Advertisement

ಕಿಡಿಗೇಡಿಗಳಿಂದ ಯೋಜನೆಗಳ ನಾಮಫಲಕಗಳ ಧ್ವಂಸ

10:50 AM May 20, 2018 | Team Udayavani |

ಸಸಿಹಿತ್ಲು : ಸರಕಾರದ ವಿವಿಧ ಯೋಜನೆಗಳ ಮೂಲಕ ಹಳೆಯಂಗಡಿ ಗ್ರಾಮ ಪಂಚಾಯತ್‌ನ ಸಸಿಹಿತ್ಲು ಪ್ರದೇಶದಲ್ಲಿ ಕಾಮಗಾರಿ ನಡೆದು ಅದರ ಬಗ್ಗೆ ಮಾಹಿತಿ ನೀಡುವ ಹಾಗೂ ಉದ್ಘಾಟನ ಸಮಾರಂಭದ ನಾಮಫಲಕಗಳನ್ನು ಕಿಡಿಗೇಡಿಗಳು ಧ್ವಂಸ ಮಾಡಿದ ಘಟನೆ ಬೆಳಕಿಗೆ ಬಂದಿದೆ.

Advertisement

ಸಸಿಹಿತ್ಲುವಿಗೆ ಪಡುಪಣಂಬೂರು ಕದಿಕೆ ರಸ್ತೆಯಾಗಿ ತೆರಳುವ ಪ್ರದೇಶದಲ್ಲಿ ಹೊಯಿಗೆಗುಡ್ಡೆ  ನೂತನ ರಸ್ತೆಯನ್ನು ಸುಮಾರು 2.5 ಕೋ.ರೂ ವೆಚ್ಚದಲ್ಲಿ ನಿರ್ಮಿಸಿದ್ದನ್ನು ಜನಪ್ರತಿನಿ ಧಿಗಳು ಉದ್ಘಾಟನೆ ನಡೆಸಿದ ಗ್ರಾನೈಟ್‌ನ ನಾಮಫಲಕವನ್ನು ಧ್ವಂಸ ಮಾಡಲಾಗಿದೆ.

ದಿಕ್ಸೂಚಕಕ್ಕೆ ಹಾನಿ
ಸಸಿಹಿತ್ಲು ಬೀಚ್‌ ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವಾಗಲೇ ಇಲ್ಲಿನ ಭಗವತೀ ಕ್ಷೇತ್ರದ ದ್ವಾರದ ಬಳಿ ಹಾಕಲಾಗಿದ್ದ ಶಿಲಾನ್ಯಾಸದ ಗ್ರಾನೈಟ್‌ನ ನಾಮಫಲಕವನ್ನು ಸಹ ಧ್ವಂಸ ಮಾಡಲಾಗಿದೆ. ಇದರ ಮುಂಭಾಗದಲ್ಲಿ ಹಳೆಯಂಗಡಿ ಗ್ರಾಮ ಪಂಚಾಯತ್‌ನ ಬೀಚ್‌ ಅಭಿವೃದ್ಧಿ ಸಮಿತಿಯ ಮೂಲಕ ಅಳವಡಿಸಲಾದ ಬೀಚ್‌ ರಸ್ತೆಯ ದಿಕ್ಸೂಚಿ ನಾಮಫಲಕವನ್ನು ಸಹ ಕೆಡವಲಾಗಿದೆ.

ಪರಿಸ್ಥಿತಿಯ ಲಾಭಕ್ಕೆ ಯತ್ನ
ಕಳೆದ ವಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭ ಸಸಿಹಿತ್ಲು ಪ್ರದೇಶದಲ್ಲಿ ಕಾಂಗ್ರೆಸ್‌-ಬಿಜೆಪಿ ಪಕ್ಷದ ಕಾರ್ಯಕರ್ತರ ನಡುವೆ ಭಾರೀ ಪೈಪೋಟಿಯ ಪ್ರಚಾರ ನಡೆದಿತ್ತು. ಇದೀಗ ನಾಮಫಲಕದ ಧ್ವಂಸಕ್ಕೂ ರಾಜಕೀಯವೇ ಪರೋಕ್ಷ ಕಾರಣ ಎನ್ನಲಾಗಿದೆ. ಇದರ ಲಾಭ ಪಡೆಯಲು ಪ್ರಯತ್ನ ನಡೆಸಿರುವ ಕಿಡಿಗೇಡಿಗಳು ಈ ನಾಮಫಲಕಗಳನ್ನು ಧ್ವಂಸ ಮಾಡಲು ಅವರಿಗೆ ಪ್ರೇರಣೆಯಾಗಿದೆ ಎಂದು ನಾಗರಿಕರು ಆರೋಪಿಸುತ್ತಾರೆ. ಕೂಡಲೇ ಕಿಡಿಗೇಡಿಗಳ ಬಗ್ಗೆ ಮಾಹಿತಿ ಕಲೆಹಾಕಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ
ಬೇಕು ಎಂದು ಆಗ್ರಹಿಸಿದ್ದಾರೆ.

ದಾಖಲಾಗದ ದೂರು
ಈ ಬಗ್ಗೆ ಯಾವುದೇ ಅಧಿಕೃತವಾದ ದೂರುಗಳು ಗ್ರಾಮ ಪಂಚಾಯತ್‌ ಅಥವಾ ಸ್ಥಳೀಯ ಪೊಲೀಸ್‌ ಠಾಣೆಗೆ ಈವರೆಗೆ ದಾಖಲಾಗಿಲ್ಲ.

Advertisement

ಸಂಬಂಧಿಸಿದ ಇಲಾಖೆಗೆ ಪತ್ರ
ಹಳೆಯಂಗಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕದಿಕೆ- ಸಸಿಹಿತ್ಲು ಭಾಗದಲ್ಲಿ ನಾಮಫ‌ಲಕ ಧ್ವಂಸದ ಬಗ್ಗೆ ಪ್ರವಾಸೋದ್ಯಮ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗೆ ಪತ್ರದ ಮೂಲಕ ತಿಳಿಸಲಾಗುವುದು. ಸೂಕ್ತ ಕಾನೂನು ಕ್ರಮಕ್ಕೆ ಗಮನಹರಿಸಲು ಪತ್ರದಲ್ಲಿ ಉಲ್ಲೇಖೀಸಲಾಗುವುದು.
– ಕೇಶವ ದೇವಾಡಿಗ,
ಪ್ರಭಾರ ಪಿಡಿಒ,
ಹಳೆಯಂಗಡಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next