೆಂದು ನಾಗಪ್ಪ, ವೆಂಕಟೇಶಪ್ಪ, ಸೂರಿ ಮತ್ತು ಶಿವಪ್ಪ ಮತ್ತಿತರರು ಅಡ್ಡಿಯುಂಟು ಮಾಡುತ್ತಿರುವುದರಿಂದ ಶೌಚಾಲಯ ಮತ್ತು ಸ್ನಾನದ ಮನೆ ಕೊರತೆಯಿದೆ. ಆದರೂ ಕಳೆದ ವರ್ಷ ಗಿರಿಯಪ್ಪ ಕುಟುಂಬ ಮನೆ ಮುಂಭಾಗದಲ್ಲಿ ಸ್ನಾನ ಮಾಡಲು ಕಲ್ಲುಗಳನ್ನು ಜೋಡಿಸಿ ತಾತ್ಕಾಲಿಕವಾಗಿ ಸ್ನಾನದ ಮನೆ ನಿರ್ಮಿಸಲು ಮುಂದಾದಾಗ ಎಲ್ಲರೂ ಬಂದು ಗಲಾಟೆ ಮಾಡಿ ಸ್ನಾನದ ಜಾಗ ತಾತ್ಕಾಲಿಕವಾಗಿಯೂ ನಿರ್ಮಿಸಬಾರದೆಂದು ಕಲ್ಲುಗಳನ್ನು ತಳ್ಳಿಹಾಕಿದ್ದರಿಂದ ವಿಧಿಯಿಲ್ಲದೇ ಇದೇ ಕಲ್ಲುಗಳಿಗೆ ಬಟ್ಟೆಗಳನ್ನು ಅಡ್ಡ ಕಟ್ಟಿಕೊಂಡು ಸ್ನಾನ ಮಾಡುವಂತಾಗಿದೆ ಎನ್ನುತ್ತಾರೆ ದಲಿತ ಮಹಿಳೆ ವಿನುತಮ್ಮ.

ಈಗ ನಿರ್ಮಾಣ ಮಾಡಿಕೊಂಡಿರುವ ಮನೆ ಜಾಗವನ್ನು ಇತ್ತೀಚಿನ ವರ್ಷಗಳಲ್ಲಿ ಆವಣಿ ಗ್ರಾಪಂನಲ್ಲಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದರೂ ಮನೆ ಗೋಡೆ ಅಂಚಿನಲ್ಲಿರುವ ಒಂದೇ ಒಂದು ಅಡಿ ಜಾಗದವನ್ನೂ ಸ್ವಂತಕ್ಕೆ ಬಳಸಿಕೊಳ್ಳುವಂತಿಲ್ಲ. ಬಂಡೆ ತಮ್ಮದೆನ್ನುವ ನಾಗಪ್ಪ ದೌರ್ಜನ್ಯದಿಂದ ಕಿತ್ತೂಗೆಯುತ್ತಾರೆ. ಆದರೂ, ವಿಧಿಯಿಲ್ಲದೆ ಸ್ನಾನ ಮಾಡಲು ಮನೆಗಳ ಗೋಡೆಗಳಿಗೆ ಹೊಂದಿಕೊಂಡಂತೆ ತೆಂಗಿನ ಗರಿಗಳಿಂದ ತಡಿಕೆ ಕಟ್ಟಿಕೊಂಡು ಆಶ್ರಯಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

 4-5 ತಿಂಗಳ ಹಿಂದೆ ಗ್ರಾಪಂ ಪಿಡಿಒ ಮಂಗಳಾಂಬ ಅವರು ಶೌಚಾಲಯಗಳ ಸಮಸ್ಯೆ ನಿವಾರಣೆಗಾಗಿ ಕ್ರಮ ಕೈಗೊಂಡಿದ್ದರು. ಈ ವೇಳೆ ಸ್ಥಳದ ಕೊರತೆಯಿದ್ದು ಅಧಿಕಾರಿಗಳೇ ನಿರ್ಮಾಣ ಮಾಡಿಕೊಡಲು ಅಲವತ್ತುಕೊಂಡರು. ಅದರಂತೆ ಗ್ರಾಪಂ  ಸದಸ್ಯ ರಮೇಶ್‌ ಬಂಡೆ ಮೇಲೆ ಒಂದೇ ಕಡೆ 4 ಶೌಚಾಲಯ ನಿರ್ಮಾಣ ಕಾಮಗಾರಿ ಕೈಗೊಂಡರು. ಆದರೆ ಪೂರ್ಣಗೊಳ್ಳುವ ಮೊದಲೇ ಬಂಡೆ ಮಾಲಿಕರಿಂದ ವಿರೋಧ ಉಂಟಾಗಿತ್ತು. ಈ ನಡುವೆಯೇ ಉಂಟಾದ ಅತಿಯಾದ ಗಾಳಿಗೆ ಶೌಚಾಲಯಗಳ ಛಾವಣಿ ಶೀಟ್‌ಗಳು ಹಾರಿ ಹೋಗಿವೆ. ಮಲದ ಗುಂಡಿ ನಿರ್ಮಿಸಲಾಗದೇ ಕಾಮಗಾರಿ ಅಪೂರ್ಣಗೊಂಡಿದ್ದರಿಂದ ಶೌಚಾಲಯದ ಕನಸು ಕನಸಾಗೇ ಉಳಿದಿದೆ ಎಂದು ದಲಿತ ಮಹಿಳೆ ಮಮತಮ್ಮ ನೋವಿನಿಂದ ನುಡಿದರು.

ಕೂಲಿಯಿಂದ ಜೀವನ ಸಾಗಿಸುವ ನಮಗೆ ಮನೆ ಹಾಕುತ್ತೇವೆ ಕಟ್ಟಿಕೊಳ್ಳಿ ಎಂದು ಗ್ರಾಪಂ ಅಧಿಕಾರಿಗಳು ತಿಳಿಸುತ್ತಾರೆ. ಆದರೆ, ಇರುವ ಮನೆಗಳ ಹಳೆ ಗೋಡೆಗಳಿಗೆ ಹೊಸ ಶೀಟ್‌ಗಳು ಹಾಕಿದ್ದಾರೆ. ಒಂದು ವೇಳೆ ಬಿದ್ದು ಹೋದರೆ ಹೇಗೆ. ಅದಕ್ಕೂ ಮೊದಲೇ ಬೇರೆ ಮನೆ ನಿರ್ಮಿಸಿಕೊಳ್ಳಲು ಇಲ್ಲಿ ಯಾರಿಗೂ ನಿವೇಶನಗಳಿಲ್ಲ. ಇರುವ ಮನೆಯನ್ನು ತಳ್ಳಿ ಹಾಕಿದರೆ ಕನಿಷ್ಟ ಮನೆ ಕಟ್ಟಿಕೊಳ್ಳುವವರೆಗೂ ಗುಡಿಸಲು ಹಾಕಿಕೊಳ್ಳಲು ಬೇರೆ ಸ್ಥಳವಿಲ್ಲ. ಈ ಬಂಡೆ ಸರ್ಕಾರದ್ದೆಂದು ಕೆಲವರು ಹೇಳಿದರೆ ನಾಗಪ್ಪ ಎಂಬುವರು ತಮ್ಮದೆನ್ನುತ್ತಾರೆ. ಇರುವ ಕಿರಿದಾದ ಮನೆಗಳಲ್ಲಿ ಕುಟುಂಬದ ಕೆಲವರು ಮನೆ ಒಳಗೆ, ಕೆಲವರು ಮನೆಗೆ ಹೊರಗಿನ ಆವರಣದಲ್ಲಿ ಮಲಗುವಂತಾಗಿದೆ ದಲಿತ ವ್ಯಕ್ತಿ ಗಿರಿಯಪ್ಪ ತಿಳಿಸಿದರು.

* ಎಂ.ನಾಗರಾಜಯ್ಯ 

Advertisement

Udayavani is now on Telegram. Click here to join our channel and stay updated with the latest news.

Next